ಸಿಹಿ ಕಬ್ಬಿಗೆ ಕಹಿಯಾದ ಕಾರ್ಖಾನೆಗಳ ಒಪ್ಪಂದ; ಕಬ್ಬು ಮಾರಾಟ ನಮ್ಮ ಹಕ್ಕು ಎಂದ ರೈತರು
ಈ ವರ್ಷ ಮಳೆ ಕೊರತೆಯಾಗಿ ಕಬ್ಬು ಮೊದಲೇ ಒಣಗಿ ಹೋಗುತ್ತಿದೆ.
Team Udayavani, Dec 27, 2023, 11:55 AM IST
ಧಾರವಾಡ: ಒಂದೆಡೆ ಬತ್ತುತ್ತಿರುವ ಕೊಳವೆ ಬಾವಿಗಳು, ಇನ್ನೊಂದೆಡೆ ಕಬ್ಬು ಕಟಾವು ಮಾಡಿಕೊಂಡು ಹೋಗಲು ಹಿಂಜರಿಯುತ್ತಿರುವ ಕಾರ್ಖಾನೆಗಳು, ಬೇರೆ ಕಾರ್ಖಾನೆಗಳಿಗೆ ಕಬ್ಬು ಸಾಗಿಸದಂತೆ ರೈತರ ಮೇಲೆ ಒತ್ತಡ. ತಪ್ಪಿದರೆ ನ್ಯಾಯಾಲಯ ತೀರ್ಪಿನ ಅಂಕುಶದ ಬೆದರಿಕೆ. ಒಟ್ಟಿನಲ್ಲಿ ಕಬ್ಬು ಬೆಳೆದ ರೈತರಿಗೆ ಇದೀಗ ಕಾರ್ಖಾನೆಗಳೇ ವಿಲನ್ ಆಗಿ ಕಾಡುತ್ತಿವೆ. ಹೌದು, ಅರೆಮಲೆನಾಡಿನ ಜಿಲ್ಲೆಯಲ್ಲಿ ಕಳೆದ ಹತ್ತು ವರ್ಷಗಳಲ್ಲಿ ಕಬ್ಬು ಪ್ರಧಾನ ಬೆಳೆಯಾಗಿ ಆವರಿಸಿಕೊಂಡಿದೆ. ಅಂದಾಜು 2.5 ಲಕ್ಷ ಎಕರೆಗೂ ಅಧಿಕ ಪ್ರದೇಶ ಕಬ್ಬು ಆವರಿಸಿದ್ದು, ಕೋಟಿ ಟನ್ ಗಳಿಗೂ ಅಧಿಕ ಉತ್ಪಾದನೆ ದಾಖಲಾಗುತ್ತಿದೆ. ಕಬ್ಬು ಬೆಳೆಯ ಪ್ರಮಾಣ ವರ್ಷದಿಂದ ವರ್ಷಕ್ಕೆ ಅಧಿಕವಾಗುತ್ತಲೂ ಸಾಗಿದೆ.
ಇಂತಿಪ್ಪ ಕಬ್ಬಿಗೆ ಜಿಲ್ಲೆಯಲ್ಲಿ ಒಂದೇ ಒಂದು ಸಕ್ಕರೆ ಕಾರ್ಖಾನೆ ಇಲ್ಲ. ಬೆಲ್ಲದ ಗಾಣಗಳು ಇಲ್ಲ. ಇಲ್ಲಿ ಬೆಳೆದ ಎಲ್ಲಾ ಕಬ್ಬು ಹೆಚ್ಚು ಕಡಿಮೆ ಅಕ್ಕಪಕ್ಕದ ಜಿಲ್ಲೆಗೆ ಸರಬರಾಜಾಗುತ್ತ ಬಂದಿದೆ. ಆದರೆ ಉತ್ತರ ಕನ್ನಡ ಜಿಲ್ಲೆಯ ಹಳಿಯಾಳದಲ್ಲಿನ ಪ್ಯಾರಿ ಶುಗರ್ ಕಾರ್ಖಾನೆಗೆ ಈ ಭಾಗದ ಕಮಾಂಡಿಂಗ್ ಪ್ರದೇಶದಲ್ಲಿನ ಕಬ್ಬು ಹೆಚ್ಚಿನ ಪ್ರಮಾಣದಲ್ಲಿ ಪೂರೈಕೆಯಾಗುತ್ತದೆ.
ಆದರೆ ಇದಕ್ಕೂ ಮುನ್ನವೇ ಜಿಲ್ಲೆಯಲ್ಲಿ ಬೆಳೆದ ಕಬ್ಬನ್ನು ರೈತರು ಬೆಳಗಾವಿ, ಹಾವೇರಿ, ಬಾಗಲಕೋಟೆ, ಜಿಲ್ಲೆಯ ವಿವಿಧ ಕಾರ್ಖಾನೆಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ಪೂರೈಕೆ ಮಾಡುತ್ತ ಬಂದಿದ್ದಾರೆ. ಆದರೆ ಇದೀಗ ಜಿಲ್ಲೆಯ ಕಬ್ಬನ್ನು ಅನ್ಯ ಜಿಲ್ಲೆಯ ಕಾರ್ಖಾನೆಗಳಿಗೆ ಸರಬರಾಜು ಮಾಡದಂತೆ ಹಳಿಯಾಳದಲ್ಲಿನ ಖಾಸಗಿ ಸಕ್ಕರೆ ಕಾರ್ಖಾನೆ (ಪ್ಯಾರಿ ಶುಗರ್ )ತಕರಾರು ತೆಗೆದಿದ್ದು, ಈ ಬಗ್ಗೆ ರೈತರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಒಣಗುತ್ತಿದೆ ಕಬ್ಬು: ಜಿಲ್ಲೆಯಲ್ಲಿ ಕಳೆದ ನಾಲ್ಕು ವರ್ಷ ಉತ್ತಮ ಮಳೆಯಾಗಿದ್ದರಿಂದ ಅತೀ ಹೆಚ್ಚು ಕಬ್ಬು ಉತ್ಪಾದನೆಯಾಗಿತ್ತು. ಈ ವೇಳೆ ಪ್ಯಾರಿ ಶುಗರ್ ರೈತರ ಹೊಲದಲ್ಲಿ ಉತ್ಪಾದನೆಯಾದ ಎಲ್ಲಾ ಕಬ್ಬನ್ನು ಕೊಳ್ಳಲಿಲ್ಲ. ಹೀಗಾಗಿ ರೈತರು ಬೆಳಗಾವಿ, ಹಾವೇರಿ ಮತ್ತು ಬಾಗಲಕೋಟೆ ಜಿಲ್ಲೆಯ ಕಾರ್ಖಾನೆಗಳಿಗೆ ಪೂರೈಕೆ ಮಾಡಿದರು. ಆದರೆ ಈ ವರ್ಷ ಮಳೆ ಕೊರತೆಯಾಗಿ ಕಬ್ಬು ಮೊದಲೇ ಒಣಗಿ ಹೋಗುತ್ತಿದೆ.
ಇತ್ತ ಒಡಂಬಡಿಕೆ ಮಾಡಿಕೊಂಡ ರೈತರ ಕಬ್ಬನ್ನು ಬೇಗನೆ ಕಟಾವು ಮಾಡಿಕೊಂಡು ಹೋಗಲು ಪ್ಯಾರಿ ಕಾರ್ಖಾನೆ ಹಿಂದೇಟು ಹಾಕುತ್ತಿದೆ ಎನ್ನಲಾಗಿದೆ. ಇದರಿಂದ ರೈತರ ಕಬ್ಬು ಒಣಗುತ್ತಿದ್ದು, ತೂಕ ಹಾರಿ ಹೋಗುತ್ತದೆ. ಅಲ್ಲದೇ ಬರದ ಛಾಯೆಯಿಂದ ಕಬ್ಬಿನ ಬೆಳೆಗೆ ನೀರಿನ ಕೊರತೆ ಎದುರಾಗುತ್ತಿದೆ. ಈ ಹಿನ್ನೆಲೆಯಲ್ಲಿ ಬೇಗನೆ ಕಬ್ಬು ಕಟಾವು ಮಾಡಿ ಹೊರ ಜಿಲ್ಲೆಗಳಲ್ಲಿನ ಕಾರ್ಖಾನೆಗಳಿಗೆ ಅದನ್ನು ಸಾಗಿಸಿ ಹೊಸ ಬೆಳೆಗೆ ನೀರು ಪೂರೈಸಿಕೊಂಡು ಕಬ್ಬು ಬೆಳೆಯುವ ರೈತರಿಗೆ ಅಡಚಣೆಯಾಗುತ್ತಿದೆ.
ಕಾರ್ಖಾನೆಗಳಿಗೆ ಎಚ್ಚರಿಕೆ: ಹಳಿಯಾಳದ ಪ್ಯಾರಿ ಶುಗರ್ ಕಾರ್ಖಾನೆ ಧಾರವಾಡ ಜಿಲ್ಲೆ ವ್ಯಾಪ್ತಿಯಲ್ಲಿ ಕಬ್ಬಿನ ಕಮಾಂಡಿಂಗ್ ಪ್ರದೇಶ ಹೊಂದಿದೆ. ಈ ಸಂಬಂಧ ರೈತರ ಜೊತೆ ಒಡಂಬಡಿಕೆ ಮಾಡಿಕೊಂಡಿದೆ. ಹೀಗಾಗಿ ಈ ವರ್ಷ ಕಬ್ಬು ಕಟಾವು ಮಾಡಿಕೊಂಡು ಹೋಗುವ ಮುನ್ನವೇ ಬೇರೆ ಜಿಲ್ಲೆಯ ಕಾರ್ಖಾನೆಗಳು ಇಲ್ಲಿಂದ ಕಬ್ಬು ಕೊಂಡುಕೊಳ್ಳುತ್ತಿವೆ ಇದನ್ನು ತಡೆಯಬೇಕು ಎಂದು ಹೈಕೋರ್ಟ್ ಮೊರೆ ಹೋಗಿತ್ತು. ಅರ್ಜಿ ಪರಿಶೀಲಿಸಿದ ಧಾರವಾಡ ಹೈಕೋರ್ಟ್ ಪೀಠ ಬೆಳಗಾವಿ, ಹಾವೇರಿ, ಬಾಗಲಕೋಟೆ ಜಿಲ್ಲೆಯ 11 ಕಾರ್ಖಾನೆಗಳಿಗೆ ಪ್ಯಾರಿ ಸಕ್ಕರೆ ಕಾರ್ಖಾನೆ ವ್ಯಾಪ್ತಿ ಕಬ್ಬು ಕೊಂಡುಕೊಳ್ಳದಂತೆ ಮತ್ತು ಸೂಕ್ತ ಎಚ್ಚರಿಕೆ ವಹಿಸುವಂತೆ ಆದೇಶ ಮಾಡಿದೆ. ಇದು ಜಿಲ್ಲೆಯ ಕಬ್ಬು ಬೆಳೆಗಾರರನ್ನು ಚಿಂತೆಗೀಡು ಮಾಡಿದೆ.
ಕಬ್ಬು ನುರಿಸುವಿಕೆ ಹೆಚ್ಚಿಸಲಿ: ಸದ್ಯಕ್ಕೆ ಜಿಲ್ಲೆಯಲ್ಲಿ ವಿಪರೀತ ಕಬ್ಬು ಬಾಕಿ ಉಳಿದಿದೆ. ಒಂದೇ ಒಂದು ಕಾರ್ಖಾನೆ ಇದೆಲ್ಲ ಕಬ್ಬು ನುರಿಸಲು ಇನ್ನು ಕನಿಷ್ಟ ಐದು ತಿಂಗಳು ಬೇಕು. ಅಲ್ಲಿಯವರೆಗೆ ರೈತರ ಹೊಲದಲ್ಲಿನ ಕಬ್ಬು ಒಣಗಿ ತೂಕ ಕಳೆದುಕೊಳ್ಳುತ್ತದೆ. 100 ಟನ್ ಆಗುವ ಹೊಲ 50 ಟನ್‌ಗೆ ಕುಸಿಯುತ್ತದೆ. ಕಬ್ಬು ಒಣಗಿದಂತೆಲ್ಲ ಸಕ್ಕರೆ ಅಂಶ ಅಧಿಕವಾಗಿ ಕಾರ್ಖಾನೆ ಮಾಲೀಕರಿಗೆ ಲಾಭವಷ್ಟೇ. ಇದರಿಂದ ರೈತರಿಗೆ ಲಾಭವಿಲ್ಲ ಎನ್ನುವುದು ಕಬ್ಬು ಬೆಳೆಗಾರರ ವಾದ. ಜೊತೆಗೆ ಈ ಕಬ್ಬು ಕಟಾವು ಆಗುವಷ್ಟೊತ್ತಿಗೆ ಮಳೆಗಾಲ ಬರುತ್ತದೆ. ಮುಂದಿನ ಬೆಳೆಗೆ ತೊಂದರೆಯಾಗುತ್ತದೆ. ಹೀಗಾಗಿ ಪ್ಯಾರಿ ಶುಗರ್ ಕಾರ್ಖಾನೆ ತನ್ನ ಕಬ್ಬು ನುರಿಸುವ ಸಾಮರ್ಥ್ಯ ಹೆಚ್ಚಿಸಲಿ ಎನ್ನುತ್ತಿದ್ದಾರೆ ರೈತ ಮುಖಂಡರು.
ರೈತರಿಗೆ ತಾವು ಬೆಳೆದ ಬೆಳೆಯನ್ನು ಉತ್ತಮ ದರಕ್ಕೆ ಎಲ್ಲಿಯಾದರೂ ಮಾರಾಟ ಮಾಡುವ ಹಕ್ಕಿದೆ. ಇಷ್ಟಕ್ಕೂ ಒಪ್ಪಂದ ಮಾಡಿಕೊಂಡಂತೆ ಎಲ್ಲಾ ಕಬ್ಬನ್ನು ಈಗಲೇ ಸಮೀಕ್ಷೆ ಮಾಡಿ ಕೊಂಡುಕೊಳ್ಳಲಿ. ಕಡಿಮೆ ಹಣ ಕೊಡುವ ಕಾರ್ಖಾನೆಗಳು ರೈತರನ್ನು ಹೆದರಿಸುವ ತಂತ್ರ ಬಳಕೆ ಮಾಡಿದರೆ ಹೋರಾಟ ಅನಿವಾರ್ಯವಾಗುತ್ತದೆ.
ಸುಭಾಷ ಮಾದಣ್ಣವರ, ರೈತ ಸಂಘ ತಾಲೂಕಾಧ್ಯಕ್ಷ
ರೈತ ಸಂಘಟನೆಗಳ ಎಚ್ಚರಿಕೆ
ಬೆಳಗಾವಿ ಮತ್ತು ಬಾಗಲಕೋಟೆ ಜಿಲ್ಲೆಯಲ್ಲಿನ ಸಕ್ಕರೆ ಕಾರ್ಖಾನೆಗಳಿಗೆ ದಶಕಗಳಿಂದಲೂ ಕಬ್ಬು ಕಳುಹಿಸುತ್ತಿರುವ ಜಿಲ್ಲೆಯ ರೈತರು ಆ ಎಲ್ಲಾ ಸಹಕಾರಿ ಸಕ್ಕರೆ ಕಾರ್ಖಾನೆಗಳಲ್ಲಿಯೂ ಶೇರುದಾರರಾಗಿದ್ದಾರೆ. ಹೀಗಾಗಿ ಅಲ್ಲಿಗೂ ಕಬ್ಬು ಕಳುಹಿಸುತ್ತಲೇ ಬಂದಿದ್ದಾರೆ. ಅಲ್ಲದೆ ಅಂತರ್ಜಿಲ್ಲಾ ಕಬ್ಬು ಕಾರ್ಖಾನೆಗಳು ಪ್ರತಿ ಟನ್‌ಗೆ 200-350 ರೂ. ವರೆಗೂ ಅಧಿಕ ಹಣವನ್ನು ರೈತರಿಗೆ ನೀಡುತ್ತಿವೆ. ಜೊತೆಗೆ ರೈತರ ಕಬ್ಬು ಕಾರ್ಖಾನೆ ಸೇರಿದ ಮರುದಿನವೇ ರೈತರ ಖಾತೆಗೆ ಹಣ ಜಮಾವಣೆ ಮಾಡುತ್ತಿದ್ದಾರೆ. ಹೀಗಾಗಿ ಬರಗಾಲದ ವೇಳೆ ಜಿಲ್ಲೆಯ ರೈತರು ಕಬ್ಬನ್ನು ಇತರ ಜಿಲ್ಲೆಗಳತ್ತ ಕಳುಹಿಸುತ್ತಿದ್ದಾರೆ. ಇದನ್ನು ತಡೆದರೆ ಹೋರಾಟ ಅನಿವಾರ್ಯ
ಎನ್ನುತ್ತಿವೆ ರೈತ ಸಂಘಟನೆಗಳು.
*ಬಸವರಾಜ್ ಹೊಂಗಲ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Alnavar: ಟಿಟಿ- ಕ್ಯಾಂಟರ್ ನಡುವೆ ಭೀಕರ ಅಪಘಾತ; ಸ್ಥಳದಲ್ಲಿಯೇ ಮೂವರ ಸಾವು
Hubli: ಕಾಂಗ್ರೆಸ್‌ನಲ್ಲಿ ಈಗ ಇರುವವರೆಲ್ಲ ನಕಲಿ ಗಾಂಧಿಗಳು..: ಪ್ರಹ್ಲಾದ ಜೋಶಿ
Hubli: ಅಯ್ಯಪ್ಪ ಶಿಬಿರದಲ್ಲಿ ಅಗ್ನಿ ಆಕಸ್ಮಿಕ: ಒಂಬತ್ತು ವೃತಧಾರಿಗಳಿಗೆ ಗಂಭೀರ ಗಾಯ
ಸಿ.ಟಿ.ರವಿ ನಕಲಿ ಎನ್‌ಕೌಂಟರ್‌ಗೆ ಸರಕಾರದ ಹುನ್ನಾರ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ
Dharwad: ಜಿಲ್ಲಾಧಿಕಾರಿ ಕಚೇರಿಯಲ್ಲಿ ಬ್ಯಾಟರಿ ಕಳ್ಳತನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.