ಆಹಾರ ಪದಾರ್ಥ ಕೊರತೆ ಕಾರ್ಮೋಡ
ಉತ್ಪಾದನೆ-ಸಂಸ್ಕರಣೆ ಮೇಲೆ ಪರಿಣಾಮ | ಅಗತ್ಯ ಕ್ರಮ ಕೈಗೊಳ್ಳದಿದ್ದರೆ ಸಮಸ್ಯೆ | ಗಮನ ಹರಿಸೀತೇ ಸರಕಾರ?
Team Udayavani, Jun 2, 2021, 5:24 PM IST
ವರದಿ : ಅಮರೇಗೌಡ ಗೋನವಾರ
ಹುಬ್ಬಳ್ಳಿ: ಕೋವಿಡ್ ಕರ್ಫ್ಯೂದಿಂದ ಆಹಾರ ಪದಾರ್ಥಗಳ ಕೊರತೆ ಉಂಟಾಗುತ್ತಿದೆ. ಜೂ.7ರ ನಂತರ ಕರ್ಫ್ಯೂ ಮುಂದುವರಿಸಿ ಆಹಾರ ಪದಾರ್ಥಗಳ ಉತ್ಪಾದನೆ-ಸಂಸ್ಕರಣೆಗೆ ಹೆಚ್ಚಿನ ಅವಕಾಶ ದೊರೆಯದಿದ್ದರೆ ಮುಂದಿನ ದಿನಗಳಲ್ಲಿ ಆಹಾರ ಪದಾರ್ಥಗಳ ಪೂರೈಕೆಯಲ್ಲಿ ಕೊರತೆ ಉಂಟಾಗುವ ಆತಂಕ ಎದುರಾಗಿದೆ.
ಕೋವಿಡ್ 2ನೇ ಅಲೆ ತೀವ್ರ ಸ್ವರೂಪ ಪಡೆದಿದ್ದಲ್ಲದೆ ಆಹಾರ ಪದಾರ್ಥಗಳ ಉತ್ಪಾದನೆ ಹಾಗೂ ಸಂಸ್ಕರಣೆ ಮೇಲೂ ಪರಿಣಾಮ ಬೀರತೊಡಗಿದೆ. ಆಹಾರ ಪದಾರ್ಥಗಳ ಪೂರೈಕೆಯಲ್ಲಿ ಇಳಿಮುಖ, ಇನ್ನೊಂದು ಕಡೆ ಬೆಲೆ ಏರುಮುಖವಾಗಿದ್ದು, ಇದೇ ಸ್ಥಿತಿ ಮುಂದುವರಿದರೆ ಕೃತಕ ಅಭಾವ ಸೃಷ್ಟಿ ಆತಂಕ ಇಲ್ಲದಿಲ್ಲ. ಬೇರೆ ಕಡೆಯಿಂದ ಬರುವ ಪದಾರ್ಥಗಳು ನಿರೀಕ್ಷಿತ ಪ್ರಮಾಣದಲ್ಲಿ ಬರುತ್ತಿಲ್ಲ. ಸ್ಥಳೀಯವಾಗಿಯೇ ಉತ್ಪಾದನೆ ಹಾಗೂ ಸಂಸ್ಕರಣೆ ಸಹ ನಿರೀಕ್ಷಿತ ಮಟ್ಟದಲ್ಲಿ ಆಗುತ್ತಿಲ್ಲ. ಈಗಾಗಲೇ ಉತ್ತರ ಕರ್ನಾಟಕದ ವಿವಿಧ ಜಿಲ್ಲೆಗಳ ಕಿರಾಣಿ ಅಂಗಡಿ, ಸೂಪರ್ ಮಾರ್ಕೆಟ್‌ಗಳಲ್ಲಿ ಒಂದು ಉತ್ಪನ್ನ-ಪದಾರ್ಥ ಇದ್ದರೆ ಇನ್ನೊಂದು ಇಲ್ಲ ಎನ್ನುವ ಸ್ಥಿತಿ ಇದೆ. ಹೋಲ್‌ಸೇಲ್ ಖಾಲಿ, ಖಾಲಿ?: ಆಹಾರ ಪದಾರ್ಥಗಳಿಗಾಗಿ ಕಿರಾಣಿ ಅಂಗಡಿಗಳು ಬಹುತೇಕವಾಗಿ ನೇರವಾಗಿ ಖರೀದಿಸದೆ ಹೋಲ್‌ಸೇಲ್ ವ್ಯಾಪಾರಸ್ಥರನ್ನು ನಂಬಿಕೊಂಡಿರುತ್ತವೆ. ವಿವಿಧ ಹೋಲ್ ಸೇಲ್ ವ್ಯಾಪಾರಸ್ಥರು ಕಿರಾಣಿ ಅಂಗಡಿಗಳಿಗೆ ಬೇಕಾಗುವ ಆಹಾರ ಧಾನ್ಯ, ಬೇಳೆ ಸೇರಿದಂತೆ ಹಲವು ಪದಾರ್ಥಗಳನ್ನು ಪೂರೈಸುತ್ತಾರೆ. ಹೋಲ್‌ಸೇಲ್‌ನವರು ಪದಾರ್ಥ- ಉತ್ಪನ್ನಗಳ ಪೂರೈಕೆಗೆ ವಿಳಂಬ ಮಾಡಿದರೆ ಇಲ್ಲವೆ ಬೇಡಿಕೆಯಷ್ಟು ಪದಾರ್ಥ ಪೂರೈಕೆ ಮಾಡದಿದ್ದರೆ, ಕಿರಾಣಿ ಅಂಗಡಿಗಳಲ್ಲಿ ಕೊರತೆ ಕಂಡು ಬರುತ್ತದೆ. ಇದೀಗ ಅಂತಹದ್ದೇ ಸ್ಥಿತಿ ನಿರ್ಮಾಣ ಆಗುತ್ತಿದೆಯೇ ಎಂಬ ಆಂತಕದ ಕಾರ್ಮೋಡ ಕವಿಯತೊಡಗಿದೆ.
ಆಹಾರ ಪದಾರ್ಥಕಗಳ ಉತ್ಪಾದನೆ, ಸಂಸ್ಕರಣೆಗೆ ನಿರ್ಬಂಧ ಇಲ್ಲವಾದರೂ ಆಹಾರ ಧಾನ್ಯ, ದ್ವಿದಳ ಧಾನ್ಯಗಳ ಲಭ್ಯತೆ ಕೊರತೆ, ರೈತರು ಮಾರಾಟಕ್ಕೆ ಬಾರದಿರುವುದು, ಸಂಸ್ಕರಣಾ ಘಟಕಗಳಲ್ಲಿ ಸಿಬ್ಬಂದಿ ಕೊರತೆ, ಆಹಾರ ಪದಾರ್ಥಗಳ ಲೋಡಿಂಗ್‌ಗೆ ಸಮಯ ಸಾಲದಿರುವುದು ಸೇರಿದಂತೆ ವಿವಿಧ ಕಾರಣಗಳಿಂದ ಹೋಲ್ ಸೇಲ್‌ನಲ್ಲಿಯೇ ಆಹಾರ ಧಾನ್ಯಗಳ ಸಂಗ್ರಹ ಕರಗುತ್ತಿದೆ. ಕೆಲವೊಂದು ಕಡೆಗಳಲ್ಲಿ ಖಾಲಿಯಾಗಿದೆ ಎಂದು ಹೇಳಲಾಗುತ್ತಿದೆ.
ತೊಗರಿಬೇಳೆ, ಕಡಲೆ ಬೇಳೆ, ಉದ್ದಿನ ಬೇಳೆ, ಹೆಸರು ಬೇಳೆ ಸೇರಿದಂತೆ ವಿವಿಧ ಕಾಳುಗಳನ್ನು ಸಂಸ್ಕರಣೆ ಮಾಡುವ ಬೃಹತ್ ಪ್ರಮಾಣದ ಮಿಲ್‌ವೊಂದರಿಂದ ನಿತ್ಯ 15 ಲೋಡ್ ಉತ್ಪನ್ನ ಸಾಗಿಸುತ್ತಿತ್ತು. ಒಂದು ಲೋಡ್‌ಗೆ ಸುಮಾರು 10 ಟನ್‌ನಷ್ಟು ಪದಾರ್ಥ ಹೋಗುತ್ತಿತ್ತು. ಇದೀಗ ಅದರ ಪ್ರಮಾಣ ಅತ್ಯಂತ ಕಡಿಮೆಯಾಗಿದೆ ಎಂಬುದು ಮಿಲ್‌ನವರ ಅನಿಸಿಕೆ. ಇದು ಕೇವಲ ಬೇಳೆಗಳ ಸ್ಥಿತಿಯಷ್ಟೇ ಅಲ್ಲ. ಉತ್ತರ ಕರ್ನಾಟಕದಲ್ಲಿರುವ ಅವಲಕ್ಕಿ, ಗೋಧಿ ರವಾ, ಮಂಡಕ್ಕಿ, ಅಡುಗೆ ಎಣ್ಣೆ, ಗೋದಿ -ಕಡಲೆ ಹಿಟ್ಟು, ಮೈದಾ ಹೀಗೆ ವಿವಿಧ ಪದಾರ್ಥಗಳ ತಯಾರಕರ ಸ್ಥಿತಿ ಇದಕ್ಕಿಂತ ಭಿನ್ನವಾಗಿಲ್ಲ. ಗಂಗಾವತಿಯಲ್ಲಿ ಅಕ್ಕಿ, ಕಲಬುರಗಿಯಲ್ಲಿ ತೊಗರಿಬೇಳೆ ಉತ್ಪನ್ನ ಇದ್ದರೂ ಸಾಗಣೆ ಸಮರ್ಪಕವಾಗಿ ಆಗುತ್ತಿಲ್ಲ ಎಂದು ಹೇಳಲಾಗುತ್ತಿದೆ.
ಉತ್ತರ ಕರ್ನಾಟಕದ ವಿವಿಧ ಜಿಲ್ಲೆಗಳಿಗೆ ಕಿರಾಣಿ ಪದಾರ್ಥಗಳನ್ನು ರವಾನಿಸಲು ಹುಬ್ಬಳ್ಳಿ ಪ್ರಮುಖ ಕೇಂದ್ರವಾಗಿದೆ. ಅನೇಕ ಜಿಲ್ಲೆಗಳಿಗೆ ಇಲ್ಲಿಂದಲೇ ಪದಾರ್ಥಗಳು ಹೋಗುತ್ತವೆ. ಕೆಲ ಮೂಲಗಳ ಪ್ರಕಾರ ಇಲ್ಲಿನ ಅನೇಕ ಹೋಲ್‌ಸೇಲ್‌ಗಳಲ್ಲಿ ಸಂಗ್ರಹ ಖಾಲಿಯಾಗತೊಡಗಿದೆ. ಜೂನ್ 7ರ ನಂತರ ಕರ್ಫ್ಯೂ ಮುಂದುವರಿಸಿ, ಇದೇ ಸ್ಥಿತಿ ಇದ್ದರೆ ಹೋಲ್‌ಸೇಲ್‌ಗಳಲ್ಲಿ ಸಂಗ್ರಹ ಸಂಪೂರ್ಣ ಖಾಲಿ ಆಗಲಿದೆ. ಕಿರಾಣಿ ಅಂಗಡಿಗಳಲ್ಲಿ ಆಹಾರ ಪದಾರ್ಥಗಳ ಕೊರತೆ ಉಂಟಾಗುವ ಸಾಧ್ಯತೆ ಇಲ್ಲದಿಲ್ಲ ಎಂಬುದು ಕೆಲ ಹೋಲ್‌ಸೇಲ್ ವರ್ತಕರ ಅನಿಸಿಕೆ. ಕೋವಿಡ್ ಮೊದಲ ಅಲೆಯಲ್ಲಿ ಆಹಾರಧಾನ್ಯ ಪದಾರ್ಥಗಳ ಉದ್ಯಮ ಸಿಬ್ಬಂದಿಗೆ ಕೆಐಎಡಿಬಿಯಿಂದ ಪಾಸ್ ನೀಡಲಾಗಿತ್ತು. ಈ ಬಾರಿ ಪಾಸ್ ವ್ಯವಸ್ಥೆ ಇಲ್ಲವಾಗಿದೆ. ಕಿರಾಣಿ ಅಂಗಡಿಗಳಿಗೆ ಸಂಕಷ್ಟ: ತೊಗರಿಬೇಳೆ ಉತ್ಪಾದನೆಗೆ ಹೆಸರಾದ ಕಲಬುರಗಿಯಲ್ಲಿ ಕಳೆದ 2-3 ವರ್ಷಗಳಿಂದ ದಾಲ್ ಮಿಲ್ ಉದ್ಯಮ ಸಂಕಷ್ಟಕ್ಕೆ ಸಿಲುಕಿದೆ.
ಕೋವಿಡ್ ಕರ್ಫ್ಯೂ ಇನ್ನಷ್ಟು ಸಂಕಷ್ಟ ಸೃಷ್ಟಿಸುವಂತೆ ಮಾಡಿದೆ. ಇನ್ನೊಂದು ಕಡೆ ಆಹಾರ ಉದ್ಯಮದ ಕಾರ್ಪೊರೇಟ್ ಕಂಪೆನಿಗಳು ಜಾಂಬಿಯಾದಿಂದ ತೊಗರಿ ಅಥವಾ ತೊಗರಿಬೇಳೆ ತರಿಸುತ್ತಿವೆ. ವಿವಿಧ ಬ್ರ್ಯಾಂಡ್‌ಗಳಲ್ಲಿ ಬಹುದೊಡ್ಡ ರಿಟೇಲ್ ಚೈನ್ ಹೊಂದಿರುವ ಸೂಪರ್ ಮಾರ್ಕೆಟ್ ಗಳಿಗೆ ನೀಡುತ್ತಿವೆ. ಕಲಬುರಗಿ ಇಲ್ಲವೆ ಸ್ಥಳೀಯವಾಗಿ ಉತ್ಪಾದನೆಯಾಗುವ ತೊಗರಿ ಬೇಳೆಯನ್ನು ನಂಬಿದ್ದ ರಾಜ್ಯದ ಅನೇಕ ಕಿರಾಣಿ ಅಂಗಡಿಗಳು ಸಮಸ್ಯೆ ಎದುರಿಸುವಂತಾಗಲಿದೆ. ಹೋಲ್‌ಸೇಲ್‌ಗಳನ್ನು ನಂಬಿರುವ ಕಿರಾಣಿ ಅಂಗಡಿಗಳಷ್ಟೇ ಅಲ್ಲ ಇದೀಗ ನೇರವಾಗಿ ಕಂಪೆನಿ ಇಲ್ಲವೆ ಕಾರ್ಪೊರೇಟ್ ವ್ಯವಸ್ಥೆಯಿಂದ ಆಹಾರ ಪದಾರ್ಥ ಖರೀದಿಸುವ ಸೂಪರ್ ಮಾರ್ಕೆಟ್‌ಗಳಲ್ಲೂ ಕೆಲವೊಂದು ಪದಾರ್ಥಗಳ ಕೊರತೆ ಉಂಟಾಗುತ್ತಿದೆ. ಆನ್‌ಲೈನ್ ಮೂಲಕ ವಹಿವಾಟು ನಡೆಸುವ ಕೆಲವೊಂದು ಕಂಪೆನಿಗಳು ಬುಕ್ ಮಾಡಿದ ಮರುದಿನವೇ ಮನೆ ಬಾಗಿಲಿಗೆ ವಸ್ತುಗಳನ್ನು ತರುತ್ತಿದ್ದವು. ಇದೀಗ ಬೇಡಿಕೆ ಸಲ್ಲಿಸಿ ಎರಡು-ಮೂರು ದಿನವಾದರೂ ಬರುತ್ತಿಲ್ಲ ಇದಕ್ಕೆ ಸಿಬ್ಬಂದಿ ಕೊರತೆಯೂ ಕಾರಣವಾಗಿದೆ. ಜತೆಗೆ ಸೂಪರ್ ಮಾರ್ಕೆಟ್‌ನಲ್ಲಿಯೇ ಅನೇಕ ಸಾಮಗ್ರಿ ಇಲ್ಲವೆಂಬ ಮಾಹಿತಿ ಲಭ್ಯವಾಗುತ್ತಿದೆ. ಆಹಾರ ಉದ್ಯಮ ಕೊರತೆ ನೀಗಿಸುವ ನಿಟ್ಟಿನಲ್ಲಿ ಸರಕಾರ ಅಗತ್ಯ ಕ್ರಮ ಕೈಗೊಳ್ಳದಿದ್ದರೆ ದೊಡ್ಡ ಸಮಸ್ಯೆಗೆ ಆಹ್ವಾನ ನೀಡಿದಂತಾಗಲಿದೆ ಎಂಬುದು ಅನೇಕರ ಅನಿಸಿಕೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Putin Apologizes: ಅಜರ್‌ಬೈಜಾನ್ ವಿಮಾನ ದುರಂತ… ಕ್ಷಮೆಯಾಚಿಸಿದ ರಷ್ಯಾ ಅಧ್ಯಕ್ಷ !
Udupi; ಗೀತಾರ್ಥ ಚಿಂತನೆ 139: ನಿರಂತರಾಭ್ಯಾಸದಿಂದ ಅಭಿಮಾನತ್ಯಾಗ ಸಾಧ್ಯ
Uttar Pradesh: ತಂದೆ, ಅಜ್ಜ, ಚಿಕ್ಕಪ್ಪನಿಂದಲೇ ಅಪ್ರಾಪ್ತೆ ಮೇಲೆ ಅತ್ಯಾಚಾರ!
Jagjit Singh Dallewal: ರೈತ ನಾಯಕನನ್ನು ಆಸ್ಪತ್ರೆಗೆ ದಾಖಲಿಸಲು ಡಿ.31ರ ಗಡುವು
Madikeri: ಹಲಸಿನ ಮರವೇರಿದ ಕಾರ್ಮಿಕನ ಮೇಲೆ ಗುಂಡು… ಆಸ್ಪತ್ರೆ ದಾರಿ ಮಧ್ಯೆ ಮೃತ್ಯು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.