ಉಳುವಾ ಕೈದಿಗಳ ನೋಡಲ್ಲಿ!
Team Udayavani, Jul 16, 2018, 6:00 AM IST
ಧಾರವಾಡ: “ನೇಗಿಲ ಹಿಡಿದು ಹೊಲದೊಳು ಹಾಡುತ ಉಳುವಾ ಯೋಗಿಯ ನೋಡಲ್ಲಿ’ ಗೀತೆಯನ್ನು ಸದ್ಯ ಧಾರವಾಡದ ಮಟ್ಟಿಗೆ “ನೇಗಿಲು ಹಿಡಿದು ಜೈಲೊಳು ದುಡಿಯುವ ಉಳುವಾ ಕೈದಿಯ ನೋಡಲ್ಲಿ…’ ಎಂದು ಹಾಡಿದರೆ ಅಚ್ಚರಿ ಪಡಬೇಕಿಲ್ಲ. ಏಕೆಂದರೆ ಧಾರವಾಡದ ಜೈಲಿನಲ್ಲಿನ ಕೈದಿಗಳು ಇದೀಗ ಬರೀ ಕೈದಿಗಳಲ್ಲ, ಜೈಲಿನಲ್ಲಿರುವ ಇತರರಿಗೆ ಅನ್ನದಾತರೂ ಆಗಿದ್ದಾರೆ.
ಹೌದು, ಸಾಮಾನ್ಯವಾಗಿ ಕೈದಿಗಳು ಎಂದರೆ ಅವರು ಜೈಲಿನ ನಾಲ್ಕು ಗೋಡೆಗಳ ಮಧ್ಯದಲ್ಲಿ ಇರುತ್ತಾರೆ. ಅವರ ಕೈಗಳಿಗೆ ಸರಪಳಿ ಹಾಕಿ ಹೊರಗೆ ತರುತ್ತಾರೆ ಎಂಬ ಭಾವನೆ ಇರುತ್ತದೆ. ಆದರೆ ಇದಕ್ಕೆ ವ್ಯತಿರಿಕ್ತ ಎನ್ನುವಂತೆ ಧಾರವಾಡದ ಕೇಂದ್ರ ಕಾರಾಗೃಹದಲ್ಲಿನ ಕೈದಿಗಳ ಮನಃ ಪರಿವರ್ತನೆ ಮತ್ತು ಅವರಿಗೆ ಸನ್ನಡತೆಗೆ ಅವಕಾಶ ಮಾಡಿ ಕೊಡಲಾಗಿದ್ದು, ಕಾರಾಗೃಹದಲ್ಲಿನ 20ಕ್ಕೂ ಹೆಚ್ಚು ಕೈದಿಗಳಿಗೆ ಕೃಷಿ ಮಾಡಲು ಅವಕಾಶ ನೀಡಲಾಗಿದೆ. ಇವರೆಲ್ಲ ಸೇರಿ ಧಾರವಾಡ ಜೈಲಿನ ಒಳಗೆ ಮತ್ತು ಹೊರಗಡೆ ಇರುವ ಬಂಧೀಖಾನೆ ಇಲಾಖೆ ವ್ಯಾಪ್ತಿಯಲ್ಲಿನ ಭೂಮಿಯಲ್ಲಿ ಕೃಷಿಕರಾಗಿ ಕೆಲಸ ಮಾಡುತ್ತಿದ್ದಾರೆ.
ಈ ಕೈದಿಗಳು ಇದೀಗ 20 ಎಕರೆ ಭೂಮಿಯಲ್ಲಿ ಸೋಯಾ, ಅವರೆ, ಗೋವಿನಜೋಳ, ಬಿಳಿ ಜೋಳ ಬಿತ್ತನೆ ಮಾಡಿ ಫಸಲು ಸಜ್ಜುಗೊಳಿಸಿದ್ದಾರೆ. ಅಷ್ಟೇ ಅಲ್ಲ, ಜೈಲಿನ 4 ಎಕರೆ ಪ್ರದೇಶದಲ್ಲಿ ತಮ್ಮ ಊಟಕ್ಕೆ ಅಗತ್ಯವಿರುವ ತರಕಾರಿಗಳನ್ನು ತಾವೇ ಬೆಳೆಸುತ್ತಿದ್ದಾರೆ. ಅವರೆಕಾಯಿ, ಚವಳಿಕಾಯಿ, ಟೋಮ್ಯಾಟೋ, ಬದನೆಕಾಯಿ, ಬೆಂಡೇಕಾಯಿ, ಹೀರೇಕಾಯಿ, ಸೋರೆಕಾಯಿ, ತಪ್ಪಲು ಪಲ್ಯ, ಮೂಲಂಗಿ ಬೆಳೆದು ಎಲ್ಲಾ ಕೈದಿಗಳ ಹೊಟ್ಟೆಗೂ ಪೌಷ್ಟಿಕ ಆಹಾರ ಸೇರುವಂತೆ ಮಾಡುತ್ತಿದ್ದಾರೆ.
ಭೂಮಿ ತಾಯಿಯಾದ ಕಾರಾಗೃಹ: ಯಾವುದೋ ಕಾರಣಕ್ಕೆ ಕೆಟ್ಟ ಕೆಲಸ ಮಾಡಿ ಶಿಕ್ಷೆಗೆ ಒಳಗಾದ ಕೈದಿಗಳ ಮನಃ ಪರಿವರ್ತನೆಗೆ ಬಂಧೀಖಾನೆ ಇಲಾಖೆ ಅಕ್ಷರ ಕಲಿಕೆ, ಯೋಗ, ಧ್ಯಾನ, ಸದ್ವಿಚಾರ, ಮನಃ ಪರಿವರ್ತನೆ ಶಿಬಿರ, ಸಂಗೀತ ಕಾರ್ಯಕ್ರಮ, ಕಾನೂನು ಅರಿವು, ನಾಟಕಗಳು ಹೀಗೆ ಅನೇಕ ಕಾರ್ಯಕ್ರಮಗಳನ್ನು ನೀಡುತ್ತಿದೆ. ಆದರೆ, ಧಾರವಾಡ ಜೈಲಧಿಕಾರಿಗಳ ಪ್ರಯತ್ನ ಇಷ್ಟಕ್ಕೆ ನಿಂತಿಲ್ಲ. ಬದಲಿಗೆ ಅಪರಾಧಿಗಳನ್ನು ಅಪರಾಧ ಲೋಕದಿಂದ ಮತ್ತೆ ಸಹಜ ಸಮಾಜದತ್ತ ಕರೆತರಲು ವೇದಿಕೆಯಾಗಿದೆ. ಹೀಗಾಗಿ ಇಲ್ಲಿ ಕೃಷಿಗೆ ಹೆಚ್ಚು ಉತ್ತೇಜನ ನೀಡಲಾಗಿದೆ. ಹೂವು, ಹಣ್ಣು ಬೆಳೆಯುವ ಮರಗಳು, ತೋಟ, ಗದ್ದೆ ಎಲ್ಲವೂ ಇರುವುದರಿಂದ ಸದ್ಯಕ್ಕೆ ಧಾರವಾಡ ಕೇಂದ್ರ ಕಾರಾಗೃಹ ಭೂ ತಾಯಿಯಂತೆ ಕಂಗೊಳಿಸುತ್ತಿದೆ.
ಕೈದಿಗಳಿಗೆ ಕೃಷಿ ಚಟುವಟಿಕೆಗಳ ಮೂಲಕ ಮನಃ ಪರಿವರ್ತನೆ ಮಾಡುವುದು ಸುಲಭ. ಬೇರೆ ಬೇರೆ ಜಿಲ್ಲೆಗಳಿಂದ ಬಂದ ರೈತ ಕೈದಿಗಳು ಈ ಭಾಗದ ವಾತಾವರಣಕ್ಕೆ ತಕ್ಕಂತೆ ಕೃಷಿ ಮಾಡುವುದರಿಂದ ಅವರ ಕೃಷಿ ಜ್ಞಾನವೂ ಹೆಚ್ಚುತ್ತದೆ. ಇನ್ನೊಂದೆಡೆ ಕೃಷಿಯೊಂದಿಗಿನ ಅವರ ನಂಟು ಅವರ ಮನಸ್ಸಿಗೆ ನೆಮ್ಮದಿ ನೀಡುತ್ತದೆ. ಹೀಗಾಗಿ ಅವರಿಗೆ ಕೃಷಿ ಮಾಡಲು ಅವಕಾಶ ನೀಡಲಾಗಿದೆ ಎನ್ನುತ್ತಾರೆ ಧಾರವಾಡ ಕೇಂದ್ರ ಕಾರಾಗೃಹ ಅಧೀಕ್ಷಕಿ ಡಾ.ಅನೀತಾ.
ಕೈದಿಗಳ ಕೃಷಿ ಹೇಗೆ?
ಧಾರವಾಡ ಕಾರಾಗೃಹದ್ದು ಒಟ್ಟು 54 ಎಕರೆ ಪ್ರದೇಶವಿದೆ. ಸದ್ಯಕ್ಕೆ ಜೈಲಿನಲ್ಲಿ 618 ಕೈದಿಗಳು ಇದ್ದಾರೆ. ಈ ಪೈಕಿ ಕೃಷಿ ಕುಟುಂಬಗಳಿಂದ ಬಂದವರು 50ಕ್ಕೂ ಹೆಚ್ಚು ಕೈದಿಗಳಿದ್ದಾರೆ. ಇವರೆಲ್ಲರೂ ಜೈಲಿನಲ್ಲಿ ಸನ್ನಡತೆ ಕೈದಿಗಳ ಪಟ್ಟಿಯಲ್ಲಿದ್ದಾರೆ. 20 ಕೈದಿಗಳ ಪೈಕಿ 12 ಕೈದಿ ರೈತರು ಪ್ರತಿದಿನ ಜೈಲು ಆವರಣದಿಂದ ಹೊರಬಂದು ನಿಷ್ಠೆಯಿಂದ ಕೃಷಿ ಕಾಯಕ ಮಾಡುತ್ತಿದ್ದಾರೆ. ಇನ್ನುಳಿದ ಏಳೆಂಟು ಜನರು ಜೈಲಿನ ಒಳ ಆವರಣದಲ್ಲಿಯೇ ತೋಟಗಾರಿಕೆಯಲ್ಲಿ ತೊಡಗಿಕೊಂಡಿದ್ದಾರೆ. ಇವರೆಲ್ಲರೂ ಜೈಲಿನಿಂದ ಬಿಟ್ಟರೆ ಓಡಿ ಹೋಗಬಹುದು ಎನ್ನುವ ಅನುಮಾನ ಎಲ್ಲರಿಗೂ ಇದೆ. ಆದರೆ ಅಂತಹ ಯಾವುದೇ ಮನಸ್ಥಿತಿ ಕೈದಿಗಳಲ್ಲಿ ಇಲ್ಲ. ಅವರೆಲ್ಲ ನಂಬಿಕೆಗೆ ಅರ್ಹರೆಂಬುದನ್ನು ಮನದಟ್ಟು ಮಾಡಿಕೊಂಡೇ ಜೈಲು ಅಧಿಕಾರಿಗಳು ಅವರಿಗೆ ಕೃಷಿ ಮಾಡುವ ಅವಕಾಶ ನೀಡಿದ್ದಾರೆ.
ಬೆಳೆದ ಹೂವು, ಮರೆತ ನೋವು
ಧಾರವಾಡ ಕೇಂದ್ರ ಕಾರಾಗೃಹದ ಕೈದಿಗಳಿಂದ ಇದೇ ಮೊದಲ ಬಾರಿಗೆ ದೇವರ ಪೂಜೆಗೆಂದು ಹೂ ಬೆಳೆಸುವ ಕಾಯಕವನ್ನು ಮಾಡಿಸಲಾಗುತ್ತಿದೆ. ಇಲ್ಲಿನ ಮಹಿಳಾ ಕೈದಿಗಳು ಉಲನ್‌ನಿಂದ ಚಿಕ್ಕಮಕ್ಕಳ ಸ್ವೇಟರ್, ಕ್ರಾಪ್, ಕಾಲುಚೀಲ ಹೆಣಿಕೆಯಿಂದ ಸಿದ್ಧಗೊಳಿಸಿದ್ದಾರೆ. ಕೈದಿಗಳಿಂದ ಉತ್ಪಾದನೆಯಾದ ಕೃಷಿ ಮತ್ತು ತೋಟಗಾರಿಕೆ ವಸ್ತುಗಳನ್ನು ಮಾರಾಟ ಮಾಡಲು ಶೀಘ್ರವೇ ಮಳಿಗೆಯೊಂದನ್ನು ಇಲ್ಲಿನ ಜಿಲ್ಲಾ ಪೊಲೀಸ್ ಹೆಡ್‌ಕಾÌಟರ್ನಲ್ಲಿ ಆರಂಭಿಸಲಾಗುತ್ತಿದೆ.
ಕೈದಿಗಳು ಜೈಲಿನಲ್ಲಿದ್ದಾರೆ ಎಂದ ಮಾತ್ರಕ್ಕೆ ಅವರು ಕೆಟ್ಟವರಲ್ಲ. ಅವರಿಗೆ ಕೃಷಿ, ತೋಟಗಾರಿಕೆ, ಹೆಣಿಕೆ ಉತ್ಪನ್ನಗಳ ತಯಾರಿಕೆಗೆ ಹೆಚ್ಚಿನ ಪ್ರೋತ್ಸಾಹ ನೀಡುತ್ತಿದ್ದೇವೆ. ಧಾರವಾಡದಲ್ಲಿನ ಕೈದಿಗಳಲ್ಲಿ ಹೆಚ್ಚಿನವರು ಸಕಾರಾತ್ಮಕ ಮನೋಧರ್ಮ ಬೆಳೆಸಿಕೊಳ್ಳುತ್ತಿದ್ದು, ಇದಕ್ಕೆ ಕೃಷಿಯೇ ಪ್ರೇರಣೆ ಎಂದರೆ ತಪ್ಪಾಗಲಾರದು.
– ಡಾ.ಆರ್.ಅನೀತಾ, ಧಾರವಾಡ ಕೇಂದ್ರ ಕಾರಾಗೃಹದ ಅಧೀಕ್ಷಕಿ
ನಾನು ಕೊಲೆ ಮಾಡಿ ಅಪರಾಧಿಯಾದೆ. ಆದರೆ ಇಂದು ಕೃಷಿ ಮಾಡಿ ನನ್ನ ಪಾಪ ತೊಳೆದುಕೊಳ್ಳುತ್ತಿದ್ದೇನೆ. ಈ ಹೊಲ ನನ್ನದೇ ಹೊಲ ಎನಿಸುತ್ತಿದೆ. ಇಲ್ಲಿನ ಕೃಷಿ ಉತ್ಪನ್ನದಿಂದ ಸಿದ್ಧಗೊಳ್ಳುವ ಅಡುಗೆ ನನ್ನ ಸಹಚರರ ಹಸಿವು ಇಂಗಿಸುತ್ತಿದೆ ಎನ್ನುವ ಧನ್ಯಭಾವ ನನ್ನಲ್ಲಿದೆ.
– ಕಲ್ಮೇಶಪ್ಪ, ಹಾವೇರಿ ಜಿಲ್ಲೆ (ಹೆಸರು ಬದಲಿಸಿದೆ)
– ಬಸವರಾಜ ಹೊಂಗಲ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bhadravathi:ಬಾಯ್ಲರ್ ಸ್ಫೋ*ಟದಿಂದ ರೈಸ್‌ಮಿಲ್ ಕುಸಿತ:7 ಮಂದಿಗೆ ಗಾಯ
Sringeri; ಅಸ್ಸಾಂ ಕಾರ್ಮಿಕನಿಂದ ಅಪ್ರಾಪ್ತ ಬಾಲಕಿ ಮೇಲೆ ಲೈಂಗಿ*ಕ ದೌರ್ಜನ್ಯ
Laxmi Hebbalkar; ಅವಾಚ್ಯ ಪದ ಬಳಕೆ ಕೇಸ್: ಸಿ.ಟಿ.ರವಿ ಬಂಧನ
Belagavi Session ಉದ್ವಿಗ್ನ:ಹೆಬ್ಬಾಳ್ಕರ್ ವಿರುದ್ದ ಅವಾಚ್ಯ ಪದ ಬಳಸಿದರೆ ಸಿ.ಟಿ.ರವಿ?
Bidar: ಕಾರಂಜಾ ಸಂತ್ರಸ್ತರ ಸಮಸ್ಯೆ ಅಧ್ಯಯನಕ್ಕೆ ತಾಂತ್ರಿಕ ಸಮಿತಿ ರಚನೆ: ಸಿಎಂ ಸಿದ್ದರಾಮಯ್ಯ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.