ನೂಲ್ವಿಯಲ್ಲಿ ಕಿಕ್ ಇಳಿಸಿದ ಗ್ರಾಮಸ್ಥರು!
Team Udayavani, Sep 23, 2018, 5:06 PM IST
ಹುಬ್ಬಳ್ಳಿ: ಜಿಲ್ಲಾಧಿಕಾರಿ, ಶಾಸಕರು, ಜಿಪಂ ಸಿಇಒ ಒಳಗೊಂಡು ಜಿಲ್ಲಾ ಹಾಗೂ ತಾಲೂಕುಮಟ್ಟದ ಅಧಿಕಾರಿಗಳು ಕಸ ಗುಡಿಸಿ ಸ್ವಚ್ಛತಾ ಜಾಗೃತಿ ಮೂಡಿಸಿದರು. ಗ್ರಾಮಕ್ಕೆ ಬೇಡವಾಗಿದ್ದ ಸರಕಾರಿ ಮದ್ಯದ ಅಂಗಡಿಯನ್ನು ಮುಚ್ಚಿಸಲಾಯಿತು. 180 ದೂರುಗಳ ಪೈಕಿ ಗ್ರಾಮಸ್ಥರ ಕೆಲ ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ ನೀಡಲಾಯಿತು. ಸರಕಾರದ ಹತ್ತು ಹಲವು ಯೋಜನೆಗಳ ಮಾಹಿತಿಯನ್ನು ಜನರಿಗೆ ಮುಟ್ಟಿಸುವ ಕಾರ್ಯ ನಡೆಯಿತು.
ಇದು ತಾಲೂಕಿನ ನೂಲ್ವಿ ಗ್ರಾಮದಲ್ಲಿ ನಡೆದ ಜನಸ್ಪಂದನಾ ಕಾರ್ಯಕ್ರಮದಲ್ಲಿ ಕಂಡುಬಂದ ದೃಶ್ಯಗಳು. ಜಿಲ್ಲಾಧಿಕಾರಿ ದೀಪಾ ಚೋಳನ್, ಶಾಸಕ ಸಿ.ಎಸ್. ಶಿವಳ್ಳಿ, ತಹಶೀಲ್ದಾರ್ ಶಶಿಧರ ಮಾಡ್ಯಾಳ ಸೇರಿದಂತೆ ಜಿಲ್ಲಾ ಹಾಗೂ ತಾಲೂಕುಮಟ್ಟದ ಅಧಿಕಾರಿಗಳು ಗ್ರಾಮದ ಪ್ರಮುಖ ರಸ್ತೆಗಳನ್ನು ಸ್ವತ್ಛಗೊಳಿಸಿ ಜನರಲ್ಲಿ ಸ್ವಚ್ಛತೆ ಹಾಗೂ ಶೌಚಾಲಯದ ಕುರಿತು ಜಾಗೃತಿ ಮೂಡಿಸಿದರು. ವಿವಿಧ ಸಂಘ ಸಂಸ್ಥೆಗಳು, ವಿವಿಧ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಸಾಥ್ ನೀಡಿದರು.
ವಾರದಲ್ಲಿ ಗ್ರಾಮ ಸಭೆ ನಡೆಸಿ: ಜನಸ್ಪಂದನಾ ಕಾರ್ಯಕ್ರಮದಲ್ಲಿ 180 ದೂರುಗಳು ಸಲ್ಲಿಕೆಯಾದವು. ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ ನೀಡಲಾಯಿತು. ಶಾಸಕರ ಅನುದಾನದಲ್ಲಿ ಬಾಬು ಜಗಜೀವನ್‌ರಾಂ ಭವನ ನಿರ್ಮಾಣ ಮಾಡುವುದು, ಗ್ರಾಮದ ರಸ್ತೆಗಳು ಸೇರಿದಂತೆ ವಿವಿಧ ಸಮಸ್ಯೆ ಕುರಿತು ಗ್ರಾಮಸ್ಥರು ಮನವಿ ಮಾಡಿದರು. ಇನ್ನೂ ಗ್ರಾಮ ಸಭೆ ಕುರಿತು ಗ್ರಾಮಸ್ಥರಿಂದ ತೀವ್ರ ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ಒಂದು ವಾರದಲ್ಲಿ ಗ್ರಾಮ ಸಭೆ ನಡೆಸಬೇಕು. ಸಂಬಂಧಿಸಿದ ಎಲ್ಲಾ ಇಲಾಖೆಗಳ ಅಧಿಕಾರಿಗಳು ಆಗಮಿಸಬೇಕು. ಗೈರಾಗುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಸೂಚಿಸಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿ ದೀಪಾ ಚೋಳನ್, ಪ್ರತಿ ತಿಂಗಳು ತಾಲೂಕಿನ ಒಂದು ಗ್ರಾಮದಲ್ಲಿ ಜನಸ್ಪಂದನಾ ಕಾರ್ಯಕ್ರಮ ನಡೆಸುವಂತೆ ಸರಕಾರದ ನಿರ್ದೇಶನವಿದೆ. ಗ್ರಾಮದ ಕುಂದು-ಕೊರತೆ, ಸರಕಾರದ ಯೋಜನೆ ಕಲ್ಪಿಸುವ ನಿಟ್ಟಿನಲ್ಲಿ ಸ್ಥಳೀಯರಿಂದ ಅರ್ಜಿಗಳನ್ನು ಪಡೆದು ಸ್ವೀಕೃತಿ ನೀಡಲಾಗುತ್ತಿದೆ. ಕೆಲ ಸಮಸ್ಯೆಗಳಿಗೆ ಸ್ಥಳದಲ್ಲಿ ಪರಿಹಾರ ನೀಡಲಾಗಿದೆ. 2016-17ನೇ ಸಾಲಿನ ಬೆಳೆ ವಿಮಾ ಪರಿಹಾರ ವಿತರಣೆಯಲ್ಲಿ ತಾಂತ್ರಿಕ ತೊಂದರೆಯಿಂದ ಸಮಸ್ಯೆಯಾಗಿದ್ದು, 2017-18ನೇ ಸಾಲಿನ ಪರಿಹಾರ ಮುಂದಿನ ಎರಡು ವಾರದಲ್ಲಿ ರೈತರ ಖಾತೆಗಳಿಗೆ ಜಮೆಯಾಗಲಿದೆ ಎಂದು ತಿಳಿಸಿದರು.
ವಿವಿಧ ಕಾರ್ಯಕ್ರಮಗಳಿಗೆ ಚಾಲನೆ: ಇದಕ್ಕೂ ಮೊದಲು ಗ್ರಾಮದ ಪ್ರಮುಖ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಬಾಲ್ಯ ವಿವಾಹ ತಡೆ ಕುರಿತು ತಿಳಿಸಲಾಯಿತು. ಸರಕಾರಿ ಕಚೇರಿಗಳ ಆವರಣಗಳಲ್ಲಿ ಸಸಿ ನೆಡುವ ಕಾರ್ಯಕ್ರಮ ನಡೆಯಿತು. ಉಚಿತ ಆರೋಗ್ಯ ತಪಾಸಣಾ ಶಿಬಿರಕ್ಕೆ ಚಾಲನೆ, ವಾರ್ತಾ ಇಲಾಖೆಯಿಂದ ಆಯೋಜಿಸಿದ್ದ ಬೀದಿ ನಾಟಕ ಹಾಗೂ ಜಾನಪದ ಸಂಗೀತ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ವಿವಿಧ ಯೋಜನೆಯಡಿ 58 ಫಲಾನುಭವಿಗಳಿಗೆ ಸೌಲಭ್ಯ ನೀಡಲಾಯಿತು. ವಿದ್ಯಾರ್ಥಿಗಳಿಗೆ ಸೈಕಲ್, ರೈತರಿಗೆ ವಿವಿಧ ಸೌಲಭ್ಯ ವಿತರಿಸಲಾಯಿತು.
ಮಾಜಿ ಸಚಿವ ಪಿ.ಸಿ. ಸಿದ್ದನಗೌಡ್ರ, ಶಾಸಕ ಸಿ.ಎಸ್. ಶಿವಳ್ಳಿ, ಜಿಪಂ ಸಿಇಒ ಆರ್.ಸ್ನೇಹಲ್, ಜಿಪಂ ಸದಸ್ಯ ಸುರೇಶ ಪಾಟೀಲ, ತಾಪಂ ಸದಸ್ಯ ಪರ್ವೇಜ್ ಬ್ಯಾಹಟ್ಟಿ, ಎಪಿಎಂಸಿ ಅಧ್ಯಕ್ಷ ಜಗನ್ನಾಥ ಸಿದ್ದನಗೌಡ್ರ, ಶಂಕರ ಪಾಟೀಲ, ಗ್ರಾಪಂ ಅಧ್ಯಕ್ಷೆ ರೇಣುಕಾ ಮೂಗಣ್ಣನವರು, ಉಪಾಧ್ಯಕ್ಷ ಗಂಗಾಧರಗೌಡ ಸಿದ್ದನಗೌಡ್ರ ಇನ್ನಿತರರಿದ್ದರು.
ಹಾಸ್ಟೆಲ್‌ಗೂ ಡಿಸಿ ಭೇಟಿ
ಗ್ರಾಮದ ಬಿಸಿಎಂ ಹಾಸ್ಟೆಲ್‌ಗೆ ಭೇಟಿ ನೀಡಿದ ಜಿಲ್ಲಾಧಿಕಾರಿ ದೀಪಾ ಚೋಳನ್, ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. ಉತ್ತಮ ಆಹಾರ ನೀಡುವಂತೆ ಮೇಲ್ವಿಚಾರಕರಿಗೆ ಸೂಚಿಸಿದರು. ಇದೇ ಸಂದರ್ಭದಲ್ಲಿ ಗ್ರಾಪಂ ಕಾರ್ಯದರ್ಶಿಯಾಗಿ ನಿವೃತ್ತಿ ಹೊಂದಿ, ಮೃತಪಟ್ಟಿರುವ ಎಫ್.ಎಂ. ಧಾರವಾಡ ಎನ್ನುವವರ ನಿವೃತ್ತಿ ಸೌಲಭ್ಯಗಳು ಬಾರದಿರುವ ಕುರಿತು ಕುಟುಂಬದವರು ಅಳಲು ತೋಡಿಕೊಂಡರು. ಈ ಕುರಿತು ಇಲಾಖೆ ವಿಚಾರಣೆ ಮುಕ್ತಾಯಗೊಳಿಸಿ ಸೌಲಭ್ಯ ಕಲ್ಪಿಸುವುದಾಗಿ ತಾಪಂ ಇಒ ಗಂಗಾಧರ ಕಂದಕೂರ ಭರವಸೆ ನೀಡಿದರು.
ಶೌಚಾಲಯಕ್ಕಾಗಿ ಯುವತಿ ಅಳಲು
ಸ್ವಚ್ಛತೆ ಕುರಿತು ಜಾಗೃತಿ ಮೂಡಿಸುತ್ತಿದ್ದ ಜಿಲ್ಲಾಧಿಕಾರಿ ದೀಪಾ ಚೋಳನ್ ಅವರ ಬಳಿ ಶೌಚಾಲಯ ಕೊಡಿಸಿ ಎಂದು ಗ್ರಾಮದ ಯುವತಿ ಅಶ್ವಿನಿ ಪರಣ್ಣವರ ಮನವಿ ಮಾಡಿದ ಘಟನೆ ನಡೆಯಿತು.ಜಿಲ್ಲಾಧಿಕಾರಿ ಸ್ಥಳ ಪರಿಶೀಲನೆಗೆ ತೆರಳಿದ ಸಂದರ್ಭದಲ್ಲಿ, ಈ ಕುಟುಂಬದ ವಾಸದ ಮನೆ ಹಾಗೂ ಹೊಸ ಮನೆಗೆ ಒಂದೇ ಪಡಿತರ ಚೀಟಿ ಇರುವುದರಿಂದ ವಾಸದ ಮನೆಗೆ ಶೌಚಾಲಯ ನೀಡಿಲ್ಲ. ಹೊಸ ಮನೆಗೆ ಶೌಚಾಲಯ ನೀಡಲಾಗಿದೆ ಎಂದು ಪಿಡಿಒ ಮಾಹಿತಿ ನೀಡಿದರು. ಒಂದೇ ಮನೆಯಲ್ಲಿ 5-6 ಕುಟುಂಬಗಳು ವಾಸ ಮಾಡುತ್ತಿರುವ ಹಿನ್ನೆಲೆಯಲ್ಲಿ ಹೊಸ ಪಡಿತರ ಮಾಡಿಸಿ ಶೌಚಾಲಯ ಮಂಜೂರು ಮಾಡುವಂತೆ ಜಿಲ್ಲಾಧಿಕಾರಿ ಸೂಚಿಸಿದರು.
ಗ್ರಾಮಸ್ಥರ ಒತ್ತಡಕ್ಕೆ ಮಣಿದ ಆಡಳಿತ
ಗ್ರಾಮದ ಶ್ರೀ ಕುಮಾರೇಶ್ವರ ದೇವಸ್ಥಾನ ಬಳಿ ಇರುವ ಎಂಎಸ್‌ಐಎಲ್ ಮದ್ಯದ ಅಂಗಡಿ ಮುಚ್ಚಿಸುವಂತೆ ಗ್ರಾಮಸ್ಥರ ತೀವ್ರ ಒತ್ತಡ ಕೇಳಿಬಂತು. ಅಬಕಾರಿ ಇಲಾಖೆಗಳು ಇದಕ್ಕೆ ವಾರದ ಸಮಯ ಕೇಳಿದರಾದರೂ, ಗ್ರಾಮಸ್ಥರು ಇದಕ್ಕೆ ಒಪ್ಪದೆ ಪಟ್ಟು ಹಿಡಿದರು. 24 ಗಂಟೆಯಲ್ಲಿ ಅಂಗಡಿ ಮುಚ್ಚುವಂತೆ ಶಾಸಕ ಸಿ.ಎಸ್.ಶಿವಳ್ಳಿ ಸೂಚಿಸಿದರಲ್ಲದೆ, ಕಾರ್ಯಕ್ರಮ ಮುಗಿಯುತ್ತಿದ್ದಂತೆಯೇ ಅಧಿಕಾರಿಗಳು ಅಂಗಡಿ ಮುಚ್ಚಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hubli: ಜೆಪಿಸಿ ಬಗ್ಗೆ ಆರೋಪ ಮಾಡುವವರಿಗೆ ಸಂವಿಧಾನದ ಬಗ್ಗೆ ಗೌರವ ಇಲ್ಲ: ಬೊಮ್ಮಾಯಿ
Hubli: ಪ್ರಿಯಾಂಕ್ ಖರ್ಗೆಗೆ ಎಫ್‌ಐಆರ್ ಹಾಕಿಸುವುದೇ ಕೆಲಸ: ತೇಜಸ್ವಿ ಸೂರ್ಯ
Waqf Property: ಜೆಪಿಸಿ ಅಧ್ಯಕ್ಷ ಜಗದಾಂಬಿಕಾ ಪಾಲ್ ರಾಜ್ಯ ಭೇಟಿ: ಕಾಂಗ್ರೆಸ್ ಕೆಂಡ
Dharwad: ವಾಗ್ವಾದ ನಡೆದು ಎರಡು ಸುತ್ತು ಫೈರಿಂಗ್: ನಾಲ್ವರು ವಶಕ್ಕೆ
Waqf Land Issue: ಯಾವುದೇ ರೈತರನ್ನು ಒಕ್ಕಲೆಬ್ಬಿಸುವುದಿಲ್ಲ: ಡಿಕೆ ಶಿವಕುಮಾರ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.