ಪ್ರಾದೇಶಿಕತೆಗೆ ತಕ್ಕಂತೆ ಅಡ್ಡಹೆಸರು ಬದಲಾವಣೆ
Team Udayavani, Mar 18, 2017, 2:48 PM IST
ಧಾರವಾಡ: ಅಡ್ಡಹೆಸರೇ ಒಂದು ಕಲೆ ಆಗಿದ್ದು, ಇದು ಪ್ರಾದೇಶಿಕತೆಗೆ ತಕ್ಕಂತೆ ಬದಲಾಗುತ್ತೆ. ಅದರಲ್ಲೂ ಉತ್ತರ ಕರ್ನಾಟಕದ ಅಡ್ಡ ಹೆಸರುಗಳನ್ನು ಅಧ್ಯಯನ ಮಾಡುತ್ತ ಸಾಗಿದರೆ ಒಂದು ದೊಡ್ಡ ಚರಿತ್ರೆಯನ್ನೇ ಬರೆಯಬಹುದು ಎಂದು ಹಂಪಿಯ ಡಾ| ಜಿ.ಎಂ.ದೈವಜ್ಞ ಹೇಳಿದರು.
ನಗರದ ಕೆ.ಇ.ಬೋರ್ಡ್ ಕಾಲೇಜಿನಲ್ಲಿ ಹಮ್ಮಿಕೊಂಡ ಅಖೀಲ ಭಾರತ ಜಾನಪದ ಸಮ್ಮೇಳನದಲ್ಲಿ ಅಡ್ಡಹೆಸರು ಮತ್ತು ಪ್ರಾದೇಶಿಕತೆ ಎಂಬ ವಿಷಯ ಕುರಿತ ಗೋಷ್ಠಿಯಲ್ಲಿ ಅವರು ಮಾತನಾಡಿದರು. ಉತ್ತರ ಕರ್ನಾಟಕ ಭಾಗದಲ್ಲಿ ಅಡ್ಡ ಹೆಸರುಗಳು ಅತ್ಯಂತ ಮಹತ್ವದ ಪಾತ್ರ ವಹಿಸಿವೆ.
ಆಯಾ ಪ್ರದೇಶದಲ್ಲಿ ಅಡ್ಡ ಹೆಸರುಗಳನ್ನು ಸಾಮಾಜಿಕವಾಗಿ ಒಪ್ಪಿಕೊಂಡಿದ್ದು, ಅದರ ಮೂಲಕವೇ ಪ್ರತಿಯೊಬ್ಬರು ಗುರುತಿಸಲ್ಪಡುತ್ತಾರೆ. ಕೆಲವು ಸಂದರ್ಭಗಳಲ್ಲಿ ಅಡ್ಡಹೆಸರು ವಿರೂಪವಾಗಿದ್ದರೆ ಸಬ್ ರಜಿಸ್ಟ್ರಾರ್ ಕಚೇರಿಗೆ ಹೋಗಿ ಬದಲಾಯಿಸಿಕೊಳ್ಳುತ್ತಾರೆ. ಆದರೆ, ಅದು ಕೇವಲ ದಾಖಲೆಯಲ್ಲಿ ಮಾತ್ರ ಉಪಯೋಗವಾಗುತ್ತದೆ ವಿನಃ ಗುರುತಿಸುವ ಸಂದರ್ಭದಲ್ಲಿ ಮಾತ್ರ ಪ್ರಾದೇಶಿಕವಾಗಿಯೇ ಇರುತ್ತದೆ ಎಂದರು.
ಶಿಲಾಯುಗದ ನಂತರದ ಯುಗಗಳಲ್ಲಿ ಸಂಘಜೀವಿಯಾಗಿ ನೆಲೆಸಲು ಪ್ರಾರಂಭಿಸಿದ ಮನುಷ್ಯ ಮತ್ತೂಬ್ಬರನ್ನು ಗುರುತಿಸಲು ಅಡ್ಡ ಹೆಸರನ್ನು ಇರಿಸಿಕೊಳ್ಳಲು ಪ್ರಾರಂಭಿಸಿದ. ಹೆಸರಿನ ಕೊನೆಯಲ್ಲಿ ಬರುವ ಅಡ್ಡ ಹೆಸರಿನ ಮೂಲಕ ವ್ಯಕ್ತಿ ಪರಿಚಯ ಆಗಲು ಪ್ರಾರಂಭಿಸಿತು. ಒಂದು ವೇಳೆ ಅಡ್ಡ ಹೆಸರು ಇಲ್ಲದೇ ಹೋಗಿದ್ದರೆ ಏನಾಗುತ್ತಿತ್ತು ಎನ್ನುವುದನ್ನು ಕಲ್ಪಿಸಿಕೊಳ್ಳಲೂ ಆಗುವುದಿಲ್ಲ ಎಂದು ಅಭಿಪ್ರಾಯಪಟ್ಟರು.
ದಕ್ಷಿಣ ಕರ್ನಾಟಕದ ಅಡ್ಡ ಹೆಸರುಗಳು ಎಂಬ ವಿಷಯ ಕುರಿತು ಮಾತನಾಡಿದ ಡಾ|ನಂಜಯ್ಯ ಹೊಂಗನೂರು, ಕರ್ನಾಟಕದಲ್ಲಿ ಅಡ್ಡ ಹೆಸರುಗಳ ನಿಘಂಟನ್ನು ತರುವ ಅಗತ್ಯತೆ ಇದೆ. ಇದರಿಂದ ಅದರಿಂದ ಅವುಗಳ ಸಂಸ್ಕೃತಿ ಅರಿಯಲು ಸಾಧ್ಯವಾಗುತ್ತದೆ ಎಂದರು. ಕಿವಿ ಚುಚ್ಚುವ ಪರಂಪರೆ ಹಲವಾರು ಕಡೆಗಳಲ್ಲಿವೆ. ಆದರೆ, ಭೂತಕಿವಿ ಎಂಬ ಅಡ್ಡ ಹೆಸರು ಕಿವಿ ಚುಚ್ಚುವುದರಿಂದ ಅಲ್ಲ.
ಬದಲಿಗೆ ದೊಡ್ಡ ಕಿವಿ ಇದ್ದಿದ್ದರಿಂದ ಭೂತ ಕಿವಿ ಎಂಬ ಅಡ್ಡ ಹೆಸರು ದಕ್ಷಿಣ ಕನ್ನಡ ಭಾಗದಲ್ಲಿ ಚಾಲ್ತಿಯಲ್ಲಿದೆ. ಅಲ್ಲದೇ ಭಾಷೆ, ಸ್ಥಳೀಯತೆಯ ಆಧಾರದ ಮೇಲೆಯೂ ಅಡ್ಡ ಹೆಸರುಗಳು ಬರುವುದುಂಟು ಎಂದು ಅಭಿಪ್ರಾಯಪಟ್ಟರು. ಕರಾವಳಿ ಕರ್ನಾಟಕದ ಅಡ್ಡ ಹೆಸರುಗಳು ವಿಷಯ ಕುರಿತು ಹೊನ್ನಾವರದ ಡಾ|ಎಸ್.ಡಿ.ಹೆಗಡೆ ಮಾತನಾಡಿ, ಜೀವನ ಧರ್ಮದ ಮೂಲಕ ಬದುಕನ್ನು ತಿಳಿಸಿಕೊಡುವ ಜನಪದರನ್ನು ನಾವು ಕೀಳಾಗಿ ನೋಡುತ್ತಿರುವುದು ಬೇಸರದ ಸಂಗತಿ ಎಂದರು.
ಹಳೆಗನ್ನಡ ಮತ್ತು ಅಡ್ಡ ಹೆಸರು ವಿಷಯ ಕುರಿತು ಡಾ|ಪುಷ್ಪಾ ಬಸನಗೌಡರ ಮಾತನಾಡಿ, ಪಂಪನಿಂದ ಹಿಡಿದು ಮುದ್ದಣ್ಣನವರೆಗಿನ ಸಾಹಿತ್ಯ ಅತ್ಯಂತ ಉತ್ತಮವಾಗಿ ಮೂಡಿ ಬಂದಿದೆ. ಆದರೆ, ಅಂದಿನ ದಿನಗಳಲ್ಲಿ ಅಡ್ಡ ಹೆಸರುಗಳು ಇರಲಿಲ್ಲ. ಬದಲಿಗೆ 12ನೇ ಶತಮಾನದ ನಂತರದಲ್ಲಿ ಅವರ ಕಾಯಕಕ್ಕೆ ಸಂಬಂಧಿಸಿದಂತೆ ಹಾಗೂ ಗ್ರಾಮನಾಮವನ್ನಾಧರಿಸಿ ಅಡ್ಡ ಹೆಸರುಗಳು ಚಾಲ್ತಿಗೆ ಬಂದವು ಎಂದು ವಿವರಿಸಿದರು. ಡಾ|ಮಂಜುನಾಥ ಬೇವಿನಕಟ್ಟಿ ಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hubli: ಅಮಿತ್ ಶಾ ಅಣಕು ಶವ ಸಂಸ್ಕಾರದ ಅಸ್ಥಿ ವಿಸರ್ಜಿಸಿ ಪ್ರತಿಭಟನೆ
Mangaluru Lit Fest: ಯಾವುದೇ ಉತ್ಸವ ಯಾಂತ್ರಿಕವಾದರೆ ಹೊಸತನ ಮೂಡಲ್ಲ: ಎಸ್.ಎಲ್ ಭೈರಪ್ಪ
Hubli: ರಾಜ್ಯದ ಕಾಂಗ್ರೆಸ್ ಸರ್ಕಾರ ಪತನಗೊಳ್ಳುವುದು ಖಚಿತ: ಜಗದೀಶ ಶೆಟ್ಟರ್
Alnavar: ಬೈಕ್- ಓಮಿನಿ ಅಪಘಾತ; ಬೈಕ್ ಸವಾರ ಸಾವು
Dharwad: ಬಂದ್ ಹೆಸರಲ್ಲಿ ವ್ಯಾಪಾರಿಗೆ ಕಪಾಳಮೋಕ್ಷ?: ಕಾಲೇಜು ಪ್ರಾಧ್ಯಾಪಕರಿಗೆ ಅವಾಜ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.