ಸರ್ಕಾರಿ ಶಾಲೆ ಏಳ್ಗೆಗೆ ವಿನೂತನ ಹೆಜ್ಜೆ
ಮಾದರಿಯಾದ ಶರೇವಾಡ ಸರಕಾರಿ ಹಿರಿಯ ಪ್ರಾಥಮಿಕ ಶಾಲೆವರ್ಷದಿಂದ ವರ್ಷಕ್ಕೆ ಪ್ರವೇಶ ಹೆಚ್ಚಳ
Team Udayavani, Mar 1, 2020, 1:17 PM IST
ಹುಬ್ಬಳ್ಳಿ: ಕಾನ್ವೆಂಟ್ ಸ್ಕೂಲ್‌ಗಳ ಅಬ್ಬರದಿಂದಾಗಿ ತಮ್ಮೂರಿನ ಕನ್ನಡ ಶಾಲೆ ಮುಚ್ಚಿ ಹೋಗಬಾರದೆಂಬ ಉದ್ದೇಶದಿಂದ ಯುವಕ ಸಂಘವೊಂದು ಶಾಲೆಯ ಏಳ್ಗೆಗೆ ಪಣ ತೊಟ್ಟಿದ್ದು, ಗ್ರಾಮಸ್ಥರ ಸಹಕಾರವೂ ದೊರೆತಿದ್ದರಿಂದ ಶಾಲೆಯ ಪ್ರವೇಶ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿರುವುದು ಶ್ಲಾಘನೀಯ ಸಂಗತಿ.
ಶರೇವಾಡದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯನ್ನು ಮಾದರಿ ಕನ್ನಡ ಶಾಲೆಯನ್ನಾಗಿ ರೂಪಿಸಲು “ವಿನೂತನ ಯುವಕ ಮಂಡಳ’ ಕಾರ್ಯೋನ್ಮುಖವಾಗಿದೆ. ಪರಿಸರ ಪ್ರೇಮಿ ಹಾಗೂ ಯುವ ರಾಯಭಾರಿ ಲಿಂಗರಾಜ ನಿಡವಣಿ ಶಾಲೆಯ ಅಭ್ಯುದಯಕ್ಕೆ ಕೈಜೋಡಿಸಿದ್ದಾರೆ.
ಶರೇವಾಡ ಗ್ರಾಮದ ಸುತ್ತಮುತ್ತಲಿನ ಗ್ರಾಮಗಳಲ್ಲಿ ಕಾನ್ವೆಂಟ್ ಶಾಲೆಗಳ ಹಾವಳಿ ಹೆಚ್ಚಾಗಿದೆ. ಅಲ್ಲದೇ 10 ಕಿಮೀ ದೂರದಲ್ಲಿ ಹುಬ್ಬಳ್ಳಿಗೆ ಕೂಡ ಕಲಿಯಲು ಮಕ್ಕಳನ್ನು ಕಳಿಸಲಾಗುತ್ತದೆ. ಸಿಕ್ಕಾಪಟ್ಟೆ ಶುಲ್ಕ ತುಂಬಿದರೂ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ದೊರೆಯುತ್ತಿಲ್ಲ ಎಂಬುದು ಗ್ರಾಮಸ್ಥರಿಗೆ ಮನವರಿಕೆಯಾದ ನಂತರ ಗ್ರಾಮದ ಶಾಲೆಯನ್ನು ಅಭಿವೃದ್ಧಿಪಡಿಸಿದರೆ ಇಲ್ಲಿ ಕಲಿಯುವವರ ಸಂಖ್ಯೆ ಹೆಚ್ಚಾಗುತ್ತದೆ ಎಂಬುದನ್ನು ಮನಗಂಡು ಯುವಕ ಮಂಡಳ ಶಾಲೆ ಅಭಿವೃದ್ಧಿ ದಿಸೆಯಲ್ಲಿ ಹಲವು ಕಾರ್ಯಕ್ರಮ ಅನುಷ್ಠಾನಗೊಳಿಸಿತು.
ಔಷಧಿವನ: ಶಾಲೆ ಮೈದಾನದಲ್ಲಿ ನಿರ್ಮಿಸಿದ ಸಸ್ಯಕಾಶಿ ಔಷಧಿವನ ಎಲ್ಲರನ್ನೂ ಆಕರ್ಷಿಸುತ್ತದೆ. ಲಿಂಗರಾಜ ನಿಡವಣಿ ಅವರ ಸಹಾಯದಿಂದ ಇಲ್ಲಿ ಅಶ್ವಗಂಧ, ಚಂದನ, ಅಡಸೋಗೆ, ಚೊಗಚೆ, ಲಕ್ಕಿ, ಬಕುಳ, ಔದುಂಬರ, ಅಶ್ವತ್ಥ, ಬಿಲ್ವ, ಪಂಚವಟಿ, ಬ್ರಾಹ್ಮಿ ಸೇರಿದಂತೆ 108 ಔಷಧೀಯ ಸಸ್ಯಗಳನ್ನು ನೆಡಲಾಗಿದ್ದು, ಮಕ್ಕಳು ಹಾಗೂ ಶಿಕ್ಷಕರು ಆರೈಕೆ ಮಾಡುತ್ತಿದ್ದಾರೆ.
ಮಕ್ಕಳಿಗೆ ಪ್ರತಿಯೊಂದು ಗಿಡದ ಮಹತ್ವ ಹಾಗೂ ಉಪಯೋಗ ತಿಳಿಸಿಕೊಡಲಾಗುತ್ತದೆ. ರಕ್ಷಾ ಬಂಧನದಂದು ವಿದ್ಯಾರ್ಥಿಗಳು ಗಿಡಗಳಿಗೆ ರಕ್ಷೆ ಕಟ್ಟಿ ಸಂಭ್ರಮಿಸುತ್ತಾರೆ. ಮೈದಾನದಲ್ಲಿ ಆಟವಾಡಿದರೂ ಯಾರೂ ಗಿಡದ ಎಲೆ, ಕಾಯಿ, ರೆಂಬೆಗಳನ್ನು ಮುರಿಯುವುದಿಲ್ಲ. ಶಾಲಾ ವಾತಾವರಣವನ್ನು ಹಸಿರಿನಿಂದ ಕಂಗೊಳಿಸಿದ್ದಕ್ಕಾಗಿ ಮೂರು ವರ್ಷಗಳ ಹಿಂದೆ “ಹಸಿರು ಶಾಲೆ’ ಪ್ರಶಸ್ತಿ ಲಭಿಸಿದೆ. ಪರಿಸರಸ್ನೇಹಿ ಗಣೇಶೋತ್ಸವ ಆಚರಣೆ ಶಾಲೆಯ ಮತ್ತೂಂದು ವಿಶೇಷತೆ.
ಕುಟೀರ ನಿರ್ಮಾಣ
ಗ್ರಾಮದ ಮಾರುತಿ ಯುವಕ ಮಂಡಳದ ಸಹಾಯದಿಂದ ಶಾಲೆ ಆವರಣದಲ್ಲಿ ಕುಟೀರ ನಿರ್ಮಾಣ ಮಾಡಲಾಗಿದೆ. ಪ್ರತಿಯೊಂದು ವರ್ಗದ ವಿದ್ಯಾರ್ಥಿಗಳು ಪ್ರತಿದಿನ 1 ಗಂಟೆ ಕುಟೀರದಲ್ಲಿ ಕುಳಿತು ನೈತಿಕ ಶಿಕ್ಷಣ ಪಡೆಯುತ್ತಾರೆ. ಊಟವನ್ನೂ ಇಲ್ಲೇ ಮಾಡುತ್ತಾರೆ. ಔಷಧವನದ ಪಕ್ಕದಲ್ಲಿಯೇ ಕುಟೀರ ನಿರ್ಮಿಸಿದ್ದರಿಂದ ಮಕ್ಕಳು ಇಲ್ಲಿ ಖುಷಿಯಿಂದ ಆಡವಾಡಲು ಬಯಸುತ್ತಾರೆ. ಶಾಲೆಯಲ್ಲಿ ನಡೆಯುವ ಕಾರ್ಯಕ್ರಮಗಳಿಗೆ ಇದೇ ಕುಟೀರ ವೇದಿಕೆ.
ಶಾಲೆಯ ಆವರಣದಲ್ಲಿ ನಿರ್ಮಿಸಿರುವ ಕುಟೀರದ ಉದ್ಘಾಟನೆ ನಡೆಯಲಿದೆ. ಉದ್ಘಾಟನೆಗೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ, ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ, ಶಾಸಕಿ ಕುಸುಮಾವತಿ ಶಿವಳ್ಳಿ ಅವರನ್ನು ಆಹ್ವಾನಿಸಲು ನಿರ್ಧರಿಸಲಾಗಿದೆ.
ವರ್ಣಮಯ ಕಾಂಪೌಂಡ್
ನೆಹರು ಯುವ ಕೇಂದ್ರದ ಹಿಂದಿನ ಯುವ ಸಮನ್ವಯಾಧಿಕಾರಿ ವಿಲ್‌ಫ್ರೆಡ್ ಡಿಸೋಜಾ “ಆದರ್ಶ ಯುವ ಗ್ರಾಮ’ ಯೋಜನೆಯಡಿ ಶರೇವಾಡಕ್ಕೆ ಅನುದಾನ ನೀಡಿದ್ದಾರೆ. ಅದೇ ಅನುದಾನದಡಿ ಶಾಲೆಯ ಕಾಂಪೌಂಡ್ ಬಣ್ಣದಿಂದ ಕಂಗೊಳಿಸುವಂತಾಗಿದೆ. ಹುಬ್ಬಳ್ಳಿಯ ಕಿರಣ ಉಪ್ಪಾರ ಅವರ “ಕಲರ್ ಮೈ ಸಿಟಿ’ ಸಂಸ್ಥೆ ಶಾಲೆಯ ಆವರಣವನ್ನೆಲ್ಲ ವರ್ಣಮಯವಾಗಿಸಿದೆ. ಕಾಂಪೌಂಡ್ ಮೇಲೆ ನೈತಿಕ ಶಿಕ್ಷಣದ ಮಹತ್ವ, ಪರಿಸರ ಸಂರಕ್ಷಣೆ, ಜಾಗತಿಕ ತಾಪಮಾನ ಕುರಿತು ಜಾಗೃತಿ ಸಂದೇಶಗಳನ್ನು ಮೂಡಿಸಲಾಗಿದೆ. ನೀರಿನ ಟ್ಯಾಂಕ್ ಮೇಲೆ ನೀರು ಮಿತವಾಗಿ ಬಳಸುವಂತೆ ಸಲಹೆ ನೀಡಲಾಗಿದೆ. ಶಾಲೆಯ ಗೇಟ್ ಸುತ್ತಮುತ್ತ ಸಂಗ್ರಹಗೊಂಡಿದ್ದ ಕಸವನ್ನು ಗ್ರಾಪಂ ಸಹಾಯದಿಂದ ತೆರವು ಮಾಡಲಾಗಿದ್ದು, ಶಾಲೆಯ ಹೊರ ಆವರಣದಲ್ಲಿ ಕೂಡ ಆಕರ್ಷಕ ಚಿತ್ತಾರ ಬಿಡಿಸಲಾಗಿದೆ .
ಸ್ಮಾರ್ಟ್ ಬೆಲ್
ಸ್ವಯಂ ಚಾಲಿತ ಕರೆಗಂಟೆ (ಎಲೆಕ್ಟ್ರಾನಿಕ್ ಬೆಲ್) ಇಲ್ಲಿನ ಮತ್ತೂಂದು ಆಕರ್ಷಣೆ. ಟೈಮರ್ ಮೂಲಕ ಸಮಯ ನಿಗದಿಪಡಿಸಿದ ಬೆಲ್ ಇಲ್ಲಿ ಅಳವಡಿಸಲಾಗಿದ್ದು, ಇದರಿಂದ ಜವಾನನ ಕೆಲಸ ತಪ್ಪಿದೆ. ವಿನೂತನ ಯುವಕ ಮಂಡಳ ಇದೇ ರೀತಿ ಸುತ್ತಮುತ್ತಲಿನ 15 ಸರಕಾರಿ ಶಾಲೆಗಳಿಗೆ ಉಚಿತವಾಗಿ ಎಲೆಕ್ಟ್ರಾನಿಕ್
ಬೆಲ್‌ಗಳನ್ನು ನೀಡಿದೆ. ಶಾಲೆಗೆ ಸಾಲುಮರದ ತಿಮ್ಮಕ್ಕ, ಅದಮ್ಯ ಚೇತನ ಫೌಂಡೇಶನ್‌ನ ತೇಜಸ್ವಿನಿ ಅನಂತಕುಮಾರ ಭೇಟಿ ನೀಡಿದ್ದಾರೆ. ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಹಲವು ಬಾರಿ ಶಾಲೆಗೆ ಭೇಟಿ ನೀಡಿ ಕೈಗೊಂಡ ಯೋಜನೆಗಳನ್ನು ಶ್ಲಾಘಿ ಸಿದ್ದಾರೆ. ಮುಂದಿನ ದಿನಗಳಲ್ಲಿ ಶಾಲೆಯಲ್ಲಿ ಸ್ಮಾರ್ಟ್ ಕ್ಲಾಸ್ ಅನುಷ್ಠಾನಗೊಳಿಸಲು ಯೋಜಿಸಲಾಗಿದೆ. ಶಾಲೆಯ ಆವರಣದಲ್ಲಿ ವಾಕಿಂಗ್ ಬರುವವರಿಗೆ ವಿಶ್ರಾಂತಿಗಾಗಿ ಬೆಂಚ್ ಹಾಕಲು ಉದ್ದೇಶಿಸಲಾಗಿದೆ. ಕೇವಲ ವಾತಾವರಣವಷ್ಟೇ ಅಲ್ಲ; ಇಲ್ಲಿನ ಕಲಿಕೆಯೂ ಗುಣಮಟ್ಟದ್ದಾಗಿದೆ. ಉತ್ತಮ ಬೋಧಕ ಸಿಬ್ಬಂದಿ ಇಲ್ಲಿದ್ದು, ಆಸಕ್ತಿಯಿಂದ ವಿದ್ಯಾರ್ಥಿಗಳಿಗೆ ಪಾಠ ಮಾಡುತ್ತಿದ್ದಾರೆ. ಶಾಲೆಯ ಸುಧಾರಣಾ ಸಮಿತಿ, ಗ್ರಾಪಂ, ಗ್ರಾಮಸ್ಥರು ಸಹಕಾರ ನೀಡಿದ್ದರಿಂದ ಮಾದರಿ ಶಾಲೆಯಾಗುವ ದಿಸೆಯಲ್ಲಿ ಸಾಗುವಂತಾಗಿದೆ. ವಿದ್ಯಾರ್ಥಿಗಳನ್ನು ಶಾಲೆಯಲ್ಲಿ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.
ಶಾಲೆಯನ್ನು ರಾಷ್ಟ್ರೀಯ ವರ್ಣಮಯ ಕಾಂಪೌಂಡ್ ಮಟ್ಟದಲ್ಲಿ ಶರೇವಾಡ ಸರಕಾರಿ ಶಾಲೆಯನ್ನು ಮಾದರಿ ಶಾಲೆಯನ್ನಾಗಿ ರೂಪಿಸಬೇಕಿದೆ. ಪಾಲಕರು ಖಾಸಗಿ ಶಾಲೆಗಳ ವ್ಯಾಮೋಹ ಬಿಟ್ಟು ಗುಣಮಟ್ಟದ ಶಿಕ್ಷಣ ನೀಡುವ ಸರಕಾರಿ ಶಾಲೆಗಳಿಗೆ ಮಕ್ಕಳನ್ನು ಕಳಿಸಬೇಕೆಂಬ ಮಹದಾಸೆ ನನ್ನದಾಗಿದೆ. ಯಾವುದೇ ಕಾನ್ವೆಂಟ್ ಶಾಲೆಗಳಿಗೆ ಕಡಿಮೆ ಇಲ್ಲದಂತೆ ಶಾಲೆಯನ್ನು ರೂಪಿಸಬೇಕು. ಜನಪ್ರತಿನಿಧಿಗಳು, ಸಂಘ ಸಂಸ್ಥೆಗಳು ಪಣತೊಟ್ಟರೆ ಸರಕಾರಿ ಶಾಲೆಗಳನ್ನು ಮಾದರಿ ಶಾಲೆಗಳನ್ನಾಗಿ ರೂಪಿಸುವುದು ದೊಡ್ಡ ವಿಷಯವೇನಲ್ಲ. ಬಡ ಜನರಿಗೆ ಶಿಕ್ಷಣ ನೀಡುತ್ತಿರುವ ಸರಕಾರಿ ಶಾಲೆಗಳು ಉಳಿಯುವುದು ಅವಶ್ಯಕವಾಗಿದೆ.
ಲಿಂಗರಾಜ ನಿಡವಣಿ,
ಯುವ ಮುಖಂಡ
ನಮ್ಮೂರಿನ ಸರಕಾರಿ ಶಾಲೆಯನ್ನು ಅಭಿವೃದ್ಧಿಪಡಿಸಲು ನಮ್ಮ ಯುವಕ ಮಂಡಳ ಮಾಡುತ್ತಿರುವ ಕೆಲಸಕ್ಕೆ ಗ್ರಾಮಸ್ಥರು ಕೈಜೋಡಿಸುತ್ತಿದ್ದಾರೆ. ಶಾಲಾ ಮಕ್ಕಳ ಪ್ರಗತಿಯನ್ನು ಪರಿಗಣಿಸಿ ಪಾಲಕರು ಇದೇ ಶಾಲೆಯಲ್ಲಿಯೇ ಮಕ್ಕಳನ್ನು ಕಲಿಸುತ್ತಿದ್ದಾರೆ. ಕಾನ್ವೆಂಟ್ ಶಾಲೆಗಳ ಅಬ್ಬರದ ಪ್ರಚಾರದ ಮಧ್ಯೆಯೂ ನಮ್ಮ ಶಾಲೆಯ ವಿದ್ಯಾರ್ಥಿಗಳ ಸಂಖ್ಯೆ 350ಕ್ಕೇರಿರುವುದು ನಮ್ಮ ಶ್ರಮ ಸಾರ್ಥಕವೆನಿಸಿದೆ. ಇದರಲ್ಲಿ ಬೋಧಕ ಸಿಬ್ಬಂದಿ ಪಾತ್ರ ಮಹತ್ವದ್ದಾಗಿದೆ. ಅವರು ನಿಷ್ಠೆಯಿಂದ ಬೋಧನೆ ಮಾಡುತ್ತಿದ್ದಾರೆ.
ರಮೇಶ ಉಳ್ಳಾಗಡ್ಡಿ,
ವಿನೂತನ ಯುವಕ ಮಂಡಳ ಅಧ್ಯಕ್ಷ
ವಿಶ್ವನಾಥ ಕೋಟಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hubli: ಅಪ್ರಾಪ್ತೆಯೊಂದಿಗೆ ಅನುಚಿತ ವರ್ತನೆ: ಮುಖ್ಯ ಪೇದೆ ವಿರುದ್ದ ಪೋಕ್ಸೋ ಕೇಸ್
Hubli: ಹಣಕಾಸು ಆಯೋಗದ ಅನ್ಯಾಯದ ಬಗ್ಗೆ ಬಿಜೆಪಿಯರಿಂದ ಮೌನ: ಸಿದ್ದರಾಮಯ್ಯ ಕಿಡಿ
Hubli: ಜನರ ದಿಕ್ಕು ತಪ್ಪಿಸಲು ಬಿಜೆಪಿಯಿಂದ ವಕ್ಫ್ ಹೋರಾಟ: ಸಿಎಂ ಸಿದ್ದರಾಮಯ್ಯ
By Election: ಶಿಗ್ಗಾವಿ ಸಮರ: ಹುಬ್ಬಳ್ಳಿಯಲ್ಲಿ ಕಾಂಗ್ರೆಸ್ ಮುಖಂಡರ ಸಭೆ
Waqf ಗೆಜೆಟ್ ನೋಟಿಫಿಕೇಶನ್ ನಲ್ಲಿ ಬಿಜೆಪಿ ಪಾಲಿದೆ: ಎಚ್.ಕೆ. ಪಾಟೀಲ್ ಕಿಡಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.