ಟಿಕೆಟ್‌ಗಾಗಿ ಪೈಪೋಟಿ, ಸಮೀಕ್ಷೆ ಮೇಲೆ ಕಣ್ಣು
Team Udayavani, Jun 3, 2017, 3:53 PM IST
ಹುಬ್ಬಳ್ಳಿ: ವಿಧಾನಸಭೆ ಚುನಾವಣೆಗೆ ರಾಜಕೀಯ ಚಟುವಟಿಕೆ ಗದಿಗೆದರಿವೆ. ಧಾರವಾಡ ಜಿಲ್ಲೆಯ ಎರಡು ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳ ಕುರಿತಾಗಿ ಪಕ್ಷದ ಟಿಕೆಟ್ ಆಕಾಂಕ್ಷಿಗಳ ಪರವಾಗಿ ಅವರವರ ಬೆಂಬಲಿಗರ ಪ್ರಚಾರ ಸಮರಕ್ಕೆ ಸಾಮಾಜಿಕ ಜಾಲತಾಣ ವೇದಿಕೆಯಾಗಿ ಮಾರ್ಪಟ್ಟಿದೆ.
ವಿಧಾನಸಭೆ ಚುನಾವಣೆಗೆ ಸಂಬಂಧಿಸಿದಂತೆ ಜಿಲ್ಲೆಯ ಕಲಘಟಗಿ ಹಾಗೂ ಕುಂದಗೋಳ ಕ್ಷೇತ್ರಗಳಲ್ಲಿ ಟಿಕೆಟ್ ಪೈಪೋಟಿ ತೀವ್ರಗೊಂಡಿದೆ. ಅಭ್ಯರ್ಥಿಗಳ ಕುರಿತಾಗಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರು ಸಮೀಕ್ಷೆ ನಡೆಸಿ ಮಾಹಿತಿ ಸಂಗ್ರಹಕ್ಕೆ ಮುಂದಾಗಿದ್ದು, ಪ್ರಾಥಮಿಕ ಹಂತದ ಸಮೀಕ್ಷೆಯಲ್ಲಿ ಪ್ರಸ್ತಾಪಗೊಂಡ ಮುಖಂಡರ ಬೆಂಬಲಿಗರು ಸಾಮಾಜಿಕ ಜಾಲತಾಣದಲ್ಲಿ ಬೆಂಬಲದ ಪ್ರಚಾರ ಶುರುವಿಟ್ಟುಕೊಂಡಿದ್ದಾರೆ.
ನಿಂಬಣ್ಣವರ ವರ್ಸಸ್ ಟೆಂಗಿನಕಾಯಿ: ಕಲಘಟಗಿ ಕ್ಷೇತ್ರದಲ್ಲಿ ಸದ್ಯದ ಮಟ್ಟಿಗೆ ಸಿ.ಎಂ. ನಿಂಬಣ್ಣವರ ಹಾಗೂ ಮಹೇಶ ಟೆಂಗಿನಕಾಯಿ ಬೆಂಬಲಿಗರ ನಡುವೆ ತೀವ್ರ ಪ್ರಚಾರ ಸಮರ ನಡೆಯುತ್ತಿದೆ. ಕಲಘಟಗಿ ಕ್ಷೇತ್ರದಲ್ಲಿ ಈ ಹಿಂದೆ ಬಿಜೆಪಿ-ಕೆಜೆಪಿಯಿಂದ ಸ್ಪರ್ಧಿಸಿ ಸೋಲುಂಡಿರುವ ಸಿ.ಎಂ. ನಿಂಬಣ್ಣವರ, ಇಲ್ಲಿವರೆಗೆ ತಾವೇ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಂದೇ ಭಾವಿಸಿದ್ದರು.
ಯಾವಾಗ ಪಕ್ಷದ ಪ್ರಾಥಮಿಕ ಸಮೀಕ್ಷೆಯಲ್ಲಿ, ನಿಂಬಣ್ಣವರ ಜತೆಗೆ ಪಕ್ಷದ ಯುವ ಮುಖಂಡ ಮಹೇಶ ಟೆಂಗಿನಕಾಯಿ ಅವರ ಹೆಸರು ಕಾಣಿಸಿಕೊಂಡಿತೋ ಕ್ಷೇತ್ರದಲ್ಲಿ ಟಿಕೆಟ್ ಪೈಪೋಟಿ ತೀವ್ರತೆ ಹೆಚ್ಚುವಂತೆ ಮಾಡಿದೆ. ಕಳೆದ ಚುನಾವಣೆಯಲ್ಲಿ ನಿಂಬಣ್ಣವರ ಕೆಜೆಪಿಯಿಂದ ಸ್ಪರ್ಧಿಸಿ 31,248 ಮತಗಳನ್ನು ಪಡೆದು ಕಾಂಗ್ರೆಸ್ ಅಭ್ಯರ್ಥಿ ಸಂತೋಷ ಲಾಡ್ ವಿರುದ್ಧ ಸೋತಿದ್ದರು.
ಇಲ್ಲಿ ಬಿಜೆಪಿ ಅಭ್ಯರ್ಥಿ 6,800 ಮತಗಳನ್ನಷ್ಟೇ ಪಡೆದು ಠೇವಣಿ ಕಳೆದುಕೊಂಡಿದ್ದರು. ನಿಂಬಣ್ಣವರ ಚುನಾವಣೆ ದೃಷ್ಟಿಕೋನದ ತಯಾರಿಯಲ್ಲಿ ತೊಡಗಿದ್ದಾರೆ. ಪಕ್ಷದ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಕೃಪಕಟಾಕ್ಷ ತಮಗಿರುವ ವಿಶ್ವಾಸ ಒಂದು ಕಡೆಯಾದರೆ, ಪಕ್ಷದಿಂದ ನಡೆಯುವ ಇನ್ನು ಮೂರು ಸಮೀಕ್ಷೆಗಳಲ್ಲಿ ತಮ್ಮ ಹೆಸರೇ ಮೊದಲ ಸ್ಥಾನದಲ್ಲಿ ಓಡುವಂತೆ ನೋಡಿಕೊಳ್ಳುವ ಒತ್ತಡ ಮತ್ತೂಂದು ಕಡೆ ಎದುರಾಗಿದೆ.
ಮಹೇಶ ಟೆಂಗಿನಕಾಯಿ ಹಲವು ವರ್ಷಗಳಿಂದ ಬಿಜೆಪಿ ಸಂಘಟನೆಯಲ್ಲಿ ತೊಡಗಿದ್ದು, ವಿಭಾಗ ಮಟ್ಟದ ಸಹ ಪ್ರಭಾರಿ, ವಿವಿಧ ರಾಜ್ಯಗಳ ಚುನಾವಣೆ ವೀಕ್ಷಕ ಹುದ್ದೆಗಳನ್ನು ನಿರ್ವಹಿಸಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಹುಬ್ಬಳ್ಳಿ-ಧಾರವಾಡ ಪಶ್ಚಿಮ ಕ್ಷೇತ್ರದಿಂದ ಆಕಾಂಕ್ಷಿಯಾಗಿದ್ದರೂ ಟಿಕೆಟ್ ಸಿಕ್ಕಿರಲಿಲ್ಲ.
ಪಕ್ಷದಿಂದ ಇತ್ತೀಚೆಗೆ ನಡೆದ ಸಮೀಕ್ಷೆಯಲ್ಲಿ ಕಲಘಟಗಿ ಕ್ಷೇತ್ರದಲ್ಲಿ ತಮ್ಮ ಹೆಸರು ನಮೂದಾಗಿರುವುದು, ಟೆಂಗಿಕಾಯಿ ಅವರ ಹುರುಪು ಹೆಚ್ಚುವಂತೆ ಮಾಡಿದೆ. ಹೆಚ್ಚಾಗಿ ಯುವ ಪಡೆಯೊಂದಿಗೆ ಗುರುತಿಸಿಕೊಂಡಿರುವ ಟೆಂಗಿನಕಾಯಿ ಕಲಘಟಗಿ ಕ್ಷೇತ್ರದಲ್ಲಿ ಟಿಕೆಟ್‌ಗಾಗಿ ಪ್ರಯತ್ನಕ್ಕಿಳಿಯುವ ಸಾಧ್ಯತೆ ಇಲ್ಲದಿಲ್ಲ. ಯಾವುದಕ್ಕೂ ಮುಂದಿನ ಮೂರು ಸಮೀಕ್ಷೆಯ ಫಲಿತಾಂಶ ಮುಂದೇನು ಎಂಬುದನ್ನು ನಿರ್ಧರಿಸಲಿದೆ.
ಚಿಕ್ಕನಗೌಡ್ರ-ಪಾಟೀಲ ಮಧ್ಯ ಪೈಪೋಟಿ: ಬಿಜೆಪಿಯಲ್ಲಿ ಟಿಕೇಟ್ ಆಕಾಂಕ್ಷಿಗಳ ತೀವ್ರ ಪೈಪೋಟಿಯ ಮತ್ತೂಂದು ಕ್ಷೇತ್ರ ಕುಂದಗೋಳ. ಮಾಜಿ ಶಾಸಕ ಎಸ್.ಐ. ಚಿಕ್ಕನಗೌಡ್ರು ಹಾಗೂ ಎಂ.ಆರ್. ಪಾಟೀಲರ ನಡುವೆ ಟಿಕೆಟ್ ತಿಕ್ಕಾಟ ಆರಂಭಗೊಂಡಿದ್ದು, ಇಬ್ಬರು ಮುಖಂಡರ ಬೆಂಬಲಿಗರು ಸಾಮಾಜಿಕ ಜಾಲತಾಣದಲ್ಲಿ ತಮ್ಮ ಮುಖಂಡ ಮುಂದಿನ ಬಿಜೆಪಿ ಅಭ್ಯರ್ಥಿ ಎಂದು ಪ್ರಚಾರ ಸಮರ ಆರಂಭಿಸಿದ್ದಾರೆ.
ಇಬ್ಬರೂ ಮುಖಂಡರು ಕ್ಷೇತ್ರದಲ್ಲಿ ಪ್ರಭಾವ ಹೊಂದಿದ್ದಾರೆ. ಎಸ್.ಐ. ಚಿಕ್ಕನಗೌಡ್ರು ಕುಂದಗೋಳ ಶಾಸಕರಾಗಿ ಸೇವೆ ಸಲ್ಲಿಸಿದ ಅನುಭವ ಹೊಂದಿದ್ದು, ಕಳೆದ ಚುನಾವಣೆಯಲ್ಲಿ ಕೆಜೆಪಿಯಿಂದ ಸ್ಪರ್ಧಿಸಿ ಸುಮಾರು 34 ಸಾವಿರಕ್ಕೂ ಅಧಿಕ ಮತಗಳನ್ನು ಪಡೆದು ಕಾಂಗ್ರೆಸ್‌ನ ಸಿ.ಎಸ್. ಶಿವಳ್ಳಿ ವಿರುದ್ಧ ಸೋಲುಂಡಿದ್ದರು.
ಆಗ ಬಿಜೆಪಿ ಅಭ್ಯರ್ಥಿಯಾಗಿದ್ದ ಎಂ.ಆರ್. ಪಾಟೀಲ 21 ಸಾವಿರಕ್ಕೂ ಅಧಿಕ ಮತ ಪಡೆದು ಮೂರನೇ ಸ್ಥಾನ ಪಡೆದಿದ್ದರು. ಬಿಜೆಪಿ ಅಭ್ಯರ್ಥಿಗಳ ಆಯ್ಕೆ ಕುರಿತಾಗಿ ಪಕ್ಷದಿಂದ ನಡೆದ ಪ್ರಾಥಮಿಕ ಸಮೀಕ್ಷೆಯಲ್ಲಿ ಚಿಕ್ಕನಗೌಡ್ರ ಹಾಗೂ ಎಂ.ಆರ್. ಪಾಟೀಲರಿಗೆ ಸಮಾನ ಬೆಂಬಲ ವ್ಯಕ್ತವಾಗಿದೆ ಎನ್ನಲಾಗಿದ್ದು, ಈ ಹಿನ್ನೆಲೆಯಲ್ಲಿ ಇಬ್ಬರು ಮುಖಂಡರ ನಡುವೆ ಪೈಪೋಟಿ ತೀವ್ರಗೊಳ್ಳುವಂತೆ ಮಾಡಿದೆ.
ಇತ್ತೀಚೆಗೆ ಧಾರವಾಡ ಜಿಲ್ಲೆಗೆ ಆಗಮಿಸಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರು ತಮ್ಮ ಸಂಬಂಧಿ ಹಾಗೂ ಮಾಜಿ ಶಾಸಕ ಎಸ್.ಐ. ಚಿಕ್ಕನಗೌಡ್ರ ಅವರ ನಿವಾಸಕ್ಕೆ ಆಗಮಿಸಿದ್ದ ಸಂದರ್ಭದಲ್ಲಿ ಅಲ್ಲಿ ನೆರೆದಿದ್ದ ಬಿಜೆಪಿ ಕಾರ್ಯಕರ್ತರನ್ನುದ್ದೇಶಿಸಿ, “ಏನಪ್ಪಾ, ನಿಮ್ಮ ಗೌಡರನ್ನು ಈ ಬಾರಿ ಗೆಲ್ಲಿಸುತ್ತೀರಾ?’ ಎಂದು ಪ್ರಶ್ನಿಸಿದರು ಎನ್ನಲಾಗಿದೆ.
ಈ ಪ್ರಶ್ನೆ ಸಹಜವಾಗಿಯೇ ಚಿಕ್ಕನಗೌಡ್ರ ಬೆಂಬಲಿಗರ ನಿರೀಕ್ಷೆ-ಆಸೆಯನ್ನು ಇಮ್ಮಡಿಗೊಳಿಸಿದೆ. ಧಾರವಾಡ ಜಿಲ್ಲೆಯಲ್ಲಿ ಬಿಜೆಪಿ ಟಿಕೆಟ್ ನೀಡಿಕೆ ವಿಚಾರದಲ್ಲಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷರು ಕೈಗೊಂಡ ಸಮೀಕ್ಷೆಯ ಫಲಿತಾಂಶ ಏನೆಲ್ಲ ಬದಲಾವಣೆಗೆ ದಾರಿ ಮಾಡಿಕೊಡುತ್ತದೆಯೋ, ಇದು ಇನ್ನಷ್ಟು ಕ್ಷೇತ್ರದಲ್ಲೂ ಪೈಪೋಟಿ ಸೃಷ್ಟಿಸಲಿದೆಯೋ, ಯಾರಿಗೆ ಟಿಕೆಟ್ ಎಂಬುದು ಹೆಚ್ಚಿನ ಕುತೂಹಲವಂತೂ ಮೂಡಿಸಿದೆ.
* ಅಮರೇಗೌಡ ಗೋನವಾರ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.