ಉಚಿತ ಪಾಸ್‌ಗೆ ಕೊಕ್ಕೆ; ಹಣ ಉಳಿಸುವ ಸಲುವಾಗಿ ಬಸ್ ಪಾಸಿಲ್ಲ
Team Udayavani, Jun 5, 2018, 6:00 AM IST
ಹುಬ್ಬಳ್ಳಿ: ಸಿದ್ದರಾಮಯ್ಯ ಸರ್ಕಾರದ ಉಚಿತ ಬಸ್‌ಪಾಸ್ ಭಾಗ್ಯಕ್ಕೆ ಮೈತ್ರಿ ಸರ್ಕಾರ ಕೊಕ್ಕೆ ಹಾಕಿದೆ. ಈ ಬಗ್ಗೆ ಸೋಮವಾರವೇ ರಾಜ್ಯ ಸರ್ಕಾರದ ಆದೇಶ ಹೊರಬಿದ್ದಿದ್ದು, ವಿದ್ಯಾರ್ಥಿಗಳು ಶುಲ್ಕ ಪಾವತಿಸಿ, ರಿಯಾಯ್ತಿ ದರದಲ್ಲಿ ಬಸ್ ಪಾಸ್ ಖರೀದಿಸಬೇಕಾಗಿದೆ.
ಈ ಯೋಜನೆಯಿಂದ ಸರಕಾರಕ್ಕೆ ನೂರಾರು ಕೋಟಿ ರೂಪಾಯಿ ಆರ್ಥಿಕ ಹೊರೆಯಾಗಲಿದೆ ಎನ್ನುವ ಕಾರಣಕ್ಕೆ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರಕಾರ ಈ ಯೋಜನೆಗೆ ತಿಲಾಂಜಲಿ ಇಟ್ಟಿದೆ ಎನ್ನಲಾಗುತ್ತಿದೆ. ಈ ಕುರಿತು ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕರು ಕಳೆದ ವರ್ಷದಂತೆಯೇ ವಿದ್ಯಾರ್ಥಿ ರಿಯಾಯ್ತಿ ಬಸ್ ಪಾಸ್ ವಿತರಿಸುವಂತೆ ವಾಕರಸಾಸಂ, ಈಕರಸಾಸಂ ಹಾಗೂ ಬಿಎಂಟಿಸಿಗೆ ಅಧಿಕೃತವಾಗಿ ಆದೇಶ ನೀಡಿದ್ದಾರೆ.
ಆರ್ಥಿಕ ಹೊರೆ: ಹಿಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ 1 ತರಗತಿಯಿಂದ ಸಂಶೋಧನಾ ವಿದ್ಯಾರ್ಥಿಗಳವರೆಗೂ ಉಚಿತ ಬಸ್ ಪಾಸ್ ವಿತರಿಸುವುದಾಗಿ 2018-19 ನೇ ಸಾಲಿನ ಬಜೆಟ್‌ನಲ್ಲಿ ಘೋಷಿಸಿದ್ದರು. ಉಚಿತ ಪಾಸ್ ನೀಡುವುದರಿಂದ ಸರ್ಕಾರ ತನ್ನ ಪಾಲಿನ ಶೇ.50 ರಷ್ಟು ಸೇರಿದಂತೆ ಹೆಚ್ಚುವರಿಯಾಗಿ ವಿದ್ಯಾರ್ಥಿಗಳ ಪಾಲಿನ ಶೇ.25 ಶುಲ್ಕ ಒಟ್ಟಾರೆ 836.98 ಕೋಟಿ ರೂ. ಬಜೆಟ್‌ನಲ್ಲಿ ಸಹಾಯಧನ ನಿಗದಿ ಮಾಡಲಾಗಿತ್ತು.
2018-19 ಸಾಲಿನಲ್ಲಿ ಸುಮಾರು 19,60,247 ವಿದ್ಯಾರ್ಥಿಗಳಿಗೆ ಪಾಸ್ ವಿತರಿಸುವುದರಿಂದ 1955.06 ಕೋಟಿ ರೂ. ಖರ್ಚಾಗುತ್ತಿದ್ದು, ಸರ್ಕಾರ ಕೇವಲ 836 ಕೋಟಿ ರೂ. ನಿಗದಿ ಮಾಡಿದ್ದು, ಇಷ್ಟೊಂದು ಪಾಸ್‌ಗಳನ್ನು ವಿತರಿಸುವುದರಿಂದ ಸರ್ಕಾರ ನಾಲ್ಕು ಸಾರಿಗೆ ನಿಗಮಗಳಿಗೆ ಒಟ್ಟು 1466.30 ಕೋಟಿ ರೂ. ನೀಡಬೇಕಾಗುತ್ತಿದೆ. ಹೀಗಾಗಿ 629. 32 ಕೋಟಿ ರೂ. ವ್ಯತ್ಯಾಸದ ಹಣವನ್ನು ಪಾವತಿಸುವಂತೆ ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕರು ಸಾರಿಗೆ ಇಲಾಖೆ ಪ್ರಧಾನ ಕಾರ್ಯದರ್ಶಿಗೆ ಲಿಖೀತವಾಗಿ ಮನವಿ ಮಾಡಿದ್ದರು. ಉಚಿತ ಬಸ್ ಪಾಸ್ ನೀಡುವುದರಿಂದ 1466 ಕೋಟಿ ರೂ. ಸರ್ಕಾರಕ್ಕೆ ಆರ್ಥಿಕ ಹೊರೆಯಾಗಲಿದೆ ಎನ್ನುವುದು ಹಣಕಾಸು ಇಲಾಖೆಯ ವಾದವಾಗಿದೆ.
ತಾತ್ಕಾಲಿಕ ತಡೆ: ನೂರಾರು ಕೋಟಿ ರೂ.ಆರ್ಥಿಕ ಹೊರೆ ಎನ್ನುವ ಕಾರಣಕ್ಕೆ ಸಾರಿಗೆ ಇಲಾಖೆ ಮಂಡಿಸಿದ್ದ ಪ್ರಸ್ತಾವನೆಯನ್ನು ಹಣಕಾಸು ಇಲಾಖೆ ಕೊಕ್ಕೆ ಹಾಕಿದೆ. ಹಣಕಾಸು ಇಲಾಖೆ ಈ ಪ್ರಸ್ತಾವನೆಯನ್ನು ತಾತ್ಕಾಲಿಕವಾಗಿ ತಡೆ ಹಿಡಿದಿದೆ. ಹೊಸ ಸರಕಾರ ಶೀಘ್ರದಲ್ಲೇ ಹೊಸ ಬಜೆಟ್ ಮಂಡಿಸಲಿದ್ದು, ಪೂರ್ವಭಾವಿ ಸಭೆಯಲ್ಲಿ ಈ ಪ್ರಸ್ತಾವನೆ ಕುರಿತು ಚರ್ಚಿಸಲಾಗುವುದು ಎನ್ನುವ ಅಭಿಪ್ರಾಯಗಳಿದ್ದರೂ, ಈ ವರ್ಷ ಮಾತ್ರ ವಿದ್ಯಾರ್ಥಿಗಳು ರಿಯಾಯ್ತಿ ಶುಲ್ಕ ಪಾವತಿಸಿಯೇ ಪಾಸ್ ಪಡೆಯುವಂತಾಗಿದೆ.
ಸಂಸ್ಕರಣಾ ಶುಲ್ಕ ಮಾತ್ರ ಹೆಚ್ಚು:
ಸಂಸ್ಕರಣ ಶುಲ್ಕ 20ರೂ. ಹೆಚ್ಚಾಗಿದ್ದು, ಒಟ್ಟು 100 ರೂ. ನಿಗದಿಪಡಿಸಿರುವುದನ್ನು ಹೊರತು ಪಡಿಸಿ ಪಾಸ್ ದರದಲ್ಲಿ ಯಾವುದೇ ಹೆಚ್ಚಳವಾಗಿಲ್ಲ. 1-7 ತರಗತಿವರೆಗಿನ ವಿದ್ಯಾರ್ಥಿಗಳಿಗೆ 150 ರೂ, ಪ್ರೌಢಶಾಲೆ (ಬಾಲಕರಿಗೆ) 750 ರೂ. ಹಾಗೂ ಬಾಲಕಿಯರು 550 ರೂ, ಪಿಯುಸಿ, ಡಿಪ್ಲೋಮಾ, ಪದವಿ, ಸ್ನಾಕೋತ್ತರ 1050 ರೂ, ಸಂಜೆ ಕಾಲೇಜು, ಪಿಎಚ್‌ಡಿ 1350 ರೂ, ಐಟಿಐ 1310 ರೂ. ವೃತ್ತಿಪರ ವಿದ್ಯಾರ್ಥಿಗಳಿಗೆ 1550 ರೂ. ಹಾಗೂ ಎಸ್ಸಿ ಮತ್ತು ಎಸ್ಟಿ ವಿದ್ಯಾರ್ಥಿಗಳಿಂದ ಅಪಘಾತ ಪರಿಹಾರ ನಿಧಿ ಹಾಗೂ ಸಂಸ್ಕರಣ ಶುಲ್ಕ ಸೇರಿ 150 ರೂ. ಶುಲ್ಕ ನಿಗದಿ ಮಾಡಲಾಗಿದೆ. ಐಟಿಐ ವಿದ್ಯಾರ್ಥಿಗಳಿಗೆ 12 ತಿಂಗಳು, ಉಳಿದ ವಿದ್ಯಾರ್ಥಿಗಳಿಗೆ 10 ತಿಂಗಳಿಗೆ ಪಾಸ್ ನೀಡಲಾಗುತ್ತಿದೆ.
ಸರ್ಕಾರದ ನಿರ್ಧಾರದಂತೆ ಈ ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಉಚಿತ ಪಾಸ್ ವಿತರಿಸುತ್ತಿಲ್ಲ. ಕಳೆದ ವರ್ಷದ ಮಾರ್ಗಸೂಚಿಯಂತೆ ರಿಯಾಯ್ತಿ ದರದಲ್ಲಿ ವಿದ್ಯಾರ್ಥಿಗಳಿಗೆ ಪಾಸ್‌ಗಳನ್ನು ವಿತರಿಸುವಂತೆ ಎಲ್ಲಾ ನಿಗಮಗಳಿಗೆ ಸೂಚಿಸಲಾಗಿದೆ.
– ಎಸ್.ಆರ್.ಉಮಾಶಂಕರ, ಕೆಎಸ್‌ಆರ್‌ಟಿಸಿ ಎಂಡಿ
– ಹೇಮರಡ್ಡಿ ಸೈದಾಪುರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.