ವರುಣನ ದರ್ಶನಕ್ಕೆ ರೈತನ ಕಾತರ
Team Udayavani, Jul 28, 2018, 4:39 PM IST
ಗದಗ: ‘ರೋಹಿಣಿ ಮಳೆಯಾದರೆ, ಓಣಿಯಲ್ಲ ಜೋಳ’ ಎಂಬುದು ಉತ್ತರ ಕರ್ನಾಟಕದ ನಾಣ್ಣುಡಿ. ಸತತ ಆರೇಳು ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ‘ರೋಹಿಣಿ’ ಮಳೆ ನಕ್ಷತ್ರದಲ್ಲಿ ವರುಣ ದೇವನ ಅಬ್ಬರ ಜೋರಾಗಿತ್ತು. ಆದರೆ, ಆನಂತರ ಮಳೆರಾಯನ ದರ್ಶನವೇ ಆಗಿಲ್ಲ. ಇದರಿಂದ ಬೆಳೆಗಳು ಬಾಡುತ್ತಿದ್ದು, ಭೂಮಿಯಲ್ಲಿ ತೇವಾಂಶದ ಕೊರತೆ ಉಂಟಾಗುತ್ತಿದೆ.
ಸತತ ಬರ ಹಾಗೂ ಮಳೆ ಅಭಾವದಿಂದ ಕಂಗೆಟ್ಟಿದ್ದ ರೈತಾಪಿ ಜನರಲ್ಲಿ ಈ ಬಾರಿ ಮುಂಗಾರು ಪೂರ್ವ ಮಳೆ ಹುಮ್ಮಸ್ಸು ಹೆಚ್ಚಿಸಿತ್ತು. ಇದರಿಂದ ಚೈತನ್ಯಗೊಂಡಿದ್ದ ರೈತರು ಮುಂಗಾರು ಪೂರ್ವದಲ್ಲೇ ಬಿತ್ತನೆಗೆ ಸಿದ್ಧತೆ ಮಾಡಿಕೊಂಡಿದ್ದರು. ಮಳೆಯ ಹನಿಗಳಿಂದ ಇಳೆ ತಂಪೆರೆಯುತ್ತಿದ್ದಂತೆ ಬಿತ್ತನೆ ಕಾರ್ಯವನ್ನೂ ಮುಗಿಸಲಾಗಿತ್ತು. ಸದ್ಯ ಹೆಸರು, ಶೇಂಗಾ, ಉರುಳಿ ಮೆಣಸಿನಕಾಯಿ, ಈರುಳ್ಳಿ ಸೇರಿದಂತೆ ವಿವಿಧ ಬೆಳೆಗಳು ಹೂವು ಬಿಟ್ಟು ಕಾಳು ಕಟ್ಟುವ ಹಂತಕ್ಕೆ ಬಂದು ತಲುಪಿವೆ. ಆದರೆ, ಕಳೆದ ಒಂದೂವರೆ ತಿಂಗಳಿಂದ ಮಳೆಯಿಲ್ಲದೇ ಬೆಳೆಗಳು ಬಾಡುತ್ತಿವೆ.
ಜಿಲ್ಲೆಯ ಗದಗ, ಮುಂಡರಗಿ ಹಾಗೂ ಶಿರಹಟ್ಟಿ ಭಾಗದಲ್ಲಿ ಹೆಚ್ಚಿನ ಮೋಡ ಕವಿದ ವಾತಾವರಣ, ಎರಡ್ಮೂರು ನಿಮಿಷಗಳಷ್ಟು ತುಂತುರು ಹನಿಗಳು ಕಂಡುಬಂದರೂ ಗಾಳಿ ವೇಗಕ್ಕೆ ಮೋಡಗಳು ಮುಂದೆ ಸಾಗುತ್ತಿವೆ. ಹೀಗಾಗಿ ರೈತರು ಆಕಾಶದತ್ತ ಮುಖಮಾಡಿ ಓಡುವ ಮೋಡಗಳನ್ನೇ ನೋಡುವಂತಾಗಿದೆ.
ಕಳೆದ ಒಂದೂವರೆ ತಿಂಗಳಿಂದ ಮಳೆ ಆಗಿಲ್ಲದಿದ್ದರೂ ಕೃಷಿ ಹೊಂಡಗಳಲ್ಲಿ ಸಂಗ್ರಹಗೊಂಡಿದ್ದ ಮಳೆ ನೀರನ್ನೇ ತುಂತುರು ನೀರಾವರಿ ಪದ್ಧತಿಯಡಿ ನೀರು ಹರಿಸುವ ಮೂಲಕ ಬೆಳೆಗಳನ್ನು ಕಾಪಾಡಿಕೊಂಡಿದ್ದರು. ಆದರೆ, ಇತ್ತೀಚೆಗೆ ಬಹುತೇಕ ಕೃಷಿ ಹೊಂಡಗಳಲ್ಲಿ ನೀರು ಖಾಲಿಯಾಗಿದ್ದು, ಭೂಮಿಯಲ್ಲಿ ತೇವಾಂಶದ ಕೊರತೆಯಿಂದ ಬೆಳೆಗಳು ಬಾಡುತ್ತಿವೆ. ಮತ್ತೂಂದೆಡೆ ಇದ್ದ ನೀರು ಖಾಲಿಯಾಗಿದ್ದರಿಂದ ಜಾನುವಾರುಗಳ ದಾಹ ತೀರಿಸಲೂ ಪರದಾಡುವಂತಾಗಿದೆ ಎಂಬುದು ಅನ್ನದಾತನ ಅಳಲು. ಒಟ್ಟಾರೆ ಆರಂಭದಲ್ಲಿ ಘರ್ಜಿಸಿದ ಮುಂಗಾರು ಮಳೆ, ಆನಂತರ ಶಾಂತವಾಗಿದ್ದು, ಮುಂದೇನು ಎಂಬ ಪ್ರಶ್ನೆ ರೈತರನ್ನು ಚಿಂತೆಗೀಡುಮಾಡಿದೆ.
ಯಾವ ಬೆಳೆ, ಎಷ್ಟೆಷ್ಟು ಬಿತ್ತನೆ?
ಜಿಲ್ಲೆಯ ಗದಗ, ಮುಂಡರಗಿ, ರೋಣ, ನರಗುಂದ ಹಾಗೂ ಶಿರಹಟ್ಟಿ ಸೇರಿದಂತೆ ಏಕದಳ ಧಾನ್ಯಗಳ ಪೈಕಿ ಮೆಕ್ಕೆಜೋಳ 23,451 ಹೆಕ್ಟೇರ್ ಹಾಗೂ ಇತರೆ ಬೆಳೆಗಳು 731 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿವೆ. ದ್ವಿದಳ ಧಾನ್ಯಗಳ ಪೈಕಿ ಹೆಸರು 75,537 ಹೆಕ್ಟೇರ್, ತೊಗರಿ 1,377 ಹೆಕ್ಟೇರ್ ಹಾಗೂ ಇತರೆ 223 ಹೆಕ್ಟೇರ್‌ನಲ್ಲಿ ಬಿತ್ತನೆ ಮಾಡಲಾಗಿದೆ. ಇದರಿಂದಾಗಿ ಒಟ್ಟಾರೆ 1.47 ಲಕ್ಷ ಹೆಕ್ಟೇರ್ ಆಹಾರ ಧಾನ್ಯ ಬಿತ್ತನೆ ಪೈಕಿ 1.02 ಲಕ್ಷ ಹೆಕ್ಟೇರ್ ಬಿತ್ತನೆ (ಶೇ. 69.69) ಗುರಿ ಸಾಧನೆಯಾಗಿದೆ. ಎಣ್ಣೆ ಕಾಳು ಬೆಳೆಗಳಾದ ಶೇಂಗಾ 18,413 ಹೆಕ್ಟೇರ್, ಸೂರ್ಯಕಾಂತಿ 1,941 ಹೆಕ್ಟೇರ್ ಹಾಗೂ ಇತರೆ 161 ಹೆಕ್ಟೇರ್ ಸೇರಿದಂತೆ ಒಟ್ಟು 51,500 ಹೆಕ್ಟೇರ್ ಪ್ರದೇಶದ ಗುರಿಯಲ್ಲಿ 20,515 ಹೆಕ್ಟೇರ್ (ಶೇ.39.83 ) ಪ್ರದೇಶದಲ್ಲಿ ಬಿತ್ತನೆ ಪೂರ್ಣಗೊಂಡಿದೆ. ಜಿಲ್ಲೆಯ ವಾಣಿಜ್ಯ ಬೆಳೆಗಳಾದ ಹತ್ತಿ 12,849 ಹೆಕ್ಟೇರ್, ಕಬ್ಬು 1741 ಹೆಕ್ಟೇರ್ ಸೇರಿದಂತೆ ಒಟ್ಟು 14,590 ಹೆಕ್ಟೇರ್ (ಶೇ.34.57) ಬಿತ್ತನೆ ಆಗಿದ್ದು, ಜಿಲ್ಲೆಯಲ್ಲಿ 2018-19ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಜೂನ್ ಅಂತ್ಯದವರೆಗೆ 2,40,700 ಹೆಕ್ಟೇರ್ ಗುರಿಯಲ್ಲಿ 1,37,543 ಹೆಕ್ಟೇರ್ ಪ್ರದೇಶದಲ್ಲಿ (ಶೇ. 57.1) ಬಿತ್ತನೆಯಾಗಿದೆ ಎನ್ನುತ್ತಾರೆ ಕೃಷಿ ಜಂಟಿ ನಿರ್ದೇಶಕ ಬಾಲರಡ್ಡಿ.
ಜಿಲ್ಲೆಯಲ್ಲಿ ಮಳೆ ಕೊರತೆ
ಪ್ರಸಕ್ತ ಸಾಲಿನ ಜನೆವರಿಯಿಂದ ಜು. 27ರ ವರೆಗೆ ಜಿಲ್ಲೆಯಲ್ಲಿ ಸರಾಸರಿ 256 ಮಿಮೀ ವಾಡಿಕೆ ಮಳೆ ಪೈಕಿ 300.6 ಮಿ.ಮೀ. ಅಂದರೆ ಶೇ. 117.41 ಮಿ.ಮೀ. ನಷ್ಟು ಹೆಚ್ಚುವರಿ ಮಳೆಯಾಗಿದೆ. ಆದರೆ ಜೂನ್ ತಿಂಗಳ ವಾಡಿಕೆ ಮಳೆ 86 ಮಿಮೀ ಪೈಕಿ 72 ಮಿಮೀ ಹಾಗೂ ಜುಲೈ ತಿಂಗಳಲ್ಲಿ ಸರಾಸರಿ 59 ಮಿಮೀ ಪೈಕಿ 26.4 ಮಿಮೀ ಮಳೆಯಾಗಿದೆ. ಜೂನ್ ಹಾಗೂ ಜುಲೈನಲ್ಲಿ ಕ್ರಮವಾಗಿ 14 ಮಿಮೀ ಮತ್ತು 32.6 ಮಿಮೀ ನಷ್ಟು ಮಳೆ ಕೊರತೆಯಾಗಿದೆ. ಈ ಪೈಕಿ ಗದಗ ತಾಲೂಕಿನಲ್ಲಿ 61 ಮಿಮೀ ವಾಡಿಕೆ ಮಳೆಯಲ್ಲಿ 18.9 ಮಿಮೀ ಸುರಿದಿದೆ. ಮುಂಡರಗಿ ತಾಲೂಕಿನಲ್ಲಿ 42 ಮಿಮೀ ವಾಡಿಕೆ ಮಳೆ ಪೈಕಿ 8.8 ಮಿಮೀ ಮಳೆ ಸುರಿದಿದ್ದು, ನರಗುಂದ ತಾಲೂಕಿನಲ್ಲಿ ಸರಾಸರಿ 60 ಮಿಮೀ ವಾಡಿಕೆ ಮಳೆಯಲ್ಲಿ 32.0 ಮಿಮೀ ಮಳೆಯಾಗಿದೆ. ರೋಣ ತಾಲೂಕಿನಲ್ಲಿ 61
ಮಿಮೀ ಪೈಕಿ 39.6 ಮಿಮೀ ಮಳೆ ಸುರಿದಿದೆ. ಶಿರಹಟ್ಟಿ ತಾಲೂಕಿನಲ್ಲಿ 71 ಮಿಮೀ ವಾಡಿಕೆ ಮಳೆಯಲ್ಲಿ 32.6 ಮಿಮೀ ಮಳೆಯಾಗಿದೆ.
ಬಿತ್ತನೆಯಾದ ಬಳಿಕ ಮಳೆ ಕೊರತೆ ಕಾಡುತ್ತಿದ್ದು, ಇದನ್ನು ಹಸಿ ಬರವೆಂದು ಕರೆಯಲಾಗುತ್ತದೆ. ಕಳೆದ ಹಲವು ವರ್ಷಗಳಿಂದ ಕೈಕೊಟ್ಟಿದ್ದ ರೋಹಿಣಿ ಮಳೆ ಈ ಬಾರಿ ಉತ್ತಮವಾಗಿದ್ದರಿಂದ ಮುಂಗಾರು ಕೈಹಿಡಿಯಲಿದೆ ಎಂಬ ರೈತರ ನಿರೀಕ್ಷೆ ದಿನದಿಂದ ದಿನಕ್ಕೆ ಹುಸಿಯಾಗುತ್ತಿದೆ. ಕಳೆದ ಒಂದೂವರೆ ತಿಂಗಳಿಂದ ಮಳೆಯಿಲ್ಲ. ಮೃಗಶಿರ, ಆರಿದ್ರ, ಪುನರ್ವಸು, ಪುಷ್ಯ ಮಳೆಗಳು ಕೈಹಿಡಿಯದೇ ಬೆಳೆಗಳು ಬಾಡುತ್ತಿವೆ. ಬೋರ್‌ವೆಲ್, ಬಾವಿಗಳಿರುವ ಜಮೀನುಗಳಲ್ಲಿ ಮಾತ್ರ ಹಸಿರು ಕಾಣುತ್ತಿದ್ದು, ಇನ್ನುಳಿದೆಡೆ ಬೆಳೆಗಳು ಬಾಡುತ್ತಿವೆ. ಮುಂದೇನು ಎಂಬುದು ತೋಚದಂತಾಗಿದೆ.
ಮಹದೇವಗೌಡ ಪಾಟೀಲ, ಸಂದಿಗವಾಡ ರೈತ
ವೀರೇಂದ್ರ ನಾಗಲದಿನ್ನಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
NABARD ನಿರ್ಧಾರದಿಂದ ಕೃಷಿಗೆ ಹಿನ್ನಡೆ; ಸಾಲದ ಮೊತ್ತ ಕಡಿತ ಮಾಡದಿರಲು ಸಚಿವ ಪಾಟೀಲ ಆಗ್ರಹ
ಸಿಎಂ ಆಗಿದ್ದವರು ಈ ರೀತಿ ಹೇಳಿಕೆ ನೀಡುವ ಬದಲು, ಸ್ಪಷ್ಟ ಹೇಳಿಕೆ ನೀಡಲಿ: ಸಚಿವ ಶಿವಾನಂದ
dharwad: ಪೊಲೀಸ್ ಪೇದೆ ಮೇಲೆ ಕೈ ಮುಖಂಡ ತಮಟಗಾರ ಸಹೋದರ ಬ್ಲೇಡ್ ನಿಂದ ಹಲ್ಲೆ
Covid Scam: ಸಚಿವ ಸಂಪುಟದಲ್ಲಿ ಚರ್ಚಿಸಿ ಮುಂದಿನ ಕ್ರಮ: ಸಿಎಂ ಸಿದ್ದರಾಮಯ್ಯ
By Election: ಹಣ ಕೊಟ್ಟರೂ ಸಿಎಂ ಕಾರ್ಯಕ್ರಮಕ್ಕೆ ಜನ ಬರುತ್ತಿಲ್ಲ: ಬಿಎಸ್ ವೈ
MUST WATCH
ಹೊಸ ಸೇರ್ಪಡೆ
Notice: ಸಂಗೀತ ಕಾರ್ಯಕ್ರಮಕ್ಕೂ ಮೊದಲು ಪಂಜಾಬಿ ಗಾಯಕ ದಿಲ್ಜಿತ್ ದೋಸಾಂಜ್ ಗೆ ನೋಟಿಸ್
Leopard: ಮನೆಯ ಮಹಡಿ ಮೇಲೆ ಚಿರತೆ ಓಡಾಟ, CCTVಯಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಗ್ರಾಮಸ್ಥರು
Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್ ರಾಷ್ಟ್ರ?
India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ
Marriage: ಕ್ರಿಸ್ಮಸ್‌ಗೆ ಅಮೆಜಾನ್ ಸಿಇಒ ಅದ್ಧೂರಿ ವಿವಾಹ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.