2017ರಲ್ಲೇ ವಿಧಾನಸಭೆಗೆ ಚುನಾವಣೆ?
Team Udayavani, Jan 31, 2017, 12:33 PM IST
ಹುಬ್ಬಳ್ಳಿ: ರಾಜ್ಯದಲ್ಲಿನ ರಾಜಕೀಯ ಸ್ಥಿತಿ ಗಮನಿಸಿದರೆ 2018ಕ್ಕೆ ಅಲ್ಲ 2017ಕ್ಕೇನೆ ವಿಧಾನಸಭೆಗೆ ಚುನಾವಣೆ ನಡೆಯುವ ಸಾಧ್ಯತೆ ಇಲ್ಲದಿಲ್ಲ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಭವಿಷ್ಯ ನುಡಿದರು. ಡಾ| ಪಾಟೀಲ ಪುಟ್ಟಪ್ಪ ವಿಚಾರ ವೇದಿಕೆ, ಅವ್ವ ಸೇವಾ ಟ್ರಸ್ಟ್ ಆಯೋಜಿಸಿದ್ದ ನಾಡೋಜ ಡಾ| ಪಾಟೀಲ ಪುಟ್ಟಪ್ಪ ಅವರ 98ನೇ ಜನ್ಮದಿನ ಸಮಾರಂಭದಲ್ಲಿ ಎರಡು ಕೃತಿಗಳನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು.
ಇಡೀ ದೇಶದ ರಾಜಕಾರಣವೇ ಗೊಂದಲ ಗೂಡಾಗಿದೆ. ರಾಜ್ಯದಲ್ಲಿ ರಾಜಕೀಯ ಸ್ಥಿತಿ ದಿನಕ್ಕೊಂದು ರೂಪ ಪಡೆದುಕೊಳ್ಳುತ್ತಿದೆ. ಇದೆಲ್ಲವನ್ನು ಗಮನಿಸಿದರೆ ಇದೇ ವರ್ಷದಲ್ಲಿ ಚುನಾವಣೆ ಎದುರಾದರೂ ಅಚ್ಚರಿ ಇಲ್ಲ ಎಂದೆನಿಸುತ್ತಿದೆ ಎಂದರು. ನನಗೆ ಹಳೇ ಮೈಸೂರು, ಮುಂಬೈ ಕರ್ನಾಟಕ, ಹೈದರಾಬಾದ ಕರ್ನಾಟಕ ಬೇರೆ ಎಂಬ ಭಾವನೆ ಇಲ್ಲವೇ ಇಲ್ಲ. ಸಂಕುಚಿತ ಭಾವನೆ ಹೊಂದಿದರೆ ರಾಜ್ಯದ ಆರ್ಥಿಕ-ಸಾಮಾಜಿಕ ಅಭಿವೃದ್ಧಿ ಸಾಧ್ಯವಿಲ್ಲ ಎಂದರು.
ನನ್ನ ಕುಟುಂಬ ಹಾಗೂ ಜೆಡಿಎಸ್‌ಗೆ ಉತ್ತರ ಕರ್ನಾಟಕದ ವಿರೋಧಿ ಪಟ್ಟ ಕಟ್ಟಲಾಗಿದೆ. ಈ ಭಾಗಕ್ಕೆ ಯಾರ್ಯಾರು ಏನು ಮಾಡಿದ್ದಾರೆ ಎಂಬ ಸತ್ಯ ಹೊರ ಬರಲಿದೆ. ಏನೆಲ್ಲ ಅಪಪ್ರಚಾರ ಹಾಗೂ ವ್ಯಂಗ್ಯ ಮಾಡುತ್ತಿದ್ದಾರೋ ಅವರಿಗೆಲ್ಲ ಜನರು ತಕ್ಕ ಉತ್ತರ ನೀಡಲಿದ್ದಾರೆ ಎಂದರು. ಡಾ| ಪಾಟೀಲ ಪುಟ್ಟಪ್ಪ ಅವರಿಗೆ ನನ್ನನ್ನು ಹೋಲಿಸುವುದು ಸರಿಯಲ್ಲ.
ಅವರ ಮೇರು ವ್ಯಕ್ತಿತ್ವಕ್ಕೆ ನಾನು ಸರಿಸಾಟಿ ಆಗಲಾರೆ. 98ನೇ ವಯಸ್ಸಿನಲ್ಲೂ ಯುವಕರೇ ತಲೆತಗ್ಗಿಸುವ ರೀತಿಯಲ್ಲಿ ಅವರ ದಿನಚರಿ ಆರಂಭವಾಗುತ್ತದೆ. ರಾಜ್ಯದ ನೆಲ-ಜಲ, ಭಾಷೆಗೆ ಧಕ್ಕೆ ಬಂದಾಗಲೆಲ್ಲ ಸದಾ ಎಚ್ಚರಿಸುವ ಹಾಗೂ ಅಧಿಕಾರದಲ್ಲಿದ್ದವರ ಕಿವಿ ಹಿಂಡುವ ಕಾರ್ಯವನ್ನು ಪಾಪು ಮಾಡುತ್ತಲೇ ಬಂದಿದ್ದಾರೆ. ಅಂತಹವರ ಮಾರ್ಗದರ್ಶನ ರಾಜ್ಯಕ್ಕೆ ಅಗತ್ಯವಿದೆ ಎಂದರು.
ಜನಪ್ರತಿನಿಧಿಗಳ ಜಡತ್ವ: ಗದಗ ಡಾ| ಸಿದ್ದಲಿಂಗ ತೋಂಟದಾರ್ಯ ಸ್ವಾಮೀಜಿ ಮಾತನಾಡಿ, ಮಹದಾಯಿ ಸಮಸ್ಯೆ ಇತ್ಯರ್ಥ ಆಗದಿರುವುದಕ್ಕೆ ಈ ಭಾಗದ ಜನಪ್ರತಿನಿಧಿಗಳು ಜಡತ್ವವೇ ಕಾರಣ. ನೌಕರಿ, ಬಡ್ತಿ, ವರ್ಗಾವಣೆಯೇ ಅವರಿಗೆ ಆಸಕ್ತಿ ಇದೆಯಾದರೂ, ನಾಡಿನ ನೆಲ, ಜಲ ಬಗ್ಗೆ ದಿವ್ಯ ನಿರ್ಲಕ್ಷ್ಯ ತೋರಿದ್ದಾರೆ. ಮಹದಾಯಿ ವಿಷಯವಾಗಿ ಕೇಂದ್ರ ಸರಕಾರ ಉದಾಸೀನತೆ ಮುಂದುವರಿದಿದೆ.
ಮಧ್ಯಂತರ ಅರ್ಜಿಯೂ ನ್ಯಾಯಾಧಿಕರಣದಲ್ಲಿ ತಿರಸ್ಕೃತಗೊಂಡಿದ್ದು, ರಾಜಕಾರಣ ಎಂಬುದು ತಮಾಸೆಯಂತಾಗಿದೆ ಎಂದರು. ಮಹದಾಯಿ ಬಗ್ಗೆ ಮತ್ತೂಮ್ಮೆ ಪ್ರಧಾನಿ ಬಳಿ ಹೋಗಿ ಒತ್ತಡ ತರುವಂತೆ ದೇವೇಗೌಡರು ಯತ್ನಿಸಬೇಕು. ಪ್ರಧಾನಿಯಿಂದ ಮಾತ್ರ ಸಮಸ್ಯೆ ಇತ್ಯರ್ಥ ಸಾಧ್ಯ ಎಂದು ಸ್ವಾಮೀಜಿ ಹೇಳಿದರು.
ಉತ್ತರ ಕರ್ನಾಟಕದಲ್ಲಿ ನಾಲ್ವರು ಮುಖ್ಯಮಂತ್ರಿಗಳಾಗಿ ಹೋದರೂ ಎಚ್.ಡಿ. ಕುಮಾರಸ್ವಾಮಿ ಬೆಳಗಾವಿಯಲ್ಲಿ ಸುವರ್ಣಸೌಧಕ್ಕೆಶಿಲಾನ್ಯಾಸ ಹಾಕಿದ್ದರು ಎಂಬುದನ್ನು ಮರೆಯಬಾರದು ಎಂದರು. ಸಾಹಿತಿ ಹಂ.ಪ.ನಾಗರಾಜಯ್ಯ ಮಾತನಾಡಿ, ಪಾಪು ಮಾತು ಕಠೊರವಾದರೂ ಅಂತಃ ಕರಣ ಮೃದುವಾಗಿದೆ.
ಕರ್ನಾಟಕ ಕಾಳಜಿ, ನೆಲ-ಜಲ, ಭಾಷೆಗೆ ಧಕ್ಕೆಯಾದರೆ ಮೊದಲ ಧ್ವನಿ ಮೊಳಗುವುದೇ ಪಾಪು ಅವರದ್ದಾಗಿದೆ ಎಂದರು. ಸಾಹಿತಿ ಶಾಂತಿನಾಥ ದಿಬ್ಬದ ಮಾತನಾಡಿ, ಪಾಪು ಹಾಗೂ ದೇವೇಗೌಡರು ನಮ್ಮ ಸಾಂಸ್ಕೃತಿಕ ನಾಯಕರು. ಪಾಪು ಅವರ ಕೃತಿಗಳ ಕುರಿತಾಗಿ ಸಾಹಿತಿಗಳು, ವಿಮರ್ಶಕರು, ಸಂಶೋಧಕರು ಗಂಭೀರವಾಗಿ ಪರಿಗಣಿಸದಿರುವುದು ನೋವಿನ ಸಂಗತಿ ಎಂದರು.
ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಮಾತನಾಡಿ, ಕನ್ನಡಕ್ಕೆ ಹೋರಾಡುವ ಏಕಮೇವ ವ್ಯಕ್ತಿ ಪಾಪು ಆಗಿದ್ದಾರೆ. ನಾಡು ಕಂಡ ಶ್ರೇಷ್ಠ ವ್ಯಕ್ತಿ ಅವರು. ಅವರ 100ನೇ ಜನ್ಮದಿನವನ್ನು ಸಹ ಅವ್ವ ಸೇವಾ ಟ್ರಸ್ಟ್ ಅಡಿಯಲ್ಲಿ ಆಚರಿಸಲಾಗುವುದು ಎಂದರು. ಇದೇ ಸಂದರ್ಭದಲ್ಲಿ ಪಾಪು 98: ದಣಿವರಿಯದ ಚೇತನ, ನಮ್ಮ ಗುರುಗಳು ಕೃತಿ ಬಿಡುಗಡೆಯಾದವು. ಡಾ| ಜಿ.ಆರ್.ತಮಗೊಂಡ ಇನ್ನಿತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hubli: ಅಡವಿಸಿದ್ದೇಶ್ವರ ಮಠದ ಶ್ರೀ ಶಿವಲಿಂಗೇಶ್ವರ ಸ್ವಾಮೀಜಿ ಲಿಂಗೈಕ್ಯ
Hubli: ದಿವಾಳಿಯಾದ ಸರ್ಕಾರ ಬಿಪಿಎಲ್ ಕಾರ್ಡ್ ಕಡಿತ ಮಾಡುತ್ತಿದೆ: ಪ್ರಹ್ಲಾದ ಜೋಶಿ
Waqf Issue: ಮೂರು ತಂಡ ರಚನೆಗೆ ಅವ್ವ-ಅಪ್ಪ ಏನೂ ಇಲ್ಲ: ಬಸನಗೌಡ ಪಾಟೀಲ್ ಯತ್ನಾಳ್ ಆಕ್ಷೇಪ
Dharawad: ಬಿಜೆಪಿಯವರಿಗೆ ವಕ್ಫ್ ಬಿಟ್ಟು ಬೇರೆ ವಿಷಯವೇ ಇಲ್ಲ: ಸಚಿವ ಸಂತೋಷ್ ಲಾಡ್
Hubli: ವಿದ್ಯಾರ್ಥಿನಿಗೆ ಚುಡಾಯಿಸಿದ ಇಬ್ಬರು, ಸಹಕರಿಸಿದ ಮೂವರ ಬಂಧನ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.