ಕಲಬೆರಕೆ ಬಿಡಿ; ಶುದ್ಧ ಹಾಲು ಮಾತ್ರ ಡೈರಿಗೆ ಕೊಡಿ
Team Udayavani, Aug 18, 2018, 5:39 PM IST
ರಾಯಬಾಗ: ರೈತರು ಕಲಬೆರಕೆ ಅಥವಾ ಕೃತಕ ಹಾಲು ಬಿಟ್ಟು ಉತ್ತಮ ಗುಣಮಟ್ಟದ ಹಾಗೂ ಶುದ್ಧವಾದ ಹಾಲನ್ನು ಮಾತ್ರ ಡೇರಿಗಳಿಗೆ ಹಾಕಬೇಕೆಂದು ಬೆಳಗಾವಿ ಜಿಲ್ಲಾ ಹಾಲು ಒಕ್ಕೂಟದ ಮುಖ್ಯ ವ್ಯವಸ್ಥಾಪಕ ಡಾ| ಜೆ.ಆರ್. ಮಣ್ಣೇರಿ ಹೇಳಿದರು. ತಾಲೂಕಿನ ಮೊರಬ ಗ್ರಾಮದಲ್ಲಿ ಮೊರಬ ಹಾಲು ಉತ್ಪಾದಕರ ಸಹಕಾರಿ ಸಂಘದಲ್ಲಿ ನಿರ್ಮಿಸಲಾದ ಹಾಲು ಶೀಥಲೀಕರಣ ಘಟಕ ಉದ್ಘಾಟಿಸಿ ಅವರು ಮಾತನಾಡಿದರು.
ಗುಜರಾತ ರಾಜ್ಯವು ಹಾಲು ಉತ್ಪಾದನೆಯಲ್ಲಿ ಪ್ರಥಮ ಸ್ಥಾನದಲ್ಲಿದ್ದು, ಅಲ್ಲಿನ ರೈತರು ಯಾವತ್ತೂ ಕಲಬೆರಕೆ ಹಾಲನ್ನು ಡೇರಿಗಳಿಗೆ ಹಾಕುವುದಿಲ್ಲ. ಉತ್ತಮ ಮತ್ತು ಗುಣಮಟ್ಟದ ಹಾಲನ್ನು ಮಾತ್ರ ಹಾಕುತ್ತಾರೆ ಎಂದರು. ಬೆಳಗಾವಿ ಹಾಲು ಒಕ್ಕೂಟವು ಜಿಲ್ಲಾದ್ಯಂತ ಸುಮಾರು 22 ಹಾಲು ಶೀತಲೀಕರಣ ಕೇಂದ್ರಗಳನ್ನು ಹೊಂದಿ ಪ್ರತಿದಿನ 2 ಲಕ್ಷ ಲೀಟರ್ ಹಾಲು ಸಂಗ್ರಹಿಸುತ್ತದೆ. ಅದರಲ್ಲಿ ರಾಯಬಾಗ ತಾಲೂಕಿನಿಂದ ಪ್ರತಿದಿನ ಸುಮಾರು 40 ಸಾವಿರ ಲೀಟರ್ ಹಾಲು ಸಂಗ್ರಹವಾಗುತ್ತದೆ ಎಂದು ಹೇಳಿದ ಅವರು, ರೈತರು ಹಾಲಿನ ಗುಣಮಟ್ಟ ಕಾಪಾಡಿಕೊಂಡು ಆಕಳ ಹಾಲಿನ ಜೊತೆಗೆ ಎಮ್ಮೆಯ ಹಾಲನ್ನೂ ಕೆಎಂಎಫ್ ಡೇರಿಗಳಿಗೆ ಹಾಕಬೇಕೆಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ಧ ಮೊರಬ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ಸಂಜೀವಕುಮಾರ ಬಾನೆ ಮಾತನಾಡಿ, ಮೊರಬ ಹಾಲು ಉತ್ಪಾದಕರ ಸಂಘವು ಪ್ರಾರಂಭವಾಗಿ 32 ವರ್ಷಗಳು ಗತಿಸಿವೆ ಅಂದಿನಿಂದಲೂ ರೈತರಿಗೆ ಈ ಸಂಘ ಉತ್ತಮ ಸೇವೆ ನೀಡುತ್ತ ಬಂದಿದೆ. ಕೆಎಂಎಫ್ ಡೇರಿಗಳಿಗೆ ಹಾಲು ಹಾಕುವುದರಿಂದ ಪ್ರತಿ ಲೀಟರ್‌ಗೆ 5 ರೂ. ಪ್ರೋತ್ಸಾಹ ಧನ ಸಿಗುತ್ತದೆ ಎಂದು ಹೇಳಿದ ಅವರು, ಕೃಷಿಯೊಂದಿಗೆ ಹೈನುಗಾರಿಕೆ ಕೈಗೊಂಡು ಆರ್ಥಿಕವಾಗಿ ಸಬಲರಾಗಬೇಕೆಂದು ಹೇಳಿದರು.
ಈ ಸಂದರ್ಭದಲ್ಲಿ ಮೊರಬ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ಸಂಜೀವಕುಮಾರ ಬಾನೆ, ಬೆಳಗಾಂವಿ ಹಾಲು ಒಕ್ಕೂಟದ ಉಪವ್ಯವಸ್ಥಾಪಕ ಡಾ| ವಿ.ಕೆ. ಜೋಷಿ, ಡಿ.ಎಸ್. ನಾಯಿಕ, ಸಾಹೀಬಖಾನ, ರಮೇಶ ಕಂಕಣವಾಡಿ, ಶ್ರೀಶೈಲ ಪೂಜಾರಿ, ರಮೇಶ ಗಲಗಲಿ, ಮಂಜುನಾಥ ಹಗೇದಾಳ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.