ವಿಶ್ವಕ್ಕೆ ಸಿಹಿ ಉಣಿಸಲು ಸಜ್ಜಾದ ಗೋಧಿ ಹುಗ್ಗಿ
Team Udayavani, Dec 12, 2021, 12:47 PM IST
ಧಾರವಾಡ: ಉತ್ತರ ಕರ್ನಾಟಕದ ಸಿಹಿ ತಿನಿಸುಗಳಾದ ಧಾರವಾಡ ಪೇಢಾ, ಬೆಳಗಾವಿ ಕುಂದಾ, ಗೋಕಾಕದ ಕರದಂಟುಗಳು ವಿಮಾನವೇರಿ ವಿದೇಶಗಳಿಗೆ ಹೋಗಿದ್ದು ಹಳೇ ಸುದ್ದಿ. ಇದೀಗ ಇದೇ ಭಾಗದ ಪ್ರಸಿದ್ಧ ಸಿಹಿ ಖಾದ್ಯ, ಮದುವೆ ಸೇರಿದಂತೆ ಎಲ್ಲಾ ಶುಭ ಕಾರ್ಯಗಳಲ್ಲಿ ಬಾಯಿ ಸಿಹಿಮಾಡುವ ಗೋಧಿ ಹುಗ್ಗಿ ಕೂಡ ವಿಶ್ವದಎಲ್ಲಾ ರಾಷ್ಟ್ರಗಳಲ್ಲಿರುವ ಸಿಹಿ ಪ್ರಿಯರು ಚಪ್ಪರಿಸಲು ಸಜ್ಜಾಗಿದೆ.
ಹೌದು, ಧಾರವಾಡದ ಸಾಂಪ್ರದಾಯಿಕ ಅಡುಗೆಗಳಿಗೆ ಪ್ರಸಿದ್ಧರಾದ ಹಿರಿಯ ಬಾಣಸಿಗ ವೀರಭದ್ರಪ್ಪ ಕಲ್ಲಪ್ಪ ಲಟ್ಟಿ ಎಂಬುವರು ಕಳೆದ ನಾಲ್ಕು ವರ್ಷಗಳಿಂದ ಸತತ ಪರಿಶ್ರಮ ಪಟ್ಟು ಕಡೆಗೂ ಗೋಧಿ ಹುಗ್ಗಿಯನ್ನು ಪ್ಯಾಕೇಟ್‌ನಲ್ಲಿ ಹಾಕಿ “ರೆಡಿ ಟು ಈಟ್’ ಮಾದರಿಯಲ್ಲಿ ಸಜ್ಜುಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದಕ್ಕಾಗಿ ಬರೋಬ್ಬರಿ 50 ಲಕ್ಷ ರೂ. ಖರ್ಚು ಮಾಡಿ ಸತತ ಸಂಶೋಧನೆ ಮತ್ತು ತಂತ್ರಜ್ಞರ ಸಲಹೆ, ಸಹಕಾರ ಪಡೆದು ಆರು ಗಂಟೆಗಳ ಕಾಲ ಮಾಡುವ ಗೋಧಿ ಹುಗ್ಗಿಯನ್ನು ಕೇವಲ ಅರ್ಧ ಗಂಟೆಯಲ್ಲಿ ಸಜ್ಜುಗೊಳಿಸಿ ಊಟ ಮಾಡುವ ಹೊಸ ವಿಧಾನ ಕಂಡು ಹಿಡಿಯುವಲ್ಲಿ ಸಫಲರಾಗಿದ್ದಾರೆ.
ರೆಡಿ ಟೂ ಈಟ್ ಪ್ರಯೋಜನವೇನು?: ಗೋಧಿ ಹುಗ್ಗಿಯನ್ನು ಸರಳ, ಬೇಗವಾಗಿ ಮಾಡಲು ಆಗುವುದಿಲ್ಲ. ನಗರೀಕರಣದ ನಂತರವಂತೂ ಗೋಧಿ ಹುಗ್ಗಿ ನಗರವಾಸಿಗಳಿಗೆ ಗಗನ ಕುಸುಮವೇ ಆಗಿತ್ತು. ಇನ್ನು ಹಳ್ಳಿಗಳಲ್ಲಿ ಕೂಡ ಇದೀಗ ಎಲ್ಲೆಡೆ ಕಟ್ಟಿಗೆ ಒಲೆಗಳು ಮಾಯವಾಗಿದ್ದು, ಮಾಡಲು ಸಾಕಷ್ಟು ಶ್ರಮ ಹಾಕಬೇಕು. ಗೋಧಿ ಒಡೆಸಿ, ಅದನ್ನು ಕುಟ್ಟಿ, ತಾಸುಗಟ್ಟಲೆ ಕುದಿಸಿ, ಕೇರು ಗಿಡದ ಹುಟ್ಟಿನಿಂದಲೇಅದನ್ನು ಮಸೆದು ಹದ ಮಾಡಬೇಕು.ಇದೆಲ್ಲವನ್ನು ಮಾಡಲು ಇಂದಿನವರಿಗೆ ಸಾಧ್ಯವೇ ಇಲ್ಲವಾಗಿತ್ತು.
ಇದೀಗ ಧಾರವಾಡದ ಬಾಣಸಿಗ ವೀರಭದ್ರಪ್ಪ ಅವರು, ಸೆಂಟ್ರಲ್ ಫುಡ್ ರಿಸರ್ಚ್ ಟೆಕ್ನಾಲಜಿ ಮೈಸೂರು ಸಂಸ್ಥೆಯೊಂದಿಗೆ ಸತತ ಮೂರು ವರ್ಷ ಮೇಲಿಂದ ಮೇಲೆ ಪ್ರಯೋಗಗಳನ್ನು ಮಾಡಿ, ಅಂತಿಮವಾಗಿ ಸರಳವಾಗಿ ಮತ್ತು 6 ತಿಂಗಳ ಕಾಲ ಕಾಯ್ದಿಟ್ಟುಕೊಂಡು ಗೋಧಿ ಹುಗ್ಗಿ ಮಾಡುವಂತ ತಂತ್ರಜ್ಞಾನವನ್ನುಅಭಿವೃದ್ಧಿ ಪಡಿಸಿಕೊಂಡಿದ್ದಾರೆ. ಇದಕ್ಕೆ ಹುಬ್ಬಳ್ಳಿಯ ದೇಶಪಾಂಡೆ ಫೌಂಡೇಶನ್ ನವೋದ್ಯಮ ವಿಚಾರದಲ್ಲಿ ಬೆನ್ನಿಗೆ ನಿಂತು ಸಹಾಯ ಮಾಡಿದೆ. ಸದ್ಯಕ್ಕೆ 225 ಗ್ರಾಂನ ಪ್ಯಾಕೆಟ್‌ಗಳನ್ನು ಸಜ್ಜುಗೊಳಿಸಿದ್ದು, ಬೇಡಿಕೆಗೆತಕ್ಕಂತೆ ಪೂರೈಕೆಗೆ ಸಜ್ಜಾಗಿದೆ. ಇದೀಗ ಹಳ್ಳಿ, ನಗರ, ಹೊರ ರಾಜ್ಯ, ಹೊರ ದೇಶಗಳಲ್ಲಿರುವ ಗೋಧಿ ಹುಗ್ಗಿ ಪ್ರಿಯರು ಇದರ ರುಚಿಯನ್ನು ಸವಿಯಲುಅನುಕೂಲವಾಗಿದೆ.
ರಾಜಕೋಟ ಗೋಧಿ ಬಳಕೆ: ಧಾರವಾಡ ನೆಲದಲ್ಲಿ ಈಗಾಗಾಲೇ ಅಮೃತ ಸೇರಿದಂತೆ ಅನೇಕ ಗೋಧಿ ತಳಿಗಳನ್ನು ಹುಗ್ಗಿಗೆ ಬಳಕೆ ಮಾಡಲಾಗುತ್ತಿದೆ.ಆದರೆ ಇಲ್ಲಿ ಪಂಜಾಬ್ ಮತ್ತು ಹರಿಯಾಣಗಳಲ್ಲಿ ಬೆಳೆಯುವ ರಾಜಕೋಟ ಗೋಧಿಯನ್ನು ಬಳಕೆ ಮಾಡಿಕೊಳ್ಳಲಾಗಿದೆ. ಕಾರಣ ಈ ಗೋಧಿ ವರ್ಷ ಪೂರ್ತಿ ಲಭ್ಯವಿರುತ್ತದೆ. ಬರುವ ದಿನಗಳಲ್ಲಿ ಧಾರವಾಡ ಸೇರಿದಂತೆ ಉತ್ತರ ಕರ್ನಾಟಕ ಭಾಗದಲ್ಲಿ ಬೆಳೆಯುವ ವಿವಿಧ ತಳಿಯ ಗೋಧಿಯನ್ನು ಪರೀಕ್ಷೆಗೆ ಒಳಪಡಿಸಿ, ಮೌಲ್ಯವರ್ಧಿಸಿ ಗೋಧಿ ಹುಗ್ಗಿಗೆ ಬಳಕೆ ಮಾಡಿಕೊಳ್ಳಲು ವೀರಭದ್ರಪ್ಪ ಯೋಜಿಸಿದ್ದಾರೆ.
ಏನಿದು ಗೋಧಿ ಹುಗ್ಗಿ? :
ಅಖಂಡವಾಗಿರುವ ಗೋಧಿ ಕಾಳುಗಳನ್ನು ನೆನೆಸಿ ಒಳಕಲ್ಲಿನಲ್ಲಿ ಕುಟ್ಟಿ, 4-6 ಗಂಟೆಗಳ ಕಾಲ ಕುದಿಸಿ ಅದಕ್ಕೆ ಬೆಲ್ಲ, ತುಪ್ಪ, ದ್ರಾಕ್ಷಿ, ಗೋಡಂಬಿ, ಕೇರು ಬೀಜ, ಖರ್ಜೂರ ಬೆರೆಸಿ ಮಿತ ದ್ರವ ಸ್ಥಿತಿಯಲ್ಲಿರುವಂತೆ ಮಾಡಿ ಸವಿಯುವುದೇ ಗೋಧಿಹುಗ್ಗಿ. ಉತ್ತರ ಕರ್ನಾಟಕ ಭಾಗದಲ್ಲಿ ಇದು ಪಾರಂಪರಿಕ ಆಹಾರ. ಮದುವೆ, ಸೀಮಂತ, ದೊಡ್ಡ ಕಾರ್ಯಕ್ರಮಗಳು, ಸಮಾವೇಶಗಳು ಸೇರಿದಂತೆ ಶುಭ ಸಂದರ್ಭಗಳಲ್ಲಿ ಸಾಮೂಹಿಕ ಭೋಜನಕ್ಕೆ ಗೋಧಿ ಹುಗ್ಗಿಯೇ ಇಲ್ಲಿ ಪ್ರಧಾನ ಸಿಹಿ ಆಹಾರ ಪದಾರ್ಥ. ಗೋಧಿಯನ್ನು ಒಡೆದು ರವೆ ಮಾಡಿ ಬೆಲ್ಲದ ಜತೆ ಸೇರಿಸಿದ ಸಿಹಿ ಪದಾರ್ಥಕ್ಕೆ ಹುಗ್ಗಿ ಎನ್ನಲಾಗುತ್ತದೆ. ಆದರೆ ಇದಕ್ಕಿಂತಲೂ ಅಖಂಡವಾಗಿ ಕುದಿಸಿದ ಗೋಧಿ ಹುಗ್ಗಿ ರುಚಿಯಲ್ಲಿ ಒಂದು ಕೈ ಮೇಲು.
ಪೌಷ್ಟಿಕತೆ ಕಣಜ :
ಉತ್ತರ ಕರ್ನಾಟಕ ಭಾಗದಲ್ಲಿ ಅದರಲ್ಲೂ ಬಯಲು ಸೀಮೆ, ಬೆಳವಲದ ನಾಡಿನಲ್ಲಿ ಗೋಧಿ ಹುಗ್ಗಿ ಎಂದರೆ ಅದು ಬರೀ ಆಹಾರವಷ್ಟೇ ಅಲ್ಲ, ಪೌಷ್ಟಿಕತೆಯ ಕಣಜ ಎನ್ನುವ ಪರಿಕಲ್ಪನೆ ಇದೆ. ಗೋಧಿ ಹುಗ್ಗಿಗೆ ತುಪ್ಪ, ಹಾಲು, ಗೋಡಂಬಿ, ದ್ರಾಕ್ಷಿ, ಬಾದಾಮಿ, ಒಣ ಕೊಬ್ಬರಿ, ಖರ್ಜೂರ ಸೇರಿದಂತೆ ಎಲ್ಲಾ ಪೋಷಕಾಂಶಗಳಿರುವ ಪದಾರ್ಥಗಳನ್ನೇ ಬಳಕೆ ಮಾಡಲಾಗುತ್ತದೆ. ಹೀಗಾಗಿ ಇದು ಬರೀ ಆಹಾರವಷ್ಟೇ ಅಲ್ಲ, ಪೌಷ್ಟಿಕ ಆಹಾರದ ಪಟ್ಟಿಯಲ್ಲಿದೆ. ಬೆಂಗಳೂರಿನ ವಿದ್ಯಾರ್ಥಿ ಭವನ ಮಸಾಲೆ ದೋಸೆ ವಿದೇಶಿ ವಿಮಾನವೇರಿದಾಗ ಹೊರ ದೇಶದಲ್ಲಿನ ಕನ್ನಡಿಗರು ಸಂಭ್ರಮಿಸಿದ್ದರು. ಇದೀಗ ಕನ್ನಡಿಗರ ಸಿಹಿ ಖಾದ್ಯವೊಂದು ವಿದೇಶಗಳಲ್ಲಿರುವವರ ಬಾಯಿ ಚಪ್ಪರಿಸಲು ಸಜ್ಜಾಗಿರುವುದು ವಿಶೇಷ
ಗೋಧಿ ಹುಗ್ಗಿ ತಂತ್ರಜ್ಞಾನದ ಕುರಿತು ಹೊರ ದೇಶಗಳಲ್ಲಿರುವ ಕನ್ನಡಿಗರು ಅದರಲ್ಲೂ ಉತ್ತರ ಕರ್ನಾಟಕದ ಕನ್ನಡಿಗರು ಹೆಚ್ಚು ಹರ್ಷ ವ್ಯಕ್ತಪಡಿಸಿದ್ದು, ಯುಎಸ್‌ಎ, ಹಾಂಗ್‌ಕಾಂಗ್, ಆಸ್ಟ್ರೇಲಿಯಾ, ಇಂಗ್ಲೆಂಡ್, ರಷ್ಯಾದಿಂದ ಬೇಡಿಕೆ ಬಂದಿದೆ. ದುಬೈ-2020 ಪ್ರದರ್ಶನದಲ್ಲಿ ಭಾಗವಹಿಸಲು ಆಹ್ವಾನ ಬಂದಿದೆ. ಕನ್ನಡದ ಸಿಹಿ ಆಹಾರವೊಂದನ್ನು ವಿಶ್ವದ ಯಾವುದೇ ಮೂಲೆಯಲ್ಲಿ ಕುಳಿತು ಸವಿಯುವಂತೆ ಮಾಡಬೇಕೆಂಬ ಕನಸು ನನಸಾಗಿದೆ. -ವೀರಭದ್ರಪ್ಪ ಲಟ್ಟಿ, ಗುರು ಬಸವಾ ಕೇಟರಿಂಗ್ ಮಾಲೀಕ
-ಬಸವರಾಜ ಹೊಂಗಲ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hubli: ಅಯ್ಯಪ್ಪ ಶಿಬಿರದಲ್ಲಿ ಅಗ್ನಿ ಆಕಸ್ಮಿಕ: ಒಂಬತ್ತು ವೃತಧಾರಿಗಳಿಗೆ ಗಂಭೀರ ಗಾಯ
ಸಿ.ಟಿ.ರವಿ ನಕಲಿ ಎನ್‌ಕೌಂಟರ್‌ಗೆ ಸರಕಾರದ ಹುನ್ನಾರ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ
Dharwad: ಜಿಲ್ಲಾಧಿಕಾರಿ ಕಚೇರಿಯಲ್ಲಿ ಬ್ಯಾಟರಿ ಕಳ್ಳತನ
ಮಾಣಿಪ್ಪಾಡಿ ಪ್ರಕರಣವನ್ನು ಸರಕಾರ ಸಿಬಿಐ ಗೆ ನೀಡಲಿ, ಸತ್ಯಾಸತ್ಯತೆ ಹೊರಬರುತ್ತೆ: ಈಶ್ವರಪ್ಪ
Hubli: ಬಿಜೆಪಿಯವರಿಗೆ ಯಾವುದೇ ಆಸಕ್ತಿ ಇಲ್ಲ. ಅವರಿಗೆ ರಾಜಕಾರಣವೇ ಮುಖ್ಯ :ಡಿ.ಕೆ.ಶಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
FIR 6to6 movie: ಆ್ಯಕ್ಷನ್ ಚಿತ್ರದಲ್ಲಿ ವಿಜಯ ರಾಘವೇಂದ್ರ
Birthday Party: ಬರ್ತ್‌ಡೇ ಪಾರ್ಟಿ ಮುಗಿಸಿ ಬರುತ್ತಿದ್ದ ಮೂವರನ್ನು ಗುಂಡಿಕ್ಕಿ ಹ*ತ್ಯೆ…
Belagavi; ಬಹಳ ನೋವಾಗಿದೆ, ನೂರು ಸಿ.ಟಿ.ರವಿ ಬಂದರೂ ಹೆದರುವುದಿಲ್ಲ: ಲಕ್ಷ್ಮೀ ಹೆಬ್ಬಾಳಕರ
Cricket: ಚಾಂಪಿಯನ್ಸ್ ಟ್ರೋಫಿ ವೇಳಾಪಟ್ಟಿ ಅಂತಿಮ; ಭಾರತದ ಪಂದ್ಯಗಳಿಗೆ ಯುಎಇ ಆತಿಥ್ಯ
Arrested: ನಟ ಸುನಿಲ್ ಪಾಲ್, ಮುಸ್ತಾಕ್ ಅಪಹರಣ; ಎನ್‌ಕೌಂಟರ್ ಮೂಲಕ ಪ್ರಮುಖ ಆರೋಪಿ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.