ಒತ್ತುವರಿ ತೆರವು ಕಾರ್ಯಾಚರಣೆಗೆ ಸಜ್ಜು
ಪಾಲಿಕೆ ವಲಯವಾರು ಸಮೀಕ್ಷೆ ಪೂರ್ಣ
Team Udayavani, Oct 12, 2019, 11:03 AM IST
ಹುಬ್ಬಳ್ಳಿ: ಮಹಾನಗರದ ಅಭಿವೃದ್ಧಿಗೆ ತೊಡಕಾಗಿರುವ ಅಕ್ರಮ ಒತ್ತುವರಿ ವಿರುದ್ಧ ಕಾರ್ಯಾಚರಣೆ ನಡೆಸಲು ಮಹಾನಗರ ಪಾಲಿಕೆ ಸಿದ್ಧತೆ ನಡೆಸಿದೆ. ರಸ್ತೆ, ಪಾದಚಾರಿ ಮಾರ್ಗ ಹಾಗೂ ಕಟ್ಟಡಗಳ ಪಾರ್ಕಿಂಗ್ ಸ್ಥಳ ದುರುಪಯೋಗದ ವಿರುದ್ಧ ಪಾಲಿಕೆ ಶೀಘ್ರದಲ್ಲಿ ಕಾರ್ಯಾಚರಣೆಗೆ ಕೈಗೆತ್ತಿಕೊಳ್ಳಲಿದೆ. ಒತ್ತುವರಿ ಕುರಿತು ಈಗಾಗಲೇ ವಲಯವಾರು ಸಮೀಕ್ಷೆ ಪೂರ್ಣಗೊಂಡಿದೆ.
ಮಹಾನಗರದಲ್ಲಿ ಬೇಕಾಬಿಟ್ಟಿಯಾಗಿ ರಸ್ತೆ, ಪಾದಚಾರಿ ಮಾರ್ಗ, ಸರಕಾರಿ ಜಾಗ, ಉದ್ಯಾನವನ, ನಾಲಾ ಒತ್ತುವರಿ, ಕಟ್ಟಡ ಪಾರ್ಕಿಂಗ್ ಸ್ಥಳ ಇತರೆ ವಾಣಿಜ್ಯ ಉದ್ದೇಶಕ್ಕೆ ಬಳಸಿಕೊಂಡರೆ ಕೇಳುವವರಿಲ್ಲ ಎನ್ನುವ ಮನಸ್ಥಿತಿ ಜನಸಾಮಾನ್ಯರಲ್ಲಿ ಬೇರೂರಿದೆ. ಬಹುತೇಕ ಕಡೆಗಳಲ್ಲಿ ಒತ್ತುವರಿಗೆ ಮಹಾನಗರ ಪಾಲಿಕೆ ಅಧಿಕಾರಿಗಳೇ ಶ್ರೀರಕ್ಷೆಯಾಗಿದ್ದಾರೆ. ರಸ್ತೆ ಮಧ್ಯದಲ್ಲೇ ಕಟ್ಟಡ ನಿರ್ಮಾಣಕ್ಕೆ ಪಾಲಿಕೆಯಿಂದ ಸಂಪೂರ್ಣ ಪರವಾನಗಿ ನೀಡಿರುವ ನಿದರ್ಶನಗಳು ಇವೆ.
ಹಿಂದೆ ಹಲವು ಬಾರಿ ಪಾಲಿಕೆ ಸಾಮಾನ್ಯ ಸಭೆಗಳಲ್ಲಿ ಈ ಕುರಿತು ಪ್ರಸ್ತಾಪವಾದರೂ ರಾಜಕೀಯ ಡೊಂಬರಾಟ ನಡೆಯಿತೇ ಹೊರತು ಒತ್ತುವರಿ ತೆರವಿಗೆ ಸೂಕ್ತ ನಿಲುವು ತೆಗೆದುಕೊಳ್ಳಲಿಲ್ಲ. ಈ ವಿಚಾರ ಪರ ಹಾಗೂ ವಿರೋಧ ಅಭಿಪ್ರಾಯ ವ್ಯಕ್ತಪಡಿಸಲು ಸೀಮಿತವಾಯಿತು. ಈ ಕುರಿತು ಪಾಲಿಕೆ ಸದಸ್ಯರಲ್ಲೇ ಕೆಲ ಸದಸ್ಯರು ಅಕ್ರಮದಾರರಿಗೆ ಬೆಂಬಲವಾಗಿ ನಿಂತರೆ ಬೆರಳೆಣಿಕೆಯ ಸದಸ್ಯರು ಮಾತ್ರ ಒತ್ತುವರಿಗೆ ವಿರೋಧ ವ್ಯಕ್ತಪಡಿಸಿದ್ದರು. ಸದಸ್ಯರಲ್ಲಿನ ಅಭಿವೃದ್ಧಿ ಹಿತಾಸಕ್ತಿ ಕೊರತೆ ಕಂಡುಕೊಂಡ ಜಾಣ ಪಾಲಿಕೆ ಅಧಿಕಾರಿಗಳು ಅಕ್ರಮ ಒತ್ತುವರಿಗಳನ್ನು ಸಮೀಕ್ಷೆ ಮಾಡಿ ನಂತರ ತೆರವುಗೊಳಿಸುವ ಸಬೂಬು ಹೇಳಿಕೊಂಡು ಸಾಗಹಾಕುವಲ್ಲೇ ಕಾಲ ಕಳೆದರು.
ವಲಯವಾರು ಸಮೀಕ್ಷೆ: ಪಾಲಿಕೆ ಆಯುಕ್ತ ಡಾ| ಸುರೇಶ ಇಟ್ನಾಳ ಒತ್ತುವರಿ ತೆರವನ್ನು ಗಂಭೀರವಾಗಿ ತೆಗದುಕೊಂಡು ರಸ್ತೆ, ಪಾದಚಾರಿ ಮಾರ್ಗ ಹಾಗೂ ಕಟ್ಟಡಗಳ ಪಾರ್ಕಿಂಗ್ ಸ್ಥಳ ದುರುಪಯೋಗದ ಕುರಿತು ಸಮೀಕ್ಷೆ ನಡೆಸಿ ವರದಿ ನೀಡುವಂತೆ ಸೂಚಿಸಿದ ಹಿನ್ನೆಲೆಯಲ್ಲಿ ವಲಯವಾರು ಒತ್ತುವರಿ ಗುರುತಿಸುವ ಸಮೀಕ್ಷೆ ಮಾಡಲಾಗಿದೆ. ಮೊದಲ ಹಂತದಲ್ಲಿ ರಸ್ತೆ ಹಾಗೂ ಪಾದಚಾರಿ ಮಾರ್ಗ ಒತ್ತುವರಿಗೆ ಒತ್ತು ನೀಡಲಾಗಿದೆ. ಮಾರುಕಟ್ಟೆ ಪ್ರದೇಶಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಒತ್ತುವರಿಯಾಗಿರುವುದು ಬೆಳಕಿಗೆ ಬಂದಿದೆ.
ಈಗಾಗಲೇ ವಲಯವಾರು ಪಟ್ಟಿ ಸಿದ್ಧಗೊಂಡಿದ್ದು, ಜಿಲ್ಲಾಧಿಕಾರಿಗೆ ಸಲ್ಲಿಸಿ ಅವರಿಂದ ಅನುಮತಿ ಪಡೆಯುವುದು ಬಾಕಿ ಉಳಿದಿದೆ. ಸಮೀಕ್ಷೆಯಲ್ಲಿ ಬಹುತೇಕ ಒತ್ತುವರಿಗಳು ಬೆಳಗ್ಗೆ ತಳ್ಳುವ ಗಾಡಿ ಇಟ್ಟುಕೊಂಡು ವ್ಯಾಪಾರ ಮಾಡುವವರಿದ್ದು, ಕಟ್ಟಡಗಳನ್ನು ಪರಿಗಣಿಸಿಲ್ಲ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ನಿತ್ಯದ ಕಾರ್ಯಕ್ಕೆ ಸಿಬ್ಬಂದಿ ಕೊರತೆಯಿದೆ. ಅದರೊಂದಿಗೆ ಈ ಕಾರ್ಯ ಮಾಡುವುದಾದರೂ ಹೇಗೆ ಎನ್ನುವ ಕಾರಣದಿಂದ ಕೆಲ ವಲಯಗಳಲ್ಲಿ ಕಾಟಾಚಾರಕ್ಕೆ ಸಮೀಕ್ಷೆ ನಡೆದಿದೆ ಎನ್ನುವ ಅಭಿಪ್ರಾಯಗಳು ವ್ಯಕ್ತವಾಗಿವೆ.
ಒಟ್ಟಾರೆ ಮಹಾನಗರ ಪಾಲಿಕೆ ಏನೆಲ್ಲಾ ಕಸರತ್ತು ಮಾಡಿ ದೀಪಾವಳಿ ನಂತರ ಒತ್ತುವರಿ ತೆರವು ಕಾರ್ಯಾಚರಣೆಗೆ ದಿನ ನಿಗದಿ ಮಾಡಿಕೊಂಡಿದೆ. ವಾಣಿಜ್ಯ ಹಾಗೂ ಅಪಾರ್ಟ್‌ಮೆಂಟ್‌ಗಳಲ್ಲಿ ಪಾರ್ಕಿಂಗ್ ಸ್ಥಳ ದುರುಪಯೋಗ ಹಾಗೂ ಅಭಿವೃದ್ಧಿಗೆ ತೊಡಕಾಗಿರುವ ಎಲ್ಲಾ ಧರ್ಮದ ಧಾರ್ಮಿಕ ಕೇಂದ್ರಗಳ ತೆರವಿಗೆ ಪಾಲಿಕೆ ಮೊದಲ ಒತ್ತು ನೀಡಬೇಕು ಎಂಬುವುದು ಜನಸಾಮಾನ್ಯರ ಆಗ್ರಹವಾಗಿದೆ.
ಕಳೆದು ಹೋಗಿದ್ದ ಫೈಲ್ ಸಿಕ್ಕೇ ಬಿಡ್ತು! :
ಇತ್ತೀಚೆಗೆ ನಡೆದ ಜನಪ್ರತಿನಿಧಿಗಳ ಸಭೆಯೊಂದರಲ್ಲಿ ಅಭಿವೃದ್ಧಿಗೆ ತೊಡಕಾಗಿರುವ ಒತ್ತುವರಿ ತೆರವುಗೊಳಿಸುವ ನಿಟ್ಟಿನಲ್ಲಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ತೀರಾ ಖಡಕ್ ಎಚ್ಚರಿಕೆ ನೀಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ದೀಪಾ ಚೋಳನ್, 10 ದಿನಗಳ ನಂತರ ಒತ್ತುವರಿ ತೆರವುಗೊಳಿಸುವುದಾಗಿ ಪಾಲಿಕೆ ಅಧಿಕಾರಿಗಳನ್ನು ನೆಚ್ಚಿಕೊಂಡು ತೆರವು ಕಾರ್ಯಾಚರಣೆ ನಡೆಸುವುದಾಗಿ ಭರವಸೆ ನೀಡಿದ್ದರು. ವಿಪರ್ಯಾಸ ಅಂದರೆ ಮಹಾನಗರದಲ್ಲಿ ನಡೆದಿರುವ ಒತ್ತುವರಿ ಬಗ್ಗೆ ಪಾಲಿಕೆಯಲ್ಲಿ ಯಾವುದೇ ಅಂಕಿ-ಸಂಖ್ಯೆಗಳು ಇರಲಿಲ್ಲ. ಹಿಂದೆ ಸಮೀಕ್ಷೆ ಮಾಡಿದ್ದ ಫೈಲ್ ಕಳ್ಳತನವಾಗಿದೆ ಎಂದು ಅಧಿಕಾರಿಗಳು ಪಲಾಯನಕ್ಕೆ ಯತ್ನಿಸಿದ್ದರು. ಯಾವ ಸಬೂಬು ಹೇಳದೇ ಆ ಫೈಲ್ ನನ್ನ ಟೇಬಲ್ ಮೇಲೆ ಇರಬೇಕು. ಇಲ್ಲದಿದ್ದರೆ ಸಂಬಂಧಿಸಿದವರ ಎಲ್ಲರ ಮೇಲೂ ಶಿಸ್ತುಕ್ರಮ ಜನರುಗಿಸುವ ಕುರಿತು ಪಾಲಿಕೆ ಆಯುಕ್ತರು ಎಚ್ಚರಿಕೆ ನೀಡುತ್ತಿದ್ದಂತೆಯೇ ಕಳೆದು ಹೋಗಿದೆ ಎನ್ನಲಾದ ಫೈಲ್ ಸಿಕ್ಕಿದೆ ಎನ್ನಲಾಗಿದೆ.
ಪಾರ್ಕಿಂಗ್ ಸ್ಥಳ ದುರುಪಯೋಗ ಪತ್ತೆ : ಕಟ್ಟಡಗಳ ಪಾರ್ಕಿಂಗ್ ಸ್ಥಳ ದುರುಪಯೋಗವನ್ನು ಪಾಲಿಕೆ ಆಯುಕ್ತರು ಗಂಭೀರವಾಗಿ ತೆಗೆದುಕೊಂಡಿದ್ದಾರೆ. 2015ರಲ್ಲಿ 389 ಕಟ್ಟಡಗಳಲ್ಲಿ ಪಾರ್ಕಿಂಗ್ ಸ್ಥಳ ಅನ್ಯ ಕಾರ್ಯಕ್ಕೆ ಬಳಕೆ ಮಾಡುತ್ತಿರುವ ಕುರಿತು ಪತ್ತೆ ಹಚ್ಚಿ ನೋಟಿಸ್ ನೀಡಿದ್ದರು. ಕೆಲವರು ಸ್ವಯಂ ಪ್ರೇರಣೆಯಿಂದ ತೆರವು ಮಾಡಿದರೆ ಇನ್ನುಳಿದವುಗಳನ್ನು ಪಾಲಿಕೆಯಿಂದ ತೆರವುಗೊಳಿಸಿ ವೆಚ್ಚ ವಸೂಲಿ ಮಾಡಲಾಗಿತ್ತು. ತೆರವುಗೊಳಿಸಿ ಕೆಲ ಕಟ್ಟಡಗಳಲ್ಲಿ ಪುನಃ ದುರ್ಬಳಕೆ ಮಾಡುತ್ತಿರುವುದು ಗಮನಕ್ಕೆ ಬಂದಿದ್ದು, ಇವುಗಳು ಸೇರಿದಂತೆ 2016 ನಂತರ ಪರವಾನಗಿ ನೀಡಿದ 1204 ವಾಣಿಜ್ಯ ಹಾಗೂ ಅಪಾರ್ಟ್‌ಮೆಂಟ್‌ಗಳನ್ನು ಪರಿಶೀಲಿಸುವಂತೆ ಸೂಚಿಸಲಾಗಿದೆ. ದುರುಪಯೋಗ ಪತ್ತೆಯಾದರೆ ನಿಯಮಾವಳಿ ಪ್ರಕಾರ ನೋಟಿಸ್ ನೀಡಿ ತೆರವುಗೊಳಿಸಲು ನಿರ್ಧರಿಸಲಾಗಿದೆ. ಈ 389 ಕಟ್ಟಡಗಳ ಸಮೀಕ್ಷೆ ಹಾಗು ತೆರವುಗೊಳಿಸಿದ ಫೈಲ್ ಕಳ್ಳತನವಾಗಿದೆ ಎಂದು ಹೇಳಲಾಗಿತ್ತು.
ಜನಪ್ರತಿನಿಧಿಗಳ ಮೇಲಾಟ: ಒತ್ತುವರಿ ತೆರವು ವಿಚಾರದಲ್ಲಿ ಪಾಲಿಕೆಯ ರಾಜಕಾರಣ ಒಂದು ರೀತಿಯದ್ದಾದರೆ, ಮೇಲಿನ ಹಂತದ ಜನಪ್ರತಿನಿಧಿಗಳ ಮೇಲಾಟ ಇನ್ನೊಂದು ರೀತಿ. ಇತ್ತೀಚೆಗೆ ನಡೆದ ಸಭೆಯೊಂದರಲ್ಲಿ ಜನಪ್ರತಿನಿಧಿಯೊಬ್ಬರು ಒಂದು ರಸ್ತೆಯ ಒತ್ತುವರಿ ತೆರವು ಮಾಡದೆ ರಸ್ತೆ ನಿರ್ಮಿಸಿದ್ದಾರೆ ಎಂದು ಹೇಳುತ್ತಿದ್ದಂತೆ, ಇನ್ನೊಬ್ಬರು ಹಾಗೇನಿಲ್ಲ ತೆರವು ಮಾಡಿ ರಸ್ತೆ ನಿರ್ಮಿಸಲಾಗಿದೆ ಎಂದು ಪ್ರಸ್ತಾಪಿಸಿದರು. ಕೆಲ ಜನಪ್ರತಿನಿಧಿಗಳು ಸಭೆಯಲ್ಲಿ ಅಭಿವೃದ್ಧಿ ಪರ ಮಾತನಾಡಿ, ನಂತರ ಬಡವರಿಗೆ (ತಮ್ಮ ಬೆಂಬಲಿಗರಿಗೆ) ಅನ್ಯಾಯವಾಗುತ್ತದೆ ಎಂದು ಅಧಿಕಾರಿಗಳಿಗೆ ತಡೆಯೊಡ್ಡುವವರು ಇದ್ದಾರೆ. ಹೀಗಾಗಿಯೇ ಒತ್ತುವರಿ ತೆರವಿಗೆ ಕೆಲ ಪ್ರಾಮಾಣಿಕ ಅಧಿಕಾರಿಗಳು ಮುಂದಾದರೂ ರಾಜಕೀಯ ಹಿತಾಸಕ್ತಿ ಅಡ್ಡಗಾಲು ಹಾಕುತ್ತಿದೆ ಎನ್ನುವುದು ಬಹಿರಂಗ ಸತ್ಯ.
ಮೊದಲ ಹಂತದಲ್ಲಿ ರಸ್ತೆ ಹಾಗೂ ಪಾದಚಾರಿ ಮಾರ್ಗಗಳ ಒತ್ತುವರಿತೆರವಿಗೆ ಒತ್ತು ನೀಡಲಾಗಿದೆ. ಯಾವುದೇ ನೋಟಿಸ್ ನೀಡದೆತೆರವುಗೊಳಿಸಬಹುದಾಗಿದ್ದು, ಇದರೊಂದಿಗೆ ಪಾರ್ಕಿಂಗ್ ಸ್ಥಳ ದುರುಪಯೋಗದಪರಿಶೀಲನೆಗೆ ಸೂಚನೆ ನೀಡಲಾಗಿದೆ. ಸಿಆರ್‌ಎಫ್ ರಸ್ತೆಗೆ ತೊಡಕಾಗಿರುವ ಒತ್ತುವರಿ ಬಗ್ಗೆ ಗಮನ ಹರಿಸಲಾಗುವುದು. ಈಗಾಗಲೇ ಪಟ್ಟಿ ಸಿದ್ಧವಾಗಿದ್ದು, ಜಿಲ್ಲಾಧಿಕಾರಿಗೆ ಸಲ್ಲಿಸಿಅನುಮತಿ ಪಡೆದು ತೆರವು ಕಾರ್ಯಾಚರಣೆ ನಡೆಸಲಾಗುವುದು.-ಡಾ| ಸುರೇಶ ಇಟ್ನಾಳ, ಆಯುಕ್ತ, ಮಹಾನಗರ ಪಾಲಿಕೆ
-ಹೇಮರಡ್ಡಿ ಸೈದಾಪುರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Dharwad: ಬಂದ್ ಹೆಸರಲ್ಲಿ ವ್ಯಾಪಾರಿಗೆ ಕಪಾಳಮೋಕ್ಷ?: ಕಾಲೇಜು ಪ್ರಾಧ್ಯಾಪಕರಿಗೆ ಅವಾಜ್
Hubli: ತೀವ್ರತೆ ಪಡೆದ ಬಂದ್; ಬಸ್-ಆಟೋ ಇಲ್ಲದೆ ಪರದಾಡಿದ ಜನತೆ
Dharwad: ದಲಿತಪರ ಸಂಘಟನೆ ಕರೆ ನೀಡಿದ ಬಂದ್ ಗೆ ಮಿಶ್ರ ಪ್ರತಿಕ್ರಿಯೆ
Hubballi: ಸಂಪೂರ್ಣ ಬಂದ್… ರಸ್ತೆಗಿಳಿದ ವಾಹನಗಳ ಚಕ್ರದ ಗಾಳಿ ತೆಗೆದು ಪ್ರತಿಭಟನೆ
Weather: ರಾಜ್ಯದ ಮೂರು ನಗರದಲ್ಲಿ ಹವಾಮಾನ ರಾಡಾರ್ ಸ್ಥಾಪನೆ: ಕೇಂದ್ರ ಸಚಿವ ಜೋಶಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.