ಲಿಂಗಾಯತರಲ್ಲಿ ಒಡಕಿಗೆ ಯತ್ನ
Team Udayavani, Apr 22, 2019, 11:13 AM IST
ಹುಬ್ಬಳ್ಳಿ: ಶಾಸಕ ಅರವಿಂದ ಬೆಲ್ಲದ ಅವರಿಗೆ ಆಕಾಶ ತೋರಿಸಿ ಅವರ ಮೂಲಕ ಲಿಂಗಾಯತ ಸಮಾಜ ವಿರುದ್ಧ ಎತ್ತಿ ಕಟ್ಟುವ ಕೆಲಸ ಬಿಜೆಪಿ ನಾಯಕರಿಂದಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಶಾಸಕರು ರಾಜಕಾರಣಕ್ಕಾಗಿ ಸಮಾಜ ಎಳೆದು ತಂದಿರುವುದು ತಪ್ಪು. ವಿನಯ ಕುಲಕರ್ಣಿ ವಿರುದ್ಧ ಮಾಡಿರುವ ಆಪಾದನೆಯಲ್ಲಿ ಯಾವುದೇ ಸತ್ಯಾಂಶವಿಲ್ಲ. ಚುನಾವಣೆಯ ಕೊನೆ ಹಂತದಲ್ಲಿ ಗೊಂದಲ ಮೂಡಿಸುವ ಕಾರಣಕ್ಕೆ ಬಿಜೆಪಿ ಶಾಸಕರು ಸಮಾಜವನ್ನು ಎಳೆದು ತಂದು, ಸಮಾಜದಲ್ಲಿ ಒಡಕು ಮೂಡಿಸುವ ಕೆಲಸ ಮಾಡಿದ್ದಾರೆ. ಇದರ ಹಿಂದೆ ಬಿಜೆಪಿಯ ಹಿರಿಯ ನಾಯಕರ ತಂತ್ರಗಾರಿಕೆಯಿದೆ ಎಂದರು.
ಬಿಜೆಪಿಯಿಂದ ಲಿಂಗಾಯತರಿಗೆ ಅನ್ಯಾಯ: ಮಾಜಿ ಸಚಿವ ಪಿ.ಸಿ.ಸಿದ್ದನಗೌಡರ ಮಾತನಾಡಿ, ರಾಜ್ಯದಿಂದ ಬಿಜೆಪಿಯಲ್ಲಿ 9 ಸಂಸದರು ಲಿಂಗಾಯತರಿದ್ದರು. ಒಬ್ಬರಿಗೂ ಸಚಿವ ಸ್ಥಾನಮಾನ ಅವಕಾಶ ನೀಡಲಿಲ್ಲ. ಇದು ಬಿಜೆಪಿಯಿಂದ ಲಿಂಗಾಯತರಿಗೆ ಆಗಿರುವ ಅನ್ಯಾಯ ಹಾಗೂ ತುಳಿಯುತ್ತಿರುವ ಕೆಲಸ ನಡೆದಿದೆ. ಎಲ್ಲಾ ಸಮಾಜದವನ್ನು ಒಗ್ಗೂಡಿಸಿಕೊಂಡು ಹೋಗುವ ಲಿಂಗಾಯತ ಸಮಾಜ ಕುರಿತು ಮಾತನಾಡುವ ಅಧಿಕಾರ ಯಾರಿಗೂ ಇಲ್ಲ. ಲಿಂಗಾಯತ ಸಮಾಜ ಮುಖಂಡನಾಗಿ ಸಮಾಜದ ಮತ ಕೇಳಿರುವುದಲ್ಲಿ ವಿನಯ ಕುಲಕರ್ಣಿ ಅವರದ್ದು ತಪ್ಪಿಲ್ಲ. ಒಂದೇ ಸಮುದಾಯ ಮತಗಳನ್ನು ಪಡೆದು ಚುನಾವಣೆ ಗೆಲ್ಲಲು ಸಾಧ್ಯವಿಲ್ಲ ಎಂದರು.
ಎಚ್ಚೆತ್ತುಕೊಂಡಿದ್ದಾರೆ ಲಿಂಗಾಯತರು: ವಿಧಾನ ಪರಿಷತ್ ಮಾಜಿ ಸಭಾಪತಿ ವೀರಣ್ಣ ಮತ್ತಿಕಟ್ಟಿ ಮಾತನಾಡಿ, ವಿವಿಧತೆಯಲ್ಲಿ ಏಕತೆಯನ್ನು ಬಯಸುವ ಕಾಂಗ್ರೆಸ್ ಪಕ್ಷದಲ್ಲಿ ಲಿಂಗಾಯತರನ್ನು ತುಳಿಯುವ ಕೆಲಸ ಆಗಿಲ್ಲ. ಕ್ಷೇತ್ರದಲ್ಲಿ ಲಿಂಗಾಯತ ಸಮಾಜದಲ್ಲಿ ಒಡಕು ಮೂಡಿಸುವ ಕೆಲಸ ಯಾರಿಂದ ನಡೆಯುತ್ತಿದೆ ಎಂಬುದು ಜನರಿಗೆ ಗೊತ್ತಾಗಿದ್ದು, ಸಮಾಜ ಎಚ್ಚೆತ್ತುಕೊಂಡಿದೆ. ಎಲ್ಲಾ ಸಮಾಜಗಳು ವಿನಯ ಕುಲಕರ್ಣಿ ಅವರಿಗೆ ಬೆಂಬಲ ಸೂಚಿಸಿದ್ದು, ಸಮಾಜ ಒಡೆದು ರಾಜಕಾರಣ ಮಾಡುವ ಬಿಜೆಪಿಯ ತಂತ್ರಗಾರಿಕೆ ನಡೆಯಲ್ಲ ಎಂದರು.
ತುಪ್ಪ ಸುರಿಯುತ್ತಿದ್ದಾರೆ: ಜೆಡಿಎಸ್ ಮುಖಂಡ ಗುರುರಾಜ ಹುಣಸೀಮರದ ಮಾತನಾಡಿ, ಅಣ್ಣ ತಮ್ಮಂದಿರ ಜಗಳವನ್ನು ರಾಜಕಾರಣಕ್ಕೆ ಬಳಸಿಕೊಳ್ಳಲು ಸಂಸದ ಪ್ರಹ್ಲಾದ ಜೋಶಿ ಹಾಗೂ ಆರ್‌ಎಸ್‌ಎಸ್ ತುಪ್ಪ ಸುರಿಯುವ ಕೆಲಸ ಮಾಡುತ್ತಿದ್ದಾರೆ. ಹಿಂದೆ ಶಾಸಕರಾಗಿದ್ದ ಚಂದ್ರಕಾಂತ ಬೆಲ್ಲದ ಅವರಿಗೆ ಸಚಿವ ಸ್ಥಾನಕ್ಕಾಗಿ ಒತ್ತಡ ಹೇರಲು ಅರವಿಂದ ಬೆಲ್ಲದ ನಮ್ಮನ್ನೆಲ್ಲಾ ಕರೆದುಕೊಂಡು ಹೋಗಿದ್ದರು. 30 ವರ್ಷಗಳ ಕಾಲ ಶಾಸಕರಾಗಿದ್ದ ಇವರ ತಂದೆಯಿಂದ ಲಿಂಗಾಯತ ಸಮಾಜಕ್ಕೆ ಯಾವ ಕೊಡುಗೆ ನೀಡಿದ್ದಾರೆ. ಲಿಂಗಾಯತರ ಮತಗಳನ್ನು ಪಡೆದು ಸಮಾಜದಿಂದ ಸ್ಥಾನಮಾನ ಪಡೆದಿರುವಾಗ ಸಮಾಜಕ್ಕೆ ಅನ್ಯಾಯ ಮಾಡುವ ಕೆಲಸ ಆಗಬಾರದು ಎಂದರು.
ಮೂರು ವರ್ಷ ಮಹದಾಯಿ ಹೋರಾಟ ನಡೆದರೂ ಸಂಸದ ಜೋಶಿ ಒಮ್ಮೆಯೂ ಪ್ರಧಾನಮಂತ್ರಿಗಳಿಗೆ ಒತ್ತಾಯ ಮಾಡಲಿಲ್ಲ. ರೈತರೊಂದಿಗೆ ಬಂದು ಹೋರಾಟಕ್ಕೆ ಕೂಡಲಿಲ್ಲ. ಇಂತಹ ಸಂಸದರು ನಮ್ಮ ಕ್ಷೇತ್ರಕ್ಕೆ ಹಾಗೂ ರೈತರಿಗೆ ಬೇಕಾಗಿಲ್ಲ.
•ಪಿ.ಸಿ.ಸಿದ್ದನಗೌಡರ, ಮಾಜಿ ಸಚಿವ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.