Hubballi; ನೇಹಾ, ಅಂಜಲಿ ನಿವಾಸಗಳಿಗೆ ಡಾ.ಜಿ.ಪರಮೇಶ್ವರ್ ಭೇಟಿ
ಯಾವುದೇ ಕಾರಣಕ್ಕೂ ಆತನನ್ನು ಬಿಡಬೇಡಿ... ಅಜ್ಜಿ ಕಣ್ಣೀರು...
Team Udayavani, May 20, 2024, 6:25 PM IST
ಹುಬ್ಬಳ್ಳಿ: ಬರ್ಬರವಾಗಿ ಹತ್ಯೆಗೀಡಾಗಿದ್ದ ನೇಹಾ ಹಿರೇಮಠ ಮತ್ತು ಅಂಜಲಿ ಅಂಬಿಗೇರ ಅವರ ನಿವಾಸಗಳಿಗೆ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರು ಸೋಮವಾರ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.
ಬಿಡ್ನಾಳ ಬಸವ ನಗರದಲ್ಲಿರುವ ನೇಹಾ ಹಿರೇಮಠ ನಿವಾಸಕ್ಕೆ ಆಗಮಿಸಿ, ಅವರ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.ಈ ವೇಳೆ ನೇಹಾ ತಂದೆ ನಿರಂಜನ ಹಿರೇಮಠ ದಂಪತಿ ಅವರೊಂದಿಗೆ ಘಟನೆಯ ಕುರಿತು ಮಾಹಿತಿ ಪಡೆದರು.
ಘಟನೆ ಆದ ತತ್ ಕ್ಷಣ ಬರಬೇಕಿತ್ತು. ಚುನಾವಣೆ ಹಿನ್ನೆಲೆಯಲ್ಲಿ ಬರಲಾಗಲಿಲ್ಲ. ಆದರೆ, ಘಟನೆ ಬಗ್ಗೆ ಮಾಹಿತಿ ಬಂದ ತತ್ ಕ್ಷಣ ಸಚಿವರು, ಶಾಸಕರು ಹಾಗೂ ಪೊಲೀಸ್ ಅಧಿಕಾರಿಗಳೊಂದಿಗೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳಲು ಸೂಚನೆ ನೀಡಿದ್ದೆ. ಪ್ರಕರಣದ ಸಂಪೂರ್ಣ ಮಾಹಿತಿ ಪಡೆದುಕೊಂಡಿರುವೆ ಎಂದು ಹೇಳಿದರು.
ಈ ವೇಳೆ ನೇಹಾ ತಂದೆ, ಪಾಲಿಕೆ ಸದಸ್ಯ ನಿರಂಜನ ಮಾತನಾಡಿ, ತನಿಖೆ ವಿಳಂಬ ಆಗುತ್ತಿದೆ. ಆದಷ್ಟು ಬೇಗ ತನಿಖೆ ಪೂರ್ಣ ಗೊಳಿಸಿ ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಬೇಕು. ಈ ಪ್ರಕರಣದಲ್ಲಿ ಆರೋಪಿಯೊಂದಿಗೆ ಇನ್ನೂ ನಾಲ್ವರು ಹತ್ಯೆಗೆ ಸಹಕಾರ ನೀಡಿರುವ ಬಗ್ಗೆ ಈಗಾಗಲೇ ಪೊಲೀಸರಿಗೆ ದೂರು ಕೊಟ್ಟಿದ್ದರೂ ಅವರ ಮೇಲೆ ಈವರೆಗೆ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಇದರ ಬಗ್ಗೆ ಸಂಪೂರ್ಣ ತನಿಖೆ ಆಗಬೇಕೆಂದು ಒತ್ತಾಯಿಸಿದರು.
ಈ ಘಟನೆಯಿಂದಾಗಿ ನನಗೂ ಹಾಗೂ ಪಕ್ಷಕ್ಕೂ ತೀವ್ರ ಹಾನಿಯಾಗಿದೆ. ಮಗಳ ಹತ್ಯೆ ನಡೆದ ತಿಂಗಳೊಳಗೆ ಇದೇ ಮಾದರಿಯಲ್ಲಿ ನಾನು ಪ್ರತಿನಿಧಿಸಿದ ವಾರ್ಡ್ ನಲ್ಲೇ ಅಂಜಲಿ ಅಂಬಿಗೇರ ಎಂಬ ಯುವತಿಯ ಕೊಲೆ ಆಗಿದೆ. ಇದರಿಂದ ಜನರಲ್ಲಿ ಪೊಲೀಸರ ಬಗ್ಗೆ ಇರುವ ಗೌರವ ಕುಂದಿದೆ. ಮುಂದೆ ಈ ರೀತಿಯ ಅಹಿತಕರ ಘಟನೆ ನಡೆಯದಂತೆ ಸರ್ಕಾರ ಕಠಿಣ ನಿರ್ಧಾರ ಕೈಗೊಳ್ಳುವಂತೆ ಮನವಿ ಮಾಡಿದರು.
ಈ ವೇಳೆ ಗೃಹ ಸಚಿವರು ಮಾತನಾಡಿ, ಈಗಾಗಲೇ ಈ ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸಿದ್ದು, ಎಲ್ಲಾ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದಾರೆ. ಆದಷ್ಟು ಬೇಗ ತನಿಖೆ ಪೂರ್ಣಗೊಳಿಸಿ ನ್ಯಾಯ ಒದಗಿಸಲಾಗುವುದು ಹಾಗೂ ಆರೋಪಿಯೊಂದಿಗೆ ಬೇರೆಯಾದರೂ ಈ ಪ್ರಕರಣದಲ್ಲಿ ಭಾಗಿಯಾಗಿದ್ದರೆ ಆ ಬಗ್ಗೆ ತನಿಖಾಧಿಕಾರಿಗಳಿಗೆ ಸೂಚನೆ ನೀಡಿ, ತನಿಖೆ ನಡೆಸಿ ತಪ್ಪಿತಸ್ಥರು ಇರುವುದು ಕಂಡುಬಂದರೆ ಅವರ ಮೇಲೂ ಕ್ರಮಕೈಗೊಳ್ಳುವುದಾಗಿ ಭರವಸೆ ನೀಡಿದರು.
ನಂತರ ಗೃಹ ಸಚಿವರು ನೇಹಾ ಪಾಲಕರೊಂದಿಗೆ ಆಂತರಿಕವಾಗಿ ಸುಮಾರು ಅರ್ಧ ತಾಸಿಗೂ ಹೆಚ್ಚು ಕಾಲ ಚರ್ಚಿಸಿದರು.
ನ್ಯಾಯ ಕೊಡಿಸುವ ಭರವಸೆ
ಅಂಜಲಿ ಹತ್ಯೆ ಹಿನ್ನಲೆಯಲ್ಲಿ ರಾಜ್ಯ ಸರ್ಕಾರದಿಂದ ನಮಗೆ ನ್ಯಾಯ ಕೊಡಿಸುವ ಭರವಸೆ ನೀಡಿದ್ದಾರೆಂದು ಹತ್ಯೆಯಾದ ಅಂಜಲಿ ಅಜ್ಜಿ ಗಂಗಮ್ಮ ಅಂಬಿಗೇರ ಹೇಳಿದರು.
ಗೃಹ ಸಚಿವ ಡಾ. ಜಿ. ಪರಮೇಶ್ವರ ಅವರು ಭೇಟಿ ನೀಡಿ ಸಾಂತ್ವನ ಹೇಳಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊಲೆ ನಡೆದ ದಿನ ಏನೇನಾಯ್ತು ಎಂದು ಕೇಳಿದರು. ಆ ಬಗ್ಗೆ ಮಾಹಿತಿ ನೀಡಿದೆ. ನಾವು ನಮ್ಮ ಮೊಮ್ಮಗಳ ಕೊಂದ ಆರೋಪಿಗೆ ಗಲ್ಲು ಶಿಕ್ಷೆ ಕೊಡಿಸಲು ಕೇಳಿದ್ದೇವೆ. ಅದರ ಕುರಿತಾಗಿ ಅವರು ತನಿಖೆ ಮಾಡಿ ತಕ್ಕ ಶಿಕ್ಷೆ ನೀಡುವುದಾಗಿ ಭರವಸೆ ನೀಡಿದ್ದಾರೆ.
ಲೋಕಸಭಾ ಚುನಾವಣೆಯ ಬಳಿಕ ಮನೆ, ಶಿಕ್ಷಣದ ಜವಾಬ್ದಾರಿ ಹಾಗೂ ಸರ್ಕಾರಿ ನೌಕರಿ ಕೊಡಿಸುವುದಾಗಿ ಹೇಳಿದ್ದಾರೆ. ಸಚಿವರ ಭರವಸೆ ಮೇಲೆ ನಮಗೆ ನಂಬಿಕೆ ಇದೆ ಎಂದರು.
ಅಂಜಲಿಯ ಅಜ್ಜಿ ಗೃಹ ಸಚಿವರ ಎದುರು, ‘ನಮಗೆ ಅನ್ಯಾಯವಾಗಿದೆ. ಯಾವುದೇ ಕಾರಣಕ್ಕೂ ಆತನನ್ನು ಬಿಡಬೇಡಿ’ ಎಂದು ಕಣ್ಣೀರು ಹಾಕಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.