Team Udayavani, Feb 20, 2020, 1:20 PM IST
ಹುಬ್ಬಳ್ಳಿ: ಮಿನಿವಿಧಾನಸೌಧ ನಿರ್ವಹಣೆಗಾಗಿ ಇಲ್ಲಿರುವ ಕಚೇರಿಗಳು ಪ್ರತಿ ತಿಂಗಳು ಇಂತಿಷ್ಟು ನಿರ್ವಹಣಾ ಶುಲ್ಕ ಪಾವತಿ ಮಾಡಬೇಕೆಂಬುದು ನಿಯಮ. ಆದರೆ ಕೆಲ ಇಲಾಖೆಗಳು ಆರೇಳು ವರ್ಷಗಳಿಂದ ನಿರ್ವಹಣಾ ಶುಲ್ಕ ಬಾಕಿ ಉಳಿಸಿಕೊಂಡಿದ್ದರ ಪರಿಣಾಮ ಸಮರ್ಪಕ ನಿರ್ವಹಣೆ ಅಸಾಧ್ಯವಾಗಿದ್ದು, ಸಾರ್ವಜನಿಕರಿಗೆ ಮೂಲ ಸೌಲಭ್ಯ ಕಲ್ಪಿಸಲಾಗದಂತಹ ಪರಿಸ್ಥಿತಿ ಉಂಟಾಗಿದೆ.
ಒಂದೇ ಸೂರಿನಡೆ ವಿವಿಧ ಇಲಾಖೆಗಳ ಸೇವೆ ದೊರೆಯಲೆಂದು ಮಿನಿ ವಿಧಾನಸೌಧ ನಿರ್ಮಿಸಿ, ವಿವಿಧ ಇಲಾಖೆಗಳಿಗೆ ಸ್ಥಳಾವಕಾಶ ನೀಡಲಾಗಿತ್ತು, ನಿರ್ವಹಣಾ ವೆಚ್ಚ ಭರಿಸುವಂತೆಯೂ ಸೂಚಿಸಲಾಗಿತ್ತು. ಕೆಲವು ಇಲಾಖೆ ಶುಲ್ಕ ನೀಡಿದರೆ, ಇನ್ನೂ ಕೆಲವು ನೀಡುತ್ತಿಲ್ಲ ಇದರಿಂದ ಕಟ್ಟಡ ನಿರ್ವಹಣೆ ಸಮಸ್ಯೆ ಎದುರಾಗಿದೆ.
89.69 ಲಕ್ಷ ರೂ. ಬಾಕಿ: 2019 ಜೂನ್ ಅಂತ್ಯದ ವೇಳೆಗೆ ತಾಲೂಕು ಪಂಚಾಯ್ತಿ ಬರೋಬ್ಬರಿ 87 ತಿಂಗಳ 54,29,580 ರೂ. ನಿರ್ವಹಣಾ ಶುಲ್ಕ ಬಾಕಿ ಉಳಿಸಿಕೊಂಡಿದೆ. ಅದರಂತೆ ವಾರ್ತಾ ಇಲಾಖೆ 4,49,280
ರೂ. ಸಮಾಜ ಕಲ್ಯಾಣ ಇಲಾಖೆ 4,36,620 ರೂ. ಸೇರಿದಂತೆ ವಿವಿಧ ಇಲಾಖೆಗಳು ಬಾಕಿ ಉಳಿಸಿಕೊಂಡಿವೆ. 2019 ಜೂನ್ ತಿಂಗಳಿನಿಂದ ಇಲ್ಲಿಯವರೆಗೆ ಲೆಕ್ಕ ಹಾಕಿದರೆ ಬಾಕಿ ಮೊತ್ತ ಮತ್ತಷ್ಟು ಹೆಚ್ಚಲಿದೆ. ಹೊಸದಾಗಿ ಆರಂಭವಾಗಿರುವ ಭೂ ದಾಖಲೆಗಳ ಹಾಗೂ ಯುಪಿಆರ್ ಇಲಾಖೆಗಳ ನಿರ್ವಹಣಾ ಶುಲ್ಕಕ್ಕೆ ಸೇರ್ಪಡೆಗೊಳಿಸಬೇಕಿದೆ.
ಎಲ್ಲಾ ಇಲಾಖೆಗಳಿಂದ ಒಟ್ಟು 89,69,196 ರೂ. ನಿರ್ವಹಣಾ ಶುಲ್ಕ ಬಾಕಿ ಉಳಿಸಿಕೊಂಡಿವೆ. ಬರುವ ಹಣದಲ್ಲೆ ಭದ್ರತಾ ಸಿಬ್ಬಂದಿ ವೇತನ, ವಿದ್ಯುತ್, ಸ್ವತ್ಛತೆ ಸೇರಿದಂತೆ ಕನಿಷ್ಠ ಸೌಲಭ್ಯಕ್ಕೆ ವ್ಯಯಿಸಲಾಗುತ್ತಿದೆ. ಜನರಿಗೆ ಬೇಕಾದ ಅಗತ್ಯ ಸುಸ್ಥಿಯಲ್ಲಿರುವ ಶೌಚಾಲಯ, ಲಿಫ್ಟ್, ಸೂಕ್ತ ಭದ್ರತೆ ಕ್ರಮಗಳು ಸೇರಿದಂತೆ ವಿವಿಧ ಸೌಲಭ್ಯ ಕಲ್ಪಿಸಲು ಸಾಧ್ಯವಾಗುತ್ತಿಲ್ಲ. ಪ್ರತಿ ತಿಂಗಳು ಕಟ್ಟಡದ ನಿರ್ವಹಣೆಗೆ ಕನಿಷ್ಠ 3ಲಕ್ಷ ರೂ. ತಗಲುತ್ತಿದ್ದು, ಇಷ್ಟೊಂದು ಹಣ ಸಂಗ್ರಹವಾಗದಿರುವುದರಿಂದ ನಿರ್ವಹಣೆ ದುಸ್ತರವಾಗಿದ್ದು, ಇಲಾಖೆಗಳ
ಅಸಹಕಾರದಿಂದ ಜನರು ಸಮಸ್ಯೆ ಅನುಭವಿಸುವಂತಾಗಿದೆ.
ತಾಪಂ ಪ್ರತಿಷ್ಠೆಯ ತಿಕ್ಕಾಟ: ಮಿನಿವಿಧಾನಸೌಧ ನಿರ್ಮಾಣವಾಗಿರುವ ಜಾಗ ತಮಗೆ ಸೇರಿದ್ದರಿಂದ ನಿರ್ವಹಣಾ ವೆಚ್ಚ ಪಾವತಿಸುವುದಿಲ್ಲ ಎಂಬುದು ತಾಪಂ ವಾದ. ಇದರ ಭಾಗವಾಗಿ ಸಮಾಜ ಕಲ್ಯಾಣ ಇಲಾಖೆ ಕೂಡ ತಾಪಂ ಅಡಿಯಲ್ಲಿ ಬರುವುದರಿಂದ ಇವರು ಕೂಡ ತಾಪಂನತ್ತ ಬೆರಳು ಮಾಡುತ್ತಿದ್ದಾರೆ ಪರಿಣಾಮ ಎರಡರಿಂದ ಬರೋಬ್ಬರಿ 58 ಲಕ್ಷಕ್ಕೂ ಹೆಚ್ಚು ಶುಲ್ಕ ಬಾಕಿ ಉಳಿದಿದೆ. ಶುಲ್ಕ ಬಾಕಿ ಉಳಿಸಿಕೊಂಡ ಎಲ್ಲಾ ಇಲಾಖೆಗಳ ಮುಖ್ಯಸ್ಥರಿಗೆ ನೊಟೀಸ್ ಕಳುಹಿಸಿದರೂ ಯಾವುದಕ್ಕೂ ಕ್ಯಾರೆ ಮಾಡುತ್ತಿಲ್ಲ.
ಹೊರೆಯಾದ ಶುಲ್ಕ: ಆರಂಭದಲ್ಲಿ ಚದರಡಿಗೆ 2 ರೂ. ನಿರ್ವಹಣಾ ಶುಲ್ಕ ವಿಧಿಸಲಾಗಿತ್ತು. ಈ ಹಣದಲ್ಲಿ ಇಷ್ಟೊಂದು ದೊಡ್ಡ ಕಟ್ಟಡ ನಿರ್ವಹಿಸುವುದು ಅಸಾಧ್ಯ ಎನ್ನುವ ಕಾರಣಕ್ಕೆ 2017ರಲ್ಲಿ ನಿರ್ವಹಣಾ ಸಮಿತಿಯಲ್ಲಿ ಚರ್ಚಿಸಿ ಪ್ರತಿ ಚದರಡಿಗೆ 10 ರೂ. ನಿಗದಿ ಮಾಡಲಾಯಿತು. ಕೆಲ ಇಲಾಖೆಗಳಿಗೆ ಇದು ಹೊರೆಯಾಗಿ ಪರಿಣಮಿಸಿದೆ. ಬರುವ ಒಂದಿಷ್ಟು ನಿರ್ವಹಣಾ ಹಣದಲ್ಲಿ ವಿದ್ಯುತ್, ಫೋನ್ ಸೇರಿದಂತೆ ಇತರೆ ನಿಭಾಯಿಸುವುದು ದುಸ್ತರವಾಗಿದೆ. ಮುಖ್ಯ ಕಚೇರಿಯಿಂದ ಇಷ್ಟೊಂದು ಹಣ ನಿರ್ವಹಣೆಗೆ ಪಾವತಿಸುತ್ತಿಲ್ಲ ಎನ್ನುವುದು ಕೆಲ ಅಧಿಕಾರಿಗಳ ಅಳಲು.
ಹಿಂದಿನ ಅಧಿಕಾರಿಗಳ ಎಡವಟ್ಟು
ಯೋಜನೆಯಂತೆ ಮಿನಿವಿಧಾನಸೌಧ ನಿರ್ಮಾಣವಾಗದ ಕಾರಣ ಪಾಲಿಕೆಯಿಂದ ಸಿಸಿ ದೊರೆಯದಿರುವುದು ಕಟ್ಟಡ ಈ ಪರಿಸ್ಥಿತಿ ತಲುಪಲು ಕಾರಣವಾಗಿದೆ. ನಿಯಮಾವಳಿ ಪ್ರಕಾರ ಲೋಕೋಪಯೋಗಿ ಇಲಾಖೆಗೆ ಹಸ್ತಾಂತರಗೊಂಡಿದ್ದರೆ ಆ ಇಲಾಖೆ ನಿರ್ವಹಣೆ ಮಾಡುತ್ತಿತ್ತು. ಅಂದಿನ ಅಧಿಕಾರಿಗಳು ಮಾಡಿದ ಎಡವಟ್ಟಿನಿಂದ ನೀಲನಕ್ಷೆಗೆ ವಿರುದ್ಧವಾಗಿ ನಿರ್ಮಿಸಿರುವ ಪರಿಣಾಮ ಪಾಲಿಕೆಯಿಂದ ಸಿಸಿ ದೊರೆಯದೆ ಕಂದಾಯ ಇಲಾಖೆ ಸುಪರ್ದಿಯಲ್ಲಿದೆ. ಹೀಗಾಗಿಯೇ ಕಟ್ಟಡದ ನಿರ್ವಹಣೆಗೆ ತಹಶೀಲ್ದಾರ್ ನೇತೃತ್ವದಲ್ಲಿ ಒಂದು ಸಮಿತಿ ರಚಿಸಿ ನಿರ್ವಹಣೆಗೆ ತಗಲುವ ವೆಚ್ಚವನ್ನು ಆಯಾ ಇಲಾಖೆಯಿಂದ ಭರಿಸುವುದು ಎನ್ನುವ ನಿರ್ಣಯಕ್ಕೆ ಬಂದ ಪರಿಣಾಮ ಇಡೀ ಕಟ್ಟಡ ನಿರ್ವಹಣೆ ತಹಶೀಲ್ದಾರ್ ನೋಡಿಕೊಳ್ಳುವಂತಾಗಿದೆ.
ಪ್ರತಿ ತಿಂಗಳು ಕನಿಷ್ಠ 3ಲಕ್ಷ ರೂ. ನಿರ್ವಹಣೆಗೆ ಬೇಕಾಗುತ್ತಿದೆ. ಎಲ್ಲಾ ಇಲಾಖೆಗಳಿಂದ ಪ್ರತಿ ತಿಂಗಳು ಸಂದಾಯವಾದರೆ ಇಲ್ಲಿನ ಸಿಬ್ಬಂದಿ ಸೇರಿದಂತೆ ಸಾರ್ವಜನಿಕರಿಗೆ ಅಗತ್ಯ ಸೌಲಭ್ಯ ಕಲ್ಪಿಸಬಹುದಾಗಿದೆ. ಕೆಲ ಇಲಾಖೆಗಳು ಕಾಲಕಾಲಕ್ಕೆ ಬಾಕಿ ಪಾವತಿಸುತ್ತಿರುವುದರಿಂದ ಅದೇ ಹಣದಲ್ಲಿ ಸಾಧ್ಯವಾದ ಸೌಲಭ್ಯ ನೀಡಲಾಗುತ್ತಿದೆ. ಪ್ರಮುಖ ಯಾವುದೇ ಕಾರ್ಯಗಳನ್ನು ಕೈಗೆತ್ತಿಕೊಳ್ಳದಂತಾಗಿದೆ.
ಶಶಿಧರ ಮಾಡ್ಯಾಳ,
ತಹಶೀಲ್ದಾರ್
ಹೇಮರಡ್ಡಿ ಸೈದಾಪುರ