ಅವಳಿನಗರ ಸಮಸ್ಯೆ ಚರ್ಚೆಗೆ ಶೀಘ್ರ ಜನಪ್ರತಿನಿಧಿಗಳ ಸಭೆ
Team Udayavani, Apr 24, 2017, 3:13 PM IST
ಹುಬ್ಬಳ್ಳಿ: ಅವಳಿ ನಗರದ ಜನರ ಸಮಸ್ಯೆಗಳು ಹಾಗೂ ಪರಿಹಾರೋಪಾಯಗಳ ಕುರಿತು ಚರ್ಚಿಸಲು ಶೀಘ್ರದಲ್ಲೇ ಜನಪ್ರತಿನಿಧಿಗಳ ಸಭೆ ಕರೆಯಲಾಗುವುದು ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಜಗದೀಶ ಶೆಟ್ಟರ ಹೇಳಿದರು. ನಗರದ ವಾರ್ಡ್ 56ರಲ್ಲಿ ಸಿಸಿ ಕ್ಯಾಮೆರಾ ಉದ್ಘಾಟನಾ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಪಾಲಿಕೆ ಸದಸ್ಯರು ಸರಿಯಾಗಿ ಕಾರ್ಯನಿರ್ವಹಿಸಿದರೆ ನಗರ ಸ್ವತ್ಛ ಹಾಗೂ ಸುರಕ್ಷಿತ ನಗರವಾಗುತ್ತದೆ. ಪಾಲಿಕೆ ಸದಸ್ಯ ನಾರಾಯಣ ಜರತಾರಘರ ಜನರ ಸುರಕ್ಷತೆಗಾಗಿ ತಮ್ಮ ವಾರ್ಡ್ನಲ್ಲಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸುತ್ತಿರುವುದು ಶ್ಲಾಘನೀಯ. ಕ್ಯಾಮೆರಾ ಅಳವಡಿಕೆಯಿಂದ ಅಪರಾಧ ಚಟುವಟಿಕೆಗಳು ಕಡಿಮೆಯಾಗಲು ಸಾಧ್ಯ.
ಇದು ಮಾದರಿ ಕಾರ್ಯವಾಗಿದ್ದು, ಎಲ್ಲ ಪಾಲಿಕೆ ಸದಸ್ಯರು ಇದನ್ನು ಅನುಕರಣೆ ಮಾಡಬೇಕು ಎಂದು ತಿಳಿಸಿದರು. ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಮಾತನಾಡಿ, ಪಾಲಿಕೆ ಸದಸ್ಯರು ಉತ್ತಮ ಕಾರ್ಯ ಮಾಡಿದರೆ ಪಕ್ಷಾತೀತವಾಗಿ ಬೆಂಬಲ ನೀಡಬೇಕು. ಜರತಾರಘರ ಅವರು ಉತ್ತಮ ಕಾರ್ಯ ಮಾಡಿದ್ದಾರೆ.
ಉಳಿದ ಸದಸ್ಯರಿಗೆ ಇದು ಸ್ಫೂರ್ತಿಯಾಗಲಿ ಎಂದರು. ನಗರದ ಜನರ ಸಮಸ್ಯೆಗಳ ಕುರಿತು ಚರ್ಚಿಸಲು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ಅವರು ಸಭೆ ಕರೆಯಬೇಕು ಎಂದರು. ಸಂಸದ ಪ್ರಹ್ಲಾದ ಜೋಶಿ ಮಾತನಾಡಿ, ಬ್ಯಾಂಕ್ಗಳ ಸಹಕಾರ ಹಾಗೂ ಜನಪ್ರತಿನಿಧಿಗಳ ಅನುದಾನದಿಂದ ಅವಳಿ ನಗರದಲ್ಲಿ ವಿವಿಧೆಡೆ ಸಿಸಿ ಕ್ಯಾಮೆರಾಗಳನ್ನು ಅಳವಡಿಸುವ ದಿಸೆಯಲ್ಲಿ ಕ್ರಮ ಕೈಗೊಳ್ಳಬೇಕು ಎಂದರು.
ಮಹಾನಗರ ಪಾಲಿಕೆಗೆ ರಾಜ್ಯ ಸರ್ಕಾರ ನೀಡಬೇಕಾದ ಪಿಂಚಣಿ ಮೊತ್ತ 110 ಕೋಟಿ ರೂ. ಶೀಘ್ರ ಬಿಡುಗಡೆ ಮಾಡಿದರೆ ನಗರದ ಒಳ ರಸ್ತೆಗಳ ಅಭಿವೃದ್ಧಿಗೆ ಅನುಕೂಲವಾಗುತ್ತದೆ. ಜನಪ್ರತಿನಿಧಿಗಳು ಪಕ್ಷಾತೀತವಾಗಿ ಅನುದಾನ ಬಿಡುಗಡೆಗೆ ರಾಜ್ಯ ಸರ್ಕಾರದ ಮೇಲೆ ಒತ್ತಡ ಹೇರಬೇಕು ಎಂದರು.
ಪೊಲೀಸ್ ಆಯುಕ್ತ ಪಾಂಡುರಂಗ ರಾಣೆ ಮಾತನಾಡಿ, ಅವಳಿ ನಗರದಲ್ಲಿ ಜನರ ಸುರಕ್ಷತೆಗಾಗಿ 5 ಕೋಟಿ ರೂ. ವೆಚ್ಚದಲ್ಲಿ 120 ಎಚ್.ಡಿ. ಕ್ಯಾಮೆರಾಗಳನ್ನು ಅಳವಡಿಸಲಾಗುತ್ತಿದೆ. ವೈರ್ಲೆಸ್ ಕನೆಕ್ಟಿವಿಟಿ ಕಲ್ಪಿಸಲಾಗುವುದು. ಇದರಿಂದ ರಸ್ತೆ ಮೇಲೆ ಸಂಚರಿಸುವ ಪ್ರತಿಯೊಂದು ವಾಹನಗಳ ಮಾಹಿತಿ ತಿಳಿಯಲು ಅನುಕೂಲವಾಗುತ್ತದೆ ಎಂದರು. ವಿಧಾನ ಪರಿಷತ್ ಸದಸ್ಯ ಶ್ರೀನಿವಾಸ ಮಾನೆ ಮಾತನಾಡಿದರು.
ಪಾಲಿಕೆ ಸದಸ್ಯ ನಾರಾಯಣ ಜರತಾರಘರ ಪ್ರಾಸ್ತಾವಿಕ ಮಾತನಾಡಿದರು. ರುದ್ರಾಕ್ಷಿಮಠದ ಶ್ರೀ ಬಸವಲಿಂಗ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ವಿಧಾನ ಪರಿಷತ್ ಸದಸ್ಯ ಪ್ರದೀಪ ಶೆಟ್ಟರ, ಮಾಜಿ ಶಾಸಕ ವೀರಭದ್ರಪ್ಪ ಹಾಲಹರವಿ, ಉಪಮಹಾಪೌರ ಲಕ್ಷ್ಮೀ ಬಿಜವಾಡ, ಪಾಲಿಕೆ ಆಯುಕ್ತ ಸಿದ್ದಲಿಂಗಯ್ಯ ಹಿರೇಮಠ ವೇದಿಕೆ ಮೇಲಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.