Dharwad: ಮಳೆ ಮಾಯ, ಬರಗಾಲದ ಛಾಯಾ- ಬಿರುಕು ಬಿಟ್ಟ 500 ಕೆರೆಯಂಗಳ…
ಇನ್ನುಳಿದಂತೆ ಕಲಘಟಗಿ ಅರ್ಧ ತಾಲೂಕಿಗೆ ಮಳೆ ಇಲ್ಲ.
Team Udayavani, May 18, 2023, 5:48 PM IST
ಧಾರವಾಡ: ನೀರು ಹೊರಗೆ ಹಾಕಲು ಬಿಕ್ಕುತ್ತಿರುವ ಬೋರ್‌ವೆಲ್‌ಗಳು, ಬಿರುಬಿಸಿಲಿನ ರಣಕಾವಿಗೆ ಮುಗ್ಗರಿಸಿದ ಕಬ್ಬು ಬೆಳೆ, ಮೇ ತಿಂಗಳಿನ ಕೊನೆ ಘಟ್ಟಕ್ಕೆ ಬಂದರೂ ಸದ್ದು ಮಾಡದ ಮಿರುಗನ (ಮೃಗಶಿರ) ಮಳೆ ಪೂರ್ವದ ಅಡ್ಡ ಮಳೆಗಳು, ಬಿತ್ತನೆಗೆ ಸಜ್ಜಾಗದ ಕೃಷಿ ಭೂಮಿ. ಒಟ್ಟಲ್ಲಿ ಚುನಾವಣೆ ಕಾವಿನಲ್ಲಿ ಮಿಂದೆದ್ದು ನಿಟ್ಟುಸಿರು ಬಿಡುವಷ್ಟರಲ್ಲಿ ಜಿಲ್ಲೆಗೆ ಬರದ ಛಾಯೆ ಆವರಿಸಿಕೊಳ್ಳುವ ಆತಂಕ ಎದುರಾಗಿದೆ.
ರಾಜ್ಯ ವಿಧಾನಸಭೆ ಚುನಾವಣೆ ಮುಗಿದು ಇನ್ನೇನು ಒಂದು ವಾರದಲ್ಲಿ ಹೊಸ ಸರ್ಕಾರ ಕೂಡ ಅಸ್ತಿತ್ವಕ್ಕೆ ಬರಲಿದೆ. ಆದರೆ ನೂತನ ಸರ್ಕಾರಕ್ಕೆ ಎಲ್ಲಿ ಬರಗಾಲದ ಕರಿಛಾಯೆ ಆವರಿಸಿಕೊಳ್ಳುತ್ತದೆಯೋ ಎಂಬ ಭಯ ಶುರುವಾಗಿದೆ. ಈ ಮಧ್ಯೆ ಜಿಲ್ಲೆಗೆ ಯಾವುದೇ ನದಿ, ನೀರು ಮತ್ತು ಇತರೆ ಜಲಮೂಲಗಳು ಬೆನ್ನಿಗಿಲ್ಲವಾಗಿದ್ದು, ಇನ್ನೊಂದು ಬರಗಾಲ ಆವರಿಸುವುದೇ ಎನ್ನುವ ಆತಂಕ ಜಿಲ್ಲೆಯ ಅನ್ನದಾತರನ್ನು ಕಾಡಲಾರಂಭಿಸಿದೆ.
2013ರಿಂದ ಸತತ 3 ವರ್ಷಗಳ ಕಾಲ ಜಿಲ್ಲೆಯಲ್ಲಿ ಕಾಣಿಸಿಕೊಂಡಿದ್ದ ಬರಗಾಲಕ್ಕೆ ಜನಸ್ತೋಮವೇ ಸುಸ್ತಾಗಿ ಹೋಗಿತ್ತು. ಜಿಲ್ಲೆಯ ಗ್ರಾಮಗಳಲ್ಲಿ ಜನರು ಕಠಿಣ ಜೀವನ ನಡೆಸಿದ್ದರು. ಆದರೆ ಸುದೈವ ಎನ್ನುವಂತೆ 2018ರಿಂದ ಹೆಚ್ಚು ಕಡಿಮೆ ಸತತ ಐದು ವರ್ಷಗಳ ಕಾಲ ಜಿಲ್ಲೆಯಲ್ಲಿ ಉತ್ತಮ ಮಳೆ ಮತ್ತು ಬೆಳೆಯಿಂದ ಸಮೃದ್ಧಿ ಇತ್ತು. ಕುಡಿಯುವ ನೀರಿಗೆ ಕೊರತೆಯಾಗಿರಲಿಲ್ಲ. ಹಳ್ಳ
ಕೊಳ್ಳ ಮತ್ತು ಕೆರೆಯಂಗಳದಲ್ಲಿ ಸಾಕಷ್ಟು ನೀರಿದ್ದಿದ್ದರಿಂದ ಕೊಳವೆಬಾವಿಗಳು ವರ್ಷಪೂರ್ತಿ ನೀರು ಹೊರ ಹಾಕಿದ್ದವು. ಜಿಲ್ಲೆಯ ಕಬ್ಬು ಬೆಳೆಗಾರರಂತೂ ಬೇಸಿಗೆ ಕಾಲದಲ್ಲೂ ಸುರಿದಿದ್ದ ಮುಂಗಾರುಪೂರ್ವ ಮಳೆಗಳಿಂದ ಉತ್ತಮ ಇಳುವರಿ ಪಡೆದುಕೊಂಡಿದ್ದರು. ಆದರೆ ಅತಿವೃಷ್ಟಿಯಾಗಿ ಮನೆ, ಮಠಗಳಿಗೆ ಹಾನಿಯಾಗಿದ್ದನ್ನು ಬಿಟ್ಟರೆ, ಉಳಿದಂತೆ ಎಲ್ಲವೂ ಸೌಖ್ಯವಾಗಿತ್ತು.
ಏನೇನಾಗಿದೆ ಜಿಲ್ಲೆಯಲ್ಲಿ?: ಸದ್ಯಕ್ಕೆ ಜಿಲ್ಲೆಯಲ್ಲಿ ಬರಗಾಲದ ಛಾಯೆ ಆವರಿಸಿಕೊಂಡಿದ್ದು, ಇಷ್ಟೊತ್ತಿಗಾಗಲೇ ಜಿಲ್ಲೆಯ ಎಂಟು ತಾಲೂಕಿನಲ್ಲಿ ಮುಂಗಾರು ಪೂರ್ವ ಮಳೆಗಳು ಸುರಿಯಬೇಕಿತ್ತು. ಆದರೆ ಎಂಟು ತಾಲೂಕಿನ ಪೈಕಿ ಐದು ತಾಲೂಕಿನಲ್ಲಿ ಮುಂಗಾರು ಪೂರ್ವ ಮಳೆಗಳು ಸುರಿದಿಲ್ಲ. ಬಯಲು ಸೀಮೆ ಎಂದು ಕರೆಯಿಸಿಕೊಳ್ಳುವ ಧಾರವಾಡ ತಾಲೂಕಿನ ಪಶ್ಚಿಮ ಭಾಗ, ಹುಬ್ಬಳ್ಳಿ, ಅಣ್ಣಿಗೇರಿ ಮತ್ತು ನವಲಗುಂದ ತಾಲೂಕಿನಲ್ಲಿ ಮಳೆ ಕೊರತೆಯಾಗಿದೆ.
ಇನ್ನುಳಿದಂತೆ ಕಲಘಟಗಿ ಅರ್ಧ ತಾಲೂಕಿಗೆ ಮಳೆ ಇಲ್ಲ. ಧಾರವಾಡ ತಾಲೂಕಿನ ಕೆಲವು ಹಳ್ಳಗಳಲ್ಲಿ ಮಳೆಯ ಅಭಾವ ಎದ್ದು ಕಾಣುತ್ತಿದೆ. ಇದರ ಪರಿಣಾಮವಾಗಿ ಮುಂಗಾರು ಬಿತ್ತನೆಗೆ ಭೂಮಿ ಸಜ್ಜುಗೊಳಿಸಿಕೊಳ್ಳುವ ರೈತರು ಆತಂಕ ಪಡುತ್ತಿದ್ದಾರೆ. ಇಷ್ಟೊತ್ತಿಗಾಗಲೇ ಹದಮಳೆಗಳು ಸುರಿದು ಬಿತ್ತನೆಗೆ ಅಗತ್ಯ ಸಿದ್ಧತೆಗಳು ಆಗಬೇಕಿತ್ತು.
ಕೆರೆಗಳ ಕಥೆ ಏನು?: ಯಾವುದೇ ನದಿಗಳು ಇಲ್ಲದಿದ್ದರೂ 23 ಹಳ್ಳಕೊಳ್ಳಗಳ ನೀರಿನ ಜೀವಸೆಲೆ ಹೊಂದಿರುವ ಜಿಲ್ಲೆಯಲ್ಲಿ ಒಟ್ಟು 1220 ಕೆರೆಗಳ ಪೈಕಿ ಶೇ.50 ಕೆರೆಗಳಲ್ಲಿ ಅರ್ಧಕ್ಕಿಂತ ಹೆಚ್ಚು ನೀರು ಖಾಲಿಯಾಗಿದೆ. ಇನ್ನು ಶೇ.40 ಕೆರೆಗಳು ಸಂಪೂರ್ಣ ಬರಿದಾಗಿದ್ದು, ಶೇ.10 ಕೆರೆಗಳಲ್ಲಿ ಅರ್ಧದಷ್ಟು ನೀರು ಉಳಿದುಕೊಂಡಿದೆ.
ಅರೆಮಲೆನಾಡು ಪ್ರದೇಶವಾದ ಕಲಘಟಗಿ, ಅಳ್ನಾವರ ಮತ್ತು ಧಾರವಾಡ ತಾಲೂಕಿನಲ್ಲಿ ಅತೀ ಹೆಚ್ಚು ಕೆರೆಗಳು ಮಾರ್ಚ್ ತಿಂಗಳಷ್ಟೊತ್ತಿಗೆ ಬರಿದಾಗಿ ಹೋಗಿವೆ. ಸತತ ಮೂರು ವರ್ಷಗಳ ಕಾಲ ಮಳೆ ಸುರಿದಿದ್ದರೂ, ಕೆರೆಗಳ ತೋಬು ರಿಪೇರಿ, ನೀರು ಹಿಡಿದು ನಿಲ್ಲಿಸುವ ಗೋಜಿಗೆ ಜಿಲ್ಲಾಡಳಿತ ಹೋಗಲೇ ಇಲ್ಲ. ಇದರ ದುಷ್ಪರಿಣಾಮ ಎಂಬಂತೆ ಜಿಲ್ಲೆಯಲ್ಲಿ ಪ್ರತಿವರ್ಷ ಒಟ್ಟು ಅಂದಾಜು 12 ಟಿಎಂಸಿ ಅಡಿಯಷ್ಟು ನೀರು ಸುಖಾಸುಮ್ಮನೆ ಹರಿದುಹೋಗಿದೆ.
ಕಳೆದ ಹತ್ತು ವರ್ಷಗಳಲ್ಲಿ ಬರ ಕಾಣಿಸಿಕೊಂಡ ವರ್ಷಗಳು
* 2013ರಲ್ಲಿ ಶೇ.65 ಮಳೆ ಕೊರತೆ-ಪೂರ್ಣ ಬರಗಾಲ
* 2014ರಲ್ಲಿ ಶೇ.58 ಮಳೆ ಕೊರತೆ-ಅರ್ಧ ಬರಗಾಲ
* 2015ರಲ್ಲಿ ಶೇ.45 ಮಳೆ ಕೊರತೆ-ಅರ್ಧ ಬರಗಾಲ
* 2018ರಲ್ಲಿ ಶೇ.27 ಮಳೆ ಕೊರತೆ-ಅರ್ಧ ಬರಗಾಲ
10ರಿಂದ 3 ನಾಜೆಲ್‌ಗೆ ಇಳಿಕೆ
ಜಿಲ್ಲೆಯಲ್ಲಿ ಕಬ್ಬು ಬೆಳೆಗಾರರು ಮತ್ತು ಬೇಸಿಗೆಯಲ್ಲಿ ತರಕಾರಿ ಬೆಳೆಯುವ ರೈತರು ಹೆಚ್ಚಾಗಿ ಕೊಳವೆಬಾವಿಗಳನ್ನೇ ನಂಬಿಕೊಂಡಿದ್ದಾರೆ. ಜಿಲ್ಲೆಯಲ್ಲಿ ಕೃಷಿಗೆ ಬಳಕೆಯಾಗುವ 43 ಸಾವಿರಕ್ಕೂ ಅಧಿಕ ಕೊಳವೆಬಾವಿಗಳಿವೆ. ಕಳೆದ ನಾಲ್ಕು ವರ್ಷ ಸತತ ಮಳೆ ಸುರಿದಿದ್ದರಿಂದ ವರ್ಷವಿಡೀ ಕೊಳವೆಬಾವಿಗಳು ಚೆನ್ನಾಗಿಯೇ ನೀರು ಹೊರಹಾಕುತ್ತಿದ್ದವು. ಆದರೆ ಕಳೆದ
ಮಾರ್ಚ್ ತಿಂಗಳಿನಿಂದಲೇ ಬೊರ್‌ವೆಲ್‌ಗಳು ಬಿಕ್ಕುತ್ತಿವೆ. ಧಾರವಾಡ, ಕಲಘಟಗಿ ಮತ್ತು ಅಳ್ನಾವರ ತಾಲೂಕಿನ ಕಬ್ಬು ಬೆಳೆಗಾರರ ಹೊಲದಲ್ಲಿ 10 ನಾಜೆಲ್‌ಗಳಿಗೆ ನೀರು ಚಿಮ್ಮಿಸುತ್ತಿದ್ದ ಬೊರ್‌ವೆಲ್‌ಗಳು ಕೇವಲ 3 ನಾಜೆಲ್‌ಗೆ ಇಳಿಕೆಯಾಗಿವೆ. ಇದು ಕಬ್ಬು ಬೆಳೆಗಾರರನ್ನು ನಿದ್ದೆಗೆಡಿಸಿದೆ.
ಈ ವರ್ಷ ಕೇರಳ ರಾಜ್ಯಕ್ಕೆ ಮಾನ್ಸೂನ್ ನಾಲ್ಕು ದಿನ ತಡವಾಗಿ ಬರಲಿದೆ. ಹೀಗಾಗಿ ರಾಜ್ಯಕ್ಕೂ ಮಾನ್ಸೂನ್ ಪ್ರವೇಶ ಹೆಚ್ಚು ಕಡಿಮೆ ಜೂನ್ 15ರ ವರೆಗೂ ಆಗಬಹುದು. ಮುಂಗಾರು ಪೂರ್ವ ಮಳೆಗಳು ಕೈ ಕೊಟ್ಟಿದ್ದರಿಂದ ಸಹಜವಾಗಿ ರೈತರಲ್ಲಿ ಆತಂಕ
ಮೂಡಿದೆ. ಆದರೆ ಮೇ 21ರಿಂದ ಮೂರು ದಿನ ರಾಜ್ಯದಲ್ಲಿ ಉತ್ತಮ ಮಳೆ ನಿರೀಕ್ಷೆ ಇದೆ.
*ಆರ್.ಎಚ್. ಪಾಟೀಲ, ಹವಾಮಾನ ವಿಭಾಗದ ಮುಖ್ಯಸ್ಥರು, ಕೃಷಿ ವಿವಿ, ಧಾರವಾಡ
*ಬಸವರಾಜ್ ಹೊಂಗಲ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hubli: ಗ್ಯಾರಂಟಿ ಯೋಜನೆ ಹಣ ನಿರ್ಹವಣೆಗೆ ಬಿಪಿಎಲ್ ಕಾರ್ಡ್ ರದ್ದು: ವಿಜಯೇಂದ್ರ ಆರೋಪ
ತಮ್ಮದೇ ಮಕ್ಕಳ “ಅಪಹರಣ’ನಾಟಕವಾಡಿದ ಗೃಹಿಣಿಯರು
ಅನ್ನಭಾಗ್ಯ ಯೋಜನೆ ಮುನ್ನಡೆಸಲು ಸಾಧ್ಯವಾಗದೆ ಸರಕಾರ ಬಿಪಿಎಲ್ ಕಾರ್ಡು ರದ್ದು ಮಾಡಲು ಹೊರಟಿದೆ
Hubli: ಅಡವಿಸಿದ್ದೇಶ್ವರ ಮಠದ ಶ್ರೀ ಶಿವಲಿಂಗೇಶ್ವರ ಸ್ವಾಮೀಜಿ ಲಿಂಗೈಕ್ಯ
Hubli: ದಿವಾಳಿಯಾದ ಸರ್ಕಾರ ಬಿಪಿಎಲ್ ಕಾರ್ಡ್ ಕಡಿತ ಮಾಡುತ್ತಿದೆ: ಪ್ರಹ್ಲಾದ ಜೋಶಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.