Dharwad: ಭತ್ತದ ಜೀವಕಣಕ್ಕಿಳಿದ ಕಾರ್ಕೋಟಕ ವಿಷ
ಅನ್ನದ ಬಟ್ಟಲಿಗೆ ನೇರವಾಗಿ ನುಗ್ಗಿದ ವಿಷಕಣ; ಗೋವಿನಜೋಳದ ಬುಡವೆ ಮರಭೂಮಿ
Team Udayavani, Aug 21, 2024, 4:36 PM IST
ಧಾರವಾಡ: ಇಲ್ಲಿವರೆಗೂ ಹೊಲದ ಬದುಗಳು, ತಿನ್ನುವ ಬೆಳೆಗಳ ಸಾಲಿನ ಮಧ್ಯೆ ಇದ್ದ ರಾಸಾಯನಿಕ ಕಳೆನಾಶಕಗಳು ಈಗ ನೇರವಾಗಿ ಅನ್ನದ ಕಣದ ಒಳಗೆ ಪ್ರವೇಶ ಪಡೆದುಕೊಳ್ಳುತ್ತಿವೆ. ಅಷ್ಟೇಯಲ್ಲ, ಜೀವಜಲದಲ್ಲಿಯೇ ಕಳೆನಾಶಕ ಸಿಂಪರಣೆ ಮಾಡುವ ಹೊಸ ವಿಧಾನಗಳು ಮುಂದಿನ ಪೀಳಿಗೆಯ ಆನಾರೋಗ್ಯಕ್ಕೆ ಮುನ್ನುಡಿ ಬರೆದಂತಿದೆ.
ಹೌದು. ಕಳೆ ಕೀಳಲು ಆಳು ಸಿಕ್ಕುತ್ತಿಲ್ಲ ಎನ್ನುವ ಕೊರಗು ರೈತರನ್ನು ಕಾಡಿದ್ದು ಎಷ್ಟು ಸತ್ಯವೋ, ಕೃಷಿ ಜೀವಂತವಾಗಿಡಲು ರೈತರು ಹೆಣಗುತ್ತಿರುವುದು ಅಷ್ಟೇ ಸತ್ಯ. ಈವರೆಗೂ ಸೋಯಾ ಅವರೆ, ಹೆಸರು, ಉದ್ದು, ಶೇಂಗಾ, ಗೋವಿನ ಜೋಳಕ್ಕೆ ಮಾತ್ರ ಸೀಮಿತವಾಗಿದ್ದ ಕಳೆನಾಶಕಗಳು ಇದೀಗ ನೇರವಾಗಿ ಅನ್ನದ ಕಣ ಅಂದರೆ ಭತ್ತದ ಗದ್ದೆಗೆ ರೌಂಡಪ್ ಔಷಧಿ ಸಿಂಪರಿಸುವ ಮಟ್ಟಿಗೆ ಬೆಳೆದುನಿಂತಿದೆ.
ಧಾರವಾಡ, ಬೆಳಗಾವಿ, ಹಾವೇರಿ, ಶಿವಮೊಗ್ಗ ಸೇರಿದಂತೆ ಪಶ್ಚಿಮಘಟ್ಟದ ಸೆರಗಿನ ಜಿಲ್ಲೆಗಳ ಅರೆಮಲೆನಾಡಿನ ಭಾಗದ 12ಕ್ಕೂ ಅಧಿಕ ತಾಲೂಕುಗಳಲ್ಲಿ ದೇಶಿ ಭತ್ತ ಬೆಳೆಯಲಾಗುತ್ತಿದೆ. ಅಂದಾಜು 6.7 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ದೊಡಗ್ಯಾ, ಚಂಪಾಕಲಿ, ವಿವಿಧ ಸಾಳಿ ತಳಿಗಳು ಸೇರಿ 25ಕ್ಕೂ ಅಧಿಕ ಬಗೆಯ ಬಿತ್ತನೆ ಭತ್ತ ಬೆಳೆಯಲಾಗುತ್ತಿದೆ. ಇಲ್ಲಿ ಕಳೆದ ಮೂರ್‍ನಾಲ್ಕು ವರ್ಷದಿಂದ ಕೂಲಿಯಾಳುಗಳ ಕೊರತೆ ತೀವ್ರವಾಗಿದ್ದು, ಭತ್ತ ಬೆಳೆ ಬಿಟ್ಟು ಕಬ್ಬಿಗೆ ಮೊರೆ ಹೋಗಿದ್ದರು. ಆದರೆ ಕಳೆದ ವರ್ಷ ಕಬ್ಬು ಬೆಳೆ ಹಾನಿ, ಸಾಗಾಟದ ಅನಾನುಕೂಲತೆಗಳಿಂದ ಈ ವರ್ಷ ಮತ್ತೆ ಹೆಚ್ಚು ರೈತರು ಭತ್ತ ಬಿತ್ತನೆ ಮಾಡಿದ್ದಾರೆ.
ಆದರೆ, ಕಳೆ ಕೀಳಲು ಕೂಲಿಯಾಳುಗಳು ಸಿಕ್ಕುತ್ತಿಲ್ಲವಾದ್ದರಿಂದ ಅನಿವಾರ್ಯವಾಗಿ ಕಳೆನಾಶಕದ ಮೊರೆ ಹೋಗಿದ್ದು, ರಾಸಾಯನಿಕ ಕ್ರಿಮಿನಾಶಕಗಳಿಂದ ಈವರೆಗೂ ದೂರವಿದ್ದ ಭತ್ತದ ಗದ್ದೆಗಳಲ್ಲಿಯೇ ನೇರವಾಗಿ ಈ ವರ್ಷ ಕಾರ್ಕೋಟಕ ವಿಷ ಭೂಮಿ ಸೇರಿದಂತಾಗಿದೆ. ಭತ್ತದ ಗದ್ದೆಗಳಲ್ಲಿ ಕನಿಷ್ಟ ಮೂರು ತಿಂಗಳು ನೀರು ಕಟ್ಟಿ ನಿಲ್ಲಿಸಲಾಗುತ್ತದೆ. ಈ ವಿಷ ಅದೇ ನೀರಿನಲ್ಲಿ ಸೇರಿ ಭೂಮಿಯಲ್ಲಿ ಇಂಗುತ್ತಿದೆ. ಅಷ್ಟೇಯಲ್ಲ, ಬೆಳೆಯುವ ಪೈರಿನ ಕಣ ಕಣದಲ್ಲೂ ಸೇರಿಕೊಳ್ಳುತ್ತಿದೆ.
ಮನ್ಸೂನ್ ಆಧಾರಿತ ಭತ್ತಕ್ಕೆ ಹೆಚ್ಚು:ಮನ್ಸೂನ್ ಮಳೆಯಾಧಾರಿತವಾಗಿ ಪಶ್ಚಿಮಘಟ್ಟದ ಮಲೆನಾಡು ಮತ್ತು ಅರೆಮಲೆನಾಡಿನ ಜಿಲ್ಲೆಗಳಲ್ಲಿ ಬಿತ್ತನೆ ಮೂಲಕ ಬೆಳೆಯುವ ದೇಶಿ ಭತ್ತಕ್ಕೆ ಈ ವರ್ಷ ಕಳೆನಾಶಕ ಬಳಕೆ ಆರಂಭವಾಗಿದೆ. ಈ ಮೊದಲು ಬರೀ ಗೊಬ್ಬರ ಮಾತ್ರ ಸಿಂಪರಣೆಯಾಗಿ, ಕಳೆಯನ್ನು ಹೆಚ್ಚು ರೈತರು ಕೂಲಿಯಾಳು ಆಧರಿಸಿ ಕಿತ್ತು ಹಾಕಿ ಭತ್ತ ಬೆಳೆಯುತ್ತಿದ್ದರು.
ಆದರೆ ಈ ವರ್ಷ ದೇಶಿ ಭತ್ತದ ಬುಡದಲ್ಲಿ ಹುಟ್ಟುವ ಪರಿಸರಕ್ಕೆ ಅನುಕೂಲವೇ ಆಗಿರುವ ಕರಿಹುಲ್ಲು, ಇಗಳಿ, ಕಣಮುಚಕ್, ಮಾಣಿ ಜಿಬ್ಬು, ಜೇಕು ಕಸದ ನಾಶಕ್ಕೆ ನೇರವಾಗಿ ಕಳೆನಾಶಕ ಬಳಕೆಯಾಗುತ್ತಿದೆ. ಈ ಎಲ್ಲ ಕಸಗಳು ಹುಟ್ಟಿದರೂ ಇವು ಪರಿಸರ ಮತ್ತು ಜೀವಿ ಸಂಕುಲಕ್ಕೆ ಯಾವುದೇ ಹಾನಿ ಮಾಡಿರಲಿಲ್ಲ. ಕಿತ್ತ ಕಸ ಗುಡ್ಡೆ ಹಾಕಿದಲ್ಲಿಯೇ ಕೊಳೆತು ಮತ್ತೆ ಗೊಬ್ಬರವಾಗಿ ರೂಪುಗೊಳ್ಳುತ್ತಿತ್ತು.
ತೆನೆಯಲ್ಲೆ ಕೆನೆಯಂತೆ: ಭತ್ತದ ಗದ್ದೆಗಳ ಸ್ಥಿತಿ ಒಂದೆಡೆಯಾದರೆ, ಈ ವರ್ಷ ಗೋವಿನ ಜೋಳದಲ್ಲಿನ ಕಳೆ ನಿರ್ವಹಣೆಗೆ ಸಿಂಪರಿಸಿದ ಕ್ರಿಮಿನಾಶಕಗಳು ಬುಡದಲ್ಲಿ ಒಂದೇ ಒಂದು ಕಡ್ಡಿ ಹುಲ್ಲು, ಒಂದೇ ಒಂದು ಜೀವಾಣುಗಳು ಬದುಕಿ ಉಳಿಯದಂತೆ ಮಾಡಿಟ್ಟಿವೆ. ಇದೇ ಅರೆಮಲೆನಾಡು ಪ್ರದೇಶದಲ್ಲಿ 7.8 ಲಕ್ಷ ಹೆಕ್ಟೆರ್‌ಗೂ ಅಧಿಕ ಪ್ರದೇಶದಲ್ಲಿ ಬೆಳೆಯುವ ಗೋವಿನಜೋಳದ ಹೊಲಗಳು ಈ ಬಾರಿ ಪೊಗರುದಸ್ತಾಗಿ ಬೆಳೆದು ನಿಂತಿವೆ. ಉತ್ತಮ ಫಸಲು ತೆನೆ ಕಟ್ಟಿದ್ದು, ಹೊಲದ ಬುಡ ಮಾತ್ರ ಮರಭೂಮಿಯಂತೆ ಗೋಚರವಾಗುತ್ತಿದೆ. ಈ ಬಾರಿ ಸಿಂಪಡಣೆ ಮಾಡಿದ ಎಲ್ಲಾ ಕೀಟ ಮತ್ತು ಕಳೆನಾಶಕಗಳ ವಿಷ ಗೋವಿನ ಜೋಳದ ತೆನೆಯಲ್ಲೆ ಕೆನೆಯಂತೆ ಕುಳಿತಿದೆ ಎನ್ನುತ್ತಿದ್ದಾರೆ ವೈದ್ಯರು.
ರೈತನ ಮಿತ್ರ ಜೀವಿಗಳಿಗೂ ಕಂಟಕ ಮಣ್ಣಿನಲ್ಲಿ ವಿಷ ಸೇರುವುದಕ್ಕೆ ಸಮಯ ಬೇಕಾಗಬಹುದು. ಆದರೆ ನೀರಿಗೆ ವಿಷ ಸೇರಿದರೆ ಇದರ ದುಷ್ಪರಿಣಾಮಗಳು ಬಹಳ ಬೇಗನೆ ಗೋಚರಿಸುತ್ತವೆ. ಸದ್ಯಕ್ಕೆ ಈ ವರ್ಷ ಭತ್ತದ ಬೆಳೆಗೆ ಸಿಂಪರಣೆಯಾದ ಕಳೆನಾಶಕ ಕಾರ್ಕೋಟಕ ವಿಷ ಈಗಾಗಲೇ ತನ್ನ ಪರಿಣಾಮ ಆರಂಭಿಸಿದೆ. ಅಧಿಕ ಮಳೆ ಸುರಿದು ಹೊಲದಿಂದ ಹೊರಬಂದ ನೀರು ಕಾವಲಿಗಳಲ್ಲಿ ಹರಿದು ಹೋದ ಜಾಗದಲ್ಲಿನ ಹುಲ್ಲು ಸುಟ್ಟು ಬಿದ್ದಿದೆ. ನಿಂತ ಕಡೆಯಲ್ಲಿ ಹರಿ ಬಣ್ಣಕ್ಕೆ ತಿರುಗಿದ್ದು, ಕೆಟ್ಟ ವಾಸನೆ ಹೊಡೆಯುತ್ತಿದೆ. ರೈತನ ಮಿತ್ರ ಸೂಕ್ಷ್ಮಾತೀಸೂಕ್ಷ್ಮ ಜೀವಿಗಳಿಗೂ ಕಂಟಕವಾಗಿ ಪರಿಣಮಿಸುತ್ತಿದೆ.
ಭತ್ತದ ಗದ್ದೆಗಳಿಗೆ ಕ್ರಿಮಿನಾಶಕ ಬಳಕೆ ಕೃಷಿಯ ಅಧಃಪತನದ ಸಂಕೇತ. ಅನ್ನದ ಬಟ್ಟಲೇ ವಿಷವಾಗಿದ್ದರಿಂದ ಭಯಂಕರ ರೋಗ ರುಜಿನಗಳು ಬರಲಿವೆ. ರೈತರು, ಅಕ್ಕಿ ಕೊಳ್ಳುವ ಗ್ರಾಹಕರು ಜಾಗೃತರಾಗಬೇಕು. ದೇಶಿ ಮಜಲುಗಳು ಮತ್ತೆ ಮರುಕಳಿಸಿ ಪರಿಸರ ಸ್ನೇಹಿ ಕೃಷಿ, ಸಾವಯವ ಕೃಷಿ ಮುನ್ನೆಲೆಗೆ ಬರುವಂತೆ ಸರ್ಕಾರ ಮಾಡಬೇಕು.
-ಡಾ| ಸಂಜೀವ ಕುಲಕರ್ಣಿ, ಪ್ರಗತಿಪರ ಕೃಷಿಕರು ಮತ್ತು ವೈದ್ಯರು
ಕಳೆ ತೆಗೆಸಲು ಆಳುಗಳ ಕೊರತೆ ವರ್ಷದಿಂದ ವರ್ಷಕ್ಕೆ ಅಧಿಕವಾಗುತ್ತಿದೆ. ಖರ್ಚು ನೀಗಿಸಿ ಕೃಷಿ ಮಾಡುವುದು ಕಷ್ಟವಾಗುತ್ತಿದೆ. ಹೀಗಾಗಿ ಅನಿವಾರ್ಯವಾಗಿ ಕಳೆನಾಶಕ ಬಳಕೆ ಮಾಡುತ್ತಿದ್ದೇವೆ. ಸರ್ಕಾರ ಸಾವಯವ ಕೃಷಿಗೆ ಅನುಕೂಲ ಮಾಡಿಕೊಟ್ಟರೆ ಖಂಡಿತವಾಗಿಯೂ ರಾಸಾಯನಿಕ ಮುಕ್ತ ಕೃಷಿ ಸಾಧ್ಯ.
-ನಾಗಪ್ಪ ಉಂಡಿ, ರೈತ ಮುಖಂಡ
-ಬಸವರಾಜ್ ಹೊಂಗಲ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Dharwad: ಜಿಲ್ಲಾಧಿಕಾರಿ ಕಚೇರಿಯಲ್ಲಿ ಬ್ಯಾಟರಿ ಕಳ್ಳತನ
ಮಾಣಿಪ್ಪಾಡಿ ಪ್ರಕರಣವನ್ನು ಸರಕಾರ ಸಿಬಿಐ ಗೆ ನೀಡಲಿ, ಸತ್ಯಾಸತ್ಯತೆ ಹೊರಬರುತ್ತೆ: ಈಶ್ವರಪ್ಪ
Hubli: ಬಿಜೆಪಿಯವರಿಗೆ ಯಾವುದೇ ಆಸಕ್ತಿ ಇಲ್ಲ. ಅವರಿಗೆ ರಾಜಕಾರಣವೇ ಮುಖ್ಯ :ಡಿ.ಕೆ.ಶಿ
Hubballi: ಸಿಎಂ ಸಿದ್ದರಾಮಯ್ಯ ಮುಸ್ಲಿಮರಿಗೆ ಮುತ್ತು ಕೊಡ್ತಾರೆ, ನಮಗೆ ಲಾಠಿ ಏಟು: ಬೆಲ್ಲದ್
Hubli: ಕ್ರಿಮಿನಲ್ ಜತೆಯೇ ಪೊಲೀಸ್ ಪೇದೆ ಎಸ್ಕೇಪ್! ಹುಬ್ಬಳ್ಳಿಯಲ್ಲಿ ಪೊಲೀಸ್ ಕಾರ್ಯಾಚರಣೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!
Mangaluru: ಕ್ರಿಸ್ಮಸ್ ಸಂಭ್ರಮ; ‘ಮಿನುಗು ತಾರೆ’ಗಳ ಮೆರುಗು
Health: ಶೀಘ್ರ ಕ್ಯಾನ್ಸರ್ ಪತ್ತೆ, ಶಸ್ತ್ರಚಿಕಿತ್ಸೆ ತಿಳಿವಳಿಕೆ ಯಾಕೆ ಮುಖ್ಯ?
ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ
Harapanahalli: ಪ್ರತಿಷ್ಠೆಯ ಕಣವಾದ ಬಿ90 ಸೊಸೈಟಿ ಚುನಾವಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.