ಇಬ್ಬರಿಗೂ ವಿಧಾನಸಭೆ ಪ್ರವೇಶದ ತವಕ!
Team Udayavani, May 2, 2019, 12:57 PM IST
ಹುಬ್ಬಳ್ಳಿ: ಕುಂದಗೋಳ ವಿಧಾನಸಭೆ ಉಪ ಚುನಾವಣೆಯಲ್ಲಿ ಇಬ್ಬರು ಪ್ರಮುಖ ಅಭ್ಯರ್ಥಿಗಳಲ್ಲಿ ಒಬ್ಬರಿಗೆ ವಿಧಾನಸಭೆ ಪ್ರವೇಶದ ತವಕ ಇದ್ದರೆ, ಇನ್ನೊಬ್ಬರಿಗೆ ರಾಜಕೀಯ ಪುನರ್ಜನ್ಮ ಚಡಪಡಿಕೆ ಸೃಷ್ಟಿಸಿದೆ.
ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ದಿ| ಸಿ.ಎಸ್.ಶಿವಳ್ಳಿ ಅವರ ಪತ್ನಿ ಕುಸುಮಾವತಿ ಶಿವಳ್ಳಿ, ಬಿಜೆಪಿಯಿಂದ ಮಾಜಿ ಶಾಸಕ ಎಸ್.ಐ.ಚಿಕ್ಕನಗೌಡ್ರ ಸ್ಪರ್ಧಿಸಿದ್ದಾರೆ. ಕ್ಷೇತ್ರದಲ್ಲಿ ನೇರ ಹಣಾಹಣಿ ಇದ್ದು, ಗೆಲುವು ನಮ್ಮದೇ ಎಂದು ಎರಡೂ ಕಡೆಯವರು ಹೇಳಿಕೊಳ್ಳುತ್ತಿದ್ದರೂ ಗೆಲುವು ಸುಲಭವಲ್ಲ ಎಂಬ ಸತ್ಯ ಇಬ್ಬರಿಗೂ ಗೊತ್ತಿದೆ. ಇದ್ದ ಸ್ಥಾನ ಉಳಿಸಿಕೊಳ್ಳುವ ಕಸರತ್ತಿಗೆ ಮೈತ್ರಿಕೂಟ ಮುಂದಾಗಿದ್ದರೆ, 2018ರಲ್ಲಿ ಅತ್ಯಲ್ಪ ಮತಗಳ ಸೋಲಿನ ಕಹಿ ಮರೆಯಲು ಗೆಲುವಿನ ಸಿಹಿ ಪಡೆಯಲೇಬೇಕೆಂಬ ಛಲ ಬಿಜೆಪಿಯದ್ದಾಗಿದೆ.
ಪಕ್ಷದೊಳಗಿನ ಭಿನ್ನಮತ ಶಮನಕ್ಕೆ ಎರಡೂ ಕಡೆ ಸರ್ಕಸ್ ನಡೆದಿದೆ. ಬಂಡಾಯ ಥಂಡವಾಗಿಸುವಲ್ಲಿ ಬಿಜೆಪಿ ಬಹುತೇಕ ಯಶಸ್ವಿಯಾಗಿದೆ. ಕಾಂಗ್ರೆಸ್ ಬಂಡಾಯಕ್ಕೆ ಮುಲಾಮು ಹಚ್ಚಲಾಗಿದೆಯಾದರೂ ಗಾಯ ಇನ್ನೂ ಪೂರ್ಣ ವಾಸಿಯಾಗಿಲ್ಲ. ಕುಂದಗೋಳ ವಿಧಾನಸಭೆ ಕ್ಷೇತ್ರ ಹಲವು ವಿಶೇಷತೆ ಹೊಂದಿದೆ. 1957ರಿಂದ 2018ರವರೆಗೆ ಸತತ ಎರಡು ಬಾರಿ ಆಯ್ಕೆಯಾಗಿದ್ದು ಇಬ್ಬರು ಶಾಸಕರು ಮಾತ್ರ. ಒಟ್ಟು 14 ಚುನಾವಣೆಗಳಲ್ಲಿ ಎಂಟು ಬಾರಿ ಕಾಂಗ್ರೆಸ್‌ಗೆ ಕ್ಷೇತ್ರ ಒಲಿದಿದ್ದರೆ, ಮೂರು ಬಾರಿ ಜನತಾ ಪರಿವಾರಕ್ಕೆ, ಎರಡು ಬಾರಿ ಪಕ್ಷೇತರರಿಗೆ ಹಾಗೂ ಒಂದು ಬಾರಿ ಬಿಜೆಪಿಗೆ ಒಲಿದಿದೆ.
ಮಾಜಿ ಮುಖ್ಯಮಂತ್ರಿ ಎಸ್.ಆರ್.ಬೊಮ್ಮಾಯಿ ಅವರಿಗೂ ಸೋಲುಣಿಸಿದ ಈ ಕ್ಷೇತ್ರ ನಂತರ ಅವರನ್ನು ಪಕ್ಷೇತರ ಶಾಸಕರನ್ನಾಗಿ ವಿಧಾನಸಭೆಗೆ ಕಳುಹಿಸಿತ್ತು. 1957 ಮತ್ತು 1962ರಲ್ಲಿ ಟಿ.ಕೆ.ಕಾಂಬಳೆ ಸತತ ಎರಡು ಬಾರಿ ಆಯ್ಕೆಯಾಗಿದ್ದು ಬಿಟ್ಟರೆ 2013 ಮತ್ತು 2018ರಲ್ಲಿ ಸಿ.ಎಸ್.ಶಿವಳ್ಳಿ ಸತತವಾಗಿ ಆಯ್ಕೆಯಾಗಿ ದಾಖಲೆ ಸರಿಗಟ್ಟಿದ್ದರು. ಕ್ಷೇತ್ರದಿಂದ ಒಟ್ಟು ಮೂರು ಬಾರಿ ಆಯ್ಕೆಯಾದ ದಾಖಲೆ ಸಿ.ಎಸ್.ಶಿವಳ್ಳಿ ಅವರ ಹೆಸರಲ್ಲಿಯೇ ಇದೆ.
ತವಕ-ಚಡಪಡಿಕೆ- ತೊಳಲಾಟ: ಪತಿಯ ಅಕಾಲಿಕ ನಿಧನದಿಂದ ಆಘಾತಕ್ಕೊಳಗಾಗಿರುವ ಕುಸುಮಾವತಿ ಶಿವಳ್ಳಿ ಅವರು, ಕ್ಷೇತ್ರ ಹಾಗೂ ಜನತೆ ಬಗ್ಗೆ ಪತಿ ಸಿ.ಎಸ್.ಶಿವಳ್ಳಿ ಹೊಂದಿದ್ದ ಕಾಳಜಿ ಹಾಗೂ 2018ರ ಜನಾದೇಶವನ್ನು ಮುಂದುವರಿಸುವ ನಿಟ್ಟಿನಲ್ಲಿ ಪತಿಯ ನಾಮಬಲ ಹಾಗೂ ಅನುಕಂಪದ ಅಲೆಯೊಂದಿಗೆ ವಿಧಾನಸಭೆ ಪ್ರವೇಶಿಸುವ ತವಕದಲ್ಲಿದ್ದಾರೆ. ವಿಶೇಷವಾಗಿ ಬಡ ಜನತೆ, ಮಹಿಳೆಯರು ತಮ್ಮ ನೆರವಿಗೆ ಧಾವಿಸಿ ಗೆಲುವು ಸುಲಭವಾಗಿ ತಮ್ಮನ್ನು ವಿಧಾನಸಭೆಗೆ ಕಳುಹಿಸಿ ಕೊಡಲಿದ್ದಾರೆ. ಜತೆಗೆ ಮೈತ್ರಿ ಪಕ್ಷ ಜೆಡಿಎಸ್‌ನ ಮತಗಳು ಸಹ ಮಹತ್ವವಾಗಿ ನೆರವಾಗಲಿವೆ ಎಂಬ ವಿಶ್ವಾಸ ಕುಸುಮಾವತಿ ಶಿವಳ್ಳಿಯವರದ್ದು.
2008ರ ಕ್ಷೇತ್ರ ಪುನರ್‌ವಿಂಗಡಣೆಯಲ್ಲಿ ಕಲಘಟಗಿಯಿಂದ ಕುಂದಗೋಳಕ್ಕೆ ವಲಸೆ ಬಂದು ಗೆಲುವಿನ ನಗೆ ಬೀರಿದ್ದ ಬಿಜೆಪಿ ಅಭ್ಯರ್ಥಿ ಎಸ್. ಐ.ಚಿಕ್ಕನಗೌಡ್ರ, ಸತತ ಎರಡು ಬಾರಿ ಸೋಲಿನ ಕಹಿ ಉಂಡಿದ್ದು ಅನಿರೀಕ್ಷಿತವಾಗಿ ಬಂದ ಉಪ ಚುನಾವಣೆ ರಾಜಕೀಯ ಪುನರ್ಜನ್ಮ ಪ್ರಶ್ನೆಯಾಗಿ ಪರಿಣಮಿಸಿದೆ. 2008ರಲ್ಲಿ ಎಸ್.ಐ.ಚಿಕ್ಕನಗೌಡ್ರ ಗೆಲ್ಲುವ ಮೂಲಕ ಮೊದಲ ಬಾರಿಗೆ ಕುಂದಗೋಳ ಕ್ಷೇತ್ರವನ್ನು ಬಿಜೆಪಿಗೆ ಕೊಡುಗೆಯಾಗಿ ನೀಡಿದ್ದರು. 2013ರಲ್ಲಿ ಬಿಜೆಪಿ-ಕೆಜೆಪಿ ಒಡಕು ಮತ್ತೆ ಕ್ಷೇತ್ರ ಕಾಂಗ್ರೆಸ್ ಹಿಡಿತಕ್ಕೆ ಹೋಗಿತ್ತು. ಕೆಜೆಪಿಯಿಂದ ಎಸ್.ಐ.ಚಿಕ್ಕನಗೌಡ್ರ, ಬಿಜೆಪಿಯಿಂದ ಎಂ.ಆರ್.ಪಾಟೀಲ ಸ್ಪರ್ಧಿಸಿದ್ದರು. ಕೆಜೆಪಿ ಎರಡನೇ ಸ್ಥಾನ ಪಡೆದರೆ, 2008ರಲ್ಲಿ ಗೆದ್ದಿದ್ದ ಬಿಜೆಪಿ ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿತ್ತು.
2018ರ ಚುನಾವಣೆಯಲ್ಲಿ ಕಾಂಗ್ರೆಸ್‌ನ ಸಿ.ಎಸ್.ಶಿವಳ್ಳಿ ವಿರುದ್ಧ ಬಿಜೆಪಿಯಿಂದಲೇ ಎಸ್.ಐ.ಚಿಕ್ಕನಗೌಡ್ರ ಸ್ಪರ್ಧಿಸಿದ್ದರಾದರೂ, ಕೇವಲ 634 ಅತ್ಯಲ್ಪ ಮತಗಳ ಅಂತರದಿಂದ ಸೋಲುಂಡಿದ್ದರು. ಚಿಕ್ಕನಗೌಡ್ರಗೆ ಉಪ ಚುನಾವಣೆ ರಾಜಕೀಯವಾಗಿ ಅಳಿವು-ಉಳಿವಿನ ಪ್ರಶ್ನೆಯಾಗಿದೆ. ಟಿಕೆಟ್‌ಗೆ ತೀವ್ರ ಪೈಪೋಟಿ ನಡೆಸಿದ್ದ ಎಂ.ಆರ್.ಪಾಟೀಲರಿಗೆ ಮುಂದಿನ ಬಾರಿ ಟಿಕೆಟ್ ಖಚಿತ ಎಂಬ ಭರವಸೆ ನಿರ್ಣಯವನ್ನು ಬಿಜೆಪಿ ಕೋರ್ ಕಮಿಟಿ ತೆಗೆದುಕೊಂಡಿದೆ. ಒಂದು ವೇಳೆ ಚಿಕ್ಕನಗೌಡ್ರ ಈ ಬಾರಿ ಗೆಲ್ಲದಿದ್ದರೆ ಮುಂದೇನು ಎಂಬ ಪ್ರಶ್ನೆ ಎದುರಾಗಿದೆ. ಕುಂದಗೋಳ ಕ್ಷೇತ್ರದ ಅಧಿಪತ್ಯಕ್ಕೆ ಪೈಪೋಟಿಯಂತೂ ತೀವ್ರ ಸ್ವರೂಪ ಪಡೆದಿದೆ. ಕ್ಷೇತ್ರದ ಮತದಾರರು ತವಕಕ್ಕೆ ಜೈ ಅನ್ನುತ್ತಾರೋ, ಚಡಪಡಿಕೆಗೆ ಸೈ ಎನ್ನ್ನುತ್ತಾರೋ ಕಾದು ನೋಡಬೇಕು.
ಕುಂದಗೋಳ ಕ್ಷೇತ್ರದ ಅಧಿಪತ್ಯಕ್ಕೆ ಪೈಪೋಟಿಯಂತೂ ತೀವ್ರ ಸ್ವರೂಪ ಪಡೆದಿದೆ. ಕ್ಷೇತ್ರದ ಮತದಾರರು ತವಕಕ್ಕೆ ಜೈ ಅನ್ನುತ್ತಾರೋ, ಚಡಪಡಿಕೆಗೆ ಸೈ ಎನ್ನ್ನುತ್ತಾರೋ ಕಾದು ನೋಡಬೇಕು.
ಅಮರೇಗೌಡ ಗೋನವಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hubli: ಗ್ಯಾರಂಟಿ ಯೋಜನೆ ಹಣ ನಿರ್ಹವಣೆಗೆ ಬಿಪಿಎಲ್ ಕಾರ್ಡ್ ರದ್ದು: ವಿಜಯೇಂದ್ರ ಆರೋಪ
ತಮ್ಮದೇ ಮಕ್ಕಳ “ಅಪಹರಣ’ನಾಟಕವಾಡಿದ ಗೃಹಿಣಿಯರು
ಅನ್ನಭಾಗ್ಯ ಯೋಜನೆ ಮುನ್ನಡೆಸಲು ಸಾಧ್ಯವಾಗದೆ ಸರಕಾರ ಬಿಪಿಎಲ್ ಕಾರ್ಡು ರದ್ದು ಮಾಡಲು ಹೊರಟಿದೆ
Hubli: ಅಡವಿಸಿದ್ದೇಶ್ವರ ಮಠದ ಶ್ರೀ ಶಿವಲಿಂಗೇಶ್ವರ ಸ್ವಾಮೀಜಿ ಲಿಂಗೈಕ್ಯ
Hubli: ದಿವಾಳಿಯಾದ ಸರ್ಕಾರ ಬಿಪಿಎಲ್ ಕಾರ್ಡ್ ಕಡಿತ ಮಾಡುತ್ತಿದೆ: ಪ್ರಹ್ಲಾದ ಜೋಶಿ
MUST WATCH
ಹೊಸ ಸೇರ್ಪಡೆ
Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ
Daily Horoscope: ಉದ್ಯೋಗ ಸ್ಥಾನದಲ್ಲಿ ಹಲವು ಬಗೆಯ ಅವಕಾಶಗಳು, ಆರೋಗ್ಯ ವೃದ್ಧಿ
ಬಾಲಕಿಯ ಅತ್ಯಾಚಾರ-ಗರ್ಭಪಾತ ಪ್ರಕರಣ: ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ; 50 ಸಾವಿರ ರೂ. ದಂಡ
Adani ವಿರುದ್ಧ ಲಂಚ ಆರೋಪ; ಏನಿದು ಪ್ರಕರಣ? ಅಮೆರಿಕದಲ್ಲಿ ಪ್ರಕರಣ ಏಕೆ?
Naxal ಎನ್‌ಕೌಂಟರ್ ತನಿಖೆ ಆರಂಭ; ಉಳಿದವರು ಯಾವ ಕಡೆಗೆ ಪರಾರಿ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.