67 ವಾಣಿಜ್ಯ ಕಲ್ಲಿದ್ದಲು ಬ್ಲಾಕ್ ಹರಾಜು: ಸಚಿವ ಪ್ರಹ್ಲಾದ ಜೋಶಿ
ಪ್ರಸಕ್ತ ಸಾಲಿನಲ್ಲಿ ಖಾಸಗಿ ವಲಯದಿಂದ 5 ಮಿಲಿಯನ್ ಮೆಟ್ರಿಕ್ ಟನ್ ಕಲ್ಲಿದ್ದಲು ಉತ್ಪಾದನೆ
Team Udayavani, Nov 5, 2022, 6:30 AM IST
ಹುಬ್ಬಳ್ಳಿ: ಕೇಂದ್ರ ಸರ್ಕಾರದ 6ನೇ ಹಂತದ 133 ಬ್ಲಾಕ್ಸ್ ಹಾಗೂ 5ನೇ ಹಂತದ ಸೆಕೆಂಡ್ ಅಟೆಮ್rನ 8 ಬ್ಲಾಕ್‌ಗಳನ್ನು ಖಾಸಗಿ ವಲಯಕ್ಕೆ ಹರಾಜಿಗಿಡಲಾಗಿದ್ದು, ಶುಕ್ರವಾರ ಒಟ್ಟು 67 ಕಮರ್ಷಿಯಲ್ ಕಲ್ಲಿದ್ದಲು ಬ್ಲಾಕ್‌ಗಳು ಹರಾಜಾಗಿವೆ ಎಂದು ಕೇಂದ್ರ ಕಲ್ಲಿದ್ದಲು ಹಾಗೂ ಗಣಿ ಸಚಿವ ಪ್ರಹ್ಲಾದ ಜೋಶಿ ತಿಳಿಸಿದ್ದಾರೆ.
ನವದೆಹಲಿಯಲ್ಲಿ ಗುರುವಾರ ನಡೆದ 6ನೇ ಹಂತದ ಕಲ್ಲಿದ್ದಲು ಹರಾಜು ಪ್ರಕ್ರಿಯೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕಮರ್ಷಿಯಲ್ ಕಲ್ಲಿದ್ದಲು ಹರಾಜಿನಿಂದ ಪ್ರಸಕ್ತ ಸಾಲಿನಲ್ಲಿ ಖಾಸಗಿ ವಲಯದಿಂದ 5 ಮಿಲಿಯನ್ ಮೆಟ್ರಿಕ್ ಟನ್ ಕಲ್ಲಿದ್ದಲು ಉತ್ಪಾದನೆಯಾಗಲಿದೆ. ಮುಂದಿನ ಸಾಲಿನಲ್ಲಿ 10ರಿಂದ 15 ಮಿಲಿಯನ್ ಮೆಟ್ರಿಕ್ ಟನ್ ಕಮರ್ಷಿಯಲ್ ಕಲ್ಲಿದ್ದಲು ಉತ್ಪಾದನೆಯಾಗುವ ನಿರೀಕ್ಷೆಯಿದೆ ಎಂದರು.
ನಮಗೆ 12 ಮಿಲಿಯನ್ ಮೆಟ್ರಿಕ್ ಟನ್ ಕಲ್ಲಿದ್ದಲು ಕೊರತೆಯಿತ್ತು. ಇದೀಗ ಕಮರ್ಷಿಯಲ್ ಕಲ್ಲಿದ್ದಲು ಬ್ಲಾಕ್‌ಗಳಿಂದ ಈ ಕೊರತೆ ನಿವಾರಣೆಯಾಗಲಿದೆ. ಕೋಲ್ ಗ್ಯಾಸಿಫಿಕೇಶನ್ ಪ್ರಾಜೆಕ್ಟ್ಗೆ ಹಣಕಾಸು ಸಚಿವಾಲಯ 6 ಸಾವಿರ ಕೋಟಿ ರೂ. ಅನುದಾನ ಮೀಸಲಿರಿಸಿದ್ದಕ್ಕೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಕೃತಜ್ಞತೆ ಸಲ್ಲಿಸಿದರು.
ಹರಾಜು ಪ್ರಕ್ರಿಯೆಗೆ ಚಾಲನೆ ನೀಡಿದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಾತನಾಡಿ, ಕಲ್ಲಿದ್ದಲು ಗಣಿಗಾರಿಕೆ ಕ್ಷೇತ್ರವನ್ನು ಖಾಸಗಿ ಕ್ಷೇತ್ರಕ್ಕೆ ಅನ್‌ಲಾಕ್ ಮಾಡುವ ಈ ನಿರ್ಧಾರ ಮೈಲಿಗಲ್ಲು ಆಗಿದೆ. ಕಮರ್ಷಿಯಲ್ ಕಲ್ಲಿದ್ದಲು ಬ್ಲಾಕ್ಸ್ ಹರಾಜು ಪ್ರಕ್ರಿಯೆ ವೇಗವಾಗಿ ನೆರವೇರಿಸುವಲ್ಲಿ ಸಚಿವ ಜೋಶಿ ಕಾರ್ಯ ಶ್ಲಾಘನೀಯ. ಭಾರತ ಅತಿ ಹೆಚ್ಚು ಕಲ್ಲಿದ್ದಲು ಹೊಂದಿದ್ದರೂ, ಹೊರದೇಶಗಳಿಗೆ ರಫ್ತು ಮಾಡುವಷ್ಟು ಇದ್ದರೂ ಹಿಂದಿನ ಸರ್ಕಾರಗಳ ನೀತಿಯಿಂದ ನಮ್ಮ ಸಾಮರ್ಥ್ಯಕ್ಕೆ ತಕ್ಕ ಕಲ್ಲಿದ್ದಲು ಉತ್ಪಾದನೆ ಆಗುತ್ತಿರಲಿಲ್ಲ. ಆಮದು ಮಾಡಿಕೊಳ್ಳುವ ಪರಿಸ್ಥಿತಿಗೆ ತಂದಿಟ್ಟಿದ್ದರು. ಆದರೆ ಕಮರ್ಷಿಯಲ್ ಕಲ್ಲಿದ್ದಲು ಹರಾಜಿನ ಮೂಲಕ ಕೋಲ್ ಪ್ರೊಡಕ್ಷನ್ ಹೆಚ್ಚಿಸುವತ್ತ ಜೋಶಿ ಹೆಜ್ಜೆಯಿಟ್ಟಿದ್ದಾರೆ ಎಂದರು.
ಯುಪಿಎ-2 ಸರ್ಕಾರವಿದ್ದಾಗ ಸಿಎಜಿಆರ್‌ನಲ್ಲಿ ಕಲ್ಲಿದ್ದಲು ಆಮದು ಶೇ.23ರಷ್ಟಿತ್ತು. ಆದರೆ ಪ್ರಧಾನಿ ಮೋದಿ ನೇತೃತ್ವದ ಸರ್ಕಾರ ಬಂದ ಬಳಿಕ ಪ್ರಸ್ತುತ ಸಿಎಜಿಆರ್‌ನಲ್ಲಿ ಕಲ್ಲಿದ್ದಲು ಆಮದು ಶೇ.2ಕ್ಕೆ ಇಳಿಸಲಾಗಿದೆ. ಇದರಲ್ಲಿ ಕಲ್ಲಿದ್ದಲು ಸಚಿವ ಜೋಶಿ ಹಾಗೂ ಅವರ ಸಚಿವಾಲಯ ಸಾಕಷ್ಟು ಶ್ರಮ ವಹಿಸಿದೆ. ಕಲ್ಲಿದ್ದಲು ಕ್ಷೇತ್ರವನ್ನು ಖಾಸಗಿ ಕ್ಷೇತ್ರಕ್ಕೆ ಅನ್‌ಲಾಕ್ ಮಾಡುವ ನಿಟ್ಟಿನಲ್ಲಿ ಪ್ರಧಾನಿ ಮೋದಿ ಮಹತ್ವದ ಮಾರ್ಗದರ್ಶನ ಮಾಡಿದರು ಎಂದರು.
ಕಮರ್ಷಿಯಲ್ ಕಲ್ಲಿದ್ದಲು ಹರಾಜಿನಿಂದ ದೇಶದ 11 ರಾಜ್ಯಗಳಿಗೆ ಹೆಚ್ಚಿನ ಲಾಭ ದೊರೆಯಲಿದೆ. ಕಲ್ಲಿದ್ದಲು ಉತ್ಪಾದನೆ ಹೆಚ್ಚಿಸುವುದರ ಜತೆಗೆ ವಿಶೇಷವಾಗಿ ಕಲ್ಲಿದ್ದಲು ಗ್ಯಾಸಿಫಿಕೇಶನ್‌ದತ್ತ ಹೆಚ್ಚಿನ ಗಮನ ಹರಿಸಬೇಕಾಗಿದೆ. ಕಲ್ಲಿದ್ದಲಿನಿಂದ ಭಾರತವು ಗ್ಯಾಸ್ ತಯಾರಿಕೆ ಮಾಡಬೇಕಿದೆ. ಈ ನಿಟ್ಟಿನಲ್ಲಿ ಕಲ್ಲಿದ್ದಲು ಸಚಿವಾಲಯ ಮಹತ್ವದ ಹೆಜ್ಜೆಯಿಟ್ಟಿದೆ ಎಂದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.