ಬಿಜೆಪಿ ಶಾಸಕರ ವಿರುದ್ಧ ಪಕ್ಷದಲ್ಲೇ ಅಪಸ್ವರ; ನಾಲ್ವರು ಶಾಸಕರ ಬಗ್ಗೆ ಪಕ್ಷದೊಳಗೆ ಭಿನ್ನಮತ
ಹಾಲಿ ಶಾಸಕರಿಗೇ ಮತ್ತೆ ಟಿಕೆಟ್ ನೀಡದಂತೆ ಎಚ್ಚರಿಕೆ
Team Udayavani, Apr 3, 2023, 6:15 AM IST
ಹುಬ್ಬಳ್ಳಿ: ವಿಧಾನಸಭೆ ಚುನಾವಣೆಗೆ ದಿನಗಣನೆ ಆರಂಭಗೊಂಡಿರುವ ನಡುವೆಯೇ ಬಿಜೆಪಿಯ ನಾಲ್ವರು ಶಾಸಕರ ಬಗ್ಗೆ ಪಕ್ಷದೊಳಗೆ ಭಿನ್ನಮತ ಭುಗಿಲೆದ್ದಿದೆ.
ಶಿವಮೊಗ್ಗ ನಗರ ಶಾಸಕ ಕೆ.ಎಸ್. ಈಶ್ವರಪ್ಪ, ಕಲಬುರಗಿ ಜಿಲ್ಲೆಯ ಕಲಬುರಗಿ ಗ್ರಾಮೀಣ ಮೀಸಲು ಕ್ಷೇತ್ರದ ಶಾಸಕ ಬಸವರಾಜ ಮತ್ತಿಮಡು, ಧಾರವಾಡ ಗ್ರಾಮೀಣ ಕ್ಷೇತ್ರದ ಶಾಸಕ ಅಮೃತ್ ದೇಸಾಯಿ ಹಾಗೂ ಗದಗ ಜಿಲ್ಲೆಯ ಶಿರಹಟ್ಟಿ ಶಾಸಕ ರಾಮಣ್ಣ ಲಮಾಣಿ ವಿರುದ್ಧ ತೊಡೆತಟ್ಟಿರುವ ಈ ಕ್ಷೇತ್ರದ ಇತರ ಟಿಕೆಟ್ ಆಕಾಂಕ್ಷಿಗಳು, ಹಾಲಿ ಶಾಸಕರಿಗೇ ಮತ್ತೆ ಟಿಕೆಟ್ ನೀಡಿದ್ದಲ್ಲಿ ಬಂಡಾಯ/ಪಕ್ಷೇತರ ಅಭ್ಯರ್ಥಿಗಳಾಗಿ ಕಣಕ್ಕಿಳಿಯುವುದಾಗಿ ಎಚ್ಚರಿಕೆ ನೀಡಿದರು.
ಶಿವಮೊಗ್ಗದಲ್ಲಿ ಈಶ್ವರಪ್ಪ ಬದಲು ಈ ಬಾರಿ ತಮಗೇ ಟಿಕೆಟ್ ನೀಡಬೇಕೆಂದು ಪಟ್ಟುಹಿಡಿದಿರುವ ವಿಧಾನಪರಿಷತ್ ಸದಸ್ಯ ಆಯನೂರು ಮಂಜುನಾಥ, ಸೋಮವಾರ ಪತ್ರಿಕಾಗೋಷ್ಠಿ ಕರೆದಿರುವುದು ಕುತೂಹಲಕ್ಕೆ ಕಾರಣವಾಗಿದೆ. ಕಾಂಗ್ರೆಸ್ ಸೇರಿ ಅಭ್ಯರ್ಥಿಯಾಗುತ್ತಾರೆ ಎನ್ನುವ ಮಾತುಗಳ ನಡುವೆಯೇ ಕಾಂಗ್ರೆಸ್‌ನ ಹತ್ತು ಮಂದಿ ಟಿಕೆಟ್ ಆಕಾಂಕ್ಷಿಗಳು ಆಯನೂರು ಪಕ್ಷ ಸೇರ್ಪಡೆಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಬಿಜೆಪಿ ಅಥವಾ ಕಾಂಗ್ರೆಸ್ ಟಿಕೆಟ್ ಸಿಗದಿದ್ದರೆ ವಿಧಾನ ಪರಿಷತ್ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ಸಾಧ್ಯತೆಗಳಿವೆ ಎನ್ನಲಾಗಿದೆ.
ಕಲಬುರಗಿಯಲ್ಲಿ ರವಿವಾರ “ಸ್ವಾಭಿಮಾನಿ’ ಸಮಾವೇಶ ನಡೆಸಿದ ಮತ್ತಿಮಡು ವಿರೋಧಿಗಳು, ಬಿಜೆಪಿ ಬಾವುಟ ಹಿಡಿದು ಮತ್ತಿಮಡು ಹಟಾವೋ, ಕಲಬುರಗಿ ಗ್ರಾಮೀಣ ಬಿಜೆಪಿ ಬಚಾವೋ’ ಎನ್ನುವ ಘೋಷಣೆ ಕೂಗಿದರು. ಶಾಸಕರು ಲಿಂಗಾಯತ ವಿರೋಧಿ ಧೋರಣೆ ಅನುಸರಿಸುತ್ತಿದ್ದಾರೆ. ಪಕ್ಷದ ನಿಷ್ಠಾವಂತ ಕಾರ್ಯಕರ್ತರನ್ನು ಮೂಲೆಗುಂಪು ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಗದಗ ಜಿಲ್ಲೆಯ ಲಕ್ಷ್ಮೇಶ್ವರದಲ್ಲಿ ನಡೆದ ಶಿರಹಟ್ಟಿ ಕ್ಷೇತ್ರದ ಬಿಜೆಪಿ ಮುಖಂಡರು-ಕಾರ್ಯಕರ್ತರ ಸಮಾವೇಶದಲ್ಲಿ ಶಾಸಕ ರಾಮಣ್ಣ ಲಮಾಣಿಗೆ ಈ ಬಾರಿಯೂ ಟಿಕೆಟ್ ಕೊಟ್ಟರೆ ಅವರನ್ನು ಸೋಲಿಸಲಾಗುವುದು ಎಂದು ಮಾಜಿ ಶಾಸಕ ಜಿ.ಎಂ ಮಹಾಂತ ಶೆಟ್ಟರ ಪ್ರಕಟಿಸಿದರು.
ಶಿರಹಟ್ಟಿ ಮತಕ್ಷೇತ್ರದ ಜನತೆ ಮೊದಲಿನಿಂದಲೂ ಬಿಜೆಪಿ ಪರವಾಗಿದ್ದಾರೆ. ಕಾಂಗ್ರೆಸ್‌ನಲ್ಲಿಯೂ ಬಂಡಾಯ ಹೊಗೆಯಾಡುತ್ತಿದ್ದು, ಒಂದು ಗುಂಪು ನಮ್ಮ ಸಂಪರ್ಕದಲ್ಲಿದೆ. ಮೋದಿ ಅವರ ಶ್ರೇಷ್ಠವಾದ ಆಡಳಿತದಿಂದ ಪಕ್ಷದ ಪರ ಅಲೆ ಜೋರಾಗಿದ್ದರೂ ಹಾಲಿ ಶಾಸಕರ ಬಗ್ಗೆ ಸಾರ್ವಜನಿಕ ವಲಯದಲ್ಲಿ ವಿರೋಧ ಕಾಣಿಸಿಕೊಂಡಿದೆ. ಆದಾಗ್ಯೂ ಅವರಿಗೇ ಟಿಕೆಟ್ ಕೊಟ್ಟರೆ ಪಕ್ಷದ ಇತರೆ ಆಕಾಂಕ್ಷಿಗಳ ಪೈಕಿ ಸರ್ವಸಮ್ಮತ ಅಭ್ಯರ್ಥಿ ನಿಲ್ಲಿಸಿ ಗೆಲ್ಲಿಸುತ್ತೇವೆ ಎಂದರು.
ಇನ್ನೊಂದೆಡೆ ಧಾರವಾಡ ಗ್ರಾಮೀಣ ಕ್ಷೇತ್ರದಲ್ಲೂ ಶಾಸಕ ಅಮೃತ ದೇಸಾಯಿ ವಿರುದ್ಧ ಇತರ ಆಕಾಂಕ್ಷಿಗಳು ಕೈಜೋಡಿಸಿದ್ದು, ಈ ಬಾರಿ ತಮ್ಮ ಪೈಕಿ ಒಬ್ಬರಿಗೆ ಟಿಕೆಟ್ ನೀಡಬೇಕೆಂದು ಹೈಕಮಾಂಡ್‌ಗೆ ಆಗ್ರಹಿಸಿದ್ದಾರೆ. ಶನಿವಾರ ರಾತ್ರಿ ಮಾಜಿ ಶಾಸಕಿ ಸೀಮಾ ಮಸೂತಿ ನಿವಾಸದಲ್ಲಿ ಸಭೆ ನಡೆಸಿ, ದೇಸಾಯಿಗೆ ಟಿಕೆಟ್ ಕೊಟ್ಟರೆ ಮುಂದಿನ ನಿರ್ಣಯ ಪ್ರಕಟಿಸಬೇಕಾದೀತು ಎಂದು ಎಚ್ಚರಿಸಿದ್ದಾರೆ.
ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ಕ್ಷೇತ್ರದಲ್ಲೂ ಸಚಿವ ಶ್ರೀರಾಮುಲು ತೆರವುಮಾಡಿದ ಸ್ಥಾನಕ್ಕೆ ಏಕಪಕ್ಷೀಯವಾಗಿ ಮಾಜಿ ಶಾಸಕ ತಿಪ್ಪೇಸ್ವಾಮಿ ಅವರಿಗೆ ಟಿಕೆಟ್ ನೀಡುವುದಕ್ಕೆ ಆಕ್ಷೇಪ ವ್ಯಕ್ತವಾಗಿದೆ. ಕೊಂಡ್ಲಹಳ್ಳಿಯಲ್ಲಿ ನಡೆದ ಪಕ್ಷದ ಕಾರ್ಯಕರ್ತರ ಸಮಾಲೋಚನ ಸಭೆಯಲ್ಲಿ ಮಾತನಾಡಿರುವ ಬಿಜೆಪಿ ಮುಖಂಡ ಎಚ್.ಟಿ. ನಾಗಿರೆಡ್ಡಿ ಅವರು, ಮೂವರು ಸ್ಥಳೀಯ ಆಕಾಂಕ್ಷಿಗಳ ಬದಲಿಗೆ ತಿಪ್ಪೇಸ್ವಾಮಿಗೆ ಟಿಕೆಟ್ ನೀಡಿದರೆ ಬಂಡಾಯ ಅಭ್ಯರ್ಥಿ ನಿಲ್ಲಿಸುವುದು ಖಚಿತ ಎಂದು ಘೋಷಿಸಿದ್ದಾರೆ.
ಯಾರ್ಯಾರ ವಿರುದ್ಧ ಅಸಹನೆ?
ಶಿವಮೊಗ್ಗ ನಗರ ಶಾಸಕ ಕೆ.ಎಸ್. ಈಶ್ವರಪ್ಪ
ಕಲಬುರಗಿ ಗ್ರಾ.(ಮೀ) ಶಾಸಕ ಬಸವರಾಜ ಮತ್ತಿಮಡು
ಧಾರವಾಡ ಗ್ರಾ. ಶಾಸಕ ಅಮೃತ್ ದೇಸಾಯಿ
ಶಿರಹಟ್ಟಿ ಶಾಸಕ ರಾಮಣ್ಣ ಲಮಾಣಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
By Election: ಸಿದ್ದರಾಮಯ್ಯ ಜೈಲಿಗೆ ಹೋಗುವುದು ನಿಶ್ಚಿತ: ಬಿ.ಎಸ್.ಯಡಿಯೂರಪ್ಪ ಭವಿಷ್ಯ
Sirsi: ಗವಿನಗುಡ್ಡ ಸುತ್ತ ಕಬ್ಬು, ಭತ್ತದ ಗದ್ದೆಗಳಿಗೆ ಕಾಡಾನೆ ದಾಳಿ… ಬೆಳೆ ನಾಶ
Muddebihal: ವಕ್ಫ್ ಆಸ್ತಿ ವಿವಾದ: ಸಿಎಂಗೆ ಬುದ್ದಿಭ್ರಮಣೆ ಆಗಿದೆ… ನಡಹಳ್ಳಿ ವಾಗ್ದಾಳಿ
Waqf issue: ಉಪಚುನಾವಣೆಯಲ್ಲಿ ನಾಟಕ ಮಾಡಲು ಜೆಪಿಸಿ ದುರ್ಬಳಕೆ: ಎಚ್.ಕೆ.ಪಾಟೀಲ್
Hubli: ಜೆಪಿಸಿ ಬಗ್ಗೆ ಆರೋಪ ಮಾಡುವವರಿಗೆ ಸಂವಿಧಾನದ ಬಗ್ಗೆ ಗೌರವ ಇಲ್ಲ: ಬೊಮ್ಮಾಯಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.