ರಾಜಕಾಲುವೆ ಗಯಾ-ಭಂಗೀಲೈನ್ ಮಾಯ
ಅವಳಿನಗರದಲ್ಲಿ ರಾಜಾರೋಷವಾಗಿ ಕಾಲುವೆಗಳ ಅತಿಕ್ರಮಣ ; ಗಟಾರಗಳ ಅಳತೆಯೇ ಗೌಣ
Team Udayavani, Oct 9, 2022, 12:50 PM IST
ಧಾರವಾಡ: ಮಳೆ ಬಂದಾಗ ಉಕ್ಕಿ ಹರಿಯುವ ಗಲೀಜು ನೀರು, ನೀರಿನಲ್ಲಿ ತೇಲಿ ಬರುವ ಪ್ಲಾಸ್ಟಿಕ್‌ನ ಕೊಳಕು ಸಾಮ್ರಾಜ್ಯ, ಅಲ್ಲಲ್ಲಿ ಒಳಚರಂಡಿಗಳನ್ನೇ ಬಂದ್ ಮಾಡುವ ಘನತ್ಯಾಜ್ಯ, ದೊಡ್ಡ ಮಳೆಗೆ ರಸ್ತೆ ಏರುವ ಮಳೆನೀರು. ಒಟ್ಟಲ್ಲಿ ಕಾಲುವೆ ಸೇರಬೇಕಾದ ನೀರು ರಸ್ತೆ ಮೇಲೆ ಏರಿ ಹರಿಯುತ್ತಿದ್ದರೆ, ಅತ್ತ ರಸ್ತೆಯಿಂದ ಜರಿಯಲು ಬೇಕಾದ ರಾಜಕಾಲುವೆಗಳೇ ಮಂಗಮಾಯವಾಗಿವೆ.
ಹೌದು, ಅವಳಿನಗರದಲ್ಲಿ ಬ್ರಿಟಿಷರ ಕಾಲದಿಂದಲೂ ಇದ್ದ ಭಂಗೀ ಲೈನ್‌ಗಳೇ ಇಂದು ನುಂಗಣ್ಣರ ಪಾಲಾಗಿವೆ. ಅವು ಕೊಳಚೆ ನೀರು ಹರಿಯಲು, ಮನೆಯ ಮಲವಿಸರ್ಜನೆ ಸೇರಿದಂತೆ ಎಲ್ಲಾ ತ್ಯಾಜ್ಯವೂ ಹರಿದು ಹೋಗಲು ಇರುವ ಸ್ಥಳವಾಗಿತ್ತು. ಆದರೆ ಅವೆಲ್ಲವೂ ನುಂಗಣ್ಣರ ಪಾಲಾಗಿದ್ದು, ಬೆಂಗಳೂರಿಗೆ ಬಂದ ಸ್ಥಿತಿ ಅವಳಿನಗರಕ್ಕೂ ಮುಂದೊಂದು ದಿನ ಕಾದಿದೆ. ಈಗಲೇ ಎಚ್ಚೆತ್ತುಕೊಳ್ಳಬೇಕಿದೆ. ಒಡ್ಡಿನ ಕೆರೆ ಕಾಲುವೆ ಇಂದು ರಸ್ತೆಯಾಗಿದೆ, ಟೋಲ್‌ನಾಕಾ ಬಳಿಯ ಕಾಲುವೆ ಇಂದು ಚಿಕ್ಕ ಗಟಾರ ಸ್ವರೂಪ ಪಡೆದುಕೊಂಡಿದೆ. ಹೀಗಾಗಿ ಕೊಳಚೆ ನೀರು ಹರಿಯಲು ಮಾತ್ರ ಸಾಧ್ಯವಾಗುವ ಈ ಕಾಲುವೆಗಳಿಗೆ ಮಳೆಗಾಲದಲ್ಲಿ ಮಳೆ ನೀರು ಸೇರುತ್ತಿದ್ದಂತೆಯೇ ಅವಾಂತರಗಳು ಸೃಷ್ಟಿಯಾಗುತ್ತಿವೆ. ಭಂಗೀಲೈನ್‌ಗಳಲ್ಲಿ ಮನೆಗಳು ನಿರ್ಮಾಣವಾಗಿದ್ದು, ಅವು ರಾಜಕಾಲುವೆಗಳಾಗಬೇಕಿದೆ.
ಅಳತೆ ಎಷ್ಟು?
ಮಳೆಯ ನೀರು ಹರಿದುಹೋಗಲು ಕಂದಾಯ ಇಲಾಖೆ ರೂಪಿಸುವ ನಕ್ಷೆಗಳ ಅನ್ವಯ ನೀರಿನ ಗಾತ್ರದ ಆಧಾರದ ಮೇಲೆ ಕಾಲುವೆ, ರಾಜಕಾಲುವೆ, ಹಳ್ಳ, ಹೊಳೆ ಎಂದೆಲ್ಲ ವಿಭಾಗಿಸಿ ಅವುಗಳಿಗೆ ಜಾಗವನ್ನು ನಿಗದಿಪಡಿಸಲಾಗಿದೆ. ಅದೂ ಅಲ್ಲದೇ ಈ ಜಾಗದ ಪ್ರಮಾಣವೂ ಒಂದು ಕಡೆಯಿಂದ ಮತ್ತೂಂದು ಕಡೆಗೆ ವ್ಯತ್ಯಾಸವಾಗಿಯೂ ಇದೆ. ಇದೇ ಕಾರಣವನ್ನು ಇಟ್ಟುಕೊಂಡು ಅತಿಕ್ರಮಣಕಾರರು ಕಾಲುವೆಗಳನ್ನು ಎಲ್ಲೆಂದರಲ್ಲಿ ಅತಿಕ್ರಮಿಸಿಕೊಂಡಿದ್ದಾರೆ. ಆಯಕಟ್ಟಿನ ಪ್ರದೇಶದಲ್ಲಿ ಕಾಲುವೆಗಳ ವಿಸ್ತಾರ ಕೊಂಚ ಸಣ್ಣದಾಗಿದ್ದರೆ ಅದೇ ಅಳತೆಯನ್ನೇ ಮುಂದಿನವರು ನಿರ್ವಹಿಸಿ ಅತಿಕ್ರಮಿಸಿಕೊಂಡಿದ್ದಾರೆ. ಜಿಲ್ಲೆಯ ಪ್ರಮುಖ ನಗರ ಪ್ರದೇಶ ಎಂದರೆ ಹುಬ್ಬಳ್ಳಿ-ಧಾರವಾಡ ಅವಳಿ ನಗರ. ಎರಡೂ ನಗರಗಳನ್ನು ಸೇರಿಕೊಂಡರೆ 84 ಕಿಮೀನಷ್ಟು ಉದ್ದದ ರಾಜಕಾಲುವೆಗಳ ಜಾಗವಿದೆ. ಇನ್ನು ಸಣ್ಣ ಗಟಾರಗಳ ಉದ್ದವೂ 260 ಕಿಮೀಯಷ್ಟು ಎಂದು ಅಂದಾಜು ಮಾಡಲಾಗಿದೆ.
ಡಿಪೋ ಗಟಾರ
ಧಾರವಾಡದ ಅರ್ಧಕ್ಕಿಂತ ಹೆಚ್ಚಿನ ಕೊಳಚೆ ನೀರು ಹರಿದು ಹೋಗುವ ಗಟಾರ ಇದಾಗಿದ್ದು, ಧಾರವಾಡದಿಂದ ಪೂರ್ವಭಾಗದ ಹಳ್ಳಕ್ಕೆ ಸೇರುತ್ತದೆ. ಗೋವನಕೊಪ್ಪ, ತಲವಾಯಿ, ಹೆಬ್ಟಾಳ ಮೂಲಕ ತುಪರಿ ಹಳ್ಳದ ಮೂಲಕ ಬೆಣ್ಣೆಹಳ್ಳ ಸೇರುವ ಈ ಹೊಲಸು ನೀರಿನಲ್ಲೇ ಅತೀ ಹೆಚ್ಚು ತರಕಾರಿ ಬೆಳೆಯಲಾಗುತ್ತಿದೆ. 18.5 ಕಿಮೀ ಉದ್ದ ಹರಿಯುವ ಕಾಲುವೆಯಲ್ಲಿ ಒಂದು ಕಾಲಕ್ಕೆ ಶುದ್ಧ ನೀರು ಹರಿಯುತ್ತಿತ್ತು. ಇದು ಕೆಂಪಗೇರಿ ಕೆರೆಯ ಕೋಡಿಯಿಂದ ಉಂಟಾಗಿದ್ದ ಹಳ್ಳವಾಗಿತ್ತು. ಆದರೆ ಕೆಂಪಗೇರಿ ಅಥವಾ ಹಾಲಗೇರಿ ಎಂಬ ಕೆರೆಯೇ ಇಂದು ಸೂಪರ್ ಮಾರುಕಟ್ಟೆಯಾಗಿದ್ದು, ಇದರ ಕೋಡಿ ಹಳ್ಳ ಡಿಪೋ ಸರ್ಕಲ್ ಮೂಲಕ ಹರಿದು ಚರಂಡಿ ಹಳ್ಳವಾಗಿ ಮಾರ್ಪಟ್ಟಿದೆ. ಇದು ಧಾರವಾಡದ ರಾಜಕಾಲುವೆಯೇ ಆಗಿದ್ದು, ಕನಿಷ್ಟ 25 ಅಡಿ ಅಗಲವಿರಬೇಕು. ಆದರೆ ಇದು 14 ಅಡಿಯಷ್ಟು ಮಾತ್ರ ಅಗಲವಿದ್ದು, ಈಗಾಗಲೇ ಅದಕ್ಕೂ ಸಿಮೆಂಟ್ ಗೋಡೆ ನಿರ್ಮಿಸಿಯಾಗಿದೆ. 2019ರ ದೈತ್ಯ ಮಳೆಯೊಂದಕ್ಕೆ ಈ ಕಾಲುವೆ ತುಂಬಿ ನೀರು ಮೇಲೆ ಹರಿದು ಸುತ್ತಲಿನ ಎಂ.ಆರ್.ನಗರ, ಮುಜಾಫರ್ ಕಾಲೋನಿ ಸೇರಿದಂತೆ ಅನೇಕ ಕಡೆಗಳಲ್ಲಿ ಕೊಳಚೆ ನೀರು ಮನೆಗಳಿಗೆ ನುಗ್ಗಿತ್ತು.
ಒಂದಕ್ಕೊಂದು ಹೊಂದಾಣಿಕೆಯೇ ಇಲ್ಲ ಅವಳಿನಗರ ಸ್ಮಾರ್ಟ್ ಆಗಿ ಕಾಣಲು ಅಲ್ಲಲ್ಲಿ ಸಣ್ಣ ಕಾಲುವೆಗಳನ್ನು ಕೊಳಚೆ ನೀರು ಹರಿಯಲು ನಿರ್ಮಿಸಲಾಗುತ್ತಿದೆ. ಆದರೆ ಇಲ್ಲಿ ಸುರಿಯುವ ಮಳೆಯ ಪ್ರಮಾಣಕ್ಕೂ ಹರಿಯುವ ನೀರಿಗೂ ಮತ್ತು ಈ ಕಾಲುವೆಗಳಿಗೂ ಹೊಂದಾಣಿಕೆಯೇ ಆಗುತ್ತಿಲ್ಲ. ಧೋ ಎಂದು ಮಳೆ ಸುರಿದರೆ ಮತ್ತೆ ಕೊಳಚೆ ನೀರು ರಸ್ತೆ ಏರುವುದು ಪಕ್ಕಾ. ಬಿಆರ್ ಟಿಎಸ್ ರಸ್ತೆ ನಿರ್ಮಾಣ ಸಂದರ್ಭದಲ್ಲೂ ಕಾಲುವೆಗಳ ಅತಿಕ್ರಮಣ ತೆರವಾಗಲಿಲ್ಲ. ಹೀಗಾಗಿಯೇ ಇಂದು ಟೋಲ್‌ನಾಕಾ, ದೈವಜ್ಞ ಕಲ್ಯಾಣ ಮಂಟಪ ಹತ್ತಿರ ಮಳೆಯ ನೀರು ರಸ್ತೆಗೆ ಏರುತ್ತಿದೆ. ಇನ್ನು ಶಿವಗಿರಿ ಕೆರೆಯ ಕೋಡಿಯಿಂದ ಉಂಟಾದ ದೊಡ್ಡ ಕಾಲುವೆ 20 ಅಡಿ ಅಗಲವಿತ್ತು. ಒಡ್ಡಿನ ಕೆರೆ ಎಂದೇ ಕರೆಯಲಾಗುತ್ತಿದ್ದ ಇದನ್ನು ನಾಲ್ಕು ವರ್ಷಗಳ ಕೆಳಗೆ ಮುಚ್ಚಿ ರಸ್ತೆ ಮಾಡಲಾಗಿದೆ.
ಕೋಳಿಕೆರೆ ಎಂಬ ತ್ಯಾಜ್ಯಕೋಟೆ
ಇನ್ನುಳಿದಂತೆ ಧಾರವಾಡದ ದಕ್ಷಿಣ ಮತ್ತು ಪಶ್ಚಿಮ ಭಾಗದ ಅತೀ ಹೆಚ್ಚು ಕೊಳಚೆ ನೀರು ಸೇರುವುದು ಕೋಳಿಕೆರೆಗೆ. ಒಂದು ಕಾಲದಲ್ಲಿ ಶುದ್ಧ ನೀರು ಸಂಗ್ರಹಿಸಿಕೊಂಡಿದ್ದ ಕೋಳಿಕೆರೆಯಲ್ಲಿ ಇದೀಗ ಬರೀ ತ್ಯಾಜ್ಯದ ನೀರೇ ತುಂಬಿಕೊಂಡಿದೆ. ಈ ಕೆರೆಯನ್ನು ಅಭಿವೃದ್ಧಿಪಡಿಸಲು 3.7 ಕೋಟಿ ರೂ. ಕ್ರಿಯಾಯೋಜನೆ ರೂಪಿಸಿ, ಹಣವೂ ಬಿಡುಗಡೆಯಾಗಿ ಒಂದಿಷ್ಟು ಕಾಮಗಾರಿಗಳನ್ನು ಮಾಡಲಾಗಿತ್ತು. ಆದರೆ ಅದು ಕೂಡ ಅರ್ಧಕ್ಕೆ ನಿಂತು ಹೋಯಿತು. ಧಾರವಾಡ ಗ್ರಾಮೀಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಈ ಕೆರೆ ಮೇಲ್ದರ್ಜೆಗೆ ಏರಿಸಿ ಜನಸ್ನೇಹಿ ವಾತಾವರಣ ನಿರ್ಮಿಸಬೇಕು ಎನ್ನುವ ಕನಸು ಹಾಗೆಯೇ ಉಳಿದಿದೆ. ಕೊಳಚೆ ನೀರು ಈ ಕೆರೆಯನ್ನು ಬೈಪಾಸ್ ಮಾಡಿ ದಾಟಿ ಹೊಗಲು ಪಕ್ಕದಲ್ಲಿಯೇ ಮತ್ತೂಂದು ಚರಂಡಿ ಕೊರೆದು ಕಟ್ಟಲಾಗಿದೆ. ಆದರೂ ಮಳೆಗಾಲದಲ್ಲಿ ಅವೆಲ್ಲವೂ ಕಟ್ಟಿಕೊಂಡು ಚರಂಡಿ ನೀರು ಮೇಲಕ್ಕೆ ಏರಿ ಕೆರೆಯಲ್ಲಿ ಸೇರಿಕೊಳ್ಳುತ್ತಲೇ ಇದೆ.
ಹುಬ್ಬಳ್ಳಿಯಲ್ಲಿ ಅತಿಕ್ರಮಣ
ಉಣಕಲ್ ಕೆರೆ ಕೋಡಿಯಿಂದ ಹಿಡಿದು ಗಬ್ಬೂರು ಕ್ರಾಸ್ ಸಮೀಪದ ಮೂಲಕ ಗಿರಿಯಾಲ ಗ್ರಾಮದ ಬಳಿ ಸಾಗುವ ಅತೀ ದೊಡ್ಡ ಕಾಲುವೆಯಲ್ಲಿ ಪ್ರತಿದಿನ ಕೊಳಚೆ ನೀರು ಹರಿದು ಹೋಗುತ್ತದೆ. ಮುಂದೆ ಗಲಗಿನಗಟ್ಟಿ ಬಳಿ ಇದೇ ನೀರಿಗೆ ಏತ ನೀರಾವರಿ ಯೋಜನೆ ರೂಪಿಸಿ ಅದನ್ನು ನೀರಾವರಿಗೂ ಬಳಕೆ ಮಾಡಲಾಗುತ್ತದೆ. ಆದರೆ ಇಲ್ಲಿರುವ ಅನೇಕ ಪ್ರದೇಶಗಳಲ್ಲಿ ಕಾಲುವೆಯ ಅಗಲ ಚಿಕ್ಕದಾಗುತ್ತಿದ್ದು, ವರ್ಷದಿಂದ ವರ್ಷಕ್ಕೆ ಅತಿಕ್ರಮಣ ಹೆಚ್ಚುತ್ತಲೇ ಇದೆ. ಗೋಕುಲ ರಸ್ತೆಯ ಖಾಸಗಿ ಹೋಟೆಲ್‌ವೊಂದು ಇಡೀ ಚರಂಡಿಯನ್ನೇ ಅತಿಕ್ರಮಿಸಿಕೊಂಡು ತಲೆ ಎತ್ತಿ ನಿಂತಿದೆ. ಅಷ್ಟೇಯಲ್ಲ, ಶಿರೂರು ಪಾರ್ಕ್ ಬಳಿ 350 ಮೀಟರ್ ನಷ್ಟು ರಾಜಕಾಲುವೆ ಅತಿಕ್ರಮಣಕ್ಕೆ ಒಳಗಾಗಿ ದೊಡ್ಡ ಶಾಪಿಂಗ್ ಮಹಲ್ ತಲೆ ಎತ್ತಿಯಾಗಿದೆ. ಇನ್ನು ಗೋಕುಲ ರಸ್ತೆಯಲ್ಲಿನ ಖಾಸಗಿ ಹೊಟೇಲ್‌ವೊಂದ ಸಂಪೂರ್ಣವಾಗಿ ರಾಜಾಕಾಲುವೆಯನ್ನೇ ಅತಿಕ್ರಮಿಸಿಕೊಂಡಾಗಿದೆ. ನೃಪತುಂಗ ಬೆಟ್ಟ ಮತ್ತು ಉಣಕಲ್ ರೈಲು ನಿಲ್ದಾಣದ ಮೇಲ್ಭಾಗದಲ್ಲಿನ ಪ್ರದೇಶದಿಂದ ಹೊರಬರುವ ಕೊಳಚೆ ನೀರು ಧೋಬಿಘಾಟ್‌ನ ಚರಂಡಿ ಮೂಲಕ ಹರಿದು ದಕ್ಷಿಣ ದಿಕ್ಕಿಗೆ ಸಾಗುತ್ತದೆ. ಅಲ್ಲಿಯೂ ಅಷ್ಟೇ 28 ಅಡಿಯಷ್ಟು ಅಗಲದ ಚರಂಡಿ ಬರಿ 12 ಅಡಿಗೆ ಇಳಿದಿದ್ದು, ಎಲ್ಲವನ್ನು ಅತಿಕ್ರಮಿಸಿ ಕಾಂಕ್ರೀಟ್ ಗೋಡೆ ನಿರ್ಮಿಸಲಾಗಿದೆ.
ಅವಳಿನಗರದಲ್ಲಿನ ರಾಜ ಕಾಲುವೆಗಳು ಅತಿಕ್ರಮಣವಾಗಿದ್ದು ಗಮನಕ್ಕೆ ಬಂದಿದೆ. ಅಷ್ಟೆಯಲ್ಲ, ಬ್ರಿಟಿಷರ ಕಾಲದ ಭಂಗಿಲೈನ್‌ಗಳು ಕೂಡ ಅತಿಕ್ರಮಣಗೊಂಡಿವೆ. ಅವುಗಳನ್ನು ತೆರವುಗೊಳಿಸಿ ಅಲ್ಲಿಯೇ ಕೊಳಚೆ ನೀರು ಹರಿಯಲು ಕಾಲುವೆ ಮಾಡಿಸುತ್ತೇವೆ. -ಈರೇಶ ಅಂಚಟಗೇರಿ, ಮೇಯರ್, ಹುಬ್ಬಳ್ಳಿ-ಧಾರವಾಡ
ಯಾವುದೇ ಕಾರಣಕ್ಕೂ ರಾಜಕಾಲುವೆ ಮತ್ತು ಇತರೆ ಕಾಲುವೆಗಳ ಅತಿಕ್ರಮಣ ತಡೆಯಲೇಬೇಕು. ಇಲ್ಲವಾದರೆ ಬೆಂಗಳೂರಿಗೆ ಆದ ಗತಿ ಅವಳಿನಗರಕ್ಕೂ ಆಗುವುದು ನಿಶ್ಚಿತ. -ಸುರೇಶ ಅಂಗಡಿ, ಚೆನ್ನಬಸವೇಶ್ವರ ನಗರ ನಿವಾಸಿ, ಧಾರವಾಡ
ಬಸವರಾಜ ಹೊಂಗಲ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kundgol: ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಬೈಕ್; ಸವಾರರು ಕಣ್ಮರೆ
Hubli: ಗ್ಯಾರಂಟಿ ಯೋಜನೆ ಹಣ ನಿರ್ಹವಣೆಗೆ ಬಿಪಿಎಲ್ ಕಾರ್ಡ್ ರದ್ದು: ವಿಜಯೇಂದ್ರ ಆರೋಪ
ತಮ್ಮದೇ ಮಕ್ಕಳ “ಅಪಹರಣ’ನಾಟಕವಾಡಿದ ಗೃಹಿಣಿಯರು
ಅನ್ನಭಾಗ್ಯ ಯೋಜನೆ ಮುನ್ನಡೆಸಲು ಸಾಧ್ಯವಾಗದೆ ಸರಕಾರ ಬಿಪಿಎಲ್ ಕಾರ್ಡು ರದ್ದು ಮಾಡಲು ಹೊರಟಿದೆ
Hubli: ಅಡವಿಸಿದ್ದೇಶ್ವರ ಮಠದ ಶ್ರೀ ಶಿವಲಿಂಗೇಶ್ವರ ಸ್ವಾಮೀಜಿ ಲಿಂಗೈಕ್ಯ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.