ಶೃಂಗಾರ ಕಾವ್ಯ ರಮ್ಯ; ಆಗಲಿಲ್ಲ ಹೋಳಿ ಅದಮ್ಯ
Team Udayavani, Mar 9, 2020, 11:25 AM IST
ಧಾರವಾಡ: ಸಾಮಾಜಿಕ ಸಹಬಾಳ್ವೆ, ಶೃಂಗಾರ ಕಾವ್ಯದ ಮೆರವಣಿಗೆ.. ಗಂಡು ಮಕ್ಕಳ ಸಂಭ್ರಮ.. ಮಕ್ಕಳ ತುಂಟುತನಕ್ಕೆ ವೇದಿಕೆ..ಯುವಕರ ಹಾರಾಟದ ಪರಾಕಾಷ್ಠೆ..ಪರಸ್ಪರ ಬಣ್ಣ ಎರಚಿ ಅಭಿನಂದಿಸುವ ಸುವರ್ಣಾವಕಾಶ.. ಹೀಗೆ ಹಲವು ಮಗ್ಗಲುಗಳ ಹೋಳಿಹಬ್ಬ ತನ್ನ ಮೂಲ ಸ್ವರೂಪದಲ್ಲಿಯೇ ಬದಲಾಗುತ್ತ ಸಾಗಿದ್ದು, ಬರೀ ಬಣ್ಣದಾಟಕ್ಕೆ ಮಾತ್ರ ಸೀಮಿತವಾಗಿ ನಿಂತಿದೆ.
ಹೌದು. ಜಿಲ್ಲೆಯಲ್ಲಿ ಹೋಳಿಹುಣ್ಣಿಮೆ ಅಥವಾ ಹೋಳಿಹಬ್ಬವನ್ನು ವಿಭಿನ್ನ ಶೈಲಿಯಲ್ಲಿ ಆಚರಿಸುವ ಸಂಪ್ರದಾಯವಿತ್ತು. ಆದರೆ ಜಾಗತೀಕರಣದ ಹೊಡೆತಕ್ಕೆ ತನ್ನ ಸ್ವರೂಪವನ್ನೇ ಕಳೆದುಕೊಂಡು ಬರೀ ಬಣ್ಣ ಎರಚಾಟ, ಮದ್ಯದ ಅಮಲು ಮತ್ತು ಡಿ.ಜೆ. ಶಬ್ದಕ್ಕೆ ಮಾತ್ರ ತನ್ನ ಅಸ್ತಿತ್ವವನ್ನು ತಂದು ನಿಲ್ಲಿಸಿದೆ. ಹೋಳಿಹಬ್ಬವನ್ನು ಅಖಂಡ ಧಾರವಾಡ ಜಿಲ್ಲೆಯವಿವಿಧ ಭಾಗಗಳಲ್ಲಿ ವಿಭಿನ್ನ ಶೈಲಿಯಲ್ಲಿ ಆಚರಿಸಲಾಗುತ್ತದೆ. ಇಲ್ಲಿ ರಾಷ್ಟ್ರೀಯ ಹೆದ್ದಾರಿ 4ರ ಪೂರ್ವ ಭಾಗದ ಬೆಳವಲದ ಸಂಸ್ಕೃತಿ ಮತ್ತು ಪಶ್ಚಿಮ ಭಾಗದ ಅರೆಮಲೆನಾಡು ಸಂಸ್ಕೃತಿಗೆ ತಕ್ಕಂತೆ ಹೋಳಿಹಬ್ಬ ಆಚರಿಸಲಾಗುತ್ತದೆ. ಬಯಲು ಸೀಮೆಯ ಜನ ಬರೀ ಕಾಮಣ್ಣನನ್ನು ಸುಟ್ಟು, ಸಾರಾಯಿ ಕುಡಿದು ಸಂಭ್ರಮಿಸುವುದೇ ಹೆಚ್ಚು. ಇಲ್ಲಿ ಹೋಳಿಪದಗಳಿಗೆ ಹೆಚ್ಚು ಅವಕಾಶವಿಲ್ಲ. ಇನ್ನು ಜಿಲ್ಲೆಯ ಅರೆಮಲೆನಾಡು ತಾಲೂಕುಗಳಲ್ಲಿ ಕಾಮಣ್ಣನ ಗಣಿ (ದೈತ್ಯ ಮರದ ದಿಮ್ಮೆ ಅಥವಾ ನಾಟಾ)ಯನ್ನು ಕಾಡಿನಿಂದ ಕಡೆದು ತಂದು ಊರಿನ ಅಗಸಿ ಬಾಗಿಲಿಗೆ ನಿಲ್ಲಿಸುವ ಸಂಪ್ರದಾಯ ಇಂದಿಗೂ ಜೀವಂತವಾಗಿದೆ.
ಅರೆಮಲೆನಾಡು ಪ್ರದೇಶದಲ್ಲಿ ಹೋಳಿ ಹುಣ್ಣಿಮೆಯ ಕಾಮದೇವರ ಸತ್ಯಮಿತ್ಯದ ಕಥೆಗಳು ಉಂಟು. ಸಂಬಂಧ ಬೆಸೆದ ಕಾಮಣ್ಣ: ಅಣ್ಣಿಗೇರಿ ಕಾಮಣ್ಣನ ತಲೆ ಚಂಡು (ತಲೆ)ತಂದ ಧೀರ ಜಾನಪದ ಸಾಂಸ್ಕೃತಿಕ ನಾಯಕನೊಬ್ಬನ ಕಥೆ ಧಾರವಾಡ ಜಿಲ್ಲೆಯಲ್ಲಿ ಪ್ರಚಲಿತದಲ್ಲಿದೆ. ಅಣ್ಣಿಗೇರಿಯಲ್ಲಿ 18ನೇ ಶತಮಾನದಲ್ಲಿ ದೈತ್ಯ ಕಾಮಣ್ಣ ದೇವರ ಕೂಡಿಸಿ ಹಬ್ಬ ಮಾಡುವ ಸಂಭ್ರಮವಿತ್ತು. ಧಾರವಾಡ ಸಮೀಪದ ಮುಳಮುತ್ತಲ ಗ್ರಾಮದ ಯುವಕನೊಬ್ಬ ಹೆಂಡತಿಗೆ ಹೊಲದಿಂದ ದಣಿದು ಬಂದು ನೀರು ಕೊಡಲು ಕೇಳುತ್ತಾನೆ. ಆಕೆ ಬೇಗನೇ ಕೊಡದಿದ್ದಾಗ ಅವಳನ್ನು ದಬಾಯಿಸುತ್ತಾನೆ. ಇದನ್ನೇ ನೆಪ ಮಾಡಿಕೊಂಡ ಯುವಕನ ಹೆಂಡತಿ, ಸ್ವಲ್ಪ ತಡಿ, ಏನು ನೀನು ಅಣ್ಣಿಗೇರಿ ಕಾಮಣ್ಣನ ತಲೆ ತಂದೋರಂಗೆ ಹಾರಾಡ್ತಿಯಲ್ಲ ಎಂದು ಆತನನ್ನು ವ್ಯಂಗ್ಯವಾಗಿ ತಿರಸ್ಕರಿಸುತ್ತಾಳೆ. ಹೆಂಡತಿ ಮಾತಿಗೆ ಸಿಟ್ಟಿಗೆದ್ದ ಆತ ಅಂದು ರಾತ್ರಿ ಅಣ್ಣಿಗೇರಿಗೆ ಹೋಗಿ ಅಲ್ಲಿಂದ ಕಾಮಣ್ಣನ ತಲೆ ಕತ್ತರಿಸಿಕೊಂಡು ಓಡಲಾರಂಭಿಸುತ್ತಾನೆ. ಬೆಳಗಿನ ಜಾವ ಹರಿಯುವುದರೊಳಗೆ ಮುಳಮುತ್ತಲ ಸೀಮೆಗೆ ಬರುತ್ತಾನೆ. ಅಷ್ಟರಲ್ಲಿ ಆತನನ್ನು ಅಣ್ಣಿಗೇರಿ ಜನ ಬೆನ್ನಟ್ಟಿ ಹೊಡೆದಿರುತ್ತಾರೆ.
ಈ ಕಥೆಯ ಆಧಾರವಾಗಿಟ್ಟುಕೊಂಡೆ ಇಂದಿಗೂ ಮುಳಮುತ್ತಲದಲ್ಲಿ ದೈತ್ಯ ಕಾಮಣ್ಣನ ಪ್ರತಿಷ್ಠಾಪನೆ ಮತ್ತು ಅಂದು ಊರಿನ ಜನರೆಲ್ಲರೂ ಕೊಡಲಿ, ಕುಡಗೋಲು, ಹತಾರ್, ಖಡ್ಗ ಹಿಡಿದು ಕಾಮಣ್ಣನ ಕಾವಲು ಕಾಯುತ್ತಾರೆ. ಇಲ್ಲಿ ಬೆಳವಲದ ಸೀಮೆಯ ಕಾಮಣ್ಣ ಅರಮಲೆನಾಡಿನ ಧಾರವಾಡ ಸಮೀಪದ ಮುಳಮುತ್ತಲಕ್ಕೆ ಬಂದಿರುವುದು ಈ ಎರಡೂ ಪ್ರದೇಶಗಳ ಸಂಬಂಧ ಬೆಸೆಯುವಂತಹದ್ದಾಗಿದೆ. ಈ ಕಥೆಯ ಪರಿಣಾಮ ಇಂದಿಗೂ ಧಾರವಾಡ ಜಿಲ್ಲೆಯ ಎಲ್ಲಾ ಹಳ್ಳಿಗಳಲ್ಲೂ ಜನ ಸರ್ಪಗಾವಲು ಹಾಕಿಕೊಂಡು ಕಾಯುತ್ತಾರೆ. ಜನಪದೀಯ ಶೈಲಿಯ ಈ ಕಥೆ ಈ ಭಾಗದ ಹೋಳಿಹಬ್ಬದ ಜೀವಾಳ ಕೂಡ ಆಗಿದೆ. ಅಂದರೆ ಹೋಳಿಹಬ್ಬ ಯುವಕರ ಸಾಧನೆಗೆ ಸ್ಫೂರ್ತಿ ನೀಡುವ, ಧೈರ್ಯ ಸಾಹಸಕ್ಕೆ ವೇದಿಕೆಯಾಗುವ ಜಾನಪದೀಯ ಪರಿಕಲ್ಪನೆಯನ್ನು ಈ ಕಥೆ ಒಳಗೊಂಡಿದೆ.
ಮಾಯವಾದ ಹೋಳಿ ಸಾಹಿತ್ಯ: ಶಿಕ್ಷಣ ಕಾಶಿ ಧಾರವಾಡ ಜಿಲ್ಲೆಯಲ್ಲಿ ಜಾನಪದ ಸಾಹಿತ್ಯವೂ ಅಷ್ಟೇ ಶ್ರೀಮಂತಿಕೆಯಿಂದ ಕೂಡಿದೆ. ಇಲ್ಲಿ ಹೋಳಿ ಹಬ್ಬದಲ್ಲಿ ಹಾಡುವ ಶೃಂಗಾರ ಹಾಡುಗಳು ಅರ್ಥಾರ್ಥ ಹೋಳಿ ಪದಗಳು ಶೃಂಗಾರ ಸಾಹಿತ್ಯದ ಪ್ರಮುಖ ಮಜಲುಗಳು. ಜಾನಪದೀಯ ಶೈಲಿಯ ಹೋಳಿಹಬ್ಬ ಆಚರಣೆಯನ್ನು ಶತಮಾನಗಳ ಕಾಲ ಮುನ್ನಡೆಸಿದ ಕೀರ್ತಿ ಹೋಳಿ ಸಾಹಿತ್ಯಕ್ಕೆ ಸಲ್ಲುತ್ತದೆ. ಹಲಗಿ ಬಾರಿಸುವ, ಬಣ್ಣ ಎರಚುವ ಬಳಗ ಒಂದು ಕಡೆಯಾದರೆ, ಇನ್ನೊಂದು ಕಡೆ ತಲೆಗೆ ಪೇಟ ಸುತ್ತಿದ ಹದಿ ಹರೆಯದ ಯುವಕರು ಮತ್ತು ಮುದುಕರು “ಸೇರಿಗೆ ಸವ್ವಾ ಸೇರು’ ಎನ್ನುವಂತೆ ಹೋಳಿ ಶೃಂಗಾರದ ಪದಗಳನ್ನು ಹಾಡಿ ಸಂಭ್ರಮಿಸುವ ಪರಿಯೇ ವಿಭಿನ್ನ.
ಈ ಕುರಿತು ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಹತ್ತಕ್ಕೂ ಹೆಚ್ಚು ಜನರು ಪಿಎಚ್.ಡಿ ಪದವಿ ಪಡೆದಿದ್ದರೂ ಇನ್ನು ಹೋಳಿ ಸಾಹಿತ್ಯದ ಅಧ್ಯಯನ ಸಾಕಷ್ಟಿದೆ. ಅಂತಹ ಸಾಹಿತ್ಯ ಸೃಷ್ಟಿಗೆ ಕಾರಣವಾಗಿದ್ದೇ ಈ ಹೋಳಿಹಬ್ಬ. ಆದರೆ ಇಂದು ಬರೀ ಡಿ.ಜೆ. ಮತ್ತು ಬಣ್ಣ ಎರಚಾಟಕ್ಕೆ ಮಾತ್ರ ಸೀಮಿತವಾಗಿರುವ ಹೋಳಿಹಬ್ಬ ಇಂತಹ ಮಧುರ ಸಾಹಿತ್ಯ, ಹಾಡು, ಕುಣಿತ ಸಂಭ್ರಮವನ್ನು ಕಳೆದುಕೊಂಡಂತಾಗಿದೆ.
ನಗರ ಮಾದರಿ ಹಳ್ಳಿಗೆ: ಕಳೆದ ಒಂದು ದಶಕದಲ್ಲಿ ಹೋಳಿಹಬ್ಬವನ್ನು ನಗರದಲ್ಲಿ ಆಚರಿಸುವ ಅಂದರೆ ಧಾರವಾಡ-ಹುಬ್ಬಳ್ಳಿಯ ಬಣ್ಣ ಎರಚಾಟ ಮತ್ತು ಡಿ.ಜೆ. ಕುಣಿತದ ಮಾದರಿಯೇ ಜಿಲ್ಲೆಯ ಇತರೆ ಹಳ್ಳಿಗಳಿಗೂ ಆವರಿಸಿ ಬಿಟ್ಟಿದೆ. ಗಣೇಶ ಹಬ್ಬ ಯಾವ ರೀತಿಯಾಗಿ ಅವಳಿ ನಗರದಿಂದ ಹಳ್ಳಿಗಳಿಗೂ ಕಾಲಿಟ್ಟಿತೋ ಅದೇ ಮಾದರಿಯಲ್ಲಿ ಇಲ್ಲಿನ ಹೋಳಿಹಬ್ಬದ ಆಚರಣೆಗಳು ಹಳ್ಳಿಯಲ್ಲಿನ ಜಾನಪದೀಯ ಆಚರಣೆಗಳ ಮೇಲೆ ಸವಾರಿ ಮಾಡಿವೆ. ಇದೀಗ ಹಳ್ಳಿಗಳಲ್ಲೂ ಯುವಕರುಡಿ.ಜೆ. ಕುಣಿತ, ಬಣ್ಣ ಎರಚಾಟ ಮತ್ತು ಸಾರಾಯಿಗೆ ದಾಸರಾಗಿ ಇಡೀ ದಿನ ಕುಡಿಯುತ್ತ ಕುಣಿಯುತ್ತ ಕಾಲಹರಣ ಮಾಡುತ್ತಿದ್ದಾರೆ.
ಕುಳ್ಳು ಕದಿಯುವ ತುಂಟಾಟ ಮಾಯ : ಕಾಮಣ್ಣನ ಹಬ್ಬ ಬರೀ ಸಂಭ್ರಮದ ಹಬ್ಬವಷ್ಟೇ ಅಲ್ಲ, ಹಳ್ಳಿಯ ಹುಡುಗರಿಗೆ ವಿಪರೀತ ತುಂಟಾಟಕ್ಕೆ ಒಂದು ಸದಾವಕಾಶವಾಗಿತ್ತು. ಕಾಮ ದಹನಕ್ಕೆಂದು ಚಕ್ಕಡಿಗಟ್ಟಲೇ ಕುಳ್ಳು (ಭೆರಣಿ) ಮತ್ತು ಕಟ್ಟಿಗೆ ಬೇಕು. ಇದನ್ನೇ ನೆಪ ಮಾಡಿಕೊಂಡ ತುಂಟು ಹುಡುಗರು ಮನೆಗಾಗಿ ಸಿದ್ಧಗೊಳಿಸಿದ ಕುಳ್ಳಿನ ರಾಶಿಯನ್ನೇ ರಾತ್ರಿ ಹೊತ್ತು ಕದ್ದು ತಂದು ಕಾಮಣ್ಣನ ಸುಡುವ ಸ್ಥಳಕ್ಕೆ ಹಾಕುತ್ತಿದ್ದರು. ಹಿತ್ತಲು ಬೇಲಿ ಸಡಿಲವಿದ್ದರಂತೂ ಮುಗಿಯಿತು. ಆ ಮನೆಯನ್ನು ಲೂಟಿ ಮಾಡುವುದೇ ಒಂದೇ ಬಾಕಿ ಇರುತ್ತಿತ್ತು. ಅಂತಹ ವಾತಾವರಣ ಈಗ ಉಳಿದಿಲ್ಲ. ಈಗೇನಿದ್ದರೂ ಕಾಮಣ್ಣ ಒಣಗಿದ ಟೆಂಗಿನಗರಿಯಲ್ಲಿ ಸುಟ್ಟು ಹೋಗುತ್ತಿದ್ದಾನೆ ಅಷ್ಟೇ.
ಹೋಳಿ ಪದಗಳು ಉಳಿಯಬೇಕಾದರೆ ಮತ್ತೆ ಮೂಲಸ್ವರೂಪದಲ್ಲಿಯೇ ಹೋಳಿಹಬ್ಬ ಆಚರಿಸುಂತಾಗಬೇಕು. ಸರ್ಕಾರದಿಂದ ಹೋಳಿ ವಿಶಿಷ್ಟ ಹಬ್ಬ ಆಚರಣೆಗೆ ಉತ್ತಮ ಪ್ರೋತ್ಸಾಹ ಸಿಕ್ಕಬೇಕು. ವಿಶ್ವವಿದ್ಯಾಲಯಗಳು, ಸ್ವಯಂ ಸೇವಾ ಸಂಘಟನೆಗಳು ಮತ್ತು ಹಳ್ಳಿಗರು ಒಟ್ಟಾಗಿ ಹೋಳಿ ಸಾಹಿತ್ಯ ಉಳಿಸಲು ಅದನ್ನು ಮುಂದಿನ ಪೀಳಿಗೆಗೆ ಕಳಿಸಲು ಶ್ರಮಿಸಬೇಕಿದೆ. -ಡಾ|ನಾಗರಾಜ ಎಸ್., ಜಾನಪದ ತಜ್ಞ
-ಬಸವರಾಜ ಹೊಂಗಲ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
NABARD ನಿರ್ಧಾರದಿಂದ ಕೃಷಿಗೆ ಹಿನ್ನಡೆ; ಸಾಲದ ಮೊತ್ತ ಕಡಿತ ಮಾಡದಿರಲು ಸಚಿವ ಪಾಟೀಲ ಆಗ್ರಹ
ಸಿಎಂ ಆಗಿದ್ದವರು ಈ ರೀತಿ ಹೇಳಿಕೆ ನೀಡುವ ಬದಲು, ಸ್ಪಷ್ಟ ಹೇಳಿಕೆ ನೀಡಲಿ: ಸಚಿವ ಶಿವಾನಂದ
dharwad: ಪೊಲೀಸ್ ಪೇದೆ ಮೇಲೆ ಕೈ ಮುಖಂಡ ತಮಟಗಾರ ಸಹೋದರ ಬ್ಲೇಡ್ ನಿಂದ ಹಲ್ಲೆ
Covid Scam: ಸಚಿವ ಸಂಪುಟದಲ್ಲಿ ಚರ್ಚಿಸಿ ಮುಂದಿನ ಕ್ರಮ: ಸಿಎಂ ಸಿದ್ದರಾಮಯ್ಯ
By Election: ಹಣ ಕೊಟ್ಟರೂ ಸಿಎಂ ಕಾರ್ಯಕ್ರಮಕ್ಕೆ ಜನ ಬರುತ್ತಿಲ್ಲ: ಬಿಎಸ್ ವೈ
MUST WATCH
ಹೊಸ ಸೇರ್ಪಡೆ
Bengaluru: ಉದ್ಯೋಗ, ಹೂಡಿಕೆ ನೆಪದಲ್ಲಿ ಜನರಿಗೆ ವಂಚನೆ: ನಾಲ್ವರ ಸೆರೆ
Tragedy: ಓವರ್ ಟೇಕ್ ಮಾಡಲು ಹೋಗಿ ಭೀಕರ ಅಪಘಾತ… ನವ ವಧು-ವರ ಸೇರಿ 7 ಮಂದಿ ಮೃತ್ಯು
Jamia Millia Islamia: ಇಸ್ಲಾಂಗೆ ಮತಾಂತರಗೊಳ್ಳಿ ಅಥವಾ ಅತ್ಯಾಚಾರಕ್ಕೆ ಒಳಗಾಗಿ: ಭಾರಿ ಆರೋಪ
Belagavi: ವಿವಾಹಿತ ಮಹಿಳೆ ಮತ್ತು ತಾಯಿಯ ಸೀರೆ ಬಿಚ್ಚಿ ಹಲ್ಲೆ ನಡೆಸಿದ ನೆರೆಹೊರೆಯವರು!
Tamil Director: ಖ್ಯಾತ ತಮಿಳು ಚಿತ್ರ ನಿರ್ದೇಶಕ ಸುರೇಶ್ ಸಂಗಯ್ಯ ವಿಧಿವಶ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.