ಕಡಲೆ ಬೆಂಬಲ ಬೆಲೆ ಹಣ ಬಾರದೆ ರೈತರ ಪರದಾಟ
Team Udayavani, May 18, 2020, 11:29 AM IST
ಹುಬ್ಬಳ್ಳಿ: ಬೆಲೆ ಕುಸಿತ, ಲಾಕ್‌ಡೌನ್‌ನಿಂದ ಮಾರುಕಟ್ಟೆ ಬಂದ್ ಆಗಿ ಸಂಕಷ್ಟದಿಂದ ಬಳಲುತ್ತಿದ್ದ ರೈತರಿಗೆ ಸರಕಾರ ಖರೀದಿ ಕೇಂದ್ರಗಳ ಮೂಲಕ ಖರೀದಿಸಿದ ಕಡಲೆ ಹಣವೂ ಇಲ್ಲ. ಇನ್ನೊಂದು ಕಡೆ ಕಳೆದ ವರ್ಷದ ಹಿಂಗಾರು-ಮುಂಗಾರು ಹಂಗಾಮಿನ ಬೆಳೆ ವಿಮೆಯೂ ನಯಾ ಪೈಸೆ ಬಂದಿಲ್ಲ. ಹೀಗಾಗಿ ಈ ಬಾರಿಯ ಮುಂಗಾರಿಗೆ ಬೀಜ-ಗೊಬ್ಬರ ಖರೀದಿಗೆ ಏನು ಮಾಡುವುದು ಎಂಬುದು ರೈತರ ಚಿಂತೆಯಾಗಿದೆ.
ಉತ್ತರ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಕಡಲೆ ಬೆಳೆಯಲಾಗುತ್ತಿದೆ. ಕಡಲೆಗೆ ಸೂಕ್ತ ಬೆಲೆ ಇಲ್ಲ ಎಂಬ ಕೂಗಿನ ಹಿನ್ನೆಲೆಯಲ್ಲಿ ಸರಕಾರ ಮಧ್ಯಪ್ರವೇಶಿಸಿ ಖರೀದಿಗೆ ಮುಂದಾಗಿತ್ತು. ಇದರೊಳಗೆ ಕೆಲವೊಂದು ರೈತರು ಕಡಿಮೆ ಬೆಲೆಯಾದರೂ ಪರವಾಗಿಲ್ಲ. ಸದ್ಯದ ಅಗತ್ಯತೆಗೆ ಮಾರಾಟ ಅನಿವಾರ್ಯವಾಗಿದೆ ಎಂದು ವ್ಯಾಪಾರಸ್ಥರಿಗೆ ಮಾರಾಟ ಮಾಡಿದ್ದರು. ಸರಕಾರದ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ)ಯಡಿ ಮಾರಾಟ ಮಾಡಿದರೆ ಒಂದಿಷ್ಟು ಉತ್ತಮ ದರ ಸಿಗಲಿದೆ ಎಂದು ತಡೆದು ಮಾರಾಟ ಮಾಡಿದವರೂ ಇದೀಗ ಹಣ ಬಾರದೆ ಪರಿತಪಿಸುವಂತಾಗಿದೆ.
ಒಂದೂವರೆ ತಿಂಗಳಾಯಿತು: ಕಡಲೆ ಖರೀದಿ ನಿಟ್ಟಿನಲ್ಲಿ ಸರಕಾರ ಕ್ವಿಂಟಲ್‌ಗೆ 4,875 ರೂ.ಗಳ ಕನಿಷ್ಠ ಬೆಂಬಲ ಬೆಲ ನಿಗದಿಪಡಿಸಿದ್ದು, ಇದೇ ದರದಡಿ ಪ್ರತಿ ರೈತರಿಂದ 10 ಕ್ವಿಂಟಲ್‌ವರೆಗೆ ಕಡಲೆ ಖರೀದಿಗೆ ಮುಂದಾಗಿತ್ತು. ರೈತರು ಖರೀದಿ ಪ್ರಮಾಣ ಹೆಚ್ಚಿಸುವಂತೆ ಒತ್ತಾಯ ಮಾಡಿದ ಹಿನ್ನೆಲೆಯಲ್ಲಿ ಸರಕಾರ ಪ್ರತಿ ರೈತರಿಂದ 15 ಕ್ವಿಂಟಲ್‌ನಂತೆ ಕಡಲೆ ಖರೀದಿ ಮಾಡಿದೆ. ಲಾಕ್‌ಡೌನ್‌ನಿಂದ ಸಾಗಣೆ ಹಾಗೂ ಎಪಿಎಂಸಿ ಮಾರುಕಟ್ಟೆ ಸ್ಥಗಿತಗೊಂಡ ಹಿನ್ನೆಲೆಯಲ್ಲಿ ಅನೇಕ ರೈತರು ಸಂಗ್ರಹಕ್ಕೆ ಕಷ್ಟವಾದರೂ ಅನಿವಾರ್ಯವಾಗಿ ಕಾಯಬೇಕಾಗಿತ್ತು. ಮಳೆ ಬಿದ್ದರೆ, ಕಡಲೆ ಸಂಗ್ರಹಕ್ಕೆ ಜಾಗವಿಲ್ಲದೆ, ಹಾಳಾದೀತು ಎಂಬ ಆತಂಕದಲ್ಲೇ ಇದ್ದರು. ಕೃಷಿ ಉತ್ಪನ್ನಗಳ ಸಾಗಣೆಗೆ ಅವಕಾಶ ಸಿಕ್ಕರೂ ಮಾರುಕಟ್ಟೆಯಲ್ಲಿ ಕಡಲೆಗೆ ಸೂಕ್ತ ದರವಿಲ್ಲವೆಂದು ಅನೇಕರು ಮಾರಾಟಕ್ಕೆ ಹಿಂದೇಟು ಹಾಕಿದ್ದರು.
ಧಾರವಾಡ, ಗದಗ, ಹಾವೇರಿ ಇನ್ನಿತರ ಜಿಲ್ಲೆಗಳ ರೈತರು ಮಾರುಕಟ್ಟೆಯಲ್ಲಿ ಕಡಲೆಗೆ 4,100-4,150 ರೂ. ವರೆಗೆ ದರ ಇದ್ದರೆ, ಖರೀದಿ ಕೇಂದ್ರಗಳಲ್ಲಿ ಕ್ವಿಂಟಲ್‌ಗೆ 4,875ರೂ. ನೀಡುತ್ತಿದ್ದ ಹಿನ್ನೆಲೆಯಲ್ಲಿ ಹದಿನೈದು ಕ್ವಿಂಟಲ್‌ಗೆ ಸುಮಾರು 10,500ರೂ.ನಷ್ಟು ಹೆಚ್ಚಿನ ಹಣ ಬರಲಿದೆ ಎಂಬ ಖುಷಿಯೊಂದಿಗೆ, ಖರೀದಿ ಕೇಂದ್ರಗಳು ಆರಂಭ ಆಗುವವರೆಗೆ ಕಾಯ್ದು ಕಡಲೆ ಮಾರಾಟ ಮಾಡಿದ್ದರು. ಈ ಹಿಂದೆ ಮುಂಗಾರು ಹಂಗಾಮು ವೇಳೆ ಸರಕಾರ ಹತ್ತಿಗೆ ಸೂಕ್ತ ಬೆಲೆ ಇಲ್ಲವೆಂಬ ಕಾರಣಕ್ಕೆ ರೈತರ ಒತ್ತಾಯದ ಮೇರೆಗೆ ಹತ್ತಿ ಖರೀದಿಗೆ ಮುಂದಾಗಿತ್ತು.
ರೈತರಿಂದ ಹತ್ತಿ ಖರೀದಿ ಮಾಡಿದ ಸುಮಾರು 8-10 ದಿನದೊಳಗೆ ರೈತರ ಬ್ಯಾಂಕ್ ಖಾತೆಗಳಿಗೆ ಹಣ ಜಮಾ ಆಗಿತ್ತು. ಖರೀದಿ ಕೇಂದ್ರಗಳಿಂದ ಕಡಲೆ ಖರೀದಿ ವಿಚಾರದಲ್ಲಿ 8-10 ದಿನದೊಳಗೆ ತಮ್ಮ ಖಾತೆಗೆ ಹಣ ಜಮಾ ಆಗಲಿದೆ ಎಂಬ ನಿರೀಕ್ಷೆಯಲ್ಲಿ ರೈತರು ಇದ್ದರು. ಆದರೆ, ಕಡಲೆ ನೀಡಿ ಸುಮಾರು ಒಂದೂವರೆ ತಿಂಗಳಾದರೂ ಖಾತೆಗೆ ಹಣ ಬಂದಿಲ್ಲ. ಜಿಲ್ಲಾಧಿಕಾರಿಗೆ ಮನವಿ ಮಾಡಿದ್ದು, ಪಾವತಿ ಭರವಸೆ ಬಂದಿದೆ. ಕೆಲವೊಂದು ಜನಪ್ರತಿನಿಧಿಗಳು ಸಹ ಹಣ ಬಿಡುಗಡೆ ಒತ್ತಾಯ ಮಾಡಿದ್ದರೂ ಇದುವರೆಗೂ ರೈತರ ಖಾತೆಗೆ ಮಾತ್ರ ಹಣ ಜಮಾ ಆಗಿಲ್ಲ.
ಬೆಳೆ ವಿಮೆ ಪರಿಹಾರವೂ ಇಲ್ಲ: ಪ್ರಕೃತಿ ವಿಕೋಪ, ಬೆಳೆ ನಷ್ಟದಂತಹ ಸಂಕಷ್ಟಮಯ ಸ್ಥಿತಿಯಲ್ಲಿ ರೈತರ ನೆರವಿಗೆ ಇರಲಿ ಎಂಬ ಉದ್ದೇಶದೊಂದಿಗೆ ಜಾರಿಗೊಳಿಸಿದ ಬೆಳೆ ವಿಮೆ ಯೋಜನೆ ಸಹ ಈ ಬಾರಿ ರೈತರ ಪಾಲಿಗೆ ಇದ್ದೂ ಇಲ್ಲದ ಸ್ಥಿತಿ ತಲುಪಿದೆ. ಕಳೆದ ವರ್ಷದ ಮುಂಗಾರು ಹಂಗಾಮಿನ ಬೆಳೆ ವಿಮೆ ಇದುವರೆಗೂ ಬಂದಿಲ್ಲ ಎಂಬುದು ಅನೇಕ ರೈತರ ಅಳಲಾಗಿದೆ. ಇಂತಹ ಸಂಕಷ್ಟ ಸ್ಥಿತಿಯಲ್ಲಿ ನಮ್ಮ ನೆರವಿಗೆ ಬೆಳೆ ವಿಮೆ ಪರಿಹಾರ ಬಂದಿಲ್ಲವೆಂದರೆ ಯಾವ ಪುರುಷಾರ್ಥಕ್ಕೆ ನಾವು ವಿಮಾ ಕಂತು ಪಾವತಿಸಬೇಕು ಎಂಬುದು ಹಲವು ರೈತರ ಪ್ರಶ್ನೆಯಾಗಿದೆ.
ಈ ಹಿಂದೆ ಅತಿವೃಷ್ಟಿಯಿಂದ ಬೆಳೆ ಹಾನಿಗೀಡಾಗಿದ್ದು, ಕೇಂದ್ರ-ರಾಜ್ಯ ಸರಕಾರಗಳ ಸಚಿವರು, ಅಧಿಕಾರಿಗಳು, ಕೇಂದ್ರ ಅಧ್ಯಯನ ತಂಡ ಬಂದು ಪರಿಶೀಲನೆ ಮಾಡಿದೆ. ಆಗಿರುವ ನಷ್ಟವನ್ನು ಖುದ್ದಾಗಿ ವೀಕ್ಷಿಸಿದೆ. ಆದರೂ ಇದುವರೆಗೂ ಪರಿಹಾರ ಹಣ ಬಂದಿಲ್ಲವಾಗಿದೆ. ಈ ಕಡೆ ಮಾರಾಟ ಮಾಡಿದ ಕಡಲೆ ಹಣವೂ ಇಲ್ಲ, ಬೆಳೆ ವಿಮೆ ಪರಿಹಾರವೂ ಕೈಗೆ ಸಿಕ್ಕಿಲ್ಲ. ಹೀಗಾದರೆ ರೈತರು ಬದುಕುವುದಾದರೂ ಹೇಗೆ ಎಂಬುದನ್ನು ಸರಕಾರಗಳು ಅರ್ಥ ಮಾಡಿಕೊಳ್ಳಲಿ ಎಂಬುದು ಅನ್ನದಾತರ ಅನಿಸಿಕೆ.
ರೈತರ ಹಕ್ಕೊತ್ತಾಯ: ಈಗಾಗಲೇ ಮಳೆ ಆರಂಭವಾಗಿದೆ. ಮುಂಗಾರು ಹಂಗಾಮಿಗೆ ತಯಾರಿ ನಡೆಯುತ್ತಿದ್ದು, ಬಿತ್ತನೆಗೆ ಮುಂದಾಗಬೇಕಾದರೆ ಬೀಜ-ಗೊಬ್ಬರ ಖರೀದಿ, ಕೂಲಿ ಇನ್ನಿತರ ಕಾರ್ಯಗಳಿಗೆ ರೈತರು ಏನು ಮಾಡಬೇಕು. ಬೆಳೆ ವಿಮೆ ಪರಿಹಾರ ಇಲ್ಲವೇ ಕಡಲೆ ಮಾರಾಟ ಮಾಡಿದ ಹಣವಾದರೂ ಬಂದಿದ್ದರೆ ರೈತರಿಗೆ ಒಂದಿಷ್ಟು ಪ್ರಯೋಜನವಾಗುತ್ತಿತ್ತು. ಇನ್ನಾದರೂ ಸರಕಾರ ಇದರ ಬಗ್ಗೆ ಗಮನ ನೀಡುವ ಮೂಲಕ ರೈತರ ಸಂಕಷ್ಟಕ್ಕೆ ಸ್ಪಂದಿಸುವ ಕೆಲಸ ಮಾಡಲಿ ಎಂಬುದು ರೈತರ ಒತ್ತಾಯವಾಗಿದೆ.
ಎರಡೂ ಇಲ್ಲ.. : ಬೆಳೆ ವಿಮೆ ಕಂತು ಎಂದು 40 ಸಾವಿರ ರೂ. ಪಾವತಿ ಮಾಡಿದ್ದೇನೆ. ಅತಿವೃಷ್ಟಿಯಿಂದ ಕಳೆದ ಬಾರಿ ಬೆಳೆ ಹಾನಿಯಾಗಿದೆ. ಇದುವರೆಗೂ ನಯಾ ಪೈಸೆ ಪರಿಹಾರ ಬಂದಿಲ್ಲ. ಈ ಬಗ್ಗೆ ಬೆಳೆ ವಿಮೆ ಕಂಪನಿಯವರನ್ನು ಕೇಳಿದರೆ ಸ್ಪಷ್ಟ ಉತ್ತರ ನೀಡದೇ ಗೊಂದಲ ಮೂಡಿಸುತ್ತಿದ್ದಾರೆ. ಸರಕಾರದವರು ಈ ಕಡೆ ಗಮನ ನೀಡುತ್ತಿಲ್ಲ. ಸಂಕಷ್ಟಕ್ಕೆ ಇಲ್ಲವಾದರೆ, ಬೆಳೆ ವಿಮೆ ಇದ್ದರೂ ಏನು ಪ್ರಯೋಜನ. ಕಡಲೆ ನೀಡಿ ಒಂದೂವರೆ ತಿಂಗಳಾದರೂ ಸರಕಾರ ಹಣ ನೀಡಿಲ್ಲ. -ಸುಭಾಸ ಬೂದಿಹಾಳ, ಕೋಳಿವಾಡ ರೈತ
-ಅಮರೇಗೌಡ ಗೋನವಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hubli: ಗ್ಯಾರಂಟಿ ಯೋಜನೆ ಹಣ ನಿರ್ಹವಣೆಗೆ ಬಿಪಿಎಲ್ ಕಾರ್ಡ್ ರದ್ದು: ವಿಜಯೇಂದ್ರ ಆರೋಪ
ತಮ್ಮದೇ ಮಕ್ಕಳ “ಅಪಹರಣ’ನಾಟಕವಾಡಿದ ಗೃಹಿಣಿಯರು
ಅನ್ನಭಾಗ್ಯ ಯೋಜನೆ ಮುನ್ನಡೆಸಲು ಸಾಧ್ಯವಾಗದೆ ಸರಕಾರ ಬಿಪಿಎಲ್ ಕಾರ್ಡು ರದ್ದು ಮಾಡಲು ಹೊರಟಿದೆ
Hubli: ಅಡವಿಸಿದ್ದೇಶ್ವರ ಮಠದ ಶ್ರೀ ಶಿವಲಿಂಗೇಶ್ವರ ಸ್ವಾಮೀಜಿ ಲಿಂಗೈಕ್ಯ
Hubli: ದಿವಾಳಿಯಾದ ಸರ್ಕಾರ ಬಿಪಿಎಲ್ ಕಾರ್ಡ್ ಕಡಿತ ಮಾಡುತ್ತಿದೆ: ಪ್ರಹ್ಲಾದ ಜೋಶಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.