ಧಾರವಾಡ: ಹುಯ್ಯೋ ಹುಯ್ಯೋ ಮಳೆರಾಯ…ಜಿಲ್ಲೆಯಲ್ಲಿ ಬರದ ಛಾಯೆ
Team Udayavani, Jun 17, 2023, 4:31 PM IST
ಧಾರವಾಡ: ಬಿತ್ತನೆಯಾಗಿ ಒಂದು ವಾರ ಕಳೆದರೂ ಮೊಳಕೆ ಒಡೆಯದ ಸೋಯಾಬಿನ್. ಕಣ್ಣಿಗೆ ಸಾಲಿನಷ್ಟೇ ಕಂಡರೂ ನೆಲಬಿಟ್ಟು ಮೇಲಕ್ಕೇಳದ ದೇಶಿ ತಳಿಯ ಭತ್ತ. ಇಟ್ಟ ಬೀಜಗಳೆಲ್ಲ ಹುಟ್ಟದೇ ನವಿಲಿಗೆ ಆಹಾರವಾಗುತ್ತಿರುವ ಗೋವಿನ ಜೋಳ.
ಹೇಳಲೂ ಹೆಸರಿಲ್ಲದಂತಾದ ಹೊಂಬೆಸರು, ಪಕ್ಷಿಗಳ ಹೊಟ್ಟೆ ತಣಿಸುತ್ತಿರುವ ಹಬ್ಬು ಶೇಂಗಾ. ಒಟ್ಟಿನಲ್ಲಿ ಮತ್ತೊಂದು ಬರದ ಮುನ್ಸೂಚನೆ. ಜಿಲ್ಲೆಯಲ್ಲಿನ 2.73 ಲಕ್ಷ ಹೆಕ್ಟೇರ್ ಬಿತ್ತನೆ ಗುರಿಯೊಂದಿಗೆ ಮುಂಗಾರು ಹಂಗಾಮು ಆರಂಭಗೊಂಡಿತ್ತು. ಆದರೆ ಶೇ.80 ಬಿತ್ತನೆ ಕಾರ್ಯ ಇನ್ನು ಮುಗಿದಿಲ್ಲ. ಬಿತ್ತನೆಯಾಗಿರುವ ಶೇ.20 ಭೂ ಪ್ರದೇಶದ ಬೀಜಗಳು ಮೊಳಕೆಯೊಡೆಯಲು ಮಳೆರಾಯನ ಕೃಪೆ ಅನಿವಾರ್ಯವಾಗಿದೆ. ಆದರೆ ಜೂನ್ ತಿಂಗಳಿನ ಮೊದಲ ಎರಡು ವಾರದಲ್ಲಿ ದಾಖಲಾಗಬೇಕಿದ್ದ ಮಳೆಯ ಪೈಕಿ ಜಿಲ್ಲೆಯಲ್ಲಿ ಶೇ.67 ಮಳೆ ಕೊರತೆಯಾಗಿದೆ.
ಈ ತಿಂಗಳಿನಲ್ಲಿ ಇನ್ನೂ ಎರಡು ವಾರ ಬಾಕಿ ಉಳಿದಿದ್ದು, ಮಳೆ ಹಿಮ್ಮೆಟ್ಟುತ್ತಲೇ ಹೋಗುತ್ತಿದೆ. ಇದು ಧೈರ್ಯದಿಂದ ಬಿತ್ತನೆ ಮಾಡಿದ ರೈತರಲ್ಲಿ ಆತಂಕ ತಂದಿದ್ದು, ಬಿತ್ತಿದ ಬೀಜ ಗೊಬ್ಬರದ ಖರ್ಚು ಮೈಮೇಲೆ ಬರುತ್ತದೆಯೋ ಏನೋ ಎನ್ನುವಂತಾಗಿದೆ. ಜಿಲ್ಲೆಯಲ್ಲಿ ಜೂನ್ 16ರ ವರೆಗಿನ ಮಳೆ ಪ್ರಮಾಣ ಶೇ.78 ಕೊರತೆಯಾಗಿದೆ. ಮುಂಗಾರು ಪೂರ್ವ ಮಳೆಗಳು ಕೈ ಕೊಟ್ಟಿದ್ದರಿಂದ ಜಿಲ್ಲೆಯ 75 ಸಾವಿರ ಹೆಕ್ಟೇರ್‌ನಲ್ಲಿ ಬೆಳೆದಿದ್ದ ಕಬ್ಬು ಬೆಳೆ ಮೊದಲೇ ಸಂಕಷ್ಟಕ್ಕೆ ಸಿಲುಕಿತ್ತು. ಕೊಳವೆಬಾವಿಗಳು ಬಿಕ್ಕುತ್ತಿದ್ದು, ಇದೀಗ ಜೂನ್ ಮೊದಲ ಮತ್ತು ಎರಡನೇ ವಾರವೂ ಮಳೆ ಕಾಣದಾಗಿದ್ದು, ಕಬ್ಬು ಬೆಳೆಗಾರರನ್ನು ಮತ್ತಷ್ಟು ಕಂಗಾಲು ಮಾಡಿದೆ.
ಬೆಳವಲಕ್ಕೆ ಬೇಕು ವರುಣಾಶ್ರಯ
ಜಿಲ್ಲೆಯ ಹುಬ್ಬಳ್ಳಿ, ನವಲಗುಂದ, ಅಣ್ಣಿಗೇರಿ, ಕುಂದಗೋಳ ಮತ್ತು ಧಾರವಾಡ ತಾಲೂಕಿನ ಪಶ್ಚಿಮ ಭಾಗದ ಬೆಳವಲ ಭೂಮಿಯಲ್ಲಿ ದ್ವಿದಳ ಧಾನ್ಯಗಳೇ ಮುಂಗಾರಿನ ಪ್ರಧಾನ ಬೆಳೆಗಳು. ಹೊಂಬೆಸರು, ಶೇಂಗಾ, ತೊಗರಿ, ಮಡಿಕೆಕಾಳು, ಜವಾರಿ ಜೋಳ ಸೇರಿದಂತೆ ಇತರೆ ದೇಶಿ ತಳಿಯ ಧಾನ್ಯ ಬೆಳೆಯುವ 80 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಇನ್ನೂ ಆಗಿಲ್ಲ. ಆದರೆ ಈ ವರ್ಷ ಮಳೆಯ ಅಭಾವ ಸೃಷ್ಟಿಯಾಗಿದ್ದು, ಶೇ.20 ಮಾತ್ರ ಬಿತ್ತನೆಯಾಗಿದೆ. ಈ ಪೈಕಿ ಕೇವಲ 5 ಸಾವಿರ ಹೆಕ್ಟೇರ್‌ನಲ್ಲಿ ಮಾತ್ರ ಬಿತ್ತಿದ ಬೀಜ ಮೊಳಕೆಯೊಡೆದಿದೆ. ಅದೂ ನೀರಾವರಿ ಆಶ್ರಿತ ಭೂಮಿ ಮಾತ್ರ. ಹೀಗಾಗಿ ಈ ಬಾರಿ ಮುಂಗಾರಿ ಬೆಳೆ ಅತ್ತ ಅರೆಮಲೆನಾಡಿನ ದೇಶಿ ಭತ್ತಕ್ಕೆ ಏಟು ಕೊಟ್ಟಿದ್ದು, ಇತ್ತ ಬೆಳವಲ ಸೀಮೆಯ ರೈತರೂ ಕತ್ತು ಎತ್ತದಂತೆ ಮಾಡಿಟ್ಟಿದೆ.
ಗಾಯದ ಮೇಲೆ ಬರೆ
2019ರಿಂದ 20122ರ ವರೆಗೆ ಸತತ ನಾಲ್ಕು ವರ್ಷ ದಾಖಲೆ ಮತ್ತು ಹದದ ಮಳೆಯಾಗಿದ್ದರಿಂದ ಜಿಲ್ಲೆಯ ಕೃಷಿ ಹಸಿರು ಹೊನ್ನಿನ ಕಣಜವಾಗಿತ್ತು. ಜಿಲ್ಲೆಯ ಮುಂಗಾರು ಮತ್ತು ಹಿಂಗಾರು ಬೆಳೆಗಳು ಈ ನಾಲ್ಕು ವರ್ಷದಲ್ಲಿ ಚೆನ್ನಾಗಿ ಬೆಳೆದು ರೈತರು ಖುಷಿಯಾಗಿದ್ದರು. ಆದರೆ ಇದೀಗ ಮತ್ತೂಮ್ಮೆ ಮಳೆ ಖೋತಾ ಆಗಿದ್ದು, ಅನ್ನದಾತರು ನಿಜಕ್ಕೂ ಆತಂಕದಲ್ಲಿದ್ದಾರೆ.
ಕೊರೊನಾದಿಂದ ಬಿದ್ದ ಆರ್ಥಿಕ ಏಟಿನಿಂದ ಚೇತರಿಸಿಕೊಂಡು ಉತ್ತಮ ಬೆಳೆ ನಿರೀಕ್ಷೆಯಲ್ಲಿದ್ದ ರೈತರಿಗೆ 2023ರ ಮುಂಗಾರು ಗಾಯದ ಮೇಲೆ ಬರೆ ಎಳೆದಂತಾಗಿದೆ.
ಕುಡಿವ ನೀರಿಗೂ ಎದುರಾದ ತತ್ವಾರ
ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿ ಕೊಳವೆಬಾವಿ ಅವಲಂಬಿತ ಹಳ್ಳಿಗಳಲ್ಲಿ ಕುಡಿಯುವ ನೀರಿಗೆ ವಿಘ್ನ ಎದುರಾಗಿದೆ. ನಿಗದಿ ಜಿಪಂ ಕ್ಷೇತ್ರ ವ್ಯಾಪ್ತಿಯ ಬರೋಬ್ಬರಿ 10 ಹಳ್ಳಿಗಳಲ್ಲಿ ಕುಡಿಯುವ ನೀರು ಪೂರೈಕೆಯಲ್ಲಿ ಕಳೆದ 15 ದಿನಗಳಿಂದ ಭಾರಿ ವ್ಯತ್ಯಯವಾಗುತ್ತಿದೆ. ಅಷ್ಟೇಯಲ್ಲ, ಕೆರೆ ಮತ್ತು ಹಳ್ಳಗಳಲ್ಲಿಯೂ ನೀರು ಸಂಪೂರ್ಣ ಬರಿದಾಗಿದ್ದು, ಜಾನುವಾರುಗಳಿಗೆ ಕುಡಿಯುವ ನೀರಿನ ತೊಂದರೆ ಎದುರಾಗಿದೆ. ಪಶು-ಪಕ್ಷಿಗಳು ಇಷ್ಟೊತ್ತಿಗೆ ಕೆರೆಯಂಗಳದಲ್ಲಿನ ವರುಣ ನರ್ತನವನ್ನು ನೋಡಿ ನಲಿಯಬೇಕಿತ್ತು. ಆದರೆ ಕೆರೆಗಳಲ್ಲಿನ ಬಿರುಕು ಮುಚ್ಚಿಲ್ಲ. 1200ಕ್ಕೂ ಹೆಚ್ಚು ಕೆರೆಗಳ ಪೈಕಿ 900 ಕೆರೆಗಳಲ್ಲಿ ನೀರು ಖಾಲಿಯಾಗಿದೆ. ಇನ್ನುಳಿದ 200 ಕೆರೆಗಳಲ್ಲಿ ಅರ್ಧ ನೀರಿದ್ದರೂ, ಅದು ಕಲ್ಮಶವಾಗುತ್ತಿದೆ. ಹೀಗಾಗಿ ದನಕರುಗಳಿಗೆ ಕುಡಿಯುವ ನೀರಿಗೆ ತೊಂದರೆ ಎದುರಾಗಿದೆ.
ಬಿತ್ತನೆಯ ಗುರಿ ಅಡ್ಡಗಟ್ಟಿದ ವರುಣ
ಜಿಲ್ಲಾದ್ಯಂತ 2023ನೇ ಸಾಲಿಗಾಗಿ ಒಟ್ಟು 2.73 ಲಕ್ಷ ಹೆಕ್ಟೇರ್ ಬಿತ್ತನೆ ಗುರಿ ಹೊಂದಲಾಗಿತ್ತು. ಜಿಲ್ಲೆಯಲ್ಲಿ ಅದಕ್ಕಾಗಿ ಈಗಾಗಲೇ
19 ಸಾವಿರ ಕ್ವಿಂಟಲ್ ಬೀಜ ಸಂಗ್ರಹ ವಿತರಿಸಲಾಗಿದೆ. 2022ರಲ್ಲಿ ಅಂದರೆ ಕಳೆದ ವರ್ಷ ಜಿಲ್ಲೆಯಲ್ಲಿ ಒಟ್ಟು 16 ಸಾವಿರ ಕ್ವಿಂಟಲ್
ಬೀಜ ವಿತರಣೆ ಮಾಡಲಾಗಿತ್ತು. ಈ ವರ್ಷ ಹೆಚ್ಚುವರಿಯಾಗಿ ಕೃಷಿ ಇಲಾಖೆ ಮತ್ತೆ ಮೂರು ಸಾವಿರ ಕ್ವಿಂಟಲ್‌ನಷ್ಟು ಬೀಜ ಸಂಗ್ರಹಿಸಿ ಅನ್ನದಾತರಿಗೆ ನೀಡಿದೆ. ಆದರೆ ಮಳೆಯಿಂದಾಗಿ ಅಲ್ಲಲ್ಲಿ ಬಿತ್ತನೆಯೇ ಆಗಿಲ್ಲ. ಬಿತ್ತಲೂ ಅನ್ನದಾತರು ಹಿಂದೇಟು ಹಾಕುತ್ತಿದ್ದಾರೆ.
ಜಿಲ್ಲೆಯಲ್ಲಿ ಅತೀ ಹೆಚ್ಚು ಬೀಜದ ಬೇಡಿಕೆ ಕಳೆದ ಬಾರಿಯಂತೆ ಈ ಬಾರಿಯೂ ಸೋಯಾ ಅವರೆಗೆ ಇದ್ದು, 9 ಸಾವಿರ ಕ್ವಿಂಟಲ್ ಬೀಜ ರೈತ ಸಂಪರ್ಕ ಕೇಂದ್ರಗಳ ಮೂಲಕ ವಿತರಣೆಯಾಗಿದೆ. ಸೋಯಾ ಜಿಲ್ಲೆಯ ಮುಂಗಾರು ಬೆಳೆಗಳಲ್ಲಿಯೇ ಮೊದಲ ಸ್ಥಾನಕ್ಕೆ ಏರಿದಂತಾಗಿದೆ. ನಂತರದ ಸ್ಥಾನ ಹೊಂಬೆಸರಿಗೆ ಇದ್ದು, 1500 ಕ್ವಿಂಟಲ್ ಇದ್ದರೆ, ಕೃಷಿ ಇಲಾಖೆ ಅಗತ್ಯಕ್ಕೆ ತಕ್ಕಂತೆ ಶೇಂಗಾ, ಈರುಳ್ಳಿ, ಹತ್ತಿ ಬೀಜ ರೈತರಿಗೆ ಹಂಚಿಕೆ ಮಾಡಿದೆ.
ಬರಗಾಲ ಕಾಮಗಾರಿ ಆರಂಭಿಸಿ
ಜಿಲ್ಲೆಯ ಬೇಡ್ತಿ, ಬೆಣ್ಣಿ, ತುಪರಿ, ರಾಡಿ, ಜ್ಯಾತಕ್ಯಾ ಮತ್ತು ಡೊಂಕಹಳ್ಳ ಸೇರಿದಂತೆ 23 ಹಳ್ಳಗಳು ಸಂಪೂರ್ಣ ಬರಿದಾಗಿವೆ. ಕೆರೆ ಕುಂಟೆಗಳ ಮಡಿಲು ಕೂಡ ಒಣಗಿದ್ದು, ಸರ್ಕಾರ ಕೂಡಲೇ ಬರಗಾಲ ಕಾಮಗಾರಿಗಳನ್ನು ನಡೆಸಬೇಕು ಎನ್ನುವ ಕೂಗು ರೈತರಿಂದ ಶುರುವಾಗಿದೆ. ಕೆರೆಯಂಗಳ ಹೂಳೆತ್ತುವಿಕೆ, ಕೋಡಿ ದುರಸ್ತಿ, ಚೆಕ್‌ಡ್ಯಾಂಗಳ ನಿರ್ಮಾಣ, ಮಣ್ಣಿನ ಕಾಲುವೆಗಳ ನಿರ್ಮಾಣ, ಬದು ನಿರ್ಮಾಣ, ಕೃಷಿ ಹೊಂಡ, ಅರಣ್ಯೀಕರಣ ಸೇರಿದಂತೆ ಇತರೆ ಕಾಮಗಾರಿಗಳನ್ನು ಆರಂಭಿಸಬೇಕು ಎನ್ನುವ ಮಾತುಗಳು ಕೇಳಿಬರುತ್ತಿವೆ.
ಮುಂಗಾರು ಹಂಗಾಮು ಮಳೆ ಕೊರತೆಯಿಂದ ಸಂಕಷ್ಟಕ್ಕೆ ಸಿಲುಕಿದೆ. ಹೀಗಾಗಿ ಇನ್ನು ವಿಳಂಬವಾಗಿ ಮಳೆಯಾದರೆ ಗೋವಿನ ಜೋಳ, ಉದ್ದು, ಮೆಣಸಿನಕಾಯಿ ಮತ್ತು ಹತ್ತಿ ಬೆಳೆಯಲು ರೈತರಿಗೆ ಅವಕಾಶವಿದೆ. ಹೀಗಾಗಿ ರೈತರಿಗೆ ಸಲಹೆ ನೀಡುತ್ತಿದ್ದೇವೆ. ಅಷ್ಟೇಯಲ್ಲ ಅಗತ್ಯ ಬೀಜಗಳ ಶೇಖರಣೆ ಕೂಡ ಮಾಡಿಕೊಳ್ಳಲಾಗುತ್ತಿದೆ.
ಶಿವನಗೌಡ ಪಾಟೀಲ್,
ಜಂಟಿ ನಿರ್ದೇಶಕರು, ಕೃಷಿ ಇಲಾಖೆ ಧಾರವಾಡ
ಬಸವರಾಜ್ ಹೊಂಗಲ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Dharwad: ಜಿಲ್ಲಾಧಿಕಾರಿ ಕಚೇರಿಯಲ್ಲಿ ಬ್ಯಾಟರಿ ಕಳ್ಳತನ
ಮಾಣಿಪ್ಪಾಡಿ ಪ್ರಕರಣವನ್ನು ಸರಕಾರ ಸಿಬಿಐ ಗೆ ನೀಡಲಿ, ಸತ್ಯಾಸತ್ಯತೆ ಹೊರಬರುತ್ತೆ: ಈಶ್ವರಪ್ಪ
Hubli: ಬಿಜೆಪಿಯವರಿಗೆ ಯಾವುದೇ ಆಸಕ್ತಿ ಇಲ್ಲ. ಅವರಿಗೆ ರಾಜಕಾರಣವೇ ಮುಖ್ಯ :ಡಿ.ಕೆ.ಶಿ
Hubballi: ಸಿಎಂ ಸಿದ್ದರಾಮಯ್ಯ ಮುಸ್ಲಿಮರಿಗೆ ಮುತ್ತು ಕೊಡ್ತಾರೆ, ನಮಗೆ ಲಾಠಿ ಏಟು: ಬೆಲ್ಲದ್
Hubli: ಕ್ರಿಮಿನಲ್ ಜತೆಯೇ ಪೊಲೀಸ್ ಪೇದೆ ಎಸ್ಕೇಪ್! ಹುಬ್ಬಳ್ಳಿಯಲ್ಲಿ ಪೊಲೀಸ್ ಕಾರ್ಯಾಚರಣೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.