ಮಹದಾಯಿಗಾಗಿ ಉ.ಕ ನಾಯಕರ ಒಗ್ಗಟ್ಟು
ಹೊರಟ್ಟಿ ನೇತೃತ್ವದಲ್ಲಿ ಶಾಸಕರು,ಸಂಸದರ ಸಭೆ
Team Udayavani, Jan 5, 2020, 10:24 PM IST
ಹುಬ್ಬಳ್ಳಿ: ಮಹದಾಯಿ, ಕಳಸಾ-ಬಂಡೂರಿ ನಾಲಾ ಯೋಜನೆ ವಿಚಾರದಲ್ಲಿ ರಾಜ್ಯದ ಹಿತ ಕಾಯಲು ಕಾನೂನು ತಜ್ಞರ ಸಲಹೆ ಪಡೆದು, ಮುಂದಿನ ಕಾರ್ಯತಂತ್ರದ ಬಗ್ಗೆ ನಿರ್ಧರಿಸಲು ಮಲಪ್ರಭಾ ಅಚ್ಚುಕಟ್ಟು ಪ್ರದೇಶ ವ್ಯಾಪ್ತಿಯ ಶಾಸಕರು, ಸಂಸದರ ಸಭೆ ಒಕ್ಕೊರಲಿನ ನಿರ್ಧಾರ ಕೈಗೊಂಡಿದೆ.
ಭಾನುವಾರ ಇಲ್ಲಿನ ಪ್ರವಾಸಿ ಮಂದಿರದಲ್ಲಿ ನಡೆದ ಶಾಸಕರು ಹಾಗೂ ಸಂಸದರ ಸಭೆಯಲ್ಲಿ ಪಕ್ಷಭೇದ ಮರೆತು ಮಹದಾಯಿ ವಿಚಾರದಲ್ಲಿ ನಮ್ಮ ಪಾಲಿನ ನೀರು ಪಡೆಯಲು, ರೈತರು ಹಾಗೂ ರಾಜ್ಯದ ಹಿತ ಕಾಯುವ ನಿಟ್ಟಿನಲ್ಲಿ ಒಗ್ಗಟ್ಟಿನಿಂದ ಧ್ವನಿ ಮೊಳಗಿಸಲು ಚರ್ಚಿಸಲಾಗಿದೆ.
ಒಳ್ಳೆಯ ಬೆಳವಣಿಗೆ: ಹೊರಟ್ಟಿ
ಸಭೆಯ ನೇತೃತ್ವ ವಹಿಸಿದ್ದ ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಕೈಗಾರಿಕಾ ಸಚಿವ ಜಗದೀಶ ಶೆಟ್ಟರ, ವಿಧಾನಪರಿಷತ್ತು ವಿಪಕ್ಷ ನಾಯಕ ಎಸ್.ಆರ್. ಪಾಟೀಲ ಸೇರಿ ವಿವಿಧ ಶಾಸಕರು ಭಾಗಿಯಾಗಿರುವುದು ಉತ್ತಮ ಬೆಳವಣಿಗೆಯಾಗಿದೆ ಎಂದರು.
ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಪತ್ರ ಕಳುಹಿಸಿದ್ದು, ಸಭೆಗೆ ಸಹಮತವಿದೆ. ಸಭೆ ಕೈಗೊಳ್ಳುವ ನಿರ್ಣಯಕ್ಕೆ ಬದ್ಧರಾಗಿರುವುದಾಗಿ ತಿಳಿಸಿದ್ದು, ಇದರಿಂದ ನಮಗೆ ಇನ್ನಷ್ಟು ಬಲ ಬಂದಂತಾಗಿದೆ. ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರನ್ನು ಮುಂದಿನ ಸಭೆಗೆ ಆಹ್ವಾನಿಸಲಾಗುವುದು. ರಾಜಕೀಯ ಟೀಕೆ-ಟಿಪ್ಪಣಿಗಳನ್ನು ಬದಿರಿಗಿಸಿ ನಾವೆಲ್ಲರೂ ಒಗ್ಗಟ್ಟಿನಿಂದ ಮಹದಾಯಿ ವಿಚಾರವಾಗಿ ತಾರ್ಕಿಕ ಅಂತ್ಯ ಕಾಣಿಸಲು ನಿರ್ಣಯಿಸಿದ್ದೇವೆ ಎಂದರು.
ಪಕ್ಷಾತೀತ ಯತ್ನ: ಜೋಶಿ
ಕೇಂದ್ರ ಸಂಸದೀಯ ವ್ಯವಹಾರಗಳು, ಕಲ್ಲಿದ್ದಲು ಮತ್ತು ಗಣಿ ಸಚಿವ ಪ್ರಹ್ಲಾದ ಜೋಶಿ ಮಾತನಾಡಿ, ಇದೊಂದು ಪಕ್ಷಾತೀತ ಯತ್ನವಾಗಿದೆ. ರಾಜ್ಯ ಹಾಗೂ ರೈತರ ಹಿತ ಕಾಯುವ ನಿಟ್ಟಿನಲ್ಲಿ ಏನೆಲ್ಲಾ ಮಾಡಲು ಸಾಧ್ಯ ಎನ್ನುವುದರ ಕುರಿತಾಗಿ ಚರ್ಚಿಸಿದ್ದೇವೆ. ರಾಜಕೀಯ ಆರೋಪ-ಪ್ರತ್ಯಾರೋಪಗಳನ್ನು ಹೊರಗಿಟ್ಟು, ನಮ್ಮ ಪಾಲಿನ ನೀರು ಪಡೆಯುವ ನಿಟ್ಟಿನಲ್ಲಿ ಸಂಘಟಿತರಾಗಿ ಏನು ಮಾಡಬೇಕೆಂಬ ಚರ್ಚೆ ಮಾಡಲಾಗಿದೆ. ನೀರು ಹಂಚಿಕೆ ವಿಚಾರ ಬಂದಾಗ ನಾವು ನಮ್ಮದೇ ಯತ್ನಗಳನ್ನು ಹಿಂದೆಯೂ ಮಾಡಿದ್ದೇವೆ. ಮುಂದೆಯೂ ಮಾಡುತ್ತೇವೆ.
ಈ ಹಿಂದೆ ಕೃಷ್ಣಾ ನದಿ ನೀರು ಹಂಚಿಕೆ ವಿಚಾರದಲ್ಲಿ ತೆಲಂಗಾಣ ಸರ್ಕಾರ ತನ್ನ ಪಾಲು ನೀಡಬೇಕೆಂದು ಬೇಡಿಕೆ ಸಲ್ಲಿಸಿದ್ದಾಗ ಅಂದು ಅನಂತಕುಮಾರ ನೇತೃತ್ವದಲ್ಲಿ ನಾವೆಲ್ಲರೂ ಪಕ್ಷಭೇದ ಮರೆತು ಸುಪ್ರೀಂಕೋರ್ಟ್‌ನಲ್ಲಿ ಬಲವಾದ ಆಕ್ಷೇಪ ಸಲ್ಲಿಸಿದ್ದೆವು. ಹಾಗಾಗಿ, ಕೋರ್ಟ್ ಆಂಧ್ರದ ಪಾಲಿನಲ್ಲಿಯೇ ತೆಲಂಗಾಣ ನೀರಿನ ಪಾಲು ಪಡೆಯಬೇಕೆಂದು ಸೂಚಿಸಿತ್ತು ಎಂದರು.
ಗೋವಾದಿಂದ ರಾಜಕಾರಣ:
ಮಹದಾಯಿ ವಿಚಾರದಲ್ಲಿ ಗೋವಾ ತನ್ನ ರಾಜಕಾರಣ ಮಾಡುತ್ತದೆ, ಮಾಡಲಿ, ನಮ್ಮ ವಾದವನ್ನು, ನಮ್ಮ ರಾಜ್ಯದ ಪರವಾದ ನಿಲುವನ್ನು ನಾವು ಸಂಘಟಿತರಾಗಿ ಮಂಡಿಸುತ್ತೇವೆ. ಕಾನೂನು ತಜ್ಞರ ಜತೆ ಚರ್ಚಿಸಿ ಮುಂದಿನ ನಡೆ ಏನೆಂಬುದರ ಬಗ್ಗೆ ನಿರ್ಣಯಿಸುತ್ತೇವೆ. ಮಹದಾಯಿ ನ್ಯಾಯಾಧಿಕರಣ ತೀರ್ಪು ನೀಡಿದ್ದರೂ, ಯಾವುದಾದರೂ ಒಂದು ರಾಜ್ಯ ಕೋರ್ಟ್ ಮೊರೆ ಹೋದರೆ ನೀರು ಹಂಚಿಕೆ ಸಾಧ್ಯವಾಗದು. ಈ ವಿಷಯ ಸುಪ್ರೀಂಕೋರ್ಟ್‌ನಲ್ಲಿರುವುದರಿಂದ ನಾವೇನೂ ಪ್ರತಿಕ್ರಿಯೆ ನೀಡುವಂತಿಲ್ಲ ಎಂದರು.
ಕಗ್ಗಂಟು ಬಿಡಿಸುವ ಯತ್ನ: ಎಸ್.ಆರ್.ಪಾಟೀಲ
ವಿಧಾನ ಪರಿಷತ್ ವಿಪಕ್ಷ ನಾಯಕ ಎಸ್.ಆರ್.ಪಾಟೀಲ ಮಾತನಾಡಿ, ಮಹದಾಯಿ ಕಗ್ಗಂಟು ಬಿಡಿಸುವ ಯತ್ನ ಇದಾಗಿದೆ. ಕಾವೇರಿ ನದಿ ನೀರಿನ ವಿವಾದ ಬಂದಾಗ ಆ ಭಾಗದ ಜನಪ್ರತಿನಿಧಿಗಳು ಯಾವ ರೀತಿ ಸಂಘಟಿತ ನಿಲುವು ತೋರುತ್ತಾರೋ, ಅದೇ ರೀತಿ ಮಹದಾಯಿ ವಿಚಾರದಲ್ಲಿ ಒಗ್ಗಟ್ಟು ವ್ಯಕ್ತವಾಗಿದೆ. ಇದೊಂದು ದಿಟ್ಟ ಹಾಗೂ ಚಾರಿತ್ರಿಕ ಹೆಜ್ಜೆಯಾಗಿದೆ. ಪಕ್ಷ ಮೀರಿ ನಾವೆಲ್ಲಾ ಮಹದಾಯಿ ವಿಚಾರವನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಲು ಯತ್ನಿಸುತ್ತೇವೆ ಎಂದರು.
ನಮ್ಮ ಶಕ್ತಿ ತೋರಿಸುತ್ತೇವೆ: ಶೆಟ್ಟರ್
ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್ ಮಾತನಾಡಿ, ಮಹದಾಯಿ ವಿಚಾರದಲ್ಲಿ ಎಲ್ಲರೂ ಸೇರಿ ಒಗ್ಗಟ್ಟಿನ ನಡೆ ಕುರಿತಾಗಿ ಚರ್ಚಿಸಿದ್ದೇವೆ. ಮಹದಾಯಿ ನ್ಯಾಯಾಧಿಕರಣ ತೀರ್ಪಿನ ನಿಟ್ಟಿನಲ್ಲಿ ನಮ್ಮ ಪಾಲಿನ ನೀರು ಪಡೆಯಲು ನಮ್ಮ ಶಕ್ತಿ ತೋರಿಸುತ್ತೇವೆ. ಎಲ್ಲ ಪಕ್ಷಗಳ ಜನಪ್ರತಿನಿಧಿಗಳ ಪ್ರಥಮ ಸಭೆ ಯಶಸ್ವಿಯಾಗಿದ್ದು, ಮುಂದಿನ ದಿನಗಳಲ್ಲಿಯೂ ಈ ರೀತಿ ಸಭೆಗಳನ್ನು ನಡೆಸಲಾಗುವುದು. ಈ ಹಿಂದೆ ಬಸವರಾಜ ಹೊರಟ್ಟಿ ಅವರು ಸಭಾಪತಿ ಆಗಿದ್ದಾಗ, ನಿಮ್ಮ ನೇತೃತ್ವದಲ್ಲೇ ಈ ಭಾಗದ ಜನಪ್ರತಿನಿಧಿಗಳ ಸಭೆ ಕರೆಯಿರಿ ಎಂದು ಸಲಹೆ ನೀಡಿದ್ದೆ. ಅದು ಆಗಿರಲಿಲ್ಲ. ಇದೀಗ ಅವರ ನೇತೃತ್ವದಲ್ಲೇ ಸಭೆ ನಡೆದಿದ್ದು, ಮುಂದಿನ ದಿನಗಳಲ್ಲಿ ಉತ್ತರ ಕರ್ನಾಟಕದ ಅಭಿವೃದ್ಧಿ ಕುರಿತಾಗಿಯೂ ಪಕ್ಷಾತೀತವಾಗಿ ಜನಪ್ರತಿನಿಧಿಗಳ ಸಭೆ ಕರೆದು ಚರ್ಚಿಸಲಾಗುವುದು ಎಂದರು.
ವಿಧಾನಸಭೆ ಸದಸ್ಯರಾದ ಪ್ರಸಾದ ಅಬ್ಬಯ್ಯ, ಶಂಕರ ಪಾಟೀಲ ಮುನೇನಕೊಪ್ಪ, ಅಮೃತ ದೇಸಾಯಿ, ಆನಂದ ಮಾಮನಿ, ಅರವಿಂದ ಬೆಲ್ಲದ, ವಿಧಾನ ಪರಿಷತ್ ಸದಸ್ಯರಾದ ಶ್ರೀನಿವಾಸ ಮಾನೆ, ಪ್ರದೀಪ ಶೆಟ್ಟರ, ಮಾಜಿ ಸಭಾಪತಿ ವೀರಣ್ಣ ಮತ್ತಿಕಟ್ಟಿ, ಮಾಜಿ ಶಾಸಕರಾದ ಎನ್.ಎಚ್.ಕೋನರಡ್ಡಿ, ಎಸ್.ಎನ್.ಪಾಟೀಲ ಇನ್ನಿತರರಿದ್ದರು.
ಕೋನರಡ್ಡಿ ಉಪಸ್ಥಿತಿಗೆ ಆಕ್ಷೇಪ:
ಸಭೆಯಲ್ಲಿ ಮಾಜಿ ಶಾಸಕ ಎನ್.ಎಚ್.ಕೋನರಡ್ಡಿ ಅವರ ಭಾಗವಹಿಸುವಿಕೆಗೆ ಬಿಜೆಪಿಯ ಕೆಲವರು ಆಕ್ಷೇಪ ವ್ಯಕ್ತಪಡಿಸಿದರು. ಜನಪ್ರತಿನಿಧಿಗಳ ಸಭೆಗೆ ಮಾಜಿಯಾದವರು ಏಕೆ ಹೋಗಬೇಕು ಎಂದು ಆಕ್ಷೇಪ ಎತ್ತಿದರು. ನಂತರ, ಸಭೆಯಲ್ಲಿದ್ದ ಜನಪ್ರತಿನಿಧಿಗಳು, ಮಹದಾಯಿ ಹೋರಾಟದಲ್ಲಿ ಅವರು ಸಕ್ರಿಯರಾಗಿದ್ದಾರೆ. ಅಲ್ಲದೆ, ಮಾಜಿ ಶಾಸಕರಿಗೆ ಸಭೆಯಲ್ಲಿ ಭಾಗವಹಿಸಲು ಅವಕಾಶ ನೀಡಲಾಗಿದೆ ಎಂದು ಸಮಜಾಯಿಷಿ ನೀಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Amit Shah ಹೇಳಿಕೆ ಖಂಡಿಸಿ ರಾಜ್ಯಾದ್ಯಂತ ಪ್ರತಿಭಟನೆ: ಬಿ.ಕೆ. ಹರಿಪ್ರಸಾದ್
Mandya: ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ 46 ಮಂದಿ ಸಾಧಕರಿಗೆ ಸಮ್ಮಾನ
Winter Session: ಪಂಚಮಸಾಲಿಗಳ ಮೇಲೆ ಲಾಠಿ ಬೀಸಿದವರಿಗೆ ಬಹುಮಾನ; ಶಾಸಕ ಯತ್ನಾಳ್ ಆಕ್ರೋಶ
Congress: ಸರಕಾರ ಕನ್ನಡದ ಅಭಿವೃದ್ಧಿಯನ್ನೂ ಶೂನ್ಯವಾಗಿಸಲು ಹೊರಟಿದೆ: ಬಿ.ವೈ.ವಿಜಯೇಂದ್ರ
Mandya: ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ಗಲಾಟೆ: ಪೊಲೀಸರೊಂದಿಗೆ ಮಾತಿನ ಚಕಮಕಿ!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.