ಗೋವಾ ಶಾಲೆ ಮಕ್ಕಳಿಗೆ ಸಿಕ್ಕಿಲ್ಲ ಪುಸ್ತಕ
Team Udayavani, Jul 29, 2018, 4:00 PM IST
ಪಣಜಿ: ಗೋವಾದಲ್ಲಿರುವ ಕನ್ನಡ ಮಾಧ್ಯಮ ಶಾಲೆಗಳ ವಿದ್ಯಾರ್ಥಿಗಳಿಗೆ ಇನ್ನೂ ವ್ಯಾಸಂಗ ಪುಸ್ತಕ ಸಿಗದೆ ವಿದ್ಯಾರ್ಥಿಗಳ ಅಧ್ಯಯನಕ್ಕೆ ಹಿನ್ನಡೆಯಾಗಿದೆ. ಪ್ರಸಕ್ತ ಶೈಕ್ಷಣಿಕ ವರ್ಷ ಆರಂಭವಾಗಿ ಎರಡು ತಿಂಗಳ ಕಳೆದರೂ ಇದುವರೆಗೂ ಗೋವಾ ರಾಜ್ಯದ ವಾಸ್ಕೊದಲ್ಲಿರುವ ಕನ್ನಡ ಮಾಧ್ಯಮ ಶಾಲೆಗಳಿಗೆ ಕರ್ನಾಟಕ ಶಿಕ್ಷಣ ಇಲಾಖೆ ಪುಸ್ತಕ ನೀಡಿಲ್ಲ. 8, 9 ಮತ್ತು ಹತ್ತನೇ ತರಗತಿ ವಿದ್ಯಾರ್ಥಿಗಳ ಭವಿಷ್ಯ ಇದರಿಂದಾಗಿ ಅಂಧಕಾರದಲ್ಲಿ ಸಿಲುಕಿದಂತಾಗಿದೆ.
ಗೋವಾ ರಾಜ್ಯದ ವಾಸ್ಕೊದ ಯಲ್ಲಾಲಿಂಗೇಶ್ವರ ಶಾರದಾ ಮಂದಿರ ಪ್ರೌಢಶಾಲೆ ಝರಿ ಹಾಗೂ ಯಲ್ಲಾಲಿಂಗೇಶ್ವರ ಶಾರದಾ ಮಂದಿರ ಪ್ರೌಢಶಾಲೆ ಸಾಸ್ಮೋಲಿಂ ಬೈನಾ ಈ ಎರಡೂ ಶಾಲೆಗಳ ವಿದ್ಯಾರ್ಥಿಗಳಿಗೆ ಕರ್ನಾಟಕ ಶಿಕ್ಷಣ ಇಲಾಖೆ ಇದುರೆಗೂ ಪುಸ್ತಕ ವಿತರಿಸಿಲ್ಲ. ಈ ಕುರಿತು ಕಾರವಾರ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ, ಉಪನಿರ್ದೇಶಕರು ಕಾರವಾರ ಇವರಿಗೆ ಈಗಾಗಲೇ ಪತ್ರ ಬರೆದು ಮನವಿ ಮಾಡಲಾಗಿದ್ದರೂ ಇನ್ನೂ ಕೂಡ ಪುಸ್ತಕ ಮಾತ್ರ ಬಂದಿಲ್ಲ.
ಇದೀಗ ಶಾಲೆ ವತಿಯಿಂದ ಕಾರವಾರ ಕ್ಷೇತ್ರ ಶಿಕ್ಷಣಾ ಧಿಕಾರಿಗಳಿಗೆ ಪತ್ರ ಬರೆದಾಗ ನಿಮ್ಮ ಶಾಲೆಗೆ ಪುಸ್ತಕ ಸಿಗುವುದಿಲ್ಲ, ಕಾರಣ ನಿಮ್ಮ ಶಾಲೆಗೆ ಎಸ್.ಎ.ಟಿ.ಎಸ್ ನಂಬರ್ ಇರುವುದಿಲ್ಲ ಎಂದು ತಿಳಿಸಿದ್ದಾರೆ ಎಂದು ತಿಳಿದು ಬಂದಿದೆ. ಈ ಮಾಹಿತಿ ಪಾಲಕರಿಗೆ ನೀಡಲು ಶಾಲಾ ಶಿಕ್ಷಕರು ಆರಂಭದಲ್ಲಿ ನಿರಾಕರಿಸಿದ್ದರು ಎಂದು ತಿಳಿದಿದೆ.
ಹೊರನಾಡಿನಲ್ಲಿ ಕನ್ನಡ ಅಭಿವೃದ್ಧಿಗಾಗಿ ಹಾಗೂ ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳಲು ಹಣ ಖರ್ಚು ಮಾಡುವ ಕರ್ನಾಟಕ ಸರ್ಕಾರ, ವಿದ್ಯಾರ್ಥಿಗಳಿಗೆ ಸಮಯಕ್ಕೆ ಸರಿಯಾಗಿ ಪಠ್ಯಪುಸ್ತಕ ನೀಡಲು ವಿಫಲವಾಗಿದೆ. ಇನ್ನಾದರೂ ಕರ್ನಾಟಕ ಶಿಕ್ಷಣ ಇಲಾಖೆ ಎಚ್ಚೆತ್ತು ಕೂಡಲೇ ಗೋವಾದಲ್ಲಿನ ಕನ್ನಡ ಶಾಲೆಗಳಿಗೆ ಅಗತ್ಯ ಪಠ್ಯಪುಸ್ತಕ ವಿತರಣೆ ಮಾಡಬೇಕಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.