ಮಹಾನಗರ ಪಾಲಿಕೆ ಚುನಾವಣೆ : ಕೈ-ಕಮಲದಲ್ಲಿ ತೀವ್ರಗೊಂಡ ಟಿಕೆಟ್ ಕದನ
ನಾಮಪತ್ರ ಸಲ್ಲಿಕೆಗೆ ಉಳಿದಿದ್ದು ಎರಡೇ ದಿನ| ಅಸಮಾಧಾನದ ಹೊಗೆ; ಪಕ್ಷೇತರ-ಪಕ್ಷಾಂತರ ಸಾಧ್ಯಾಸಾಧ್ಯತೆ
Team Udayavani, Aug 22, 2021, 10:14 PM IST
ವರದಿ: ಅಮರೇಗೌಡ ಗೋನವಾರ
ಹುಬ್ಬಳ್ಳಿ: ಮಹಾನಗರ ಪಾಲಿಕೆ ಚುನಾವಣೆ ಸ್ಪರ್ಧೆಗೆ ನಾಮಪತ್ರ ಸಲ್ಲಿಸಲು ಇನ್ನು ಎರಡು ದಿನ ಮಾತ್ರ ಬಾಕಿ ಇದೆ. ಟಿಕೆಟ್ ಗಿಟ್ಟಿಸಿಕೊಳ್ಳಲು ಪ್ರಮುಖ ಪಕ್ಷಗಳಲ್ಲಿ ಪೈಪೋಟಿ ತೀವ್ರಗೊಂಡಿದೆ. ಟಿಕೆಟ್ ದೊರೆಯುವ ಖಾತ್ರಿ ಇಲ್ಲದವರು ಕಣ್ಣೀರಿಡುವ, ಜಾತಿ-ಸಮಾಜದ ಹೆಸರಲ್ಲಿ ಒತ್ತಡ ತರುವ, ಟಿಕೆಟ್ ದೊರೆಯದಿದ್ದರೆ ಪಕ್ಷೇತರ ಇಲ್ಲವೆ ಇನ್ನೊಂದು ಪಕ್ಷದಿಂದ ಸ್ಪರ್ಧೆಗಿಳಿಯುವ ತಂತ್ರಗಳು ಜೋರಾಗಿವೆ.
ಒತ್ತಡ, ತೀವ್ರ ಪೈಪೋಟಿಯಿಂದಲೇ ಬಿಜೆಪಿ ಹಾಗೂ ಕಾಂಗ್ರೆಸ್‌ನಲ್ಲಿ ಅಭ್ಯರ್ಥಿಗಳ ಪಟ್ಟಿ ಅಂತಿಮಕ್ಕೆ ವಿಳಂಬವಾಗುತ್ತಿದೆ ಎಂದು ಹೇಳಲಾಗಿದೆ. ಪಕ್ಷದಲ್ಲಿ ಟಿಕೆಟ್ ಸಿಕ್ಕರೆ ಸಾಕು ಗೆಲುವಿಗೆ ಹೇಗಾದರೂ ಮಾಡೋಣ ಎನ್ನುವವರಷ್ಟೇ ಅಲ್ಲ. ನಮಗಲ್ಲದೆ ಇನ್ನಾರಿಗೆ ಟಿಕೆಟ್ ಎಂಬ ಅತಿಯಾದ ವಿಶ್ವಾಸ ಹೊಂದಿದ ಕೆಲವರಿಗೆ ಇದೀಗ ಟಿಕೆಟ್ ಕೈತಪ್ಪುವ ಆತಂಕ ಎದುರಾಗಿದ್ದು, ಏನು ಮಾಡಬೇಕೆಂದು ತಿಳಿಯದೆ ಚಡಪಡಿಕೆಗೆ ಸಿಲುಕಿದ್ದಾರೆ. ಈವರೆಗೆ ಯಾವುದೇ ಪಕ್ಷದಿಂದಲೂ ಪೂರ್ಣ ಪ್ರಮಾಣದ ಪಟ್ಟಿ ಬಿಡುಗಡೆಯಾಗಿಲ್ಲ.
ನಿರೀಕ್ಷೆ ತಂದೊಡ್ಡಿದ ಫಜೀತಿ: ಚುನಾವಣೆ ಕಾರ್ಯತಂತ್ರ, ಪ್ರಚಾರ, ಅಭ್ಯರ್ಥಿಗಳ ಆಯ್ಕೆ ವಿಚಾರದಲ್ಲಿ ಸದಾ ಮುಂದೆ ಇರುತ್ತಿದ್ದ ಬಿಜೆಪಿ ಕೆಲ ವರ್ಷಗಳಿಂದ ಅಭ್ಯರ್ಥಿಗಳ ಆಯ್ಕೆಯಲ್ಲಿ ಲಯ ತಪ್ಪತೊಡಗಿದೆ. ಇತರೆ ಪಕ್ಷಗಳಂತೆ ವಿಳಂಬ ಇಲ್ಲವೆ ಕೊನೆ ಗಳಿಗೆಯಲ್ಲಿ ಅಭ್ಯರ್ಥಿಗಳನ್ನು ಅಂತಿಮಗೊಳಿಸಲಾಗುತ್ತಿದೆ. ಇದುವರೆಗೆ ಅರ್ಧದಷ್ಟು ವಾರ್ಡ್ ಗಳಿಗೆ ಮಾತ್ರ ಅಭ್ಯರ್ಥಿಗಳನ್ನು ಅಂತಿಮ ಗೊಳಿಸಲಾಗಿದೆ. ಕೋವಿಡ್ ಹಿನ್ನೆಲೆಯಲ್ಲಿ ಸರಕಾರದಿಂದ ಚುನಾವಣೆ ಮುಂದೂಡಿಕೆ ನಿರ್ಧಾರ ಹಾಗೂ ಮೀಸಲು ವಿಚಾರದಲ್ಲಿ ಸದ್ಯಕ್ಕೆ ಚುನಾವಣೆ ನಡೆಯದು ಎಂಬ ಚಿಂತನೆಯಲ್ಲಿದ್ದ ಬಿಜೆಪಿಗೆ ದಿಢೀರ್ ಚುನಾವಣೆ ಘೋಷಣೆಯಾಗಿದ್ದರಿಂದ, ತರಾತುರಿಯಲ್ಲಿ ಅಭ್ಯರ್ಥಿಗಳ ಆಯ್ಕೆ ಕಸರತ್ತಿಗೆ ಮುಂದಾಗಿದೆ.
ಕಳೆದ ನಾಲ್ಕು ದಿನಗಳಿಂದ ಯುದ್ಧೋಪಾದಿಯಲ್ಲಿ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ನಡೆಯುತ್ತಿದೆ. ತಡರಾತ್ರಿ 1 ಗಂಟೆವರೆಗೂ ಪಕ್ಷದ ನಾಯಕರು, ಮುಖಂಡರು ಚಿಂತನ-ಮಂಥನ ನಡೆಸುತ್ತಿದ್ದಾರೆ. ಗೌಪ್ಯ ಸ್ಥಳದಲ್ಲಿ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ನಡೆಸಲಾಗುತ್ತಿದೆ. ಅಳೆದು ತೂಗಿ ಶನಿವಾರ ವೇಳೆಗೆ ಎರಡು ಪಟ್ಟಿಗಳನ್ನು ಪ್ರಕಟಿಸಿದ್ದು, ಶನಿವಾರ ತಡರಾತ್ರಿವರೆಗೂ ಮತ್ತೂಂದು ಸುತ್ತಿನ ಚರ್ಚೆ ನಡೆದು, ಬಹುತೇಕ ಅಭ್ಯರ್ಥಿಗಳ ಆಯ್ಕೆಗೆ ಅಂತಿಮ ಕಸರತ್ತು ಕೈಗೊಂಡಿದ್ದಾರೆ.
ಟಿಕೆಟ್ ವಿಚಾರದಲ್ಲಿ ಒತ್ತಡ-ಪೈಪೋಟಿ ತೀವ್ರವಾಗಿದ್ದು, ಹಳಬರಲ್ಲಿ ಕೆಲವರಿಗೆ ಟಿಕೆಟ್ ಕೈತಪ್ಪುವುದು ಅನಿವಾರ್ಯವಾಗಲಿದೆ. ಶನಿವಾರ ತಡರಾತ್ರಿಯ ಸಭೆ ನಂತರವೂ ಐದಾರು ವಾರ್ಡ್‌ಗಳ ಅಭ್ಯರ್ಥಿ ಹೆಸರು ಅಂತಿಮವಾಗದೆ, ರವಿವಾರ ಅಂತಿಮ ರೂಪ ನೀಡುವ ಸಾಧ್ಯತೆ ಇದೆ ಎಂಬುದು ಬಿಜೆಪಿಯ ಕೆಲ ಮೂಲಗಳ ಅನಿಸಿಕೆ. ಬಿಜೆಪಿಯಿಂದ ಮೊದಲ ಪಟ್ಟಿ ಗುರುವಾರವೇ ಬಿಡುಗಡೆಗೊಂಡಿದ್ದರೂ, ಶನಿವಾರ ಮಧ್ಯಾಹ್ನ ದವರೆಗೂ ಅನೇಕರಿಗೆ ಬಿ ಫಾರಂ ದೊರೆಯದ ಹಿನ್ನೆಲೆಯಲ್ಲಿ ನಾಮಪತ್ರ ಸಲ್ಲಿಕೆಗೆ ಎಲ್ಲ ಸಿದ್ಧತೆ ಮಾಡಿಕೊಂಡಿದ್ದರೂ ಕೆಲವರು ನಾಮಪತ್ರ ಸಲ್ಲಿಸಲು ಸಾಧ್ಯವಾಗದೆ, ಸೋಮವಾರ ನಾಮಪತ್ರ ಸಲ್ಲಿಕೆಗೆ ಸಿದ್ಧರಾಗಿದ್ದಾರೆ.
ಕೈ ಪಾಳೆಯದಲ್ಲೂ ತಿಕ್ಕಾಟ ಜೋರು: ಕಾಂಗ್ರೆಸ್‌ನಲ್ಲಿಯೂ ಟಿಕೆಟ್ ತಿಕ್ಕಾಟ ಜೋರಾಗಿಯೇ ಇದೆ. ಪಾಲಿಕೆ ಮೂರು ವಿಧಾನಸಭಾ ಕ್ಷೇತ್ರಗಳ ಅಭ್ಯರ್ಥಿ ಆಯ್ಕೆಯನ್ನು ಕೆಪಿಸಿಸಿ ನೇರವಾಗಿ ತಾನೇ ನಿರ್ವಹಿಸುತ್ತಿರುವುದು ವಿಳಂಬಕ್ಕೆ ಕಾರಣವಾಗುತ್ತಿದೆ ಎನ್ನಲಾಗುತ್ತದೆ. ಕಾಂಗ್ರೆಸ್‌ನಲ್ಲಿ ಇದ್ದವರಿಗೆ, ಕಾಂಗ್ರೆಸ್ ಬಗ್ಗೆ ತಿಳಿದಿರುವವರಿಗೆ ವಿಳಂಬ ಹೊಸದೇನು ಅಲ್ಲ. ನಾಮಪತ್ರ ಸಲ್ಲಿಕೆ ಅಂತಿಮ ಹಂತದಲ್ಲಿ, ಕೆಲವರಿಗೆ ಕೊನೆ ಗಳಿಗೆಯಲ್ಲಿ ಬಿ ಫಾರಂ ನೀಡಿದ ಉದಾಹರಣೆಗಳು ಇವೆ. ಪಾಲಿಕೆ ಚುನಾವಣೆಯಲ್ಲಿ ಟಿಕೆಟ್ ಅಂತಿಮ ವಿಚಾರದಲ್ಲಿ ಸ್ಥಳೀಯವಾಗಿ ನಾಯಕತ್ವದ ಕೊರತೆಯೂ ಕಾಂಗ್ರೆಸ್ ಪಟ್ಟಿ ಬಿಡುಗಡೆಗೆ ವಿಳಂಬಕ್ಕೆ ಕಾರಣವಾಗಿದೆ. ಸಾಮಾಜಿಕ ನ್ಯಾಯ, ಸಮುದಾಯಕ್ಕೆ ಆದ್ಯತೆ ಎಂಬ ವಿಚಾರದಲ್ಲಿ ಪೈಪೋಟಿ ಹೆಚ್ಚಿದ್ದು, ಒತ್ತಡ ಕ್ಷಣ ಕ್ಷಣಕ್ಕೂ ಹೆಚ್ಚುತ್ತಿದೆ ಎಂದು ಹೇಳಲಾಗುತ್ತಿದೆ.
ಸೋಮವಾರ ಎಚ್ ಡಿಕೆ ಆಗಮನ: ಜೆಡಿಎಸ್‌ನವರು ಅಭ್ಯರ್ಥಿಗಳ ಎರಡು ಪಟ್ಟಿ ಬಿಡುಗಡೆ ಮಾಡಿದ್ದು, ಸೋಮವಾರ ಮಾಜಿ ಮುಖ್ಯಮಂತ್ರಿ ಎಚ್. ಡಿ.ಕುಮಾರಸ್ವಾಮಿ ಅವರು ಹುಬ್ಬಳ್ಳಿಗೆ ಆಗಮಿಸಿ ಪಕ್ಷದ ಮುಖಂಡರು, ಅಭ್ಯರ್ಥಿಗಳೊಂದಿಗೆ ಚರ್ಚೆ ನಡೆಸಲಿದ್ದಾರೆ. ಆಮ್ ಆದ್ಮಿ ಪಕ್ಷ ಮೂರು ಹಂತದ ಪಟ್ಟಿ ಬಿಡುಗಡೆ ಮಾಡುವ ಮೂಲಕ ಅಭ್ಯರ್ಥಿಗಳ ಆಯ್ಕೆಯಲ್ಲಿ ಮುಂಚೂಣಿ ಕಾಯ್ದುಕೊಂಡಿದ್ದರೆ, ವಿವಿಧ ಪಕ್ಷಗಳು ತಮ್ಮ ಮೊದಲ ಪಟ್ಟಿಯನ್ನು ಬಿಡುಗಡೆಗೊಳಿಸಿವೆ. ಪಕ್ಷೇತರರಾಗಿ ಕೆಲವರು ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಪ್ರಮುಖ ರಾಜಕೀಯ ಪಕ್ಷಗಳು ಅಭ್ಯರ್ಥಿಗಳ ಅಂತಿಮಕ್ಕೆ ವಿಳಂಬ ತೋರಿದ್ದರಿಂದಾಗಿ, ನಾಮಪತ್ರ ಸಲ್ಲಿಕೆ ಕೊನೆಯ ದಿನವಾದ ಸೋಮವಾರ ವಿವಿಧ ಪಕ್ಷಗಳ ಅಭ್ಯರ್ಥಿಗಳು ಏಕಕಾಲಕ್ಕೆ ನಾಮಪತ್ರ ಸಲ್ಲಿಕೆಗೆ ಆಗಮಿಸುವ, ನೂಕು ನುಗ್ಗಲು ಉಂಟಾಗುವ ಸಾಧ್ಯತೆ ಇಲ್ಲದಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Chennamman-Kittur: ಯೋಧ ನರೇಶ ಯಲ್ಲಪ್ಪ ಅಗಸರ ಕೆರೆಗೆ ಹಾರಿ ಆತ್ಮಹತ್ಯೆ
Subhramanya: ಕುಕ್ಕೆ ಶ್ರೀಸುಬ್ರಹ್ಮಣ್ಯ ದೇವಸ್ಥಾನದ ಸೇವೆಗಳಲ್ಲಿ ವ್ಯತ್ಯಯ
Health Issue: ಸರ್ಜರಿಗಾಗಿ ಮುಂದಿನ ತಿಂಗಳು ಅಮೆರಿಕಕ್ಕೆ ಹೋಗುವೆ: ನಟ ಶಿವರಾಜ್‌ಕುಮಾರ್
Road Development: ಚಾರ್ಮಾಡಿ ಘಾಟಿ ರಸ್ತೆ ದ್ವಿಪಥ ಭಾಗ್ಯ ಸನ್ನಿಹಿತ
Daily Horoscope: ಸಹಾಯ ಯಾಚಿಸಿದವರಿಗೆ ನೆರವಾಗುವ ಅವಕಾಶ, ಕೆಲಸದ ಒತ್ತಡ ಆರಂಭ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.