ಹೋಟೆಲ್-ಪ್ರವಾಸೋದ್ಯಮಕ್ಕೆ ಮತ್ತೆ ಕೋವಿಡ್ ಬರೆ
ಮೊದಲ ಅಲೆಯಿಂದ ಚೇತರಿಸಿಕೊಳ್ಳುತ್ತಿದ್ದ ಹೊತ್ತಲ್ಲೇ 2ನೇ ಅಲೆ ಹೊಡೆತ! ದಿಕ್ಕು ತೋಚದಂತಾದ ಮಾಲೀಕರು-ಕಾರ್ಮಿಕರು
Team Udayavani, Apr 27, 2021, 5:48 PM IST
ವರದಿ:ಅಮರೇಗೌಡ ಗೋನವಾರ
ಹುಬ್ಬಳ್ಳಿ: ಕೋವಿಡ್-19 ಮಹಾಮಾರಿಯ ಮೊದಲ ಅಲೆಗೆ ತತ್ತರಿಸಿದ್ದ ಹೋಟೆಲ್ ಉದ್ಯಮ ಹಾಗೂ ಪ್ರವಾಸೋದ್ಯಮ ಇದೀಗ ಎರಡನೇ ಅಲೆ ಹೊಡೆತಕ್ಕೆ ಅಕ್ಷರಶಃ ನಲುಗುವಂತಾಗಿದೆ. ಇನ್ನೇನು ಉದ್ಯಮ ಚೇತರಿಸಿಕೊಳ್ಳುತ್ತಿದೆ ಎನ್ನುವಾಗಲೇ ಎರಡನೇ ಅಲೆ ದೊಡ್ಡ ಪೆಟ್ಟು ನೀಡಿದೆ. ಈ ಎರಡು ಉದ್ಯಮಗಳು ಹಾಗೂ ಇವುಗಳನ್ನೇ ನಂಬಿಕೊಂಡಿದ್ದ ಸಣ್ಣಪುಟ್ಟ ವ್ಯಾಪಾರವೂ ಸಂಕಷ್ಟಕ್ಕೆ ಸಿಲುಕುವಂತಾಗಿದೆ.
ಕಳೆದ ವರ್ಷ ಜನವರಿ-ಫೆಬ್ರವರಿಯಲ್ಲಿ ಸಣ್ಣದಾಗಿ ಕಾಣಿಸಿಕೊಂಡಿದ್ದ ಕೋವಿಡ್ ಕಾಟ ಮಾರ್ಚ್-ಏಪ್ರಿಲ್ ವೇಳೆಗೆ ದೊಡ್ಡ ಪ್ರಮಾಣದಲ್ಲಿ ಸ್ಫೋಟಗೊಂಡು ದೇಶವನ್ನೇ ತಲ್ಲಣಗೊಳಿಸಿತ್ತು. ಉದ್ಯಮ-ವ್ಯಾಪಾರ ಇದರಿಂದ ಪರಿತಪಿಸಿತ್ತಲ್ಲದೆ ಆರ್ಥಿಕತೆ ಚಕ್ರದ ಮೇಲೂ ದೊಡ್ಡ ಪೆಟ್ಟು ನೀಡಿತ್ತು. ಕಳೆದ ವರ್ಷದ ಸಂಕಷ್ಟ ಇನ್ನೇನು ಮರೆಯಾಗುತ್ತಿದೆ ಎನ್ನುವಾಗಲೇ, ಈ ವರ್ಷದ ಮಾರ್ಚ್- ಏಪ್ರಿಲ್‌ನಲ್ಲಿ ಎರಡನೇ ಅಲೆಯಿಂದ ದಿಕ್ಕುತೋಚದಂತಾಗಿದೆ.
ಉತ್ತರ ಕರ್ನಾಟಕದ ಕಲಬುರಗಿಯಲ್ಲಿ ಮೊದಲ ಕೋವಿಡ್ ಸೋಂಕಿನ ಪ್ರಕರಣ ಹೊರ ಬಿದ್ದಾಗ, ರಾಜ್ಯಾದ್ಯಂತ ಆತಂಕ-ಭಯ ಆವರಿಸಿತ್ತು. ದಿನಗಳೆದಂತೆ ತನ್ನದೇ ಜಿಲ್ಲೆ, ತಾಲೂಕು, ಪಕ್ಕದ ಮನೆ, ತನ್ನದೇ ಮನೆಗೆ ಆವರಿಸಿದಾಗ ಏನೊಂದು ತೋಚದೆ ಹತಾಶೆಯೊಂದಿಗೆ ಕೋವಿಡ್ದೊಂದಿಗೆ ಸೆಣೆಸುವುದನ್ನು ಮೈಗೂಡಿಸಿಕೊಳ್ಳುವಂತಾಯಿತು.
ಹೋಟೆಲ್ ಉದ್ಯಮಕ್ಕೆ ಮತ್ತಷ್ಟು ಸಂಕಷ್ಟ: ಕಾಲರಾದಂತಹ ಸಾಂಕ್ರಾಮಿಕ ರೋಗ ವ್ಯಾಪಿಸಿದಾಗಲೂ ಹೋಟೆಲ್ ಉದ್ಯಮ ಅಷ್ಟೊಂದು ಸಮಸ್ಯೆಗೆ ಸಿಲುಕಿರಲಿಲ್ಲ. ಗ್ರಾಹಕರಿಗೆ ಬಿಸಿ ನೀರು ನೀಡಬೇಕು, ಸ್ವತ್ಛತೆ-ಶುಚಿತ್ವ ಕಾಯ್ದುಕೊಳ್ಳಬೇಕು, ಕರಿದ ಪದಾರ್ಥ ಕಡಿಮೆ ಮಾಡಬೇಕು ಇಲ್ಲವೆ ನಿಷೇಧಿ ಸಬೇಕೆಂಬ ಷರತ್ತು-ನಿಯಮಗಳನ್ನು ಹೊರತುಪಡಿಸಿದರೆ ಹೋಟೆಲ್‌ಗಳನ್ನು ಬಂದ್ ಮಾಡಿದ್ದು ಅತ್ಯಂತ ಕಡಿಮೆ. ಕೋವಿಡ್ ಬಂದಿದ್ದೇ ಬಂದಿದ್ದು, ಹೋಟೆಲ್ ಉದ್ಯಮದ ಮೇಲೆ ಕ್ರೂರದೃಷ್ಟಿ ಬೀರಿತು.
ಕೋವಿಡ್ ಲಾಕ್‌ಡೌನ್ ನಂತರ ಇತರೆ ಉದ್ಯಮ, ವ್ಯಾಪಾರ ಚೇತರಿಕೆ ಕಂಡರೂ ಗ್ರಾಹಕರ ಕೊರತೆಯಿಂದ ಹೋಟೆಲ್ ಉದ್ಯಮದ ಸಂಕಷ್ಟ ಹೆಚ್ಚುತ್ತಲೇ ಸಾಗಿತ್ತು. ಗ್ರಾಹಕರು-ಕೆಲಸಗಾರರ ಕೊರತೆಯಿಂದ ಕೆಲ ದೊಡ್ಡ ಹೋಟೆಲ್‌ಗಳು ಒಂದಿಷ್ಟು ವಿಭಾಗ ಮುಚ್ಚಿದ್ದರೆ, ಸಣ್ಣ-ಪುಟ್ಟ ಹೋಟೆಲ್‌ಗಳು ಕಣ್ಣು ಮುಚ್ಚಿದವು. ಇನ್ನೇನು ಗ್ರಾಹಕರು ಅಷ್ಟು ಇಷ್ಟು ಹೋಟೆಲ್ ಕಡೆ ಮುಖ ಮಾಡಿದ್ದಾರೆ ಎನ್ನುವಾಗಲೇ ಕೋವಿಡ್ ಎರಡನೇ ಅಲೆ ವಕ್ಕರಿಸಿದೆ. ಹೋಟೆಲ್‌ಗಳಲ್ಲಿ ಪಾರ್ಸಲ್‌ಗಳಿಗೆ ಅವಕಾಶ ನೀಡಲಾಗಿದ್ದು, ವಾರಂತ್ಯದ ಕರ್ಫ್ಯೂನಲ್ಲಿ ಹುಬ್ಬಳ್ಳಿ ಸೇರಿದಂತೆ ವಿವಿಧೆಡೆಗಳಲ್ಲಿ ಹೋಟೆಲ್ ಉದ್ಯಮಿಗಳು ಪಾರ್ಸಲ್ ಸೇವೆ ನಿಲ್ಲಿಸಿದ್ದಾರೆ.
ಸುಮಾರು 10,000 ರೂ. ವಹಿವಾಟು ನಡೆಸುವ ಹೋಟೆಲ್‌ಗಳು 1,000-1,500ರೂ. ವಹಿವಾಟಿಗೆ ಬಂದು ನಿಂತಿವೆ. ಆದರೆ, ಮಳಿಗೆ ಬಾಡಿಗೆ, ಸಿಬ್ಬಂದಿ ವೇತನ, ವಿದ್ಯುತ್ ಶುಲ್ಕ, ಉದ್ಯಮ ಪರವಾನಗಿ ನವೀಕರಣ ಶುಲ್ಕ, ಆಸ್ತಿಕರ ಪಾವತಿ ಇದಾವುದೂ ನಿಲ್ಲುವುದಿಲ್ಲ. ಇದು ಸಾಲದೆನ್ನುವಂತೆ ಆಸ್ತಿಕರ ಹೆಚ್ಚಳ ಹೊರೆ ನಮ್ಮ ಗಾಯದ ಮೇಲೆ ಬರೆ ಎಳೆದಂತಾಗಿದೆ ಎಂಬುದು ಅನೇಕ ಹೋಟೆಲ್ ಉದ್ಯಮಿಗಳ ಅಳಲು. ಪ್ರವಾಸೋದ್ಯಮಕ್ಕೆ ನೆರೆ-ಕೋವಿಡ್ ಕಂಟಕ: ಉತ್ತರ ಕರ್ನಾಟಕದಲ್ಲಿ ಹೇಳಿಕೊಳ್ಳುವಂಥ ಸೌಕರ್ಯಗಳು ಇಲ್ಲವಾಗಿದ್ದರೂ, ಪ್ರವಾಸೋದ್ಯಮ ದೃಷ್ಟಿಯಿಂದ ಕಲಾ ಸಿರಿವಂತಿಕೆ, ಸ್ಮಾರಕಗಳ ಆಕರ್ಷಣೆಗೆ ಕಡಿಮೆ ಇಲ್ಲವಾಗಿದೆ. ಆದರೆ, 2019ರ ನೆರೆಯಿಂದ ಆರಂಭವಾದ ಪ್ರವಾಸೋದ್ಯಮದ ಸಂಕಷ್ಟ 2021ರ ಕೋವಿಡ್ ಎರಡನೇ ಅಲೆವರೆಗೂ ಮುಂದುವರಿದಿದೆ. ಈ ಭಾಗದ ವಿಶ್ವವಿಖ್ಯಾತ ಹಂಪಿ, ಬದಾಮಿ, ಐಹೊಳೆ, ಪಟ್ಟಣಕಲ್ಲು, ವಿಜಯಪುರ, ಗೋಕರ್ಣ, ಕಾರವಾರ ಹೀಗೆ ವಿವಿಧ ಕಡೆ ದೇಶ-ವಿದೇಶಗಳ ಪ್ರವಾಸಿಗರು ಸಾವಿರ ಸಾವಿರ ಸಂಖ್ಯೆಯಲ್ಲಿ ಆಗಮಿಸುತ್ತಿದ್ದರು. ಹಂಪಿಯೊಂದಕ್ಕೆ ಪ್ರತಿ ವರ್ಷ ಸರಾಸರಿ 2 ಲಕ್ಷದಷ್ಟು ಪ್ರವಾಸಿಗರು ನವೆಂಬರ್‌ನಿಂದ ಮಾರ್ಚ್ ಎರಡನೇ ವಾರದವರೆಗೆ ಭೇಟಿ ನೀಡುತ್ತಿದ್ದರು.
2019ರಲ್ಲಿ ಉತ್ತರ ಕರ್ನಾಟಕದಲ್ಲಿ ಕಾಣಿಸಿಕೊಂಡ ಭೀಕರ ಪ್ರವಾಹದಿಂದ ವಿದೇಶಿಯರು ಸೇರಿದಂತೆ ಅನೇಕ ಪ್ರವಾಸಿಗರು ಹಂಪಿ, ವಿರೂಪಾಪುರ ಗಡ್ಡೆ ಇನ್ನಿತರೆ ಕಡೆಗಳಲ್ಲಿ ಸಿಲುಕಿಕೊಂಡು ಅವರನ್ನು ಹೆಲಿಕಾಪ್ಟರ್, ಯಾಂತ್ರೀಕೃತ ದೋಣಿಗಳ ಮೂಲಕ ರಕ್ಷಿಸಲಾಗಿತ್ತು. ಪ್ರವಾಹದೊಡೆತದಿಂದ ಪ್ರವಾಸಿಗರ ಸಂಖ್ಯೆ ಇಳಿಮುಖವಾಗಿತ್ತು. 2020ರಲ್ಲಿ ಕಂಡು ಬಂದ ಕೋವಿಡ್ ಪ್ರವಾಸೋದ್ಯಮವೇ ಗರ ಬಡಿಯುವಂತೆ ಮಾಡಿತು. ಇದೇ ವರ್ಷದ ಜನವರಿಯಲ್ಲಿ ಇನ್ನೇನು ಪ್ರವಾಸೋದ್ಯಮ ಚೇತರಿಸಿಕೊಳ್ಳುತ್ತಿದೆ ಎಂಬ ನಿರೀಕ್ಷೆ ಹುಟ್ಟಿಸುತ್ತಿದೆ ಎನ್ನುವಾಗಲೇ ಕೋವಿಡ್-19 ಎರಡನೇ ಅಲೆ ಹೊಡೆತ ಪ್ರವಾಸೋದ್ಯಮಕ್ಕೆ ಮರ್ಮಾಘಾತ ನೀಡುವಂತೆ ಮಾಡಿದೆ.
ಪ್ರವಾಸೋದ್ಯವನ್ನೇ ನಂಬಿಕೊಂಡಿದ್ದ ಹೋಟೆಲ್, ಲಾಡ್ರಿಂಗ್, ವಿವಿಧ ವಸ್ತುಗಳ ಮಾರಾಟ ಇನ್ನಿತರೆ ವಹಿವಾಟು ಸಂಕಷ್ಟಕ್ಕೆ ಸಿಲುಕಿದೆ. ಇದೀಗ ಸರಕಾರ ಪ್ರವಾಸಿ ತಾಣಗಳು, ಸ್ಮಾರಕಗಳು, ಧಾರ್ಮಿಕ ಕೇಂದ್ರಗಳನ್ನು ಮುಚ್ಚಿದ್ದರಿಂದ ಪ್ರವಾಸಿಗರೇ ಇಲ್ಲವಾಗಿದ್ದಾರೆ. ಪ್ರವಾಸಿ ಕೇಂದ್ರಗಳಿಗೆ ದೇಶ-ವಿದೇಶಿಗರ ಪ್ರವಾಸಿಗರು ಅಲ್ಲದೆ, ಶಾಲಾ ವಿದ್ಯಾರ್ಥಿಗಳು ಶೈಕ್ಷಣಿಕ ಪ್ರವಾಸ ಮೂಲಕ ಪ್ರವಾಸೋದ್ಯಮ ಬೆಳವಣಿಗೆ ತಮ್ಮದೇ ಕೊಡುಗೆ ನೀಡುತ್ತಿದ್ದರೂ 2020ರಿಂದ ಇಲ್ಲಿವರೆಗೆ ಇವೆಲ್ಲವುದಕ್ಕೂ ಬ್ರೇಕ್ ಬಿದ್ದಂತಾಗಿದೆ. ಅನೇಕ ಪ್ರವಾಸಿ ತಾಣದಲ್ಲಿ ಪ್ರವಾಸೋದ್ಯವನ್ನೇ ನಂಬಿಕೊಂಡಿದ್ದ ಗೈಡ್‌ಗಳು ಕುಟುಂಬ ನಿರ್ವಹಣೆಗೂ ಪರದಾಡಿದ್ದು, ಇನ್ಫೋಸಿಸ್ ಪ್ರತಿಷ್ಠಾನದ ಡಾ| ಸುಧಾಮೂರ್ತಿ ಅವರು ಸೇರಿದಂತೆ ಅನೇಕ ದಾನಿಗಳು ನೀಡಿದ ಆಹಾರ ಧಾನ್ಯಗಳ ಕಿಟ್ ಪಡೆದು ಕೆಲ ದಿನ ಬದುಕಿನ ಬಂಡಿ ಸಾಗಿಸಿದ್ದರೆ ಕೆಲವರು ನರೇಗಾ ಅಡಿಯಲ್ಲಿ ಕೆಲಸಕ್ಕೆ ಹೋಗುವ ಮೂಲಕ ಆದಾಯ ಕಂಡುಕೊಳ್ಳುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Davangere:ಡಾ| ಬಿ.ಆರ್. ಅಂಬೇಡ್ಕರ್ ಅವಹೇಳನ; ಶಾ ರಾಜೀನಾಮೆಗೆ ಒತ್ತಾಯಿಸಿ ಬೃಹತ್ ಪ್ರತಿಭಟನೆ
ಸರಣಿ ರಜೆ-ವಿಶ್ವವಿಖ್ಯಾತ ಹಂಪಿಯಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಳ
ವಿದೇಶಿ ಹಕ್ಕಿಗಳ ಕಲರವ- ಕುಷ್ಟಗಿಯ ನಿಡಶೇಸಿ ಕೆರೆಗೆ ಬಂದ ಬಾನಾಡಿಗಳು!
Aranthodu: ಲಾರಿ-ಸ್ಕೂಟಿ ಅಪಘಾತ; ಸವಾರರಿಬ್ಬರು ಮೃತ್ಯು
ದೆಹಲಿ ಪರೇಡ್‌ಗೆ ಬ್ರಹ್ಮ ಜಿನಾಲಯ ಸ್ತಬ್ಧಚಿತ್ರ; ಗತ ವೈಭವ ಸಾರಲಿದೆ ಟ್ಯಾಬ್ಲೊ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Davangere:ಡಾ| ಬಿ.ಆರ್. ಅಂಬೇಡ್ಕರ್ ಅವಹೇಳನ; ಶಾ ರಾಜೀನಾಮೆಗೆ ಒತ್ತಾಯಿಸಿ ಬೃಹತ್ ಪ್ರತಿಭಟನೆ
ಸರಣಿ ರಜೆ-ವಿಶ್ವವಿಖ್ಯಾತ ಹಂಪಿಯಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಳ
ಸಿ.ಟಿ.ರವಿ ಆ ಪದ ಬಳಸಿಲ್ಲವಾದ್ರೆ ಧರ್ಮಸ್ಥಳಕ್ಕೆ ಬಂದು ಆಣೆ ಪ್ರಮಾಣ ಮಾಡಲಿ: ಸಚಿವೆ ಲಕ್ಷ್ಮೀ
ವಿದೇಶಿ ಹಕ್ಕಿಗಳ ಕಲರವ- ಕುಷ್ಟಗಿಯ ನಿಡಶೇಸಿ ಕೆರೆಗೆ ಬಂದ ಬಾನಾಡಿಗಳು!
Aranthodu: ಲಾರಿ-ಸ್ಕೂಟಿ ಅಪಘಾತ; ಸವಾರರಿಬ್ಬರು ಮೃತ್ಯು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.