ವಿದ್ಯಾಕಾಶಿಯಲ್ಲಿ ಕಾಲೇಜ್ ಸಿಕ್ಕರೂ ಸಿಕ್ತಿಲ್ಲ ಹಾಸ್ಟೆಲ್ ಸೀಟು!
ವಿದ್ಯಾರ್ಥಿಗಳು ಉಳಿಯಲು ಅನುಕೂಲವಾಗುವ ಕಟ್ಟಡ ಕಾಮಗಾರಿ ಆರಂಭಗೊಳ್ಳಲಿದೆ.
Team Udayavani, Nov 30, 2022, 6:22 PM IST
ಧಾರವಾಡ: ಒಂದೆಡೆ ಕರಿಯರ್ ಕಾರಿಡಾರ್‌ನ ಹಾವಳಿ, ಇನ್ನೊಂದೆಡೆ ಇರಲು ರೂಮ್ ಸಿಕ್ಕುತ್ತಿಲ್ಲ. ಖಾಸಗಿ ಪಿ.ಜಿ.ಗಳಲ್ಲಿ ಇದ್ದು ಕಲಿಯುವಷ್ಟು ಶಕ್ತಿಯೂ ಇಲ್ಲ. ಮಠ ಮಾನ್ಯಗಳಲ್ಲಿಯೂ ಹೆಚ್ಚು ವಿದ್ಯಾರ್ಥಿಗಳು ಉಳಿದುಕೊಳ್ಳಲು ಅವಕಾಶವಿಲ್ಲ. ಜಾತಿ-ಧರ್ಮ ಛತ್ರಗಳೂ ಇಲ್ಲಿಲ್ಲ. ಒಟ್ಟಿನಲ್ಲಿ ವಿದ್ಯಾಕಾಶಿ ಧಾರವಾಡಕ್ಕೆ ಓದಲು ಬಂದ ವಿದ್ಯಾರ್ಥಿಗಳಿಗೆ ತಪ್ಪುತ್ತಿಲ್ಲ ವಾಸ್ತವ್ಯದ ಪರದಾಟ.
ಹೌದು. ವಿದ್ಯಾಕಾಶಿ ಧಾರವಾಡದ ಕಾಲೇಜುಗಳಲ್ಲಿ ಓದಲು ಸೀಟು ಸಿಕ್ಕುವುದು ಕಷ್ಟ ಎನ್ನುವ ಕಾಲವೊಂದಿತ್ತು. ಆದರೆ ಇದೀಗ ಕಾಲೇಜಿನಲ್ಲಿ ಸೀಟು ಸರಳವಾಗಿ ಸಿಕ್ಕುತ್ತಿದ್ದು ವಾಸ್ತವ್ಯಕ್ಕೆ ವಿದ್ಯಾರ್ಥಿಗಳಿಗೆ ಹಾಸ್ಟೆಲ್‌ಗಳಲ್ಲಿ ಸೀಟು ಸಿಕ್ಕುವುದು ಕಷ್ಟವಾಗುತ್ತಿದೆ. ಅಕ್ಕಪಕ್ಕದ ಜಿಲ್ಲೆಗಳು ಮತ್ತು ಗ್ರಾಮೀಣ ಪ್ರದೇಶದಿಂದ ಓದಲು ಬರುವ ಸಾವಿರಾರು ವಿದ್ಯಾರ್ಥಿಗಳು ಹಾಸ್ಟೆಲ್ ಸೀಟಿಗಾಗಿ ಪರಿತಪಿಸುವಂತಾಗಿದೆ. ಸರ್ಕಾರಿ ವಿದ್ಯಾರ್ಥಿ ನಿಲಯಗಳ ಕೊರತೆಯಿಂದ ಸಾವಿರಾರು ವಿದ್ಯಾರ್ಥಿಗಳಿಗೆ ಪ್ರವೇಶ ಸಿಕ್ಕದೇ ಬೀದಿಯಲ್ಲಿ ನಿಲ್ಲುವಂತಾಗಿದೆ.
ಹಾಸ್ಟೆಲ್‌ನಲ್ಲಿ ಸೀಟು ಪಡೆಯಲು ಶಾಸಕರು, ಜಿಲ್ಲಾ ಮಂತ್ರಿಗಳು ಮತ್ತು ವಿಧಾನ ಪರಿಷತ್ತಿನ ಸದಸ್ಯರು ಸೇರಿದಂತೆ ರಾಜಕೀಯ ಮುಖಂಡರು ಮತ್ತು ಪ್ರಭಾವಿ ಸಚಿವರಿಂದ ಜಿಲ್ಲಾಧಿಕಾರಿಗಳು ಸೇರಿದಂತೆ ಸಂಬಂಧಪಟ್ಟ ಅಧಿಕಾರಿಗಳ ಮೇಲೆ ಪ್ರಭಾವ ಬೀರುವವರೆಗೂ ಹಾಸ್ಟೆಲ್ ಲಾಬಿ ಬೆಳೆದು ನಿಂತಿದೆ.
ಖಾಸಗಿ ಪಿ.ಜಿ.ಲಾಬಿಯೇ?: ಐಎಎಸ್ ಮತ್ತು ಕೆಎಎಸ್ ಸೇರಿ ಇತರೆ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಓದಲು ಧಾರವಾಡಕ್ಕೆ ಅಂದಾಜು ಒಂದು ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ಬಂದಿದ್ದಾರೆ. ಅವರೆಲ್ಲರೂ ಖಾಸಗಿ ಸಂಸ್ಥೆಗಳಲ್ಲಿ ವಿದ್ಯಾರ್ಜನೆ ಮಾಡುತ್ತಿದ್ದು, ಪ್ರತಿಯೊಬ್ಬರೂ ಸಂಬಂಧಿಕರ ಮನೆ ಅಥವಾ ಪಿ.ಜಿ.ಗಳಲ್ಲಿ ವಾಸವಾಗಿದ್ದಾರೆ.
ಇದೀಗ ಕೆಸಿಡಿಯಿಂದ ಹಿಡಿದು ಕವಿವಿವರೆಗೂ ಇರುವ ಕರಿಯರ್ ಕಾರಿಡಾರ್ ಸುತ್ತಲಿನ ಪ್ರದೇಶಗಳಾದ ಸಪ್ತಾಪೂರ, ಮಿಚಗನ್ ಕಾಂಪೌಂಡ್, ಚೆನ್ನಬಸವೇಶ್ವರ ನಗರ, ಶ್ರೀನಗರ, ಬಸವ ನಗರ, ರಾಣಿ ಚೆನ್ನಮ್ಮ ನಗರಗಳಲ್ಲಿ ಅಂದಾಜು 2500 ಕ್ಕೂ ಅಧಿಕ ಪಿಜಿಗಳು ತಲೆ ಎತ್ತಿವೆ. ಇಲ್ಲಿನ ಸೈಟುಗಳ ಬೆಲೆ ಗಗನಕ್ಕೇರಿದ್ದು, ಇರುವ ಮನೆಗಳನ್ನೇ ಬೇಕಾಬಿಟ್ಟಿಯಾಗಿ ಪಿಜಿಗಳಾಗಿ ಪರಿವರ್ತಿಸಲಾಗುತ್ತಿದೆ. ಹಾಸ್ಟೆಲ್‌ಗಳಲ್ಲಿ ಪ್ರವೇಶ ಸಿಕ್ಕದ ವಿದ್ಯಾರ್ಥಿಗಳು ಅನಿವಾರ್ಯವಾಗಿ ಇಂತಹ ಪಿಜಿಗಳಲ್ಲಿ ವಾಸ್ತವ್ಯ ಹೂಡಿ ವಿದ್ಯಾರ್ಜನೆ ಮಾಡಬೇಕಿದೆ. ಈ ಖಾಸಗಿ ಪಿಜಿಗಳ ಲಾಬಿಯಿಂದ ಸರ್ಕಾರಿ ಹಾಸ್ಟೆಲ್‌ಗಳು ಸಮಯಕ್ಕೆ ಸರಿಯಾಗಿ ತಲೆ ಎತ್ತುತ್ತಿಲ್ಲ ಎನ್ನುವ ಮಾತು ಕೂಡ ಕೇಳಿ ಬರುತ್ತಿದೆ. ಅದರಲ್ಲೂ ವಿದ್ಯಾರ್ಥಿನಿಯರಿಗಂತೂ ಹಾಸ್ಟೆಲ್ ಸಿಕ್ಕದೇ ಹೋದರೆ ಇನ್ನೂ ಕಷ್ಟವಾಗುತ್ತಿದೆ.
ಕವಿವಿಯಲ್ಲಿ ಹಾಸ್ಟೆಲ್ ಕ್ಲಸ್ಟರ್: ಪ್ರಸಕ್ತ ಸಾಲಿನಲ್ಲಿ ಧಾರವಾಡ ಜಿಲ್ಲೆಯಲ್ಲಿ ಅಂದಾಜು ಎಂಟು ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಹಾಸ್ಟೆಲ್‌ಗಾಗಿ ಅರ್ಜಿ ಸಲ್ಲಿಸಿದ್ದಾರೆ. ಕೇಂದ್ರ ಸರ್ಕಾರದ ಅನುದಾನದಲ್ಲಿ 500 ವಿದ್ಯಾರ್ಥಿಗಳಿಗೆ ಅನುಕೂಲವಾಗುವುದಕ್ಕೆ ಒಂದು ದೊಡ್ಡ ವಿದ್ಯಾರ್ಥಿ ನಿಲಯ ತಲೆ ಎತ್ತಬೇಕಿದೆ. ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿಯಲ್ಲಿ 200 ವಿದ್ಯಾರ್ಥಿಗಳ ಹಾಸ್ಟೆಲ್‌ಗೆ ಅನುದಾನ ಲಭ್ಯವಿದ್ದು, ಅದರ ನಿರ್ಮಾಣ ಕಾರ್ಯಕ್ಕೆ ಚಾಲನೆ ಸಿಕ್ಕಿದೆ.
ಕಿತ್ತೂರು ಕರ್ನಾಟಕ ಮತ್ತು ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳಿಂದ ಮಾತ್ರವಲ್ಲ ಇದೀಗ ಹಳೆ ಮೈಸೂರು ಭಾಗದ ಜಿಲ್ಲೆಗಳು, ಬೆಂಗಳೂರಿನಿಂದಲೂ ವಿದ್ಯಾರ್ಥಿಗಳು ಓದಲು ಧಾರವಾಡದತ್ತ ಮುಖ ಮಾಡಿದ್ದಾರೆ. ಈ ಹಂತದಲ್ಲಿ ಹಾಸ್ಟೆಲ್ ಸಮಸ್ಯೆಯನ್ನು ಶೀಘ್ರ ಬಗೆಹರಿಸುವುದು ಸರಳವಾಗಿಲ್ಲ. ಸ್ಪರ್ಧಾತ್ಮಕ ಪರೀಕ್ಷಾ ಕೇಂದ್ರಗಳ ತೀವ್ರ ಬೆಳವಣಿಗೆ ಪರೋಪಕ್ಷವಾಗಿ ಹಾಸ್ಟೆಲ್ ಗಳ ಮೇಲೂ ಒತ್ತಡ ತರುತ್ತಿದೆ.
20 ಕೋಟಿ ರೂ.ಏನಾಯ್ತು?: ಇನ್ನು 2022ನೇ ಸಾಲಿನ ಬಜೆಟ್‌ನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪಂ.ದೀನ ದಯಾಳ್ ಉಪಾಧ್ಯಾಯ ಅವರ ಹೆಸರಿನಲ್ಲಿ ಧಾರವಾಡದಲ್ಲಿ ವಸತಿ ನಿಲಯ ನಿರ್ಮಿಸಲು ಅನುದಾನ ನೀಡಿದ್ದಾರೆ. ಆದರೆ ಈವರೆಗೂ ಹಾಸ್ಟೆಲ್ ಕಟ್ಟಡ ಕಾಮಗಾರಿ ಆರಂಭಗೊಂಡಿಲ್ಲ. ಕರ್ನಾಟಕ ವಿಶ್ವವಿದ್ಯಾಲಯದ ಆವರಣದಲ್ಲಿ ಇದಕ್ಕೆ ಜಾಗ ಗುರುತಿಸಲಾಗಿದ್ದು ಬಿಟ್ಟರೆ ಕಟ್ಟಡ ಕಾಮಗಾರಿ ಆರಂಭಗೊಂಡಿಲ್ಲ.
ಇನ್ನು 20 ಕೋಟಿ ರೂ.ವೆಚ್ಚದಲ್ಲಿ ನಿರ್ಮಾಣಗೊಳ್ಳುವ ಹಾಸ್ಟೆಲ್ ಕಟ್ಟಡದಲ್ಲಿ ಹೆಚ್ಚು ಕಡಿಮೆ 500 ವಿದ್ಯಾರ್ಥಿಗಳಿಗೆ ಅನುಕೂಲವಾಗಬಹುದು. ಅದೂ ಅಲ್ಲದೇ ಎಲ್ಲ ವರ್ಗದ ವಿದ್ಯಾರ್ಥಿಗಳಿಗೆ ಇದು ಅನುಕೂಲವಾಗಲಿದೆ. ಆದರೆ ವರ್ಷದಿಂದ ವರ್ಷಕ್ಕೆ ಧಾರವಾಡಕ್ಕೆ ವಿದ್ಯಾರ್ಜನೆಗೆ ಬರುವ ವಿದ್ಯಾರ್ಥಿಗಳ ಸಂಖ್ಯೆ ಅಧಿಕವಾಗುತ್ತಿದೆ. ದೊಡ್ಡ ಪ್ರಮಾಣದಲ್ಲಿ ಹಾಸ್ಟೆಲ್ ಗಳನ್ನು ಸರ್ಕಾರ ನಿರ್ಮಿಸಬೇಕೆನ್ನುವ ಒತ್ತಡ ಬಹಳ ವರ್ಷಗಳಿಂದ ಕೇಳಿ ಬರುತ್ತಿದೆ. ಆದರೆ ಸರ್ಕಾರ ಇದಕ್ಕೆ
ಸರಿಯಾಗಿ ಸ್ಪಂದಿಸುತ್ತಿಲ್ಲ.
ಅಹಿಂದ ವಿದ್ಯಾರ್ಥಿಗಳಿಗೆ ಕಷ್ಟ: ಸಾಮಾನ್ಯವಾಗಿ ಎಸ್‌ಸಿ ಮತ್ತು ಎಸ್‌ಟಿ ವಿದ್ಯಾರ್ಥಿಗಳು ಸೇರಿದಂತೆ ಓಬಿಸಿ ಸಮುದಾಯದ ವಿದ್ಯಾರ್ಥಿಗಳಿಗೆ ಈವರೆಗೂ ಹಾಸ್ಟೆಲ್ ಗಳಲ್ಲಿ ಸ್ಥಳಾವಕಾಶ ಸರಳವಾಗಿ ಸಿಕ್ಕುತ್ತಿತ್ತು. ಸಿಕ್ಕದೇ ಹೋದಾಗ ಒಂದಿಷ್ಟು ಹೋರಾಟ-ಪ್ರತಿಭಟನೆ ನಡೆಯುತ್ತಿದ್ದವು. ಆದರೆ ವರ್ಷದಿಂದ ವರ್ಷಕ್ಕೆ ಒದಲು ಬರುವ ವಿದ್ಯಾರ್ಥಿಗಳ ಸಂಖ್ಯೆ ಅಧಿಕವಾಗುತ್ತಿದ್ದು, ಓದುವ ಮಕ್ಕಳಿಗೆ ಹಾಸ್ಟೆಲ್ ವಾಸ್ತವ್ಯ ಬೇಕಾಗಿದೆ. ಸದ್ಯಕ್ಕೆ ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೂ ಹಾಸ್ಟೆಲ್ ಸಿಕ್ಕುತ್ತಿಲ್ಲ. ಇದೀಗ ವಿದ್ಯಾಸಿರಿ ಯೋಜನೆ ಅಡಿಯಲ್ಲಿ 1500 ರೂ. ಹಣ ಪಡೆದು ಪ್ರತ್ಯೇಕ ಬಾಡಿಗೆ ಕೋಣೆಗಳಲ್ಲಿ ವಾಸ್ತವ್ಯ ಹೂಡುವ ಅನಿವಾರ್ಯತೆ ಎದುರಾಗಿದೆ.
ಬೇಕಿದೆ ಹಾಸ್ಟೆಲ್ ಕಾಂಪ್ಲೆಕ್ಸ್
ರಾಜ್ಯದಲ್ಲಿಯೇ ಮಠಗಳ ಪೈಕಿ ಮೊದಲು ಬಸವಣ್ಣನವರ ತತ್ವದಡಿ ಓದಲು ಬರುವ ವಿದ್ಯಾರ್ಥಿಗಳಿಗೆ ಅನ್ನ, ಅಕ್ಷರ ಮತ್ತು ಜ್ಞಾನ ದಾಸೋಹ ಮಾಡಿಕೊಟ್ಟಿದ್ದು ಧಾರವಾಡದ ಮುರುಘಾಮಠ. ಇಲ್ಲಿನ ವಿದ್ಯಾರ್ಥಿ ನಿಲಯದಲ್ಲಿದ್ದು ಓದಿದ ಸಾವಿರಾರು ವಿದ್ಯಾರ್ಥಿಗಳು ಅಕ್ಷರ ಕಲಿತು ಇಂದು ದೇಶ-ವಿದೇಶಗಳಲ್ಲಿ ನೆಲೆ ನಿಂತಿದ್ದಾರೆ. ಅಂತಹ ವಿದ್ಯಾಕಾಶಿ ಧಾರವಾಡದಲ್ಲಿ ನಿಜವಾದ ಬಡವರ ಮಕ್ಕಳಿಗೆ ವಿದ್ಯಾರ್ಥಿನಿಲಯಗಳು ಸ್ಥಾಪನೆಯಾಗಬೇಕಿದೆ. ಕೊಪ್ಪಳದಲ್ಲಿ ಸರ್ಕಾರ ಸ್ವಾಮೀಜಿ ಕರೆಗೆ ಓಗೊಟ್ಟು ಹಣ ನೀಡಿದಂತೆ ಇಲ್ಲಿಯೂ ವಿದ್ಯಾರ್ಥಿ ನಿಲಯಗಳ ಗುಚ್ಚ (ಹಾಸ್ಟೆಲ್ ಕಾಂಪ್ಲೆಕ್ಸ್) ನಿರ್ಮಿಸಬೇಕು ಎನ್ನುತ್ತಿದ್ದಾರೆ ಶಿಕ್ಷಣ ತಜ್ಞರು.
ದೀನ ದಯಾಳ ಉಪಾಧ್ಯಾಯ ಹಾಸ್ಟೆಲ್ ನಿರ್ಮಾಣಕ್ಕೆ 10 ಎಕರೆ ಭೂಮಿಯನ್ನು ಕವಿವಿಯಲ್ಲಿ ನೀಡಲಾಗಿದ್ದು, ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗಿದೆ. ಶೀಘ್ರವೇ ಸಾವಿರ ವಿದ್ಯಾರ್ಥಿಗಳು ಉಳಿಯಲು ಅನುಕೂಲವಾಗುವ ಕಟ್ಟಡ ಕಾಮಗಾರಿ ಆರಂಭಗೊಳ್ಳಲಿದೆ. ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿದೆ. ಮಾಸಿಕ 1500 ರೂ.ಅನುದಾನದ ವಿದ್ಯಾಸಿರಿ ಯೋಜನೆ ಬಳಸಿಕೊಳ್ಳಲು ವಿದ್ಯಾರ್ಥಿಗಳಿಗೆ ಸಲಹೆ ನೀಡಿದ್ದೇನೆ.
ಗುರುದತ್ತ ಹೆಗಡೆ, ಜಿಲ್ಲಾಧಿಕಾರಿಗಳು
ಕಿತ್ತೂರು ಮತ್ತು ಕಲ್ಯಾಣ ಕರ್ನಾಟಕ ಭಾಗದ ವಿದ್ಯಾರ್ಥಿಗಳ ಮಾತ್ರವಲ್ಲ ಬೆಂಗಳೂರು ತುಮಕೂರು ಜಿಲ್ಲೆಗಳಿಂದಲೂ ವಿದ್ಯಾರ್ಥಿಗಳು ಬರುತ್ತಿದ್ದು, ಇದನ್ನು ಸರಿದೂಗಿಸಲು ದೊಡ್ಡ ಪ್ರಮಾಣದಲ್ಲಿ ಹಾಸ್ಟೆಲ್ ವ್ಯವಸ್ಥೆ ರೂಪಿಸಬೇಕಿದೆ. ಇದನ್ನು ಸರ್ಕಾರದ ಗಮನಕ್ಕೆ ತರುತ್ತೇವೆ.
ಡಾ|ಸುರೇಶ ಇಟ್ನಾಳ,
ಸಿಇಒ,ಧಾರವಾಡ ಜಿಪಂ.
ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ಹಳ್ಳಿಯಿಂದ ಓದಲು ಧಾರವಾಡಕ್ಕೆ ಬಂದಿದ್ದೇನೆ. ಈಗ ಸರ್ಕಾರಿ ಹಾಸ್ಟೆಲ್‌ಗಳಲ್ಲಿ ಪ್ರವೇಶ ಸಿಕ್ಕಿಲ್ಲ. ಇನ್ನು ಖಾಸಗಿ ಪಿಜಿಗಳು ವರ್ಷಕ್ಕೆ ಒಂದು ಲಕ್ಷ ರೂ.ಹೇಳುತ್ತಿದ್ದಾರೆ. ಹೀಗಾದರೆ ಬಡವರ ಮಕ್ಕಳು ಓದಲು ಹೇಗೆ ಸಾಧ್ಯ?
ಚೆನ್ನಬಸವ ಸಜ್ಜನರ,
ಹಾಸ್ಟೆಲ್ ಸಿಕ್ಕದೇ ಪರದಾಡುತ್ತಿರುವ ವಿದ್ಯಾರ್ಥಿ
ಡಾ|ಬಸವರಾಜ ಹೊಂಗಲ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hubli; ಅಧಿಕಾರಕ್ಕಾಗಿ ಕಾಂಗ್ರೆಸ್ ಯಾವ ಕೀಳು ಮಟ್ಟಕ್ಕೆ ಇಳಿಯಲು ಹೇಸಲ್ಲ: ಪ್ರಹ್ಲಾದ ಜೋಶಿ
ಹೊಸ ವರ್ಷದ ಕೊಡುಗೆ: ಬೈಸಿಕಲ್ ಉತ್ತೇಜನಕ್ಕೆ ಉಚಿತ ರೈಡ್
Laxmi Hebbalkar ಮತ್ತೊಂದು ದೂರು ನೀಡಿದ ಅನಂತರವಷ್ಟೇ ಮುಂದಿನ ಕ್ರಮ: ಹೊರಟ್ಟಿ
Hubballi: ಹಳೇ ವೈಷಮ್ಯದಿಂದ ಸಹಚರರೊಂದಿಗೆ ಸೇರಿ ಹಲ್ಲೆ; ವ್ಯಕ್ತಿ ಮೃತ್ಯು
Hubli: ತುಂಬು ಗರ್ಭಿಣಿ ಸಾವು; ಪತಿಯೂ ಆತ್ಮಹತ್ಯೆ ಯತ್ನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.