ಕಾನೂನು ವಿವಿ ಅಭಿವೃದ್ಧಿಗೆ ಕ್ರಮ
Team Udayavani, Oct 1, 2019, 9:05 AM IST
ಹುಬ್ಬಳ್ಳಿ: ನ್ಯಾಶನಲ್ ಲಾ ಸ್ಕೂಲ್‌ನ ಗುಣಮಟ್ಟದ ಮಾದರಿಯಲ್ಲಿ ಇಲ್ಲಿನ ಕಾನೂನು ವಿಶ್ವವಿದ್ಯಾಲಯವನ್ನು ಅಭಿವೃದ್ಧಿಪಡಿಸಲು ಕ್ರಮ ಕೈಗೊಳ್ಳಲಾಗುವುದು. ಕಾನೂನು ವಿವಿ ಅಡಿಯಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳು ನ್ಯಾಶನಲ್ ಲಾ ಸ್ಕೂಲ್ ವಿದ್ಯಾರ್ಥಿಗಳಿಗೆ ಸಮಾನ ರೀತಿ ಗುಣಮಟ್ಟ ಪಡೆಯುವಂತೆ ಆಗಬೇಕೆಂದು ಕಾನೂನು ಮತ್ತು ಸಂಸದೀಯ ವ್ಯವಹಾರ ಸಚಿವ ಜೆ.ಸಿ.ಮಾಧುಸ್ವಾಮಿ ಅಭಿಪ್ರಾಯಪಟ್ಟರು.
ಕಾನೂನು ವಿವಿ ಆವರಣದಲ್ಲಿ ನೂತನ ವಿದ್ಯಾರ್ಥಿ ನಿಲಯ ಹಾಗೂ ಸಿಬ್ಬಂದಿ ವಸತಿ ಗೃಹಗಳ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ನ್ಯಾಶನಲ್ ಲಾ ಸ್ಕೂಲ್ ಸ್ಥಾಪನೆಗೆ ರಾಜ್ಯ ಸರ್ಕಾರ ಭೂಮಿ ಸೇರಿದಂತೆ ವಿವಿಧ ಸೌಲಭ್ಯಗಳನ್ನು ನೀಡಿದೆ. ಆದರೆ ಅಲ್ಲಿನ ಪ್ರವೇಶದಲ್ಲಿ ಕನ್ನಡಿಗ ವಿದ್ಯಾರ್ಥಿಗಳಿಗೆ ಮೀಸಲಾತಿ ಇಲ್ಲವಾಗಿದೆ. ಬೇರೆ ರಾಜ್ಯಗಳಲ್ಲಿನ ಲಾ ಸ್ಕೂಲ್‌ಗಳಲ್ಲಿ ಆಯಾ ರಾಜ್ಯದವರಿಗೆ ಮೀಸಲು ಇದ್ದು, ನಮ್ಮಲ್ಲಿ ಮಾತ್ರ ಅದು ಇಲ್ಲವಾಗಿದೆ. ಇತ್ತೀಚೆಗೆ ನಡೆದ ನ್ಯಾಶನಲ್ ಲಾ ಸ್ಕೂಲ್ ಆಡಳಿತ ಮಂಡಳಿ ಸಭೆಯಲ್ಲಿ ಈ ವಿಷಯ ಪ್ರಸ್ತಾಪಿಸಿದ್ದೇನೆ. ಆದರೆ, ಅಲ್ಲಿ ಮೀಸಲು ಕೇಳುವ ಬದಲು ನಮ್ಮಲ್ಲಿನ ಕಾನೂನು ಶಿಕ್ಷಣವನ್ನೇ ನ್ಯಾಶನಲ್ ಲಾ ಸ್ಕೂಲ್ ಗುಣಮಟ್ಟಕ್ಕೆ ಎತ್ತರಿಸುವ ತೀರ್ಮಾನಕ್ಕೆ ಬಂದಿದ್ದು, ಆ ನಿಟ್ಟಿನಲ್ಲಿ ಏನೆಲ್ಲಾ ನೆರವು ಸಾಧ್ಯವೋ ಅದನ್ನು ನೀಡಲು ಸರ್ಕಾರ ಸಿದ್ಧವಿದೆ ಎಂದರು.
ನ್ಯಾಶನಲ್ ಲಾ ಸ್ಕೂಲ್‌ನಲ್ಲಿ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳಲ್ಲಿ ಶೇ.80ರಷ್ಟು ಜನರು ವಕೀಲ ವೃತ್ತಿಗೆ ಆಗಮಿಸದೆ ನೇರವಾಗಿ ಕಾರ್ಪೊರೇಟ್ ಕಂಪನಿಗಳಿಗೆ ಕಾನೂನು ಸಲಹೆಗಾರರಾಗಲು ಆಯ್ಕೆಯಾಗುತ್ತಿದ್ದಾರೆ. ನಮ್ಮ ಕಾನೂನು ಶಿಕ್ಷಣವನ್ನು ಅದೇ ಗುಣಮಟ್ಟಕ್ಕೆ ತೆಗೆದುಕೊಂಡು ಹೋಗಲು ಯತ್ನಿಸೋಣ ಎಂದರು.
ಸಂಶೋಧನಾಧಾರಿತ ವಿವಿ ಆಗಲಿ: ಕಾನೂನು ವಿವಿ ಕೇವಲ ಪಠ್ಯಪುಸ್ತಕ ಆಧಾರಿತ ಬೋಧನೆ-ಕಲಿಕೆಗೆ ಸೀಮಿತವಾಗದೆ, ಸಂಶೋಧನಾಧಾರಿತ ವಿವಿಯಾಗಿ ರೂಪುಗೊಳ್ಳಬೇಕಿದೆ. ಸಂಶೋಧನೆ, ಅನ್ವೇಷಣೆಗೆ ಪ್ರೋತ್ಸಾಹ ನೀಡಿದಷ್ಟು ಗುಣಮಟ್ಟದ ಪದವೀಧರರು ತಯಾರಾಗಲು ಸಾಧ್ಯವಿದೆ. ವಿವಿಧ ಉದ್ಯಮಗಳ ಸಿಎಸ್‌ಆರ್ ನಿಧಿ ಕೊಡಿಸಲು ಮುಂದಾದರೆ ವಿವಿಯನ್ನು ಇನ್ನಷ್ಟು ಅಭಿವೃದ್ಧಿ ಪಡಿಸಲು ಸಹಕಾರಿ ಆಗುತ್ತದೆ. ಈ ಬಗ್ಗೆ ನಿಧಿ ಕೊಡಿಸುವಂತೆ ಸಚಿವ ಜಗದೀಶ ಶೆಟ್ಟರ ಅವರಿಗೆ ಮನವಿ ಮಾಡಿದ್ದು, ಅದಕ್ಕೆ ಅವರು ಸಮ್ಮತಿಸಿದ್ದಾರೆ ಎಂದರು.
ಶೀಘ್ರ ಸಿಂಡಿಕೇಟ್ ಸದಸ್ಯರ ನೇಮಕ: ಕಾನೂನು ವಿವಿಯಲ್ಲಿ 3 ವರ್ಷಗಳಿಂದ ಘಟಿಕೋತ್ಸವ ನಡೆದಿಲ್ಲ. ವಿವಿಯ ಸಿಂಡಿಕೇಟ್‌ಗೆ ಸರ್ಕಾರದಿಂದ ಐವರು ಸದಸ್ಯರನ್ನು ನಾಮ ನಿರ್ದೇಶನ ಮಾಡಬೇಕಾಗಿದ್ದು, ಅವರನ್ನು ಶೀಘ್ರವೇ ನೇಮಕ ಮಾಡುವ ಮೂಲಕ ಘಟಿಕೋತ್ಸವ ನಡೆಸಲು ಕ್ರಮ ಕೈಗೊಳ್ಳಲಾಗುವುದು. ಅದೇ ರೀತಿ ಕಾನೂನು ವಿವಿ ವಿದ್ಯಾಪರಿಷತ್‌ಗೆ ಸಹ ಸದಸ್ಯರ ನೇಮಕ ಮಾಡಲಾಗುವುದು ಎಂದರು. ಬೃಹತ್ ಮತ್ತು ಮಧ್ಯಮ ಕೈಗಾರಿಕೆಗಳ ಸಚಿವ
ಜಗದೀಶ ಶೆಟ್ಟರ ಮಾತನಾಡಿ, ವಕೀಲ ವೃತ್ತಿಯಲ್ಲಿ ಬದ್ಧತೆಯ ಕೊರತೆ ಕಾಣುತ್ತಿದ್ದು, ಇದು ಆಗಬಾರದು. ಬಾಕಿ ಕೇಸ್‌ಗಳ ಇತ್ಯರ್ಥವಾಗದೆ ಇರುವುದರಿಂದ ನ್ಯಾಯಾಂಗದ ಮೇಲೆ ಒತ್ತಡ ಹೆಚ್ಚುತ್ತಿದೆ. ಪ್ರಕರಣಗಳ ಶೀಘ್ರ ವಿಲೇವಾರಿ ಅಗತ್ಯವಾಗಿದೆ ಎಂದರು. ಏಷ್ಯಾದಲ್ಲೇ ಅತ್ಯಾಧುನಿಕ ಹಾಗೂ ದೊಡ್ಡದಾದ ತಾಲೂಕು ಮಟ್ಟದ ಕೋರ್ಟ್ ಸಂಕೀರ್ಣ ಹುಬ್ಬಳ್ಳಿಯಲ್ಲಿ ನಿರ್ಮಾಣಗೊಂಡಿದೆ. ನ್ಯಾಯಾಂಗ ಇಲಾಖೆ ಅಧಿಕಾರಿಗಳಿಗೆ ವಸತಿ ಗೃಹ ನಿಟ್ಟಿನಲ್ಲಿ ಕೋರ್ಟ್ ಹಿಂದುಗಡೆಯೇ ಸುಮಾರು 10-15 ಎಕರೆ ಕೃಷಿ ಜಮೀನು ಇದ್ದು, ಅದರ ಸ್ವಾಧೀನಕ್ಕೆ ಜಿಲ್ಲಾಧಿಕಾರಿಗೆ ಸೂಚಿಸಲಾಗಿದೆ ಎಂದರು.
ಗೃಹ ಸಚಿವ ಬಸವರಾಜ ಬೊಮ್ಮಾಯಿ ಮಾತನಾಡಿ, ಗೃಹ ಹಾಗೂ ಕಾನೂನು ಇಲಾಖೆ ನಡುವೆ ಸಮನ್ವಯತೆ ಅಗತ್ಯ. ಇದ್ದ ಕಂದಕ ತುಂಬಲು ನಾನು ಹಾಗೂ ಮಾಧುಸ್ವಾಮಿಯವರು ಯತ್ನಿಸುತ್ತಿದ್ದೇವೆ. ಮಾನವ ನಿರ್ಮಿತ ಕಾನೂನುಗಳಿಗಿಂತ ನೈಸರ್ಗಿಕ ಕಾನೂನುಗಳಿಗೆ ಹೆಚ್ಚಿನ ಮಹತ್ವ ಇದ್ದು, ಅದು ಪರಿಣಾಮಕಾರಿಯಾಗಿದೆ. ಕಾನೂನು ಕಲಿಕೆಯಲ್ಲಿ ಮೌಲ್ಯ ಹಾಗೂ ನೈತಿಕತೆಗೆ ಒತ್ತು ನೀಡಬೇಕಾಗಿದೆ ಎಂದರು.
ಶಾಸಕ ಅರವಿಂದ ಬೆಲ್ಲದ ಅಧ್ಯಕ್ಷತೆ ವಹಿಸಿದ್ದರು. ಕಾನೂನು ಇಲಾಖೆ ಪ್ರಧಾನ ಕಾರ್ಯದರ್ಶಿ ಎಸ್.ಬಿ.ವಸ್ತ್ರದಮಠ ಮಾತನಾಡಿದರು. ಕಾನೂನು ವಿವಿ ಕುಲಪತಿ ಪ್ರೊ| ಈಶ್ವರ ಭಟ್ ಅವರು ಪ್ರಾಸ್ತಾವಿಕ ಮಾತನಾಡಿ, ಕಾನೂನು ವಿವಿಗೆ ಸೆಂಟರ್ ಫಾರ್ ವಾಟರ್ ಲಾ ಹಾಗೂ ಸಂವಿಧಾನ ಮತ್ತು
ಸಂಸದೀಯ ಅಧ್ಯಯನ ಕೇಂದ್ರ ಆರಂಭಕ್ಕೆ ರಾಜ್ಯ ಸರಕಾರ ಅನುಮತಿ ನೀಡಿದೆ. ಕಾನೂನು ವಿವಿ ಇತ್ತೀಚೆಗೆ ನಡೆದ ಮೌಲ್ಯಾಂಕನದಲ್ಲಿ 4 ಸ್ಟಾರ್ ಸ್ಥಾನ ಪಡೆದಿದ್ದು, ವಿಶೇಷ ವಿಶ್ವವಿದ್ಯಾಲಯ ವಲಯದಲ್ಲಿ ದೇಶಕ್ಕೆ 6ನೆ ಸ್ಥಾನದಲ್ಲಿದೆ. ಸಂಶೋಧನೆ ದೃಷ್ಟಿಯಿಂದ ಒಂದಿಷ್ಟು ಹಿಂದೆ ಇದ್ದು ಅದನ್ನು ಸಾಧಿಸಲಾಗುವುದು ಎಂದರು.
ವಿಧಾನಪರಿಷತ್ತು ಸದಸ್ಯರಾದ ಬಸವರಾಜ ಹೊರಟ್ಟಿ, ಶ್ರೀನಿವಾಸ ಮಾನೆ, ಪ್ರದೀಪ ಶೆಟ್ಟರ, ವಿಧಾನಸಭೆ ಸದಸ್ಯ ಅಮೃತ ದೇಸಾಯಿ, ಕಾನೂನು ವಿವಿ ಕುಲಸಚಿವ ಆರ್.ರವಿಶಂಕರ, ಡೀನ್ ಸಿ.ಎಸ್.ಪಾಟೀಲ ಇನ್ನಿತರರಿದ್ದರು. ಕುಲಸಚಿವ ಡಾ| ಜಿ.ಬಿ.ಪಾಟೀಲ ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hubli: ಜೆಪಿಸಿ ಬಗ್ಗೆ ಆರೋಪ ಮಾಡುವವರಿಗೆ ಸಂವಿಧಾನದ ಬಗ್ಗೆ ಗೌರವ ಇಲ್ಲ: ಬೊಮ್ಮಾಯಿ
Hubli: ಪ್ರಿಯಾಂಕ್ ಖರ್ಗೆಗೆ ಎಫ್‌ಐಆರ್ ಹಾಕಿಸುವುದೇ ಕೆಲಸ: ತೇಜಸ್ವಿ ಸೂರ್ಯ
Waqf Property: ಜೆಪಿಸಿ ಅಧ್ಯಕ್ಷ ಜಗದಾಂಬಿಕಾ ಪಾಲ್ ರಾಜ್ಯ ಭೇಟಿ: ಕಾಂಗ್ರೆಸ್ ಕೆಂಡ
Dharwad: ವಾಗ್ವಾದ ನಡೆದು ಎರಡು ಸುತ್ತು ಫೈರಿಂಗ್: ನಾಲ್ವರು ವಶಕ್ಕೆ
Waqf Land Issue: ಯಾವುದೇ ರೈತರನ್ನು ಒಕ್ಕಲೆಬ್ಬಿಸುವುದಿಲ್ಲ: ಡಿಕೆ ಶಿವಕುಮಾರ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.