ದೇಶಿಗರ ಮನಗೆದ್ದ ವಿದೇಶಿ ಹೂ
ಸದ್ದಿಲ್ಲದೇ ಬೆಳೆದು ನಿಲ್ಲುತ್ತಿದೆ ತಿಥೋನಿಯಾ ಹೂ ; ಮಾಯವಾಯ್ತು ಅಡಸಲ
Team Udayavani, Jul 4, 2022, 5:22 PM IST
ಧಾರವಾಡ: ಸಾಮಾನ್ಯವಾಗಿ ಪಾಳು ಜಾಗೆಯಲ್ಲಿ ತಂತಾನೆ ಹುಟ್ಟಿ ಬೆಳೆದು ನಿಲ್ಲುವ ಅನೇಕ ಗಿಡಗಂಟೆಗಳು ನಮ್ಮ ಕಣ್ಣೆದುರಿಗೆ ಬೆಳೆಯುವುದನ್ನು ನಾವು ನೋಡಿದ್ದೇವೆ. ಆದರೆ ಕಳೆದ ಮೂರು ವರ್ಷಗಳ ಅವಧಿಯಲ್ಲಿ ಧಾರವಾಡ ಜಿಲ್ಲೆಯಲ್ಲಿ ಹಳದಿ ಹೂ ಬಿಡುವ ಗಿಡಗಂಟೆಯೊಂದು ಎಲ್ಲೆಂದರಲ್ಲಿ ತಲೆ ಎತ್ತಿ ನಿಲ್ಲುತ್ತಿದ್ದು, ಇದನ್ನು ಹೆಚ್ಚು ಜನರು ಮನೆ ಆವರಣ ಮತ್ತು ಹಿತ್ತಲ ಬೇಲಿಗೆ ಸೇರಿಸಿಕೊಳ್ಳುತ್ತಿದ್ದಾರೆ.
ಹೌದು. ಪರಿಸರದಲ್ಲಿ ನಮ್ಮಗೆ ಗೊತ್ತಿಲ್ಲದಂತೆಯೇ ಅನೇಕ ಬದಲಾವಣೆಗಳು ಘಟಿಸುತ್ತಲೇ ಇರುತ್ತವೆ. ಒಂದು ಕಾಲಕ್ಕೆ ಎಲ್ಲೆಂದರಲ್ಲಿ ಬೆಳೆದು ಪರಿಸರ ಸಮತೋಲನಕ್ಕೆ ಕಾರಣವಾಗುತ್ತಿದ್ದ ಅಡಸಲ, ಲವಂಗ, ದೋಸೆ ಎಲೆ ಗಿಡ, ರೊಟ್ಟಿ ಎಲೆ ಬಳ್ಳಿ, ಅಡವಿ ಪಾರಿಜಾತ, ಗಂಜಿ ಮುಳ್ಳಿನ ಕಂಠಿ ಸೇರಿದಂತೆ ಅನೇಕ ದೇಶಿ ಸಸ್ಯಗಳು ಇಂದು ನಿಧಾನಕ್ಕೆ ಕಣ್ಮರೆಯಾಗುತ್ತಿದ್ದು, ಫ್ಯಾಶನ್ ಮತ್ತು ನೋಡಲು ಅಂದ ಕಾಣುವ ಹೂಗಿಡಗಳು ಬೆಳೆದು ನಿಲ್ಲುತ್ತಿವೆ. ಈ ಪೈಕಿ ಮೆಕ್ಸಿಕನ್ ಸನ್‌ಪ್ಲವರ್ ಅಥವಾ ತಿಥೋನಿಯಾ ಡೈವರ್ಸಿಫೋಲಿಯಾ ಸಸ್ಯ ಮುಂಚೂಣಿಯಲ್ಲಿದೆ.
ಮೆಕ್ಸಿಕೋ ಮತ್ತು ಮಧ್ಯ ಅಮೆರಿಕದಲ್ಲಿ ಹೇರಳವಾಗಿ ನೋಡ ಸಿಗುವ ಈ ಸಸ್ಯ ಕಳೆದ ನಾಲ್ಕೈದು ವರ್ಷಗಳಲ್ಲಿ ಧಾರವಾಡ ನಗರ ಮತ್ತು ಗ್ರಾಮಾಂತರ ಪ್ರದೇಶದ ಮನೆಯ ಹಿತ್ತಲು, ಮನೆ ಮುಂದಿನ ಕೈ ತೋಟ, ರಸ್ತೆ ಬದಿಗಳು, ಹಳ್ಳಕೊಳ್ಳದಲ್ಲಿ ಹಳದಿ ಹೂವುಗಳಿಂದ ಕಂಗೊಳಿಸುತ್ತಿದ್ದು, ಇದನ್ನು ಯಾರು ಇಷ್ಟು ಪ್ರಮಾಣದಲ್ಲಿ ಪ್ರಸಾರ ಮಾಡುತ್ತಿದ್ದಾರೆ ಎಂಬ ವಿಸ್ಮಯ ಎನ್ನುವಂತಾಗಿದೆ.
ಕಲಘಟಗಿ, ಅಳ್ನಾವರ, ಧಾರವಾಡ, ಹುಬ್ಬಳ್ಳಿ ಮತ್ತು ಕುಂದಗೋಳ ತಾಲೂಕಿನ ಎಲ್ಲೆಡೆ ಈ ಗಿಡ ನಿಧಾನಕ್ಕೆ ಪಸರಿಸುತ್ತಿದೆ. ಬೆಳೆಯಲು ಅತ್ಯಂತ ಸರಳ ವಿಧಾನವಾಗಿದ್ದು, ಇದರ ಕಾಂಡದ ಭಾಗವನ್ನು ಕೊರೆದು ನೆಲದಲ್ಲಿ ಚುಚ್ಚಿದರೆ ಸಾಕು ವೇಗವಾಗಿ ಬೆಳೆದು ನಿಂತು ಬಿಡುತ್ತಿದ್ದು, ಗ್ರಾಮೀಣರೂ ಇದನ್ನು ಅಲಂಕಾರಕ್ಕೆ ಮತ್ತು ದೇವರ ಪೂಜೆಗೆ ಬಳಕೆ ಮಾಡುತ್ತಿದ್ದಾರೆ.
ಔಷಧಿ ಸಸ್ಯವೇ?: ಅಸ್ಟರೇಷಿಯಾ ಸಸ್ಯ ಪ್ರಬೇಧಕ್ಕೆ ಸೇರಿರುವ ಈ ಹೂ ಗಿಡವು ಇಷ್ಟು ಪ್ರಮಾಣದಲ್ಲಿ ಬೆಳೆಯಲು ಕಾರಣ ಇದು ಔಷಧಿ ಸಸ್ಯವಾಗಿದ್ದು ಕಾರಣವೇ? ಸಾಮಾನ್ಯವಾಗಿ ಇದನ್ನು ಸಕ್ಕರೆ ಕಾಯಿಲೆಯಿಂದ ಗುಣಮುಖರಾಗಲು ಬಳಕೆ ಮಾಡುತ್ತಾರೆ. ಅಲ್ಲದೇ ಇದು ಡೈಹೇರಿಯಾ, ಹೆಪಟೈಟಿಸ್ ಚಿಕಿತ್ಸೆಗೆ ಪೂರಕವಾಗಿ ಬಳಕೆಯಾಗುತ್ತದೆ ಎನ್ನಲಾಗಿದೆ. ಅಲ್ಲದೇ ಉದರ ಸಂಬಂಧಿ ಕಾಯಿಲೆಗಳಾದ ಹೊಟ್ಟೆ ನೋವು, ಅಜೀರ್ಣ, ಲೀವರ್ ನೋವು, ಮೂಲವ್ಯಾಧಿ ಹಾಗೂ ಮಲೇರಿಯಾ ಚಿಕಿತ್ಸೆಗೂ ಈ ಸಸ್ಯ ಮತ್ತು ಅದರ ಹೂವಿನ ಭಾಗ ಬಳಕೆಯಾಗುತ್ತದೆ ಎನ್ನುತ್ತಾರೆ ಸಸ್ಯತಜ್ಞರು. ಅಷ್ಟೇಯಲ್ಲ ಜೇನುನೋಣ, ಚಿಟ್ಟೆಗಳಿಗೂ ಈ ಹೂವು ಇಷ್ಟವಾಗುತ್ತಿದ್ದು, ಜನ ಬಹುಬೇಗ ಆಕರ್ಷಿತರಾಗಿರುವುದು ಗೋಚರಿಸುತ್ತಿದೆ.
ಮಾಯವಾದ ಅಡಸಲ: ಆಯುರ್ವೇದ ಪದ್ಧತಿಯಲ್ಲಿ ಅತ್ಯಂತ ಪ್ರಮುಖ ಸ್ಥಾನ ಪಡೆದಿರುವ ಅಡಸಲ ಕಫ, ಬೊಜ್ಜು ಕರಗಿಸುವುದು ಸೇರಿದಂತೆ ಅನೇಕ ಔಷಧಿ ಗುಣಗಳಿಂದ ಸಮೃದ್ಧವಾಗಿರುವ ಸಸ್ಯ. ಅಷ್ಟೇಯಲ್ಲ, ರತ್ನಪಕ್ಷಿಯ ತವರು ಮನೆ ಅಡಸಲು ಕಂಠಿಗಳು. ಹಳದಿ ಮತ್ತು ನೀಲಿ ಗುಬ್ಬಿಗಳಿಗಂತೂ ಅಡಸಲ ಹೂಗಳಲ್ಲಿನ ಸಿಹಿ ಹೀರದೇ ಉಪಜೀವನವಿಲ್ಲ. ಇಂತಿಪ್ಪ ಅಡಸಲು ಕಂಠಿ 1990ರ ದಶಕದವರೆಗೂ ಜಿಲ್ಲೆಯ ಅರೆಮಲೆನಾಡು ಪ್ರದೇಶದ ಹಿತ್ತಲು, ತಿಪ್ಪೆಯ ದಂಡೆ, ಕೆರೆ ಕುಂಟೆಗಳ ಅಕ್ಕಪಕ್ಕ ಹಾಗೂ ಹಳ್ಳಕೊಳ್ಳದಲ್ಲಿ ವಿಪರೀತ ಪ್ರಮಾಣದಲ್ಲಿ ಬೆಳೆದು ನಿಲ್ಲುತ್ತಿತ್ತು. ಆದರೆ ರಾಸಾಯನಿಕ ಕೃಷಿ ಮತ್ತು ವಿಪರೀತ ಸಾಗುವಳಿಯಿಂದ ಅಡಸಲ ಗಿಡಗಂಟೆ ಸಂಪೂರ್ಣ ಮಾಯವಾಗಿ ಹೋಗಿವೆ.
ಹಿತ್ತಲ ಕೈ ತೋಟದ ತಿಂಗಳು
ಕುಂಬಳ, ಹೀರೆ, ಮೆಣಸಿನಕಾಯಿ, ಸಬ್ಬಸಗಿ ಸೇರಿದಂತೆ ಅಡುಗೆ ಮನೆಗೆ ಉಪಯೋಗವಾಗುವ ತರಕಾರಿ ಬೀಜಗಳನ್ನು ಬಿತ್ತುವ ಸಮಯವಿದು. ಆದರೆ ದೇಶಿ ತಳಿಯ ಅವರೆ, ಹೀರೆ, ಸವತೆಕಾಯಿ, ಮೆಣಸಿನ ಬೀಜಗಳೇ ಹಳ್ಳಿಗರಲ್ಲಿ ಇಲ್ಲ. ಎಲ್ಲರೂ ಕಂಪನಿ ಪ್ಯಾಕೇಟ್ ಬೀಜಗಳನ್ನು ಅವಲಂಬಿಸಿದ್ದಾರೆ. ಹಿತ್ತಲು, ಮನೆಯ ಅಕ್ಕ ಪಾಕ್ಕದ ಖಾಲಿ ಜಾಗಗಳಿಗೆ ಒಂದಿಷ್ಟು ಹದ ಮಾಡಿ, ಸುತ್ತಲು ಬೇಲಿ ಹೆಣೆದು ಅಲ್ಲಿ ಕೈ ತೋಟ ಮಾಡಲಾಗುತ್ತಿತ್ತು. ಕಬ್ಬು ಬೆಳೆ ಇರುವ ಹೊಲಗಳಲ್ಲಂತೂ ಯಾರೂ ಕನಿಷ್ಟ ತರಕಾರಿ ಬೀಜ ಬೀತ್ತುವ ಗೋಜಿಗೆ ಹೋಗುತ್ತಿಲ್ಲ. ಹೀಗಾಗಿ ಹಿತ್ತಲ ಕೈ ತೋಟಗಳನ್ನು ಮಾಡುವುದು ಕಷ್ಟವಾಗುತ್ತಿದೆ.
ವಿಪರೀತವಾಯ್ತು ಯುಪಟೋರಿಯಂ
ಈ ಹಳದಿ ಹೂವಿನ ಗಿಡಗಂಟೆ ಕಳೆದ ಮೂರು ದಶಕಗಳಿಂದ ಪಾಳುಭೂಮಿಯನ್ನು ಬಾಧಿಸುತ್ತಿದೆ. ಎಲ್ಲೆಂದರಲ್ಲಿ ಬೆಳೆದು ನಿಲ್ಲುತ್ತಿದೆ. ಬೇಸಿಗೆಯಲ್ಲಿ ಬಿಳಿ ಹೂವಿನಂತಹ ಹಾರುವ ಬೀಜ ಸೃಷ್ಟಿಸುವ ಯುಪಟೋರಿಯಂ ಪರಿಸರದಲ್ಲಿನ ದೇಶಿ ಗಿಡಗಂಟೆಗಳಿಗೆ ಮಾರಕವಾಗಿ ಬೆಳೆದು ನಿಂತಿದೆ. ಇದು ಅರಣ್ಯಗಳಿಗೂ ಪ್ರವೇಶ ಪಡೆದಿದ್ದು, ಧಾರವಾಡ, ಬೆಳಗಾವಿ, ಉತ್ತರಕನ್ನಡದ ಪಶ್ಚಿಮಘಟ್ಟ ಕಾಡಿನಲ್ಲಿ ಅಂಚಿನುದ್ದಕ್ಕೂ ಪರಿಸರಕ್ಕೆ ಅದರಲ್ಲೂ ಪಶುಪಾಲನೆಗೆ ಸಹಾಯಕವಾಗುವ ದೇಶಿ ಹುಲ್ಲು ಪ್ರಬೇಧಗಳನ್ನು ನುಂಗಿ ಹಾಕುತ್ತಿದೆ.
ಇದು ವಿದೇಶಿ ಮೂಲದ ಸಸ್ಯವಾಗಿದ್ದು, ಆಕರ್ಷಕ ಹೂವು ಮತ್ತು ಅತೀ ಬೇಗವಾಗಿ ಬೆಳೆದು ನಿಲ್ಲುವ ಗುಣ ಹೊಂದಿದ್ದರಿಂದ ಜನ ಇಷ್ಟ ಪಟ್ಟು ಬೆಳೆಯುತ್ತಿದ್ದಾರೆ. ಇಲ್ಲಿನ ವಾತಾವರಣಕ್ಕೂ ಸಸ್ಯ ಹೊಂದಿಕೊಂಡು ಬೇಗ ಬೆಳೆಯುತ್ತಿದೆ. –ಡಾ| ಸಿ.ಜಿ.ಪಾಟೀಲ, ಸಸ್ಯ ತಜ್ಞರು,ಕೆಸಿಡಿ ಧಾರವಾಡ
ಡಾ| ಬಸವರಾಜ ಹೊಂಗಲ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hubli: ಜೆಪಿಸಿ ಬಗ್ಗೆ ಆರೋಪ ಮಾಡುವವರಿಗೆ ಸಂವಿಧಾನದ ಬಗ್ಗೆ ಗೌರವ ಇಲ್ಲ: ಬೊಮ್ಮಾಯಿ
Hubli: ಪ್ರಿಯಾಂಕ್ ಖರ್ಗೆಗೆ ಎಫ್‌ಐಆರ್ ಹಾಕಿಸುವುದೇ ಕೆಲಸ: ತೇಜಸ್ವಿ ಸೂರ್ಯ
Waqf Property: ಜೆಪಿಸಿ ಅಧ್ಯಕ್ಷ ಜಗದಾಂಬಿಕಾ ಪಾಲ್ ರಾಜ್ಯ ಭೇಟಿ: ಕಾಂಗ್ರೆಸ್ ಕೆಂಡ
Dharwad: ವಾಗ್ವಾದ ನಡೆದು ಎರಡು ಸುತ್ತು ಫೈರಿಂಗ್: ನಾಲ್ವರು ವಶಕ್ಕೆ
Waqf Land Issue: ಯಾವುದೇ ರೈತರನ್ನು ಒಕ್ಕಲೆಬ್ಬಿಸುವುದಿಲ್ಲ: ಡಿಕೆ ಶಿವಕುಮಾರ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.