ಸ್ವಯಂ ಆದಾಯ ವೃದ್ಧಿಯಲ್ಲಿ ಮಹಾನಗರ ಪಾಲಿಕೆಗೆ ಹಿನ್ನಡೆ
Team Udayavani, Apr 21, 2017, 1:19 PM IST
ಹುಬ್ಬಳ್ಳಿ: ಸ್ವಯಂ ಆದಾಯಕ್ಕೆ ಮುಂದಡಿ ಇರಿಸಬೇಕಾದ ಮಹಾನಗರ ಪಾಲಿಕೆ, ಕೆಲ ಆದಾಯ ಮೂಲಗಳ ಕರ ಸಂಗ್ರಹದಲ್ಲಿ ತೀವ್ರ ಹಿನ್ನಡೆ ಅನುಭವಿಸಿದೆ. ಜಾಹೀರಾತು, ವ್ಯಾಪಾರ ಪರವಾನಗಿಯಂತಹ ಶುಲ್ಕ ಸಂಗ್ರಹದಲ್ಲೂ ವೈಫಲ್ಯ ಕಂಡಿದೆ.
ಸ್ಥಳೀಯ ಸರಕಾರಗಳು ಕೇವಲ ಅನುದಾನದ ಮೇಲೆಯೇ ಅವಲಂಬನೆಯಾಗದೆ ಸ್ವಯಂ ಆದಾಯ ವೃದ್ಧಿಗೆ ಏನೆಲ್ಲ ಸಾಧ್ಯವೋ ಅವೆಲ್ಲವನ್ನು ಕೈಗೊಳ್ಳಬೇಕೆಂದು ಕೇಂದ್ರ ಹಾಗೂ ರಾಜ್ಯ ಸರಕಾರಗಳು ಹೇಳುತ್ತಿವೆಯಾದರೂ, ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಮಾತ್ರ ಆಸ್ತಿಕರ, ನಗರ ಯೋಜನೆ ವಿಭಾಗ ಹೊರತು ಪಡಿಸಿದರೆ ಉಳಿದೆಲ್ಲ ವಿಭಾಗಗಳಲ್ಲಿ ನಿರೀಕ್ಷಿತ ಸಾಧನೆ ತೋರಿಲ್ಲ ಎಂಬುದಕ್ಕೆ 2016-17ನೇ ಆರ್ಥಿಕ ವರ್ಷದ ಅಂತ್ಯಕ್ಕೆ ಪಾಲಿಕೆ ಆದಾಯ ಸಂಗ್ರಹ ಅಂಕಿ-ಅಂಶಗಳು ಸ್ಪಷ್ಟಪಡಿಸುತ್ತಿವೆ.
ಅವಳಿ ನಗರದ ಬೆಳವಣಿಗೆ ತೀವ್ರಗೊಳ್ಳುತ್ತಿದೆ. ವರ್ಷದಿಂದ ವರ್ಷಕ್ಕೆ ಹತ್ತಾರು ಬಡಾವಣೆಗಳು ಸೃಷ್ಟಿಯಾಗುತ್ತಿದ್ದು, ಅನೇಕ ಹಳ್ಳಿಗಳನ್ನು ಪಾಲಿಕೆ ತನ್ನ ಒಡಲಿಗೆ ಹಾಕಿಕೊಳ್ಳುತ್ತಿದೆ. ನೀರು, ರಸ್ತೆ, ವಿದ್ಯುತ್, ಸ್ವತ್ಛತೆ ಹೀಗೆ ವಿವಿಧ ಅಭಿವೃದ್ಧಿ ಕಾಮಗಾರಿಗಳು ಹೆಚ್ಚುತ್ತಲೇ ಸಾಗಿವೆ.
ಆದರೆ, ಪಾಲಿಕೆ ತನ್ನೆಲ್ಲ ಅಭಿವೃದ್ಧಿ ಕಾಮಗಾರಿಗಳ ಹಣಕ್ಕೆ ಕೇಂದ್ರ-ರಾಜ್ಯ ಸರಕಾರಗಳ ವಿವಿಧ ಯೋಜನೆ ನೆರವು, ರಾಜ್ಯ ಹಣಕಾಸು ನಿಧಿ(ಎಸ್‌ಎಫ್ಸಿ), 14ನೇ ಹಣಕಾಸು ಯೋಜನೆ ಹೀಗೆ ಹೊರಗಿನ ಆರ್ಥಿಕ ನೆರವನ್ನೇ ಶೇ.70-80ರಷ್ಟು ನೆಚ್ಚಿಕೊಂಡು ಮುನ್ನಡೆಯುತ್ತಿದೆ. ಸ್ವಯಂ ಆದಾಯ ವೃದ್ಧಿಗೆ ಇರಬಹುದಾದ ಹಲವು ಅವಕಾಶಗಳನ್ನು ಸ್ಪಷ್ಟ ರೀತಿಯಲ್ಲಿ ಬಳಕೆಗೆ ಸಮರ್ಪಕ ಕ್ರಮದ ಕೊರತೆ ಎದ್ದು ಕಾಣುತ್ತಿದೆ.
ಶೇ.23ರಷ್ಟು ಮಾತ್ರ ಸಂಗ್ರಹ: ಬೆಂಗಳೂರು ಹೊರತು ಪಡಿಸಿದರೆ ಎರಡನೇ ದೊಡ್ಡ ಮಹಾನಗರ, ವಾಣಿಜ್ಯ ನಗರಿ ಖ್ಯಾತಿಯ ಹುಬ್ಬಳ್ಳಿ-ಧಾರವಾಡದಲ್ಲಿ ವ್ಯಾಪಾರ-ವಹಿವಾಟು ಜೋರಾಗಿಯೇ ಇರುತ್ತದೆ. ನಗರ ಬೆಳೆದಂತೆ ವ್ಯಾಪಾರ, ವಹಿವಾಟವೂ ಹೆಚ್ಚುತ್ತಲೇ ಸಾಗುತ್ತಿದೆ. ಆದರೆ, ವ್ಯಾಪಾರ ಪರವಾನಗಿ ಶುಲ್ಕ ಇತರೆ ವಿಭಾಗಗಳಿಗೆ ಹೋಲಿಸಿದರೆ ಕೊನೆ ಸ್ಥಾನದಲ್ಲಿದೆ.
ಪಾಲಿಕೆಯ ವ್ಯಾಪಾರ ಪರವಾನಗಿ ಶುಲ್ಕ ಸಂಗ್ರಹದ ಸ್ಥಿತಿ ಗಮನಿಸಿದರೆ ಅವಳಿನಗರದಲ್ಲಿ ಅನೇಕ ವ್ಯಾಪಾರಗಳು ಪಾಲಿಕೆ ಪರವಾನಗಿ ಇಲ್ಲದೆಯೇ ಅನಧಿಕೃತವಾಗಿ ನಡೆಯುತ್ತಿವೆಯೋ ಅಥವಾ ಶುಲ್ಕ ಸಂಗ್ರಹದಲ್ಲಿ ಪಾಲಿಕೆ ಅಧಿಕಾರಿಗಳು ವಿಫಲರಾಗಿದ್ದಾರೋ ಎಂಬ ಅನುಮಾನ ಎಂತಹವರಿಗೂ ಮೂಡದೆ ಇರದು.
2016- 17ನೇ ಸಾಲಿಗೆ ವ್ಯಾಪಾರ ಪರವಾನಗಿ ಶುಲ್ಕವಾಗಿ ಸುಮಾರು 4ಕೋಟಿ ರೂ.ಗಳ ಶುಲ್ಕ ಸಂಗ್ರಹ ಗುರಿ ಹೊಂದಲಾಗಿತ್ತು. 2015-16ನೇ ಸಾಲಿನಲ್ಲಿ ಉಳಿದ ಬಾಕಿ 4.93ಲಕ್ಷ ರೂ. ಸೇರಿದಂತೆ ಒಟ್ಟು 4.04ಕೋಟಿ ರೂ.ಗಳು ಸಂಗ್ರಹವಾಗಬೇಕಿತ್ತು. 2016-17ನೇ ಆರ್ಥಿಕ ವರ್ಷದ ಅಂತ್ಯಕ್ಕೆ ವ್ಯಾಪಾರ ಪರವಾನಗಿ ಶುಲ್ಕ ಸಂಗ್ರಹವಾಗಿದ್ದು ಕೇವಲ 95.46ಲಕ್ಷ ರೂ. ಮಾತ್ರ. ಅಲ್ಲಿಗೆ ಇನ್ನು 3.09ಕೋಟಿ ರೂ. ಬಾಕಿ ಉಳಿದಿದೆ.
ವ್ಯಾಪಾರ ಪರವಾನಗಿ ಶುಲ್ಕದಲ್ಲಿ ಶೇ.23ರಷ್ಟು ಮಾತ್ರ ಸಾಧನೆಯಾಗಿದೆ. 2017-18ನೇ ಆರ್ಥಿಕ ವರ್ಷದ ಸಂಗ್ರಹ ಗುರಿ ಸೇರಿದರೆ ಸುಮಾರು 8-9 ಕೋಟಿ ರೂ.ನಷ್ಟು ಪ್ರಸಕ್ತ ಆರ್ಥಿಕ ವರ್ಷದ ಅಂತ್ಯಕ್ಕೆ ಬರಬೇಕಾಗುತ್ತದೆ. ಪಾಲಿಕೆಗೆ ಆದಾಯ ತಂದುಕೊಡುವಲ್ಲಿ ಜಾಹೀರಾತು ವಿಭಾಗ ಮಹತ್ವದ ಪಾತ್ರ ವಹಿಸುತ್ತದೆ. ಆದರೆ, ಕೆಲ ದಶಕಗಳಿಂದ ಈ ವಿಭಾಗವೇ ನಗಣ್ಯ ರೀತಿಯಲ್ಲಿದೆ.
ಮಹಾನಗರ ತುಂಬೆಲ್ಲ ಪ್ರಮುಖ ವೃತ್ತ, ರಸ್ತೆ, ಒಳರಸ್ತೆಗಳಲ್ಲಿ ಎಲ್ಲೆಂದರಲ್ಲಿ ಬ್ಯಾನರ್, ಬಂಟಿಂಗ್ಸ್ ಗಳು ರಾರಾಜಿಸುತ್ತಿದ್ದರೂ ಪಾಲಿಕೆ ಕಣ್ಣಿಗೆ, ಆದಾಯ ಮೂಲಕ್ಕೆ ಇದಾವುದೂ ಇಲ್ಲದ ಸ್ಥಿತಿ ಇದೆ. 2016-17ನೇ ಸಾಲಿಗೆ ಜಾಹೀರಾತು ಮೂಲದಿಂದ 1.74ಕೋಟಿ ರೂ. ಗುರಿ ನಿಗದಿಪಡಿಸಲಾಗಿತ್ತು. 2015-16ನೇ ಸಾಲಿನಲ್ಲಿ ಸುಮಾರು 1.29ಕೋಟಿ ರೂ. ಬಾಕಿ ಸೇರಿ ಒಟ್ಟು 3.03ಕೋಟಿ ರೂ. ಶುಲ್ಕ ಸಂಗ್ರಹವಾಗಬೇಕಿತ್ತು.
ಕಳೆದ ಆರ್ಥಿಕ ವರ್ಷದ ಅಂತ್ಯಕ್ಕೆ 1.34ಕೋಟಿ ರೂ. ಸಂಗ್ರಹವಾಗಿದ್ದು, ಇನ್ನು 1.69ಕೋಟಿ ರೂ. ಬರಬೇಕಿದೆ. ಜಾಹೀರಾತು ಭರಾಟೆ ನೋಡಿದರೆ ನಿಗದಿ ಪಡಿಸಿದ ಆದಾಯವೇ ಅತ್ಯಂತ ಕಡಿಮೆ ಅದರಲ್ಲೂ ಸಂಗ್ರಹವಾಗಿದ್ದ ಶುಲ್ಕ ಕೇವಲ ಶೇ.44.13ರಷ್ಟು ಮಾತ್ರವಾಗಿದೆ. ಘನತ್ಯಾಜ್ಯ ನಿರ್ವಹಣೆ- ವಿಲೇವಾರಿ ನಿಟ್ಟಿನಲ್ಲಿ ಎರಡೂರು ವರ್ಷಗಳ ಹಿಂದೆ ಜನರ ಮೇಲೆ ಘನತ್ಯಾಜ್ಯ ಸೆಸ್ ಹಾಕಲು ಆರಂಭಿಸಲಾಗಿತ್ತು. ಆಸ್ತಿ ಕರದಲ್ಲೇ ಇದನ್ನು ಸೇರಿಸಲಾಗುತ್ತಿದೆ.
2016-17ನೇ ಸಾಲಿಗೆ ಘನತ್ಯಾಜ್ಯ ಸೆಸ್ ರೂಪದಲ್ಲಿ ಸುಮಾರು 11ಕೋಟಿ ರೂ.ಗಳ ಸಂಗ್ರಹ ಗುರಿ ಹೊಂದಲಾಗಿತ್ತು. 2015-16ನೇ ಸಾಲಿನ 6.55ಕೋಟಿ ರೂ.ಗಳ ಬಾಕಿ ಸೇರಿ ಒಟ್ಟು 17.55ಕೋಟಿ ರೂ. ಬರಬೇಕಾಗಿತ್ತು. 2016-17ನೇ ಆರ್ಥಿಕ ವರ್ಷದ ಅಂತ್ಯಕ್ಕೆ ಕೇವಲ 5.42ಕೋಟಿ ರೂ.ಸಂಗ್ರಹವಾಗಿದ್ದು, ಇನ್ನು 12.62ಕೋಟಿ ರೂ.ಬಾಕಿ ಇದ್ದು, ಶೇ.28.06ರಷ್ಟು ಮಾತ್ರ ಸಾಧನೆ ತೋರಲಾಗಿದೆ.
* ಅಮರೇಗೌಡ ಗೋನವಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಡಾ. ವೀಣಾ ಶಾಂತೇಶ್ವರ, ಎಸ್.ಜಿ. ಸಿದ್ಧರಾಮಯ್ಯರಿಗೆ ಅಂಬಿಕಾತನಯದತ್ತ ರಾಷ್ಟ್ರೀಯ ಪ್ರಶಸ್ತಿ
Dharwad: ಔಡಲಹಣ್ಣು ತಿಂದು ಏಳು ಮಕ್ಕಳು ಅಸ್ವಸ್ಥ: ಜಿಲ್ಲಾಸ್ಪತ್ರೆಗೆ ದಾಖಲು
ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಿನಿಂದ ಮತಾಂಧರ ಹಾವಳಿ ಹೆಚ್ಚಾಗಿದೆ: ಪ್ರಹ್ಲಾದ್ ಜೋಶಿ
Hubli: ಅಮಿತ್ ಶಾ ಅಣಕು ಶವ ಸಂಸ್ಕಾರದ ಅಸ್ಥಿ ವಿಸರ್ಜಿಸಿ ಪ್ರತಿಭಟನೆ
Mangaluru Lit Fest: ಯಾವುದೇ ಉತ್ಸವ ಯಾಂತ್ರಿಕವಾದರೆ ಹೊಸತನ ಮೂಡಲ್ಲ: ಎಸ್.ಎಲ್ ಭೈರಪ್ಪ
MUST WATCH
ಹೊಸ ಸೇರ್ಪಡೆ
ಬಜೆಟ್‌ನಲ್ಲಿ ಹಿಂದುಳಿದ ವರ್ಗಗಳ ನಿಗಮಗಳಿಗೆ ಅನುದಾನಕ್ಕೆ ಪ್ರಣವಾನಂದ ಸ್ವಾಮೀಜಿ ಆಗ್ರಹ
Tollywood: ರಿಲೀಸ್ ಆಗಿ ಒಂದೇ ದಿನದಲ್ಲಿ ʼಡಾಕು ಮಹಾರಾಜ್ʼ HD ಪ್ರಿಂಟ್ ಲೀಕ್
Jammu Kashmir: ಸೋನ್ಮಾರ್ಗ್‌ನಲ್ಲಿ ಝಡ್-ಮೋರ್ಹ್ ಸುರಂಗವನ್ನು ಉದ್ಘಾಟಿಸಿದ ಪ್ರಧಾನಿ ಮೋದಿ
ನಭದಲ್ಲಿ ಕಣ್ಣು-ನೆಲದಲ್ಲಿ ಕಾಲು: ಮೌನ ಕ್ರಾಂತಿ: ಭೂ ಸಾಮರ್ಥ್ಯ ವೃದ್ಧಿಸಿದ ಬಾಹ್ಯಾಕಾಶ ಶಕ್ತಿ
ಹತ್ಯೆಗೈಯಲು ಹೇಳಿದ್ದು ಪ್ರೇಯಸಿಯ ಪತಿಯನ್ನು, ಬಾಡಿಗೆ ಹಂತಕರು ಕೊಂದಿದ್ದು Taxi ಚಾಲಕನನ್ನು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.