ಪಾಲಿಕೆಯಿಂದ ಎಲ್‌ಪಿಜಿ ಗ್ಯಾಸ್ ಚಾಲಿತ ಚಿತಾಗಾರ
ಪರಿಸರ ಸ್ನೇಹಿ-ಮಿತವ್ಯಯಿ ಹೊಸಯಲ್ಲಾಪುರದಲ್ಲಿ ಪ್ರಾಯೋಗಿಕವಾಗಿ ಆರಂಭಕ್ಕೆ ಸಿದ್ಧತೆ
Team Udayavani, Jun 9, 2021, 6:14 PM IST
ವರದಿ: ಬಸವರಾಜ ಹೂಗಾರ
ಹುಬ್ಬಳ್ಳಿ: ಕೋವಿಡ್ ಎಂಬ ಮಹಾಮಾರಿಯಿಂದ ದಿನೇ ದಿನೇ ಸಾವಿನ ಸಂಖ್ಯೆ ಹೆಚ್ಚಾಗ ತೊಡಗಿದ್ದು, ಈ ಸಂದರ್ಭದಲ್ಲಿ ಪರಿಸರ ಸಂರಕ್ಷಣೆಗೆ ಮುಂದಾದ ಹು-ಧಾ ಮಹಾನಗರ ಪಾಲಿಕೆ ಅತ್ಯಾಧುನಿಕ ತಂತ್ರಜ್ಞಾನ ಬಳಕೆಯೊಂದಿಗೆ ಕಡಿಮೆ ವೆಚ್ಚದಲ್ಲಿ ರಾಜ್ಯದಲ್ಲಿಯೇ ಪ್ರಥಮ ಬಾರಿಗೆ ಹೊಸಯಲ್ಲಾಪುರ ಸ್ಮಶಾನದಲ್ಲಿ ಎಲ್‌ಪಿಜಿ ಗ್ಯಾಸ್ ಚಾಲಿತ ನೂತನ ಚಿತಾಗಾರ ನಿರ್ಮಾಣಕ್ಕೆ ಮುಂದಾಗಿದೆ.
ಅವಳಿನಗರದಲ್ಲಿರುವ ಚಿತಾಗಾರಗಳಲ್ಲಿ ಕಟ್ಟಿಗೆ(ಸೌದೆ) ಆಧಾರಿತ ಚಿತಾಗಾರಗಳಿದ್ದು, ವಿದ್ಯುತ್ ಚಿತಾಗಾರಕ್ಕೆ ಆದ್ಯತೆ ನೀಡಲಾಗುತ್ತಿದೆ. ಆದರೆ ವಿದ್ಯುತ್ ಚಿತಾಗಾರಕ್ಕೆ ಹೆಚ್ಚು ವೆಚ್ಚ ಬರುತ್ತಿರುವ ಹಿನ್ನೆಲೆಯಲ್ಲಿ ಎಲ್‌ಪಿಜಿ ಚಿತಾಗಾರವನ್ನು ಪ್ರಾಯೋಗಿಕವಾಗಿ ಆರಂಭಿಸಲು ಸಿದ್ಧತೆಗಳು ನಡೆದಿವೆ. ಸದ್ಯ ಪಂಜಾಬಿನ ಲೂಧಿಯಾನದಲ್ಲಿ ಈಗಾಗಲೇ ಎಲ್‌ಪಿಜಿ ಚಿತಾಗಾರ ಬಳಸಲಾಗುತ್ತಿದ್ದು, ಆಧುನಿಕ ವಿಧದ ಚಿತಾಗಾರದಲ್ಲಿ ಎರಡು ವಾಣಿಜ್ಯ (ಕಮರ್ಷಿಯಲ್) ಗ್ಯಾಸ್ ಸಿಲಿಂಡರ್ ಬಳಸಿ ಮೂರು ಶವಗಳ ಅಂತ್ಯಕ್ರಿಯೆ ನಡೆಸಬಹುದಾಗಿದೆ.
ವಿದ್ಯುತ್ ಚಿತಾಗಾರದಷ್ಟೇ ಸಮಯ ತೆಗೆದುಕೊಳ್ಳುವ ಎಲ್‌ಪಿಜಿ ಚಿತಾಗಾರ ಅತ್ಯಂತ ಕಡಿಮೆ ಪ್ರಮಾಣದಲ್ಲಿ ಹೊಗೆ ಹೊರ ಸೂಸಲಿದೆ. ಈಗ ಸದ್ಯ ರಾಜ್ಯದ ವಿವಿಧ ನಗರಗಳಲ್ಲಿ ಬಳಕೆಯಲ್ಲಿರುವ ವಿದ್ಯುತ್ ಚಿತಾಗಾರ ಹಾಗೂ ಇನ್ನುಳಿದ ಚಿತಾಗಾರಗಳ ದರ ಹೋಲಿಸಿದರೆ ಲೂಧಿಯಾನಾದ ಚಿತಾಗಾರದ ವೆಚ್ಚ ಅತ್ಯಂತ ಕಡಿಮೆ ಎನ್ನಬಹುದಾಗಿದೆ.
ವಿದ್ಯುತ್ ಚಿತಾಗಾರ ಕೇವಲ 4.40 ಲಕ್ಷ ರೂ. ಗಳಾಗಲಿದ್ದು, ಅದು ಕೂಡಾ ಸಾರಿಗೆ ಒಳಗೊಂಡಂತೆ ವೆಚ್ಚ ತಗುಲಲಿದೆ. ಈ ವ್ಯವಸ್ಥೆ ಜಾರಿಗೆ ಬಂದಿದ್ದೇ ಆದಲ್ಲಿ ಅವಳಿನಗರದಲ್ಲಿರುವ ಚಿತಾಗಾರಗಳಲ್ಲಿ ಎಲ್‌ಪಿಜಿ ಆಧಾರಿತ ಚಿತಾಗಾರ ನಿರ್ಮಾಣಕ್ಕೆ ಪಾಲಿಕೆ ಮುಂದಾಗಬಹುದು. ಇದರಿಂದ ಅವಳಿನಗರದಲ್ಲಿ ಅಂತ್ಯಕ್ರಿಯೆಗೆ ಬಳಸುವ ಸಹಸ್ರಾರು ಕ್ವಿಂಟಲ್‌ನಷ್ಟು ಕಟ್ಟಿಗೆಗಳನ್ನು ಉಳಿಸಬಹುದಾಗಿದೆ. ಇದರಿಂದ ಮರಗಳ ಕಡಿತ ನಿಲ್ಲಿಸಬಹುದು.
ಪೈಪಡ್ ಎಲ್‌ಪಿಜಿ ಸಂಪರ್ಕಕ್ಕೆ ಚಿಂತನೆ: ಮೂರು ಶವಗಳ ಅಂತ್ಯಕ್ರಿಯೆ ನಡೆಸಲು 2 ವಾಣಿಜ್ಯ ಬಳಕೆ ಸಿಲಿಂಡರ್ ಬೇಕಾಗುತ್ತದೆ. ಈಗಾಗಲೇ ಅವಳಿನಗರದಲ್ಲಿ ಮನೆಗಳಿಗೆ ಗ್ಯಾಸ್‌ಲೈನ್ ಸಂಪರ್ಕ ಕಲ್ಪಿಸಲಾಗುತ್ತಿದ್ದು, ಚಿತಾಗಾರಕ್ಕೂ ಸಹ ಪೈಪಡ್ ಎಲ್‌ಪಿಜಿ ಸಂಪರ್ಕ ಪಡೆಯುವ ಕುರಿತು ಚಿಂತನೆ ನಡೆಸಿ ಈಗಾಗಲೇ ಒಂದು ಹಂತದ ಚರ್ಚೆ ಸಹ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಅದರ ಬಳಕೆಗೆ ಅನುಗುಣವಾಗಿ ಗ್ಯಾಸ್ ಪೈಪ್ ಸಂಪರ್ಕಕ್ಕೆ ಮುಂದಾಗಲಿದೆ.
ಸದ್ಯ ಅವಳಿನಗರದಲ್ಲಿರುವ ಮುಕ್ತಿಧಾಮ (ಸ್ಮಶಾನಗಳ)ದಲ್ಲಿ ಶವ ಸಂಸ್ಕಾರಕ್ಕೆ ಸುಮಾರು 3500 ರಿಂದ 4500 ರೂ.ಗಳವರೆಗೆ ವೆಚ್ಚವಾಗಲಿದೆ. ಆದರೆ ಮುಂದಿನ ದಿನಗಳಲ್ಲಿ ಎಲ್‌ಪಿಜಿ ಆಧಾರಿತ ಚಿತಾಗಾರ ಬಂದಲ್ಲಿ ಅದರ ವೆಚ್ಚವೂ ಸಹ ಕಡಿಮೆಯಾಗಬಹುದಾಗಿದೆ. ಸದ್ಯ ಪ್ರಾಯೋಗಿಕ ಹಂತವಾಗಿ ಧಾರವಾಡ ಹೊಸಯಲ್ಲಾಪುರ ಸ್ಮಶಾನದಲ್ಲಿ ಎಲ್‌ಪಿಜಿ ಆಧಾರಿತ ಚಿತಾಗಾರ ನಿರ್ಮಾಣವಾಗಲಿದ್ದು ಅದರ ಸಾಧಕ ಭಾದಕಗಳನ್ನು ನೋಡಿಕೊಂಡು ಇನ್ನುಳಿದ ಸ್ಮಶಾನಗಳಲ್ಲಿ ಚಿತಾಗಾರ ನಿರ್ಮಾಣಕ್ಕೆ ಹು-ಧಾ ಮಹಾನಗರ ಪಾಲಿಕೆ ಮುಂದಾಗಲಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.