ಕನೇರಿ ಮಠದಿಂದ ಕೇರಳಕ್ಕೆ 250 ಟನ್ ಸಾಮಗ್ರಿ ನೆರವು
Team Udayavani, Aug 23, 2018, 3:10 PM IST
ಹುಬ್ಬಳ್ಳಿ: ಕಂಡರಿಯದ ಪ್ರವಾಹದಿಂದ ಚೆಲ್ಲಾಪಿಲ್ಲಿಯಾಗಿರುವ ಕೇರಳದ ಸಂತ್ರಸ್ತರಿಗೆ, ಅದರಲ್ಲೂ ಆದಿವಾಸಿಗಳು ಹಾಗೂ ಗ್ರಾಮೀಣ ಜನತೆಗೆ ಅಗತ್ಯ ನೆರವಿಗೆ ಮುಂದಾಗಿರುವ ಕನೇರಿಮಠ, 100 ಟನ್ ಮೇವು, ಪಶು ಆಹಾರ ಸೇರಿದಂತೆ ಸುಮಾರು 250 ಟನ್ ಸಾಮಗ್ರಿ, ವೈದ್ಯಕೀಯ ತಂಡದ ನೆರವು ನೀಡುತ್ತಿದೆ.
ಮಹಾರಾಷ್ಟ್ರದ ಕೊಲ್ಲಾಪುರದ ಸಿದ್ದಗಿರಿ(ಕನೇರಿ)ಯ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ ನೇತೃತ್ವದಲ್ಲಿ ಕೇರಳದಲ್ಲಿನ ಆದಿವಾಸಿಗಳು ಹಾಗೂ ಹಳ್ಳಿಗಳ ಜನರಿಗೆ ಪರಿಹಾರ ಸಾಮಗ್ರಿ ವಿತರಿಸಲಾಗುತ್ತದೆ. ವಿಶೇಷವಾಗಿ ಜಾನುವಾರುಗಳು ಹಾಗೂ ಮಕ್ಕಳ ಶಿಕ್ಷಣಕ್ಕೆ ನೆರವು ಕಲ್ಪಿಸುವುದಕ್ಕೆ ಆದ್ಯತೆ ನೀಡಲಾಗಿದೆ. ಸ್ವಾಮೀಜಿಯವರ ಕರೆ ಮೇರೆಗೆ ಕರ್ನಾಟಕದ ವಿವಿಧ ಜಿಲ್ಲೆಗಳ ಭಕ್ತರು ಸೇರಿದಂತೆ ಮಹಾರಾಷ್ಟ್ರದ ಬಹುತೇಕ ಕಡೆಯಿಂದ ಶ್ರೀಮಠಕ್ಕೆ ಸುಮಾರು 250 ಟನ್‌ನಷ್ಟು ದೇಣಿಗೆ ಹರಿದು ಬಂದಿದೆ.
ಕೇರಳದ ನೆರೆ ಸಂತ್ರಸ್ತರಿಗೆ ಸದ್ಯಕ್ಕೆ ಬೇಕಾಗಿರುವುದು ಏನು, ಅಲ್ಲಿನ ಸ್ಥಿತಿ ಏನಿದೆ, ಯಾವ ಪ್ರದೇಶಕ್ಕೆ ಸಮರ್ಪಕ ಸಾಮಗ್ರಿಗಳು ಮುಟ್ಟಿಲ್ಲ ಎಂಬುದರ ಬಗ್ಗೆ ಸಮೀಕ್ಷೆ ಮಾಡಲಾಗಿದ್ದು, ಅಲ್ಲಿನ ಸ್ಥಿತಿ ಹಾಗೂ ಜನರ ಬೇಡಿಕೆಗೆ ಅನುಗುಣವಾಗಿ ಶ್ರೀಮಠದಿಂದ ಪರಿಹಾರ ಸಾಮಗ್ರಿ ವಿತರಣೆ ಕೈಗೊಳ್ಳಲಾಗುತ್ತದೆ. ನೆರೆ ಸಂತ್ರಸ್ತ ಕೇರಳದಲ್ಲಿ ಆದಿವಾಸಿಗಳು, ದಲಿತರು ಹೆಚ್ಚಾಗಿ ವಾಸುಸುವ ಪ್ರದೇಶ, ಹಳ್ಳಿಗಳಿಗೆ ಪರಿಹಾರ ಸಾಮಗ್ರಿಗಳು ಸಮರ್ಪಕ ರೀತಿಯಲ್ಲಿ ತಲುಪಿಲ್ಲ ಎಂಬುದು ಸಮೀಕ್ಷೆಯಲ್ಲಿ ತಿಳಿದು ಬಂದಿರುವ ಹಿನ್ನೆಲೆಯಲ್ಲಿ ಶ್ರೀಮಠದಿಂದ ಸಂಗ್ರಹಿಸಿದ ಸುಮಾರು 250 ಟನ್‌ನಷ್ಟು ಸಾಮಗ್ರಿಗಳನ್ನು ಆ ಪ್ರದೇಶಗಳಲ್ಲೇ ವಿತರಣೆ ಮಾಡಲು ನಿರ್ಧರಿಸಲಾಗಿದೆ.
25 ಟ್ರಕ್‌ಗಳಲ್ಲಿ ಸಾಗಣೆ: ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿಯವರು ಕೊಡಗು ಹಾಗೂ ಕೇರಳದ ನೆರೆ ಸಂತ್ರಸ್ತರಿಗೆ ನೆರವು ನೀಡಿಕೆ ನಿಟ್ಟಿನಲ್ಲಿ ಅಗತ್ಯ ದೇಣಿಗೆ ನೀಡುವಂತೆ ಭಕ್ತ ಸಮೂಹಕ್ಕೆ ವಾಟ್ಸ್ ಆ್ಯಪ್ ಸಂದೇಶ ರವಾನಿಸಿದ್ದರು. ಸಂಪರ್ಕ ಇರುವ ಗ್ರಾಮಗಳಿಗೆ ಹೇಳಿ ಕಳುಹಿಸಿದ್ದರು. ನಿರೀಕ್ಷೆ ಮೀರಿ ಸ್ಪಂದಿಸಿದ ಭಕ್ತರು ಹಾಗೂ ಸಾರ್ವಜನಿಕರು ಸುಮಾರು 250 ಟನ್ ನಷ್ಟು ವಿವಿಧ ಸಾಮಗ್ರಿಗಳನ್ನು ನೀಡಿದ್ದು, ಶ್ರೀಮಠಕ್ಕೆ ಇನ್ನು ಸಹ ದೇಣಿಗೆ ಹರಿದು ಬರತೊಡಗಿದೆ.
ಕೊಡಗಿಗೆ ಸದ್ಯಕ್ಕೆ ಸಾಮಗ್ರಿಗಳ ಅವಶ್ಯಕತೆ ಇಲ್ಲ ಎಂಬ ಅಲ್ಲಿನ ಕೆಲ ಸ್ವಯಂ ಸೇವಾ ಸಂಸ್ಥೆಗಳು ಹಾಗೂ ಶ್ರೀಮಠಕ್ಕೆ ಸಂಪರ್ಕ ಇರುವವರ ಅನಿಸಿಕೆ ಹಿನ್ನೆಲೆಯಲ್ಲಿ ಸಂಗ್ರಹಗೊಂಡ ಸಾಮಗ್ರಿಗಳನ್ನು ಕೇರಳಕ್ಕೆ ತೆಗೆದುಕೊಂಡು ಹೋಗಲು ನಿರ್ಧರಿಸಲಾಗಿದೆ. ಕೇರಳಕ್ಕೆ ಸುಮಾರು 8 ಟನ್‌ನಷ್ಟು ಅಕ್ಕಿ, ಬೇಳೆ, ಗೋಧಿ ಹಾಗೂ ಬಿಸ್ಕಿಟ್, 1 ಟ್ರಕ್ ತಾಡಪತ್ರಿ,1 ಟ್ರಕ್ ಮಕ್ಕಳಿಗೆ ನೋಟ್‌ಬುಕ್, ಲೇಖನ ಸಾಮಗ್ರಿ,1 ಟ್ರಕ್ ಬ್ರಶ್, ಪೇಸ್ಟ್, ಫಿನಾಯಿಲ್, ಸಾಬೂನು, 1 ಟ್ರಕ್ ಬಟ್ಟೆ, 1 ಟ್ರಕ್‌ನಷ್ಟು ಬ್ಲಾಂಕೆಟ್, 50 ಟನ್ ಮೇವು ಹಾಗೂ 50 ಟನ್‌ನಷ್ಟು ಪಶು ಆಹಾರ ಹೀಗೆ ಒಟ್ಟು 25 ಲಾರಿಗಳಲ್ಲಿ ಇವುಗಳನ್ನು ಸಾಗಿಸಲಾಗುತ್ತಿದ್ದು, ಬುಧವಾರ ಆರು ಲಾರಿಗಳು ಕೇರಳಕ್ಕೆ ಪ್ರಯಾಣ ಬೆಳೆಸಿವೆ.
ಜಾನುವಾರುಗಳಿಗೆ ಆದ್ಯತೆ: ಕೇರಳದಲ್ಲಿ ಪ್ರವಾಹದಿಂದಾಗಿ ಜನರ ಬದುಕು ಅಲ್ಲೋಲ ಕಲ್ಲೋಲವಾಗಿದ್ದು, ಪ್ರವಾಹಕ್ಕೆ ಸಿಲುಕಿ ಕೆಲವೊಂದು ಗ್ರಾಮಗಳಲ್ಲಿ ಸುಮಾರು 300-400 ಜಾನುವಾರುಗಳು ಮೃತಪಟ್ಟಿವೆ, ಮೇವು ದೊರೆಯದೆ ಇನ್ನಷ್ಟು ಜಾನುವಾರುಗಳು ಸಂಕಷ್ಟಕ್ಕೆ ಸಿಲುಕಿವೆ ಎಂಬ ಸಮೀಕ್ಷೆ ವರದಿ ಅನ್ವಯ, ಜಾನುವಾರುಗಳಿಗೆ ಮೇವು, ಪಶು ಆಹಾರಕ್ಕೆ ಆದ್ಯತೆ ನೀಡಲಾಗಿದೆ. ಅಳಿದುಳಿದ ಜಾನುವಾರುಗಳಿಗೆ ಮೇವು ದೊರೆಯದ್ದರಿಂದ ಪ್ರವಾಹದಲ್ಲಿ ಮುಳಗಿ ಇದೀಗ ಮುಕ್ತವಾಗಿರುವ ಬಾಳೆ ಗಿಡಗಳನ್ನೇ ಕಡಿದು ಅದರ ಕಾಂಡವನ್ನು ಜಾನುವಾರುಗಳಿಗೆ ಮೇವು ರೂಪದಲ್ಲಿ ನೀಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಜಾನುವಾರುಗಳ ರಕ್ಷಣೆಗೆ ಶ್ರೀಮಠದಲ್ಲಿ ಮೇವು ವಿತರಣೆ ಮಾಡಲಾಗುತ್ತದೆ.
ಮನೆ ಮನೆಗೆ ವಿತರಣೆ: ಶ್ರೀ ಮಠದಿಂದ ತೆಗೆದುಕೊಂಡು ಹೋದ ಸಾಮಗ್ರಿಗಳನ್ನು ಸಂಗ್ರಹಕ್ಕೆ ಕೇರಳದ ಕಾಯನಕೋಲನ್‌ನಲ್ಲಿ ರಾಮಕೃಷ್ಣಮಠದವರು ನೀಡಿದ ಜಾಗದಲ್ಲಿ ಕೇಂದ್ರ ಆರಂಭಿಸಲಾಗಿದ್ದು, ವೈನಾಡುನಲ್ಲಿ ಒಂದು ಕೇಂದ್ರ ಆರಂಭಿಸಲಾಗಿದೆ. ಜನರಿಂದ ಸಂಗ್ರಹಗೊಂಡ ಸುಮಾರು 250 ಟನ್‌ನಷ್ಟು ಸಾಮಗ್ರಿಗಳನ್ನು ಆದಿವಾಸಿಗಳು ಹಾಗೂ ಗ್ರಾಮೀಣ ಜನತೆಗೆ ನೇರವಾಗಿ ತಲುಪಿಸುವ ಕಾರ್ಯ ನಡೆಯಲಿದೆ. ವೈನಾಡು ಅತ್ಯಂತ ತೀವ್ರ ನೆರೆ ಸಂತ್ರಸ್ತ ಪ್ರದೇಶವಾಗಿದ್ದು, ಅಲ್ಲಿನ ಗಡಿ ಹಳ್ಳಿಗಳು ಹೆಚ್ಚು ಹಾನಿಗೀಡಾಗಿದ್ದು, ಆ ಪ್ರದೇಶದಲ್ಲಿ ಸಾಮಗ್ರಿ ವಿತರಿಸಲಾಗುತ್ತದೆ.
ಎರಡು ವೈದ್ಯರ ತಂಡ: ಸಂತ್ರಸ್ತ ಜನರಿಗೆ ವೈದ್ಯಕೀಯ ನೆರವು ಒದಗಿಸುವ ನಿಟ್ಟಿನಲ್ಲಿ ಶ್ರೀ ಕಾಡಸಿದ್ದೇಶ್ವರ ಮಠದ ಆಸ್ಪತ್ರೆಯ ಎರಡು ವೈದ್ಯಕೀಯ ತಂಡಗಳು ಔಷಧಿಗಳೊಂದಿಗೆ ತೆರಳಿವೆ. ಮೊದಲ ತಂಡದಲ್ಲಿ ಆರು ಜನ ವೈದ್ಯರು ಹಾಗೂ ಸಿಬ್ಬಂದಿ ಇದ್ದರೆ, ಇನ್ನೊಂದು ತಂಡದಲ್ಲಿ 8 ಜನ ವೈದ್ಯರು ಸಿಬ್ಬಂದಿ ಇದ್ದಾರೆ.
ಕೇರಳದ ನೆರೆ ಸಂತ್ರಸ್ತ ಜನರಿಗೆ ಪರಿಹಾರ ಕಾರ್ಯದ ನಿಟ್ಟಿನಲ್ಲಿ ಆದಿವಾಸಿಗಳು ಹಾಗೂ ಗ್ರಾಮೀಣ ಪ್ರದೇಶದ ಜನರಿಗೆ ಸಮರ್ಪಕ ಸಾಮಗ್ರಿ ತಲುಪಿಲ್ಲ ಎಂಬ ಸಮೀಕ್ಷೆ ಹಿನ್ನೆಲೆಯಲ್ಲಿ ಶ್ರೀಮಠದಿಂದ ಅಲ್ಲಿಗೆ ಆದ್ಯತೆ ನೀಡಲಾಗಿದೆ. ಅಲ್ಲಿನ ಆದಿವಾಸಿಗಳು ಆಫ್ರಿಕಾ ಆದಿವಾಸಿಗಳ ಮಾದರಿಯಲ್ಲಿ ಬದುಕುತ್ತಿದ್ದಾರೆ. ಮೊದಲು ಅವರಿಗೆ ಸಾಮಗ್ರಿ ನೀಡಲಾಗುತ್ತದೆ. ಕೊಡಗಿಗೂ ಸಾಮಗ್ರಿ ನೀಡಿಕೆ ಉದ್ದೇಶ ಶ್ರೀಮಠದ್ದಾಗಿದ್ದು, ಅಲ್ಲಿನ ಕೆಲವರು ಸಾಮಗ್ರಿ ನಿರೀಕ್ಷೆಗೆ ಮೀರಿ ಬಂದಿದೆ ಎಂದು ಹೇಳಿದ್ದರಿಂದ ಮೊದಲಿಗೆ ಕೇರಳಕ್ಕೆ ಹೋಗುತ್ತಿದ್ದೇವೆ.
ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ, ಸಿದ್ದಗಿರಿ
ಅಮರೇಗೌಡ ಗೋನವಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Alnavar: ಬೈಕ್ – ಕಾರು ಅಪಘಾತ; ಬೈಕ್ ಸಹಸವಾರ ಸಾವು
ಡಾ. ವೀಣಾ ಶಾಂತೇಶ್ವರ, ಎಸ್.ಜಿ. ಸಿದ್ಧರಾಮಯ್ಯರಿಗೆ ಅಂಬಿಕಾತನಯದತ್ತ ರಾಷ್ಟ್ರೀಯ ಪ್ರಶಸ್ತಿ
Dharwad: ಔಡಲಹಣ್ಣು ತಿಂದು ಏಳು ಮಕ್ಕಳು ಅಸ್ವಸ್ಥ: ಜಿಲ್ಲಾಸ್ಪತ್ರೆಗೆ ದಾಖಲು
ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಿನಿಂದ ಮತಾಂಧರ ಹಾವಳಿ ಹೆಚ್ಚಾಗಿದೆ: ಪ್ರಹ್ಲಾದ್ ಜೋಶಿ
Hubli: ಅಮಿತ್ ಶಾ ಅಣಕು ಶವ ಸಂಸ್ಕಾರದ ಅಸ್ಥಿ ವಿಸರ್ಜಿಸಿ ಪ್ರತಿಭಟನೆ
MUST WATCH
ಹೊಸ ಸೇರ್ಪಡೆ
Hosanagar; ಚಕ್ರಾನಗರ ಬಿಳಗಿನ ಮನೆಯಲ್ಲಿ ನಿಧಿ ಶೋಧ: ಬೃಹತ್ ನಿಲುವುಗಲ್ಲು ಧ್ವಂಸ!
Udupi: ಮಾದಕ ವಸ್ತು ಮಾರಾಟಕ್ಕೆ ಯತ್ನ… ನಾಲ್ವರು ವಶಕ್ಕೆ
ಗೋವಿನ ಮೇಲೆ ವಿಕೃತಿ, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ವೈಫಲ್ಯ: ಸುನಿಲ್ ಕುಮಾರ್
Hosanagar; ತೋಟದಲ್ಲಿ ಬೃಹತ್ ಕಾಳಿಂಗ ಸರ್ಪ ಪ್ರತ್ಯಕ್ಷ
Japan; ಕ್ಯುಶು ಪ್ರದೇಶದಲ್ಲಿ 6.9 ತೀವ್ರತೆಯ ಭೂಕಂಪ: ಸುನಾಮಿ ಎಚ್ಚರಿಕೆ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.