ಪಕ್ಷಕ್ಕಿಂತ ಸ್ಥಳೀಯ ರಾಜಕಾರಣದ್ದೇ ಆಟ
Team Udayavani, Aug 23, 2018, 3:43 PM IST
ಬೆಳಗಾವಿ: ಜಿಲ್ಲೆಯಲ್ಲಿ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ ರಂಗೇರುತ್ತಿದೆ. ನಾಮಪತ್ರ ಸಲ್ಲಿಕೆ, ಪರಿಶೀಲನೆ ಹಾಗೂ ವಾಪಸ್ ಪಡೆಯುವ ಕಾರ್ಯ ಈಗಾಗಲೇ ಪೂರ್ಣಗೊಂಡಿದ್ದು ಕಣದಲ್ಲಿ ಅಂತಿಮವಾಗಿ ಉಳಿದವರು ಜಯದ ತಯಾರಿ ನಡೆಸಿದ್ದಾರೆ. ಆಯಾ ಕ್ಷೇತ್ರದ ಶಾಸಕರು ಚುನಾವಣೆಯನ್ನು ಪ್ರತಿಷ್ಠೆಯ ವಿಷಯವನ್ನಾಗಿಸಿದ್ದು, ಅದಕ್ಕೆ ಅಗತ್ಯ ಸಿದ್ಧತೆ ಕೂಡ ಮಾಡಿದ್ದಾರೆ. ಜಿಲ್ಲೆಯಲ್ಲಿ ಅವಧಿ ಮುಗಿದ ಎರಡು ನಗರಸಭೆ. 10 ಪುರಸಭೆ ಹಾಗೂ ಎರಡು ಪಟ್ಟಣ ಪಂಚಾಯತ್‌ಗಳ 343 ವಾರ್ಡ್‌ಗಳಿಗೆ ಚುನಾವಣೆ ನಡೆಯಲಿದೆ. ಗೋಕಾಕ ಮತ್ತು ನಿಪ್ಪಾಣಿ ನಗರಸಭೆ, ಸಂಕೇಶ್ವರ, ಚಿಕ್ಕೋಡಿ, ಸದಲಗಾ, ಕೊಣ್ಣೂರ, ಕುಡಚಿ, ರಾಮದುರ್ಗ, ಸವದತ್ತಿ. ಬೈಲಹೊಂಗಲ, ಹುಕ್ಕೇರಿ, ಖಾನಾಪುರ ಹಾಗೂ ರಾಯಬಾಗ ಪಟ್ಟಣ ಪಂಚಾಯತ್ ಚುನಾವಣೆ ಎದುರಿಸುತ್ತಿರುವ ಸ್ಥಳೀಯ ಸಂಸ್ಥೆಗಳು. 2,08,968 ಮಹಿಳಾ ಮತದಾರರು ಸೇರಿದಂತೆ ಒಟ್ಟು 4,14,819 ಮತದಾರರು ಮತ ಚಲಾಯಿಸಲಿದ್ದಾರೆ.
ಮುಂಬರುವ ಲೋಕಸಭೆ ಚುನಾವಣೆಗೆ ಇದು ದಿಕ್ಸೂಚಿ ಎಂದೇ ಪರಿಗಣಿಸಲ್ಪಟ್ಟಿರುವದರಿಂದ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳಿಗೆ ಈ ಚುನಾವಣೆ ಮಹತ್ವದ್ದು. ಈಗಿನ ಸ್ಥಿತಿಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಇದು ಅಗ್ನಿಪರೀಕ್ಷೆಯಾಗಿದ್ದರೆ ಲೋಕಸಭೆಯಲ್ಲಿ ಮತ್ತೆ ಅಧಿಕಾರ ಹಿಡಿಯುವ ಗುರಿಹೊಂದಿರುವ ಬಿಜೆಪಿಗೆ ಸವಾಲಿನ ಪ್ರಶ್ನೆಯಾಗಿದೆ. ರಾಜ್ಯದಲ್ಲಿ ಸರಕಾರ ನಡೆಸುತ್ತಿದ್ದರೂ ಜೆಡಿಎಸ್ ಇಲ್ಲಿ ಆಟಕ್ಕುಂಟು ಲೆಕ್ಕಕ್ಕಿಲ್ಲ ಎನ್ನುವಂತಾಗಿದೆ.
ಆದರೆ ಇದುವರೆಗಿನ ಸ್ಥಳೀಯ ಸಂಸ್ಥೆಗಳ ಚುನಾವಣೆಯ ಫಲಿತಾಂಶ ಹಾಗೂ ಅಲ್ಲಿನ ರಾಜಕೀಯ ಗಮನಿಸಿದಾಗ ಇಲ್ಲಿ ಪಕ್ಷ ರಾಜಕಾರಣಕ್ಕಿಂತ ಸ್ಥಳೀಯ ರಾಜಕಾರಣಕ್ಕೆ ಹೆಚ್ಚಿನ ಮಹತ್ವವಿರುವುದು ಕಂಡು ಬರುತ್ತದೆ. ವಾರ್ಡ್‌ಗಳ ಸ್ಥಳೀಯ ವ್ಯಕ್ತಿಗಳ ಪ್ರಭಾವವೇ ಹೆಚ್ಚು ಪರಿಣಾಮ ಬೀರುತ್ತದೆ. ಹೀಗಾಗಿ ಎಲ್ಲ ರಾಜಕೀಯ ಪಕ್ಷಗಳು ಇಲ್ಲಿ ಸ್ಥಳೀಯವಾಗಿ ಪ್ರಭಾವ ಹೊಂದಿರುವ ವ್ಯಕ್ತಿಗಳಿಗೇ ಹೆಚ್ಚು ಮಣೆಹಾಕುತ್ತಿವೆ.
ಸರಕಾರದ ಸಾಧನೆ, ವೈಫಲ್ಯ ಇಲ್ಲಿ ಅಷ್ಟಾಗಿ ಪ್ರಾಮುಖ್ಯತೆ ಪಡೆಯುವುದಿಲ್ಲ. ಇದೇ ಕಾರಣದಿಂದ ಪ್ರಮುಖ ರಾಜಕೀಯ ಪಕ್ಷಗಳ ಮುಖಂಡರು ಸಹ ಪಕ್ಷದ ವಿಷಯಕ್ಕಿಂತ ಸ್ಥಳೀಯ ವಿಷಯಗಳನ್ನೇ ಚುನಾವಣೆಯ ವಿಷಯವನ್ನಾಗಿ ಮಾಡಿಕೊಂಡು ಪ್ರಚಾರ ನಡೆಸಿವೆ.
ಕಳೆದ ಚುನಾವಣೆಯಲ್ಲಿ ಚಿಕ್ಕೋಡಿ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಸಂಕೇಶ್ವರ, ಹುಕ್ಕೇರಿ, ಮತ್ತು ಸದಲಗಾ ಪುರಸಭೆ ಬಿಜೆಪಿ ವಶದಲ್ಲಿದ್ದರೆ ಚಿಕ್ಕೋಡಿ, ಕುಡಚಿ ಕಾಂಗ್ರೆಸ್ ಹಿಡಿತದಲ್ಲಿವೆ. ಬೆಳಗಾವಿ ಲೋಕಸಭಾ ವ್ಯಾಪ್ತಿಯ ಬೈಲಹೊಂಗಲ ರಾಮದುರ್ಗ ಹಾಗೂ ಕೊಣ್ಣೂರು ಪುರಸಭೆಗಳು ಕಾಂಗ್ರೆಸ್ ಹಿಡಿತದಲ್ಲಿದ್ದರೆ, ಸವದತ್ತಿ, ಮೂಡಲಗಿ, ಪುರಸಭೆಗಳಲ್ಲಿ ಬಿಜೆಪಿ ಆಡಳಿತ ಇದೆ. ಗೋಕಾಕ ನಗರಸಭೆ ಸಚಿವ ರಮೇಶ ಜಾರಕಿಹೊಳಿ ಬೆಂಬಲಿತ ಗುಂಪಿನ ವಶದಲ್ಲಿದ್ದರೆ ನಿಪ್ಪಾಣಿ ನಗರಸಭೆಯಲ್ಲಿ ಪಕ್ಷೇತರರು ಆಡಳಿತ ನಡೆಸುತ್ತಿದ್ದಾರೆ. ಖಾನಾಪುರ ಪಟ್ಟಣ ಪಂಚಾಯತ್‌ದಲ್ಲಿ ಕಾಂಗ್ರೆಸ್ ಹಾಗೂ ಎಂಇಎಸ್ ಮೈತ್ರಿ ಆಡಳಿತ ನಡೆಸುತ್ತಿದ್ದರೆ ರಾಯಬಾಗ ಪಟ್ಟಣ ಪಂಚಾಯತ್‌ದಲ್ಲಿ ಕಾಂಗ್ರೆಸ್ ಆಡಳಿತ ಇದೆ.
ಆದರೆ ಚಿಕ್ಕೋಡಿ ಪುರಸಭೆಯಲ್ಲಿ ಈ ವಾತಾವರಣ ಇಲ್ಲ. ಈ ಪುರಸಭೆಯಲ್ಲಿ ಪಕ್ಷದ ಆಧಾರದ ಮೇಲೆ ಚುನಾವಣೆ ನಡೆಯುತ್ತಿಲ್ಲ. ಬದಲಾಗಿ ಪಕ್ಷಗಳ ಬೆಂಬಲಿತ ಅಭ್ಯರ್ಥಿಗಳು ಸ್ಪರ್ಧೆ ಮಾಡಿದ್ದಾರೆ. ಕಳೆದ ಬಾರಿ ಕಾಂಗ್ರೆಸ್ ಬೆಂಬಲಿತ ಗುಂಪಿಗೆ ಒಲಿದಿದ್ದ ಪುರಸಭೆಯನ್ನು ಕಸಿದುಕೊಳ್ಳಲು ಬಿಜೆಪಿ ರಣತಂತ್ರ ರೂಪಿಸಿದೆ. ಇನ್ನು ಜಿಲ್ಲಾ ಉಸ್ತುವಾರಿ ರಮೇಶ ಜಾರಕಿಹೊಳಿ ಅವರ ಕ್ಷೇತ್ರ ಗೋಕಾಕ ನಗರಸಭೆಯಲ್ಲಿ ಈ ಬಾರಿಯೂ ಅವರದೇ ಗುಂಪಿನ ಬೆಂಬಲಿಗರ ಆಟ ಜೋರಾಗಿದೆ. ಇಲ್ಲಿ ಸಹ ಪಕ್ಷದ ಹೆಸರಿನಲ್ಲಿ ಚುನಾವಣೆ ನಡೆಯುತ್ತಿಲ್ಲ.
ಬೈಲಹೊಂಗಲದಲ್ಲಿ ಈ ಬಾರಿ ಕಾಂಗ್ರೆಸ್ ಶಾಸಕರು ಇರುವುದರಿಂದ ಪುರಸಭೆ ಮೇಲೆ ಹಿಡಿತ ಸಾಧಿಸುವ ಲೆಕ್ಕಾಚಾರದಲ್ಲಿ ಕಾಂಗ್ರೆಸ್ ಇದೆ. ಕಳೆದ ಬಾರಿ ಈ ಕ್ಷೇತ್ರದಲ್ಲಿ ಬಿಜೆಪಿ ಶಾಸಕರಿದ್ದರೂ ಕಾಂಗ್ರೆಸ್ ಅಧಿಕಾರ ಹಿಡಿದಿತ್ತು.ಈ ಬಾರಿಯೂ ಅದೇ ಮುಂದುವರಿಯಲಿದೆ ಎಂಬುದು ಕಾರ್ಯಕರ್ತರ ವಿಶ್ವಾಸ. ಸವದತ್ತಿಯಲ್ಲಿ ಬಿಜೆಪಿ ಶಾಸಕರು ಇರುವುದರಿಂದ ಅಲ್ಲಿ ಯಾವುದೇ ಬದಲಾವಣೆ ಆಗುವುದಿಲ್ಲ ಎಂಬುದು ಬಿಜೆಪಿ ಲೆಕ್ಕಾಚಾರ.
ಆದರೆ ರಾಮದುರ್ಗದ ಪುರಸಭೆ ಮೇಲಿದ್ದ ಕಾಂಗ್ರೆಸ್ ಧ್ವಜವನ್ನು ಕೆಳಗಿಳಿಸಲು ಬಿಜೆಪಿ ತಾಲೀಮು ನಡೆಸಿದ್ದು, ಇದಕ್ಕೆ ಸ್ಥಳೀಯ ಬಿಜೆಪಿ ಶಾಸಕರು ಶಕ್ತಿ ತುಂಬಿದ್ದಾರೆ. ಖಾನಾಪುರ ಪಟ್ಟಣ ಪಂಚಾಯತ್‌ದಲ್ಲಿ ಈ ಬಾರಿ ಕಾಂಗ್ರೆಸ್ ತನ್ನ ಸ್ವಂತ ಬಲದ ಮೇಲೆ ಅಧಿಕಾರ ಹಿಡಿಯಬೇಕು ಎಂಬ ಲೆಕ್ಕಾಚಾರದಲ್ಲಿದೆ. ಇದೇ ಪ್ರಥಮ ಬಾರಿಗೆ ಈ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿರುವ ಅಂಜಲಿ ನಿಂಬಾಳ್ಕರ ಮೇಲೆ ಬಹಳ ಜವಾಬ್ದಾರಿ ಇದೆ.
ಪಕ್ಷಗಳ ಲೆಕ್ಕಾಚಾರ
ಈಗ ಚುನಾವಣೆ ನಡೆಯುತ್ತಿರುವ 14 ಸ್ಥಳೀಯ ಸಂಸ್ಥೆಗಳಲ್ಲಿ ಎಂಟರಿಂದ ಹತ್ತು ಸ್ಥಳೀಯ ಸಂಸ್ಥೆಗಳ ಮೇಲೆ ಹಿಡಿತ ಸಾಧಿಸುವ ಲೆಕ್ಕಾಚಾರದಲ್ಲಿ ಬಿಜೆಪಿ ಇದ್ದರೆ ಕಾಂಗ್ರೆಸ್ ಇದೇ ಲೆಕ್ಕಾಚಾರದ ಮೇಲೆ ಚುನಾವಣೆ ಪ್ರಚಾರ ಆರಂಭಿಸಿದೆ. ಹುಕ್ಕೇರಿ ಹಾಗೂ ಸಂಕೇಶ್ವರದಲ್ಲಿ ತಮ್ಮ ಪ್ರಭಾವ ಹೊಂದಿರುವ ಶಾಸಕ ಉಮೇಶ ಕತ್ತಿ ಈ ಎರಡೂ ಕಡೆ ಬಿಜೆಪಿ ಅಧಿಕಾರ ಹಿಡಿಯುವಂತೆ ಕಸರತ್ತು ನಡೆಸಿದ್ದಾರೆ. ಆದರೆ ಇಲ್ಲಿ ಕಾಂಗ್ರೆಸ್‌ನ ಎ.ಬಿ. ಪಾಟೀಲ ಬಣ ತುರುಸಿನ ಪೈಪೋಟಿ ಒಡ್ಡಿರುವುದರಿಂದ ಚುನಾವಣೆ ಕುತೂಹಲ ಹುಟ್ಟಿಸಿದೆ. ನಿಪ್ಪಾಣಿಯಲ್ಲಿ ಸಹ ಬಿಜೆಪಿ ಶಾಸಕರಿರುವುದರಿಂದ ಅಲ್ಲಿ ಸಹ ತಮ್ಮದೇ ಅಧಿಕಾರ ಎಂಬ ವಿಶ್ವಾಸದಲ್ಲಿ ಬಿಜೆಪಿ ಇದೆ.
ಎಂಟು ವಶದ ವಿಶ್ವಾಸ
ವಾತಾವರಣ ಉತ್ತಮವಾಗಿದೆ. 14 ಸ್ಥಳೀಯ ಸಂಸ್ಥೆಗಳ ಪೈಕಿ ಕನಿಷ್ಠ ಎಂಟರಲ್ಲಿ ನಾವು ಅಧಿಕಾರ ಹಿಡಿಯುತ್ತೇವೆ. ಈ ನಿಟ್ಟಿನಲ್ಲಿ ನಾವು ಈಗಾಗಲೇ ಪ್ರಚಾರ ಶುರುಮಾಡಿದ್ದೇವೆ. ಎಲ್ಲಿಯೂ ನಮಗೆ ಸಮಸ್ಯೆ ಕಾಣುತ್ತಿಲ್ಲ.
ಶಶಿಕಾಂತ ನಾಯಕ, ಬಿಜೆಪಿ ಮುಖಂಡ
ಹತ್ತರಲ್ಲಿ ಗೆಲುವು
ಕಾಂಗ್ರೆಸ್‌ಗೆ ಬಹಳ ಅನುಕೂಲಕರ ವಾತಾವರಣ ಇದೆ. ಎಲ್ಲಿಯೂ ನಮಗೆ ಹಿನ್ನಡೆ ಕಾಣುತ್ತಿಲ್ಲ. ಕಾರ್ಯಕರ್ತರು ಒಗ್ಗಟ್ಟಿನಿಂದ ಕೆಲಸ ಮಾಡುತ್ತಿರುವುದರಿಂದ ನಾವು 10 ಸ್ಥಳೀಯ ಸಂಸ್ಥೆಗಳನ್ನು ಗೆಲ್ಲುವ ವಿಶ್ವಾಸ ಇದೆ.
ವಿನಯ ನಾವಲಗಟ್ಟಿ, ಕಾಂಗ್ರೆಸ್ ಜಿಲ್ಲಾಧ್ಯಕ್ಷ
ಕೇಶವ ಆದಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hubli: ಗ್ಯಾರಂಟಿ ಯೋಜನೆ ಹಣ ನಿರ್ಹವಣೆಗೆ ಬಿಪಿಎಲ್ ಕಾರ್ಡ್ ರದ್ದು: ವಿಜಯೇಂದ್ರ ಆರೋಪ
ತಮ್ಮದೇ ಮಕ್ಕಳ “ಅಪಹರಣ’ನಾಟಕವಾಡಿದ ಗೃಹಿಣಿಯರು
ಅನ್ನಭಾಗ್ಯ ಯೋಜನೆ ಮುನ್ನಡೆಸಲು ಸಾಧ್ಯವಾಗದೆ ಸರಕಾರ ಬಿಪಿಎಲ್ ಕಾರ್ಡು ರದ್ದು ಮಾಡಲು ಹೊರಟಿದೆ
Hubli: ಅಡವಿಸಿದ್ದೇಶ್ವರ ಮಠದ ಶ್ರೀ ಶಿವಲಿಂಗೇಶ್ವರ ಸ್ವಾಮೀಜಿ ಲಿಂಗೈಕ್ಯ
Hubli: ದಿವಾಳಿಯಾದ ಸರ್ಕಾರ ಬಿಪಿಎಲ್ ಕಾರ್ಡ್ ಕಡಿತ ಮಾಡುತ್ತಿದೆ: ಪ್ರಹ್ಲಾದ ಜೋಶಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.