ಸಿಬಿಟಿ ಕಾಮಗಾರಿ ವಿಳಂಬ: ತಪ್ಪಿತಸ್ಥರಿಗೆ ನೋಟಿಸ್
Team Udayavani, Jun 3, 2017, 3:53 PM IST
ಹುಬ್ಬಳ್ಳಿ: ನಗರದಲ್ಲಿನ ನಗರ ಸಾರಿಗೆ ಬಸ್ ನಿಲ್ದಾಣ (ಸಿಬಿಟಿ)ದ ನೂತನ ಕಟ್ಟಡ ಕಾಮಗಾರಿ ವಿಳಂಬಕ್ಕೆ ಅಧಿಕಾರಿಗಳು ಹಾಗೂ ಗುತ್ತಿಗೆದಾರರ ನಿರ್ಲಕ್ಷéವೇ ಕಾರಣ. ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಹಾಗೂ ತಪ್ಪಿತಸ್ಥರಿಗೆ ನೊಟೀಸ್ ಜಾರಿ ಮಾಡಲಾಗುವುದು ಎಂದು ಶಾಸಕ ಪ್ರಸಾದ ಅಬ್ಬಯ್ಯ ಹೇಳಿದರು.
ಶುಕ್ರವಾರ ಕಾಮಗಾರಿ ವೀಕ್ಷಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಮಗಾರಿ ಈಗಾಗಲೇ ಹಲವು ಕಾರಣಗಳಿಂದ ಸಾಕಷ್ಟು ವಿಳಂಬವಾಗಿದೆ. ಜನರಿಗೆ ತೀವ್ರ ತೊಂದರೆಯಾಗುತ್ತಿದೆ. ಸಾರಿಗೆ ಸಂಸ್ಥೆ ಅಧಿಕಾರಿಗಳೊಂದಿಗೆ ಚರ್ಚಿಸಿ, ನಿಗದಿಪಡಿಸಿದ ಅವಧಿಯೊಳಗೆ ಕಾಮಗಾರಿ ಮುಗಿಸುವಂತೆ ಸೂಚಿಸಲಾಗುವುದು.
ಇನ್ನು ಬಿಆರ್‌ಟಿಎಸ್ ಕಾಮಗಾರಿ ಪ್ರಗತಿಯಲ್ಲಿರುವುದರಿಂದ ಅವರಿಗೆ ಅನುಕೂಲವಾಗುವ ವ್ಯವಸ್ಥೆಯಂತೆ ನಿರ್ಮಾಣ ಕಾರ್ಯ ನಡೆಯಲಿದೆ. ಇದೇ ಅಗಸ್ಟ್ ಅಂತ್ಯದೊಳಗೆ ಮೊದಲ ಹಂತದ ಕಾಮಗಾರಿ ಪೂರ್ಣಗೊಳ್ಳಲಿದ್ದು, ಆನಂತರ ನಗರ ಸಾರಿಗೆ ಸೇವೆ ಇಲ್ಲಿಂದಲೇ ಆರಂಭವಾಗಲಿದೆ ಎಂದರು.
ಸಿಬಿಟಿ ನಿಲ್ದಾಣದ ಕಾಮಗಾರಿಗೆ 2013ರಲ್ಲಿಯೇ ಶಂಕುಸ್ಥಾಪನೆ ನೆರವೇರಿಸಲಾಗಿತ್ತು. ನಿಗದಿತ ಯೋಜನೆಯಂತೆ 2015ರಲ್ಲಿ ಮುಗಿಯಬೇಕಾಗಿತ್ತು. ಆದರೆ ಹಲವು ಕಾರಣಾಂತರಗಳಿಂದ ಕಾಮಗಾರಿಯು ಪೂರ್ಣಗೊಳ್ಳಲಿಲ್ಲ. ಒಟ್ಟು 34 ಗುಂಟೆ ಜಾಗದಲ್ಲಿ ನಗರ ಸಾರಿಗೆ ಬಸ್ ನಿಲ್ದಾಣ ನಿರ್ಮಾಣವಾಗುತ್ತಿದೆ.
ಮೊದಲು ಮೂರು ಮಹಡಿಗಳ ಕಾಮಗಾರಿ ಮುಗಿಸಲು 13.60 ಕೋಟಿ ರೂ. ನಿಗದಿ ಮಾಡಲಾಗಿತ್ತು. ನಂತರ ಕಟ್ಟಡವನ್ನು ವಾಣಿಜ್ಯ ಉದ್ದೇಶಕ್ಕೆ ಬಳಸಲು ಮಳಿಗೆಗಳನ್ನು ನಿರ್ಮಿಸುವ ಸಲುವಾಗಿ ಹೆಚ್ಚುವರಿಯಾಗಿ ಎರಡು ಮಹಡಿ ನಿರ್ಮಿಸಲಾಯಿತು. ಇದರಿಂದಾಗಿ ಕಾಮಗಾರಿಯ ವೆಚ್ಚವು 17 ಕೋಟಿ ರೂ.ಗೆ ಹೆಚ್ಚಿತು.
ಕಟ್ಟಡವನ್ನು ಆರು ಅಂತಸ್ತಿಗೆ ಹೆಚ್ಚಿಸಿದ ಹಿನ್ನೆಲೆಯಲ್ಲಿ ವಿವಿಧ ಇಲಾಖೆಗಳಿಂದ ನಿರಪೇಕ್ಷಣಾ ಪರವಾನಗಿ ದೊರೆಯುವುದು ಹಾಗೂ ಯೋಜನಾ ವೆಚ್ಚ ಹೆಚ್ಚಳ ಸೇರಿದಂತೆ ಹಲವು ಪ್ರಕ್ರಿಯೆಗಳಿಂದ ವಿಳಂಬವಾಗಿದೆ. ಅವುಗಳನ್ನು ತೆರವುಗೊಳಿಸುವ ಸಂದರ್ಭದಲ್ಲಿ ಒಪ್ಪಂದ ಮಾಡಿಕೊಳ್ಳಲಾಗಿತ್ತು.
ಆ ಪ್ರಕಾರ ಮೇಲಿನ ಅಂತಸ್ತಿನಲ್ಲಿ ವಾಣಿಜ್ಯ ಉದ್ದೇಶಕ್ಕೆ ನಿರ್ಮಿಸಲಾಗಿರುವ ಮಳಿಗೆಗಳಲ್ಲಿ ಅವಕಾಶ ಮಾಡಿಕೊಡಲಾಗುವುದು ಎಂದರು. ವಾಯವ್ಯ ಸಾರಿಗೆ ಸಂಸ್ಥೆ ಅಧ್ಯಕ್ಷ ಸದಾನಂದ ಡಂಗನವರ ಮಾತನಾಡಿ, ಸಾರಿಗೆ ಸಚಿವರು ಸೂಚಿಸಿರುವಂತೆ ನಿಗದಿತ ಸಮಯದೊಳಗೆ ಮುಗಿಸುವಂತೆ ಅಧಿಕಾರಿಗಳಿಗೆ ಹಾಗೂ ಗುತ್ತಿಗೆದಾರರಿಗೆ ತಿಳಿಸಲಾಗಿದೆ.
ಆದಷ್ಟು ಬೇಗ ನಿಲ್ದಾಣ ಕಾರ್ಯಾರಂಭ ಮಾಡಲಿದೆ. ನಮಗೆ ಅವಶ್ಯವಿರುವ ಕಾಮಗಾರಿ ಬಹುತೇಕ ಮುಗಿಯುವ ಹಂತಕ್ಕೆ ತಲುಪಿದೆ. ಪ್ಲಾಟ್ ಫಾರ್ಮ್ ಕಾರ್ಯ ಭರದಿಂದ ನಡೆಯುತ್ತಿದೆ. ರೈಲ್ವೆ ನಿಲ್ದಾಣದ ಮುಂಭಾಗದಲ್ಲಿ ಜಾಗವಿದ್ದು, ಅಲ್ಲಿ ನಗರ ಸಾರಿಗೆ ಬಸ್‌ಗಳ ನಿಲುಗಡೆಗೆ ಇಲಾಖೆಯವರು ಅನುಮತಿ ನೀಡಿದ್ದಾರೆ ಎಂದರು.
ಸಂಸ್ಥೆಯ ನಿರ್ದೇಶಕ ಆಸೀಫ್ ಬಳ್ಳಾರಿ, ವಿಭಾಗೀಯ ನಿಯಂತ್ರಣಾಧಿಕಾರಿ ವಿವೇಕಾನಂದ ವಿಶ್ವಜ್ಞ, ವಿಭಾಗೀಯ ಸಾರಿಗೆ ಅಧಿಕಾರಿ ಶಶಿಧರ ಚನ್ನಪ್ಪಗೌಡರ, ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಶ್ರೀಮತಿ ಭಾವನಿ, ಪಾಲಿಕೆ ಸದಸ್ಯರಾದ ವಿಜನಗೌಡ ಪಾಟೀಲ, ಶಿವು ಮೆಣಸಿನಕಾಯಿ ಮೊದಲಾದವರಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.