ಎರಡು ವರ್ಷವಾದ್ರೂ ಬಾರದ ಹಣ
ರಾಷ್ಟ್ರೀಯ ಕುಟುಂಬ ಭದ್ರತಾ ಯೋಜನೆ-ಅಂತ್ಯ ಸಂಸ್ಕಾರಕ್ಕೆ ನೆರವಿಗಾಗಿ 475 ಅರ್ಜಿ
Team Udayavani, May 31, 2019, 10:47 AM IST
ನಾಗರಾಜ ತೇಲ್ಕರ್
ದೇವದುರ್ಗ: ಅಂತ್ಯಸಂಸ್ಕಾರಕ್ಕೆ ಸಹಾಯಧನ, ರಾಷ್ಟ್ರೀಯ ಕುಟುಂಬ ಭದ್ರತಾ ಯೋಜನೆಯಡಿ 2017ರಿಂದ ಅರ್ಜಿ ಸಲ್ಲಿಸಿದ 475 ಫಲಾನುಭವಿಗಳಿಗೆ ಈವರೆಗೆ ಬಿಡಿಗಾಸು ಜಮೆ ಆಗದೇ ಇರುವುದರಿಂದ ಅರ್ಜಿದಾರರು ನಿತ್ಯ ತಹಶೀಲ್ದಾರ್ ಕಚೇರಿಗೆ ಅಲೆದಾಡುತ್ತಿದ್ದಾರೆ.
ಸರ್ಕಾರ ಅಂತ್ಯಸಂಸ್ಕಾರಕ್ಕೆ 5 ಸಾವಿರ ರೂ. ಮತ್ತು ರಾಷ್ಟ್ರೀಯ ಕುಟುಂಬ ಭದ್ರತಾ ಯೋಜನೆಯಡಿ ದುಡಿಯುವ ಮನೆ ಮುಖ್ಯಸ್ಥನನ್ನು ಕಳೆದುಕೊಂಡ ಬಿಪಿಎಲ್ ಕುಟುಂಬದ ನೆರವಿಗೆ 20 ಸಾವಿರ ರೂ. ಸಹಾಯಧನ ನೀಡುತ್ತದೆ. ಈ ಯೋಜನೆಗಳಡಿ 2017ರಿಂದ 475 ಜನ ಅರ್ಜಿ ಸಲ್ಲಿಸಿದ್ದಾರೆ. ಈವರೆಗೆ ಇವರ ಖಾತೆಗೆ ಬಿಡಿಗಾಸು ಜಮೆ ಆಗಿಲ್ಲ. ಕೇಳಿದರೆ ಪದೇಪದೇ ಚುನಾವಣೆ ನೀತಿ ಸಂಹಿತೆಯ ನೆಪ ಹೇಳಲಾಗುತ್ತಿದೆ ಎಂದು ಅರ್ಜಿದಾರರು ದೂರಿದ್ದಾರೆ.
ರಾಷ್ಟ್ರೀಯ ಕುಟುಂಬ ಭದ್ರತಾ ಯೋಜನೆ: ಕುಟುಂಬದಲ್ಲಿ ದುಡಿಯುವ ಮುಖ್ಯಸ್ಥನನ್ನು ಕಳೆದುಕೊಂಡ ಕುಟುಂಬಕ್ಕೆ ರಾಷ್ಟ್ರೀಯ ಕುಟುಂಬ ಭದ್ರತಾ ಯೋಜನೆಯಡಿ ಅವಲಂಬಿತರಿಗೆ 20 ಸಾವಿರ ರೂ. ಸಹಾಯಧನ ನೀಡಲಾಗುತ್ತದೆ. ಈ ಯೋಜನೆಯಲ್ಲಿ 220 ಜನ ಅರ್ಜಿ ಸಲ್ಲಿಸಿದ್ದಾರೆ. ಎಸ್‌ಸಿ 35, ಎಸ್‌ಟಿ 80, ಇತರೆ 105 ಜನ 2017ರಲ್ಲೇ ಅರ್ಜಿ ಸಲ್ಲಿಸಿದ್ದಾರೆ. ಸಹಾಯಧನ ಮಂಜೂರಾದ ನೇರವಾಗಿ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಜಮೆ ಆಗುತ್ತದೆ. ಆದರೆ ಈವರೆಗೆ ಹಣ ಜಮೆ ಆಗದ್ದರಿಂದ ಅರ್ಜಿದಾರರು ನಿತ್ಯ ತಹಶೀಲ್ದಾರ್ ಕಚೇರಿಗೆ ಬಂದು ವಿಚಾರಿಸಿ ಹೋಗುವಂತಾಗಿದೆ.
ಅಂತ್ಯ ಸಂಸ್ಕಾರಕ್ಕೆ ಸಹಾಯಧನ: ರಾಜ್ಯ ಸರಕಾರ ಬಿಪಿಎಲ್ ಕುಟುಂಬದಲ್ಲಿ ಮೃತಪಟ್ಟ ಕುಟುಂಬಕ್ಕೆ ಅಂತ್ಯ ಸಂಸ್ಕಾರಕ್ಕೆ 5 ಸಾವಿರ ರೂ. ಸಹಾಯಧನ ನೀಡುತ್ತದೆ. ಕಳೆದ ಎರಡು ವರ್ಷಗಳಿಂದ 255 ಜನ ಅರ್ಜಿ ಸಲ್ಲಿಸಿದ್ದಾರೆ. ಇದರಲ್ಲಿ ಎಸ್‌ಸಿ 84, ಎಸ್‌ಟಿ 85, ಇತರೆ 86 ಸೇರಿ 255 ಜನ ಅರ್ಜಿ ಸಲ್ಲಿಸಿದ್ದಾರೆ. ಯಾರೊಬ್ಬರಿಗೂ ಈವರೆಗೆ ಹಣ ಮಂಜೂರಾಗಿಲ್ಲ. ಅಧಿಕಾರಿಗಳು ಇಂದು-ನಾಳೆ ಎಂದು ದಿನ ದೂಡುತ್ತಿದ್ದು, ಅರ್ಜಿದಾರರು ಬೇಸತ್ತು ಹೋಗಿದ್ದಾರೆ.
ನೀತಿ ಸಂಹಿತೆ ನೆಪ: ಅರ್ಜಿದಾರರು ತಹಶೀಲ್ದಾರ್ ಕಚೇರಿಗೆ ತೆರಳಿ ಮಾಹಿತಿ ಕೇಳಿದರೆ ಪದೇ ಪದೇ ಚುನಾವಣೆ ನೀತಿ ಸಂಹಿತೆ ನೆಪ ಹೇಳಲಾಗುತ್ತಿದೆ. 2018ರಲ್ಲಿ ವಿಧಾನಸಭೆ ಚುನಾವಣೆ, ನಂತರ ಸ್ಥಳೀಯ ಸಂಸ್ಥೆ ಚುನಾವಣೆ, ಇತ್ತೀಚೆಗೆ ಲೋಕಸಭೆ ಚುನಾವಣೆ ನಡೆದಿವೆ. ಹೀಗಾಗಿ ಚುನಾವಣಾ ನೀತಿ ಸಂಹಿತೆ ಕೂಡ ಅರ್ಜಿದಾರರಿಗೆ ಹಣ ಮಂಜೂರು ಮಾಡುವಲ್ಲಿ ಅಡ್ಡಿಯಾಗಿದೆ. ಇದೀಗ ಲೋಕಸಭೆ ಚುನಾವಣೆ ನೀತಿ ಸಂಹಿತೆ ತೆರವಾಗಿದೆ. ಇನ್ನಾದರೂ ಜಿಲ್ಲಾಡಳಿತ ಅರ್ಜಿದಾರರಿಗೆ ಸಹಾಯಧನ ಮಂಜೂರು ಮಾಡಿ ಅವರ ಖಾತೆಗೆ ಜಮೆ ಮಾಡುತ್ತದೆಯೋ ಕಾದು ನೋಡಬೇಕಿದೆ.
ಆಗ್ರಹ: ರಾಷ್ಟ್ರೀಯ ಕುಟುಂಬ ಭದ್ರತಾ ಯೋಜನೆ, ಅಂತ್ಯ ಸಂಸ್ಕಾರಕ್ಕೆ ನೆರವು ಯೋಜನೆಯಡಿ ಅರ್ಜಿ ಸಲ್ಲಿಸಿದ 475 ಜನ ಫಲಾನುಭವಿಗಳಿಗೆ ಹಣ ಮಂಜೂರು ಮಾಡುವಂತೆ ಎರಡು ಬಾರಿ ಜಿಲ್ಲಾ ಸಹಾಯಕ ಆಯುಕ್ತರಿಗೆ ಮನವಿ ಮಾಡಲಾಗಿದೆ. ಲೋಕಸಭೆ ಚುನಾವಣೆ ನೀತಿ ಸಂಹಿತೆ ಮುಗಿದಿದೆ. ಕೂಡಲೇ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಹಣ ಜಮಾ ಮಾಡಬೇಕೆಂದು ಪುರಸಭೆ ಸದಸ್ಯ ಚಂದ್ರಶೇಖರ ಚಲುವಾದಿ ಆಗ್ರಹಿಸಿದ್ದಾರೆ.
ಕಳೆದ ವರ್ಷಗಳಿಂದ ನಿತ್ಯ ತಹಶೀಲ್ದಾರ್ ಕಚೇರಿಗೆ ಅಲೆದು ಬೇಸತ್ತು ಹೋಗಿದ್ದೇವೆ. ಇಲ್ಲಿವರೆಗೆ ಬ್ಯಾಂಕ್ ಖಾತೆಗೆ ಹಣ ಜಮಾ ಮಾಡಿಲ್ಲ. ಅಧಿಕಾರಿಗಳು ಚುನಾವಣೆ ನೀತಿ ಸಂಹಿತೆ ನೆಪ ಹೇಳುತ್ತಲೇ ಇದ್ದಾರೆ.
••ಶ್ರೀದೇವಿ, ಅರ್ಜಿದಾರರು
ರಾಷ್ಟ್ರೀಯ ಕುಟುಂಬ ಭದ್ರತಾ ಯೋಜನೆ ಮತ್ತು ಅಂತ್ಯ ಸಂಸ್ಕಾರಕ್ಕೆ ಸಹಾಯಧನ ಯೋಜನೆಯಡಿ ಅರ್ಜಿ ಸಲ್ಲಿಸಿದವರ ಪಟ್ಟಿಯನ್ನು ಈಗಾಗಲೇ ಜಿಲ್ಲಾಡಳಿತಕ್ಕೆ ಕಳಿಸಲಾಗಿದೆ. ಚುನಾವಣೆ ನೀತಿ ಸಂಹಿತೆ ಇರುವುದರಿಂದ ಹಣ ಬಿಡುಗಡೆ ಮಾಡಿಲ್ಲ. ಫಲಾನುಭವಿಗಳ ಬ್ಯಾಂಕ್ ಖಾತೆಗೆ ಹಣ ಜಮಾ ಮಾಡುವ ವ್ಯವಸ್ಥೆ ಮಾಡಲಾಗುತ್ತದೆ.
••ಮಲ್ಲಿಕಾರ್ಜುನ ಅರಕೇರಿ,
ತಹಶೀಲ್ದಾರ್
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.