ಅನ್ನದಾತರಿಗೆ ಬೆಳೆವಿಮೆ ಕಂಪೆನಿಗಳ ಬರೆ
ಮೂರು ಜಿಲ್ಲೆಗಳಿಗೆ ಬಾರದ ನಯಾಪೈಸೆ ಪರಿಹಾರ | ಬೆಳೆ ಹಾನಿಯೇ ಆಗಿಲ್ಲ ಎಂಬಂತೆ ವರ್ತನೆ
Team Udayavani, Sep 28, 2020, 4:53 PM IST
ಸಾಂದರ್ಭಿಕ ಚಿತ್ರ
ಹುಬ್ಬಳ್ಳಿ: ಅತಿವೃಷ್ಟಿಯಿಂದ ಬೆಳೆ ಸೇರಿದಂತೆ ವಿವಿಧ ಹಾನಿಯಾಗಿದೆ ಎಂದು ರಾಜ್ಯ ಸರ್ಕಾರ ತಕ್ಕಮಟ್ಟಿಗೆ ಪರಿಹಾರ ನೀಡಿತ್ತು. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಕೇಂದ್ರ ಗೃಹ ಸಚಿವ ಅಮಿತ್ ಶಾ, ಕೇಂದ್ರ ತಂಡ ರಾಜ್ಯಕ್ಕೆ ಭೇಟಿ ನೀಡಿ ನೆರೆ ಹಾನಿ ವೀಕ್ಷಣೆ ಮಾಡಿತ್ತು. ಇಷ್ಟಾದರೂ ಬೆಳೆವಿಮೆ ಕಂಪೆನಿಗಳು ಮಾತ್ರ ಕೆಲ ಜಿಲ್ಲೆಗಳ ರೈತರ ಪಾಲಿಗೆ ಕರುಣೆ ತೋರಿಲ್ಲ, ನಯಾ ಪೈಸೆ ಪರಿಹಾರ ನೀಡಿಲ್ಲ.
ಅತಿವೃಷ್ಟಿ ಇಲ್ಲವೆ ಬರದಿಂದ ಬೆಳೆ ಹಾನಿ ಸಂಭವಿಸಿದರೆ, ಸಂಕಷ್ಟ ಕಾಲಕ್ಕೆ ರೈತರ ನೆರವಿಗೆ ಇರಲಿ ಎಂಬ ಉದ್ದೇಶದೊಂದಿಗೆ ಜಾರಿಗೆ ಬಂದಿದ್ದ ಬೆಳೆ ವಿಮೆ ಯೋಜನೆ ಇಂದಿನ ಸ್ಥಿತಿ ಗಮನಿಸಿದರೆ, ಇದು ವಿಮಾ ಕಂಪೆನಿಗಳ ಲಾಭಕ್ಕೆ ಇದೆಯೇ ವಿನಃ ನಮ್ಮ ನೆರವಿಗೆ ಅಲ್ಲ ಅನ್ನಿಸುತ್ತದೆ ಎಂಬುದು ಹಲವು ರೈತರ ಅಸಮಾಧಾನ. 2019ರಲ್ಲಿ ಪ್ರವಾಹದಿಂದ ರಾಜ್ಯದ 22 ಜಿಲ್ಲೆಗಳು ಅಕ್ಷರಶಃ ನಲುಗಿದ್ದವಲ್ಲದೆ, ಸುಮಾರು 6.72ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಅಂದಾಜು 13,717 ಕೋಟಿ ರೂ. ಬೆಳೆ ನಷ್ಟ ಹಾಗೂ 1.09ಲಕ್ಷ ಹೆಕ್ಟೇರ್ ಪ್ರದೇಶದ ಅಂದಾಜು 926 ಕೋಟಿ ರೂ. ಉತ್ಪನ್ನ ಹಾನಿ ಗೀಡಾಗಿತ್ತು. ಇದರಲ್ಲಿ ಉತ್ತರ ಕರ್ನಾಟಕದ ಜಿಲ್ಲೆಗಳ ಪಾಲು ಅಧಿಕವಾಗಿತ್ತು.
ಶೂನ್ಯ ಪರಿಹಾರ: ಈ ಪ್ರವಾಹದಿಂದಾದ ಹಾನಿ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಶಾ, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ವೈಮಾನಿಕ ಸಮೀಕ್ಷೆ ನಡೆಸಿದ್ದರು. ಕೇಂದ್ರದಿಂದ ಎರಡು ತಂಡಗಳು ಸಮೀಕ್ಷೆ ಕೈಗೊಂಡು ವರದಿ ನೀಡಿದ್ದವು. ಧಾರವಾಡ, ವಿಜಯಪುರ ಹಾಗೂ ಯಾದಗಿರಿ ಜಿಲ್ಲೆಗಳಿಗೆ ಇದುವರೆಗೂ ನಯಾ ಪೈಸೆ ಬೆಳೆವಿಮೆ ಪರಿಹಾರ ಬಿಡುಗಡೆಯಾಗಿಲ್ಲ. ಸರ್ಕಾರ ಹಾನಿಯಾಗಿದೆ ಎಂದು ಪರಿಹಾರ ನೀಡಿದರೂ, ವಿಮಾ ಕಂಪೆನಿಗಳು ಹಾನಿಯೇ ಆಗಿಲ್ಲ ಎಂಬಂತೆ ವರ್ತಿಸುತ್ತಿವೆ. ಇತರೆ ಜಿಲ್ಲೆಗಳಿಗೆ ಪರಿಹಾರ ಬಂದರೂ ಅದು ಅತ್ಯಲ್ಪ ಎಂಬುದು ರೈತರ ಅಸಮಾಧಾನ.
ಧಾರವಾಡ ಜಿಲ್ಲೆಯಲ್ಲಿ 2019-20ನೇ ಸಾಲಿನ ಮುಂಗಾರು ಹಂಗಾಮಿಗೆ 1,05,770 ರೈತರು ಬೆಳೆವಿಮೆಗೆ ಅರ್ಜಿ ಸಲ್ಲಿಸಿದ್ದರು. 18.22 ಕೋಟಿ ರೂ. ರೈತರು ವಂತಿಗೆ ನೀಡಿದ್ದರೆ, ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ಪಾಲು ತಲಾ 73.24ಕೋಟಿ ರೂ. ಸೇರಿದಂತೆ ಒಟ್ಟಾರೆ 164.70 ಕೋಟಿ ರೂ. ಪ್ರೀಮಿಯಂ ಪಾವತಿಸಲಾಗಿತ್ತು. 1,10,681 ಹೆಕ್ಟೇರ್ ಕೃಷಿ ಭೂಮಿ ವಿಮೆಗೆ ಒಳಪಟ್ಟಿತ್ತು. ಆದರೆ, ಇದುವರೆಗೂ ನಯಾ ಪೈಸೆ ಪರಿಹಾರ ಬಂದಿಲ್ಲ. ಯಾದಗಿರಿ ಜಿಲ್ಲೆಯಲ್ಲಿ 20,907 ರೈತರು ಅರ್ಜಿ ಸಲ್ಲಿಸಿದ್ದರು. ರೈತರ ಪಾಲು 3.25 ಕೋಟಿ, ರಾಜ್ಯ-ಕೇಂದ್ರ ಸರ್ಕಾರಗಳ ತಲಾ 14.04 ಕೋಟಿ ರೂ. ಸೇರಿದಂತೆ ಒಟ್ಟಾರೆ 31.33 ಕೋಟಿ ರೂ. ಪ್ರೀಮಿಯಂ ಪಾವತಿಸಲಾಗಿತ್ತು. 24,747 ಹೆಕ್ಟೇರ್ ಪ್ರದೇಶ ವಿಮೆಗೆ ಒಳಪಟ್ಟಿತ್ತು. ಪರಿಹಾರ ಮಾತ್ರ ಶೂನ್ಯವಾಗಿದೆ.
ವಿಜಯಪುರ ಜಿಲ್ಲೆಯಲ್ಲಿ 19,971 ರೈತರು ಅರ್ಜಿ ಸಲ್ಲಿಸಿದ್ದರು. ರೈತರ ಪಾಲು 2.50 ಕೋಟಿ, ರಾಜ್ಯ-ಕೇಂದ್ರ ಸರ್ಕಾರಗಳ ಪಾಲು ತಲಾ 14.32 ಕೋಟಿ ರೂ. ಸೇರಿ ಒಟ್ಟಾರೆ 31.14 ಕೋಟಿ ರೂ. ಪ್ರೀಮಿಯಂ ಪಾವತಿಸಲಾಗಿತ್ತು. 28,049 ಹೆಕ್ಟೇರ್ ಪ್ರದೇಶ ವಿಮೆಗೆ ಒಳಪಟ್ಟಿತ್ತಾದರೂ, ಇದುವರೆಗೂ ರೈತರಿಗೆ ಯಾವುದೇ ಬೆಳೆ ವಿಮೆ ಪರಿಹಾರ ದೊರೆತಿಲ್ಲ.
ಹಾವೇರಿ ಜಿಲ್ಲೆಯ 75,704 ರೈತರಿಗೆ 178.88ಕೋಟಿ ರೂ. ಪರಿಹಾರ ಬಂದಿದ್ದು ಅತ್ಯಧಿಕವಾಗಿದೆ. ಕೊಪ್ಪಳ ಜಿಲ್ಲೆಯ 2,127 ರೈತರು 2.53ಕೋಟಿ ರೂ. ಪರಿಹಾರ ಪಡೆದಿದ್ದಾರೆ. ಗದಗ ಜಿಲ್ಲೆಯ 1,836 ರೈತರು, 3.47 ಕೋಟಿ ರೂ. ಪರಿಹಾರ ಪಡೆದಿದ್ದರೆ, ಬಳ್ಳಾರಿ ಜಿಲ್ಲೆಯ 3,130 ರೈತರಿಗೆ 1.73ಕೋಟಿ ರೂ. ಪರಿಹಾರ ದೊರೆತಿದೆ. ಉತ್ತರ ಕನ್ನಡ ಜಿಲ್ಲೆಯ 25 ರೈತರಿಗೆ 21 ಸಾವಿರ ರೂ. ಪರಿಹಾರ ಬಂದಿದೆ.
ಬಾಗಲಕೋಟೆ ಜಿಲ್ಲೆಯ 1,266 ರೈತರು 84.33 ಲಕ್ಷ ರೂ., ಬೆಳಗಾವಿ ಜಿಲ್ಲೆಯ 2,525 ರೈತರು 3.76 ಕೋಟಿ ರೂ., ಕಲಬುರಗಿಯ 392 ರೈತರು 62.84 ಲಕ್ಷ ರೂ., ರಾಯಚೂರು ಜಿಲ್ಲೆಯ 5,610 ರೈತರು 8.42ಕೋಟಿ ರೂ., ಬೀದರ ಜಿಲ್ಲೆಯ 14,605 ರೈತರು 7.34 ಕೋಟಿ ರೂ. ಪರಿಹಾರ ಪಡೆದಿದ್ದಾರೆ. ನಮ್ಮ ಜಿಲ್ಲೆಗಳಲ್ಲಿ ಬೆಳೆ ಹಾನಿಗೀಡಾದರೂ ನಯಾ ಪೈಸೆ ಪರಿಹಾರ ನೀಡಿಲ್ಲ ಯಾಕೆ ಎಂಬುದು ಪರಿಹಾರ ಬಾರದ ಮೂರು ಜಿಲ್ಲೆಗಳ ರೈತರ ಪ್ರಶ್ನೆಯಾಗಿದೆ. 2020ರ ಮುಂಗಾರು ಹಂಗಾಮಿಗೆ ಅತಿ ವೃಷ್ಟಿಯಿಂದ ಬೆಳೆಹಾನಿ ಕುರಿತು ರೈತರು ಸಂಕಷ್ಟ ಪಡುತ್ತಿದ್ದಾರೆ. ಜತೆಗೆ ಕೇಂದ್ರ ತಂಡ ಬಂದು ವೀಕ್ಷಣೆ ಮಾಡಿಯಾಗಿದೆ. ಆದರೆ, 2019-20ನೇ ಸಾಲಿನ ಹಿಂಗಾರು ಹಂಗಾಮಿನ ಬೆಳೆ ನಷ್ಟ ಕುರಿತು ಆಯಾ ಜಿಲ್ಲಾಡಳಿತಗಳಿಂದ ವಿವರ ಸಲ್ಲಿಕೆಯಾಗಿ ದೆಯಾದರೂ, ಪರಿಹಾರ ಕುರಿತು ಇನ್ನು ಅಂತಿಮಗೊಳಿಸಲಾಗಿಲ್ಲ ಎಂಬುದನ್ನು ಕೃಷಿ ಇಲಾಖೆ ಮೂಲಗಳು ಸ್ಪಷ್ಟಪಡಿಸುತ್ತಿವೆ.
2019ರ ಮುಂಗಾರು ಹಂಗಾಮಿನಲ್ಲಿ ಅತಿವೃಷ್ಟಿಯಿಂದ ಬೆಳೆ ಹಾನಿಗೀಡಾಗಿದೆ ಎಂದು ಕೇಂದ್ರ-ರಾಜ್ಯ ಸರ್ಕಾರಗಳೇ ಒಪ್ಪಿಕೊಂಡಿವೆ. ಆದರೆ, ಬೆಳೆವಿಮೆ ಕಂಪೆನಿಗಳು ಮಾತ್ರ ನೂರಾರು ಕೋಟಿ ರೂ. ವಿಮಾ ಕಂತು ಹಣ ಪಡೆದು, ನಯಾ ಪೈಸೆ ಪರಿಹಾರ ನೀಡುವುದಿಲ್ಲ ಎಂದಾದರೆ ವಿಮೆ ಯಾಕೆ ಬೇಕು. ಬೆಳೆವಿಮೆ ಎಂಬುದು ಕಂಪೆನಿಗಳ ಉದ್ಧಾರಕ್ಕೋ, ಕಷ್ಟಕಾಲದಲ್ಲಿ ರೈತರ ನೆರವಿಗೆ ಬರುವುದಕ್ಕೋ ಎಂಬುದು ಸ್ಪಷ್ಟವಾಗಬೇಕು. -ಸುಭಾಸ ಬೂದಿಹಾಳ, ಕೋಳಿವಾಡ ರೈತ
-ಅಮರೇಗೌಡ ಗೋನವಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ಸುವರ್ಣ ಸಂಭ್ರಮದಲ್ಲಿ ರಾಜ್ಯೋತ್ಸವ ವೈಭವ
Waqf issue: ಕಾಂಗ್ರೆಸ್ ಸರ್ಕಾರದಿಂದ ಯಾರಿಗೂ ವಕ್ಫ್ ನೋಟಿಸ್ ಕೊಟ್ಟಿಲ್ಲ: ಸಚಿವ ಸಂತೋಷ ಲಾಡ್
Waqf Property: ಉತ್ತರ ಕರ್ನಾಟಕದ ಆರು ಜಿಲ್ಲೆಗಳ ಮುಸ್ಲಿಮರಿಗೂ ವಕ್ಫ್ ನೋಟಿಸ್ ಬಿಸಿ!
ಕುರಿ ಕಾಯುತ್ತಲೇ ಹಾಡು ಕಲಿತ ಇಮಾಮಸಾಬಗೆ ರಾಜ್ಯೋತ್ಸವ ಪ್ರಶಸ್ತಿ ಗರಿ; ಡೊಳ್ಳಿನ ಭಾವೈಕ್ಯತೆ
ಹುಬ್ಬಳ್ಳಿ ಟೆಕ್ಕಿ 24 ತಾಸು ಡಿಜಿಟಲ್ ಅರೆಸ್ಟ್! ಯಾರೊಂದಿಗೂ ಸಂಪರ್ಕ ಸಾಧಿಸದಂತೆ ನಿರ್ಬಂಧ
MUST WATCH
ಹೊಸ ಸೇರ್ಪಡೆ
Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ
Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ
Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ
J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ
Pushpa2: ಅಲ್ಲು ಅರ್ಜುನ್ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.