ಉತ್ತರದ ಮತ್ತೊಂದು ಜೆಡಿಎಸ್ ವಿಕೆಟ್ ಪತನ?
ದಳದಲ್ಲಿ ನಿರ್ಗಮನ ಪರ್ವ | ರಾಜಕೀಯ ಭವಿಷ್ಯ ಚಿಂತನೆ | ಕಾಂಗ್ರೆಸ್‌ನತ್ತ ಕೋನರಡ್ಡಿ ಚಿತ್ತ?
Team Udayavani, Sep 20, 2021, 10:00 PM IST
ವರದಿ: ಅಮರೇಗೌಡ ಗೋನವಾರ
ಹುಬ್ಬಳ್ಳಿ: ಜಾತ್ಯತೀತ ಜನತಾದಳ(ಜೆಡಿಎಸ್)ದಲ್ಲಿ ನಾಯಕರ ನಿರ್ಗಮನ ಪರ್ವ ಮುಂದುವರಿದಿದ್ದು, ಉತ್ತರ ಕರ್ನಾಟಕದ ಜೆಡಿಎಸ್ ನಾಯಕ, ಮಾಜಿ ಶಾಸಕ ಎನ್.ಎಚ್. ಕೋನರಡ್ಡಿ ಅವರು ಜೆಡಿಎಸ್‌ನಿಂದ ಒಂದು ಕಾಲು ಹೊರಗಿಟ್ಟಿದ್ದಾರೆಯೇ? ಜೆಡಿಎಸ್ ವರಿಷ್ಠರ ಉದಾಸೀನತೆ, ಕ್ಷೇತ್ರದ ಜನತೆ ಆಶಯ, ಕೋನರಡ್ಡಿಯವರ ನಡೆ ಗಮನಿಸಿದರೆ ಅಂತಹ ಅನುಮಾನ ವ್ಯಕ್ತವಾಗುತ್ತಿದ್ದು, ಪಾಲಿಕೆ ಚುನಾವಣೆ ಸೋಲಿನ ನೆಪದಡಿ ಕೋನರಡ್ಡಿ ಅವರು ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ರಾಜೀನಾಮೆ ನೀಡಿರುವುದು ಈ ವಿದ್ಯಮಾನಕ್ಕೆ ಇಂಬು ನೀಡತೊಡಗಿದೆ.
ಎನ್.ಎಚ್. ಕೋನರಡ್ಡಿ ಯುವ ನಾಯಕರಾಗಿದ್ದಾಗಿನಿಂದಲೂ ಜನತಾ ಪರಿವಾರದೊಂದಿಗೆ ಗುರುತಿಸಿಕೊಂಡು ಬಂದವರು. ಜನತಾದಳದ ಯುವ ಮಹಾಪ್ರಧಾನ ಕಾರ್ಯದರ್ಶಿ ಸೇರಿದಂತೆ ವಿವಿಧ ಹುದ್ದೆ ನಿರ್ವಹಿಸಿದ್ದವರು. ಪಕ್ಷ ಅಧಿಕಾರದಲ್ಲಿ ಇರಲಿ, ಇಲ್ಲದಿರಲಿ, ಪಕ್ಷದ ಸಂಕಷ್ಟ ಸ್ಥಿತಿಯಲ್ಲೂ ಪಕ್ಷದಿಂದ ದೂರವಾಗದ ಕೆಲವೇ ಕೆಲವು ನಾಯಕರಲ್ಲಿ ಕೋನರಡ್ಡಿಯೂ ಒಬ್ಬರು. ಜೆಡಿಎಸ್‌ನಿಂದ ನವಲಗುಂದ ಕ್ಷೇತ್ರದ ಶಾಸಕರಾಗಿ ಆಯ್ಕೆಯಾಗಿದ್ದರು. ಜೆಡಿಎಸ್ -ಕಾಂಗ್ರೆಸ್ ಸಮ್ಮಿಶ್ರ ಸರಕಾರದಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರ ರಾಜಕೀಯ ಕಾರ್ಯದರ್ಶಿಯಾಗಿದ್ದರು. ನಂತರ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಂತಹ ಪ್ರಮುಖ ಸ್ಥಾನ ಪಡೆದಿದ್ದರು. ಇದೀಗ ಅವರೇ ತಮ್ಮ ರಾಜಕೀಯ ಭವಿಷ್ಯ ಕಂಡುಕೊಳ್ಳುವ ನಿಟ್ಟಿನಲ್ಲಿ ಜೆಡಿಎಸ್ ತೊರೆಯುವುದಕ್ಕೆ ಮುಂದಡಿ ಇರಿಸಿದ್ದಾರೆ ಎಂದು ಹೇಳಲಾಗುತ್ತಿದೆ.
ಪಕ್ಷದ ಏರಿಳಿತದ ಅನುಭವ: ಎನ್.ಎಚ್.ಕೋನರಡ್ಡಿ ಯುವಕರಾಗಿದ್ದಾಗಿನಿಂದಲೂ ರಾಮಕೃಷ್ಣ ಹೆಗಡೆ, ಎಚ್.ಡಿ. ದೇವೇಗೌಡ, ಜೆ.ಎಚ್. ಪಟೇಲ್‌ರೊಂದಿಗೆ ಉತ್ತಮ ಒಡನಾಟ ಹೊಂದಿದ್ದರು. ಜನತಾ ಪರಿವಾರ ಇಬ್ಭಾಗವಾಗಿದ್ದಾಗ ಜೆಡಿಯು ನಂತರ ಜೆಡಿಎಸ್‌ನಲ್ಲಿ ಮುಂದುವರಿದರು. ಹಲವು ವರ್ಷಗಳಿಂದ ಜೆಡಿಎಸ್‌ನೊಂದಿಗೆ ಗುರುತಿಸಿಕೊಂಡಿದ್ದಾರೆ. ಹೋರಾಟ ಮನೋಭಾವದ ಕೋನರಡ್ಡಿ ನವಲಗುಂದ ಶಾಸಕರಾದ ನಂತರ ಸದನದಲ್ಲಿ ವಿಶೇಷವಾಗಿ ಮಹದಾಯಿ, ಕಳಸಾ-ಬಂಡೂರಿ ನಾಲಾ ಯೋಜನೆ, ಉತ್ತರ ಕರ್ನಾಟಕದ ವಿವಿಧ ವಿಷಯಗಳು, ರೈತರ ಸಮಸ್ಯೆಗಳ ಮೂಲಕ ಗಮನ ಸೆಳೆಯುವ ರೀತಿಯಲ್ಲಿ ಧ್ವನಿ ಎತ್ತಿದ್ದರು. ಒಬ್ಬಂಟಿಯಾದರೂ ಸರಿ ಧರಣಿ ನಡೆಸುವ ಗತ್ತು ತೋರಿದವರು.
ಜೆಡಿಎಸ್ ಕೋನರಡ್ಡಿ ಅವರಿಗೆ ಸಿಹಿ-ಕಹಿಯ ಕೊಡುಗೆ ನೀಡಿದೆ ಎಂದರೂ ತಪ್ಪಾಗಲಾರದು. ಕೋನರಡ್ಡಿ ಶಾಸಕರಾಗಿದ್ದು ಜೆಡಿಎಸ್ ಪಕ್ಷದಿಂದ, ಜತೆಗೆ ಮುಖ್ಯಮಂತ್ರಿ ರಾಜಕೀಯ ಕಾರ್ಯ ದರ್ಶಿಯಾದರು, ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾದ ಸವಿಯುಂಡಿದ್ದರು. ಜತೆಗೆ ಎರಡ್ಮೂರು ಬಾರಿ ವಿಧಾನಪರಿಷತ್ತಿಗೆ ಆಯ್ಕೆ ವಿಚಾರ ಬಂದಾಗ ಕೋನರಡ್ಡಿ ಯವರ ಹೆಸರು ಮುನ್ನೆಲೆಗೆ ಬಂದಿತ್ತಲ್ಲದೆ, ಇನ್ನೇನು ನಾಮಪತ್ರ ಸಲ್ಲಿಕೆಯಾಗಬೇಕು ಎಂಬು ಕೊನೆ ಗಳಿಗೆಯಲ್ಲಿ ಸ್ಥಾನ ಕೈ ತಪ್ಪಿದ ಕಹಿಯೂ ಅನುಭವಿಸುವಂತಾಗಿತ್ತು. ವಿಧಾನಪರಿಷತ್ತಿಗೆ ಆಯ್ಕೆ ವಿಚಾರವಾಗಿ ಒಮ್ಮೆ ಪಕ್ಷ ನಿರ್ಧರಿಸಿದ ಅಭ್ಯರ್ಥಿ ಬೆಂಗಳೂರಿನಲ್ಲಿ ಟ್ರಾಫಿಕ್‌ನಲ್ಲಿ ಸಿಲುಕಿಕೊಂಡಿದ್ದರು. ನಾಮಪತ್ರ ಸಲ್ಲಿಕೆ ಸಮಯ ಮೀರುತ್ತ ಬಂದಾಗ, ತರಾತುರಿಯಲ್ಲಿ ನಾಮಪತ್ರ ಸಲ್ಲಿಸಲು ಸೂಚಿಸಿದಾಗ ಕೋನರಡ್ಡಿ ಇನ್ನೇನು ನಾಮಪತ್ರ ಸಲ್ಲಿಕೆಗೆ ಸಿದ್ಧರಾಗಿ ದಾಖಲೆಗಳ ಸಲ್ಲಿಕೆಗೆ ಮುಂದಾಗಿದ್ದರು. ನಾಮಪತ್ರ ಸಲ್ಲಿಕೆಗೆ ಇನ್ನು ಕೆಲವೇ ನಿಮಿಷಗಳು ಬಾಕಿ ಇರುವಾಗ ನಿರ್ಧಾರಿತ ಅಭ್ಯರ್ಥಿ ಆಗಮಿಸಿ ದ್ದರಿಂದ ಕೋನರಡ್ಡಿ ಹಿಂದೆ ಸರಿಯ ಬೇಕಾಗಿತ್ತು.
ವಿಧಾನಸಭೆ ಚುನಾವಣೆಯಲ್ಲಿ ಸೋತ ನಂತರದಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರೇ ಖುದ್ದಾಗಿ ವಿಧಾನಪರಿಷತ್ತಿಗೆ ಪಕ್ಷದ ಅಭ್ಯರ್ಥಿಯಾಗಿ ಎಂದು ಸೂಚಿಸಿದ್ದರಿಂದ ಕೋನರಡ್ಡಿ ಎಲ್ಲ ತಯಾರಿ ಮಾಡಿಕೊಂಡಿದ್ದರು ಎನ್ನಲಾಗಿದೆ. ಆದರೆ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಒಲವು ಪಡೆದ ಆಕಾಂಕ್ಷಿಯೊಬ್ಬರ ಬಿ ಫಾರಂನಲ್ಲಿ ತಮ್ಮ ಹೆಸರು ನಮೂದಿಸುವ ಮೂಲಕ ವಿಧಾನಪರಿಷತ್ತು ಪ್ರವೇಶಿಸಿ, ಕೋನರಡ್ಡಿಗೆ ತಡೆಯೊಡ್ಡಿದ್ದರು ಎನ್ನಲಾಗಿದೆ. ಪಕ್ಷದ ಅವಕಾಶ ನೀಡಿದಾಗಲು, ಕೆಲವು ಅವಕಾಶಗಳನ್ನು ತಪ್ಪಿಸಿದಾಗಲು ಸಮಭಾವದಿಂದ ಸ್ವೀಕರಿಸಿ, ಪಕ್ಷದಲ್ಲಿ ಮುಂದುವರಿದ ಉತ್ತರ ಕರ್ನಾಟಕದ ನಾಯಕರಲ್ಲಿ ಬಸವರಾಜ ಹೊರಟ್ಟಿ ಹಾಗೂ ಕೋನರಡ್ಡಿ ಪ್ರಮುಖರು. ಹೊರಟ್ಟಿಯವರು ಸಭಾಪತಿಯಾಗಿದ್ದರಿಂದ ಪಕ್ಷದಿಂದ ದೂರವಾಗಿದ್ದು, ಈ ಭಾಗದ ಜವಾಬ್ದಾರಿ ಹೊತ್ತಿದ್ದ ಕೋನರಡ್ಡಿಯೂ ಇದೀಗ ಪಕ್ಷದಿಂದ ಒಂದು ಕಾಲು ಹೊರಗಿಟ್ಟಿದ್ದಾರೆ ಎನ್ನಲಾಗುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.