ಜಿಲ್ಲೆಯಲ್ಲಿ ಸಾಂಕ್ರಾಮಿಕ ರೋಗಗಳದ್ದೇ ಹಾವಳಿ
ಡೆಂಘೀ-ಚಿಕೂನ್ ಗುನ್ಯಾ ಬಾಧಿತರ ಸಂಖ್ಯೆ ಏರುಮುಖ ; ಜಿಲ್ಲಾಸ್ಪತ್ರೆ-ಖಾಸಗಿ ಆಸ್ಪತ್ರೆಗಳಲ್ಲಿ ರೋಗಿಗಳ ಸಂಖ್ಯೆ ದುಪ್ಪಟ್ಟು
Team Udayavani, Jul 12, 2022, 2:46 PM IST
ಧಾರವಾಡ: ಜಿಲ್ಲೆಯಲ್ಲಿ ಮುಂಗಾರು ಮಳೆಯ ಸಿಂಚನ ಮುಂದುವರಿದಿದ್ದು, ಇದರ ಜತೆಗೆ ಸತತವಾಗಿ ಸುರಿಯುತ್ತಿರುವ ಮಳೆ, ತಂಪುಮಯ ವಾತಾವರಣದಿಂದ ಸಾಂಕ್ರಾಮಿಕ ರೋಗಗಳ ಹಾವಳಿಯೂ ಜಾಸ್ತಿಯಾಗಿದೆ.
ಬೇಸಿಗೆಯ ಬಿಸಿಲಿನ ತಾಪಮಾನ ಹೊಡೆತದ ಬಳಿಕ ಆರಂಭಗೊಂಡಿರುವ ಮಳೆಯ ಅಬ್ಬರ ಮಧ್ಯೆ ಸೊಳ್ಳೆಯ ಕಾಟ ಜೋರಾಗಿದ್ದು, ಇದರಿಂದ ಸಾಂಕ್ರಾಮಿಕ ರೋಗಗಳ ಹಾವಳಿ ಹೆಚ್ಚಿದೆ.
ಹು-ಧಾ ಮಹಾನಗರ ಪಾಲಿಕೆ ಅವಳಿನಗರದಲ್ಲಿ ಸೊಳ್ಳೆಯ ಸಂತಾನೋತ್ಪತ್ತಿಗೆ ನಿಯಂತ್ರಣ ಹಾಕಲು ಫಾಗಿಂಗ್ ಕಾರ್ಯಕ್ಕೆ ಆದ್ಯತೆ ನೀಡಿಲ್ಲ. ಹೀಗಾಗಿ ಸೊಳ್ಳೆಯ ಕಾಟ ಅವಳಿನಗರದಲ್ಲಿ ಜೋರಾಗಿದೆ. ಬೇಸಿಗೆಯಲ್ಲಿ ಸದ್ದಿಲ್ಲದೇ ಹೊಡೆತ ನೀಡಿರುವ ಕೀಟಜನ್ಯ ಸಾಂಕ್ರಾಮಿಕ ರೋಗಗಳು ಇದೀಗ ಮಳೆಗಾಲದಲ್ಲಿ ತೀವ್ರ ಹೊಡೆತ ನೀಡಲು ಶುರು ಮಾಡಿವೆ.
ಮಳೆಗಾಲದಲ್ಲೇ ಹೆಚ್ಚು: ಕಳೆದ 2019ರಲ್ಲಿ 250 ಜನರಲ್ಲಿ ಡೆಂಘೀ, 121 ಜನರಲ್ಲಿ ಚಿಕೂನ್‌ಗುನ್ಯಾ, 2020ರಲ್ಲಿ 36 ಜನರಲ್ಲಿ ಡೆಂಘೀ, 17 ಜನರಲ್ಲಿ ಚಿಕೂನ್ ಗುನ್ಯಾ, 8 ಜನರಲ್ಲಿ ಮಲೇರಿಯಾ ಪತ್ತೆಯಾಗಿತ್ತು. ಇದೀಗ 2022ರ ಪ್ರಸಕ್ತ ಸಾಲಿನ ಆರು ತಿಂಗಳಲ್ಲಿ 59 ಜನರಲ್ಲಿ ಡೆಂಘೀ, ಏಳು ಜನರಲ್ಲಿ ಚಿಕೂನ್‌ಗುನ್ಯಾ, ಒಬ್ಬರಲ್ಲಿ ಮಲೇರಿಯಾ ಪತ್ತೆಯಾಗಿದೆ. ಈ ಪೈಕಿ ಮಳೆಗಾಲ ಆರಂಭವಾದ ಜೂನ್ ತಿಂಗಳಲ್ಲಿಯೇ 43 ಜನರಲ್ಲಿ ಡೆಂಘೀ, 7 ಜನರಲ್ಲಿ ಚಿಕೂನ್‌ಗುನ್ಯಾ ಪತ್ತೆಯಾಗಿರುವುದು ಆತಂಕಕ್ಕೆ ಕಾರಣವಾಗಿದೆ. ಇನ್ನು ಹು-ಧಾ ಅವಳಿನಗರಲ್ಲಿಯೇ 30 ಜನರಲ್ಲಿ ಡೆಂಘೀ ಪತ್ತೆಯಾಗಿದ್ದರೆ, ಗ್ರಾಮೀಣ ಭಾಗದಲ್ಲಿ 29 ಜನರಲ್ಲಿ ಡೆಂಘೀ ಪತ್ತೆಯಾಗಿದೆ. ಈಗಾಗಲೇ ಗ್ರಾಮೀಣ ಭಾಗದಲ್ಲಿ ಸೀಜನ್ ಜ್ವರ ದಾಳಿಯಿಟ್ಟಿದ್ದು, ಮೈ-ಕೈ ನೋವಿನ ಬಾಧೆಯಿಂದ ಬಳಲುತ್ತಿರುವ ಹಳ್ಳಿಗರನ್ನು ಸಾಂಕ್ರಾಮಿಕ ರೋಗಗಳು ಸದ್ದಿಲ್ಲದೇ ಪೀಡಿಸುತ್ತಿವೆ. ಜುಲೈ ತಿಂಗಳ 10 ದಿನಗಳಲ್ಲಿಯೇ ಡೆಂಘೀ, ಚಿಕೂನ್ ಗುನ್ಯಾ ಬಾಧಿತ ಸಂಖ್ಯೆ ಏರುಮುಖ ಮಾಡಿದ್ದು, ಹೀಗಾಗಿ ಸೋಂಕಿನ ಲಕ್ಷಣವುಳ್ಳ ರೋಗಿಗಳ ಸಂಖ್ಯೆಯಲ್ಲಿ ಏರಿಕೆ ಕಂಡು ಬಂದಿದೆ. ಹೀಗಾಗಿ ಜಿಲ್ಲಾಸ್ಪತ್ರೆ, ಖಾಸಗಿ ಆಸ್ಪತ್ರೆಗಳಲ್ಲಿ ರೋಗಿಗಳ ಸಂಖ್ಯೆಯಲ್ಲಿ ದುಪ್ಪಟ್ಟು ಆಗಿದ್ದು, ಮಕ್ಕಳಲ್ಲೂ ಜ್ವರ, ವಾಂತಿ-ಭೇದಿ ಕಂಡು ಬಂದಿವೆ.
ಆರೋಗ್ಯ ಇಲಾಖೆ ಸಲಹೆ: ಮಳೆಗಾಲದಲ್ಲಿ ಸಾಂಕ್ರಾಮಿಕ ರೋಗಗಳ ನಿಯಂತ್ರಣಕ್ಕೆ ಆರೋಗ್ಯ ಇಲಾಖೆ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಸಲಹೆ ನೀಡಿದೆ. ಸೇವಿಸುವ ಆಹಾರ ಮತ್ತು ನೀರಿನ ಸ್ವತ್ಛತೆಗೆ ಆದ್ಯತೆ ನೀಡುವುದರ ಜತೆಗೆ ಮಲಮೂತ್ರ ವಿಸರ್ಜನೆಗೆ ಶೌಚಾಲಯ ಉಪಯೋಗಿಸಬೇಕು. ಮಲಮೂತ್ರ ವಿಸರ್ಜನೆ ನಂತರ ಹಾಗೂ ಆಹಾರ ಸೇವಿಸುವ ಮೊದಲು ಕಾಲುಗಳನ್ನು ಚೆನ್ನಾಗಿ ಸಾಬೂನಿನಿಂದ ತೊಳೆದುಕೊಳ್ಳಬೇಕು. ಬೆರಳುಗಳ ಉಗುರುಗಳು ಹೆಚ್ಚು ಬೆಳೆಯದಂತೆ ಕತ್ತರಿಸಬೇಕು. ಕುಡಿಯುವ ನೀರಿನ ಅಭಾವವಿದ್ದ ಪ್ರದೇಶಗಳಲ್ಲಿ ಸಾರ್ವಜನಿಕರು ಕಾಯಿಸಿ ಆರಿಸಿದ ನೀರನ್ನಾಗಲಿ ಅಥವಾ ಹ್ಯಾಲೋಜಿನ್ ಗುಳಿಗೆಗಳಿಂದ ಶುದ್ಧೀಕರಿಸಿದ ನೀರನ್ನೇ ಉಪಯೋಗಿಸಬೇಕು.
ಕುಡಿಯುವ ನೀರಿನ ಸ್ಥಾವರಗಳ ಸುತ್ತಮುತ್ತ ಸ್ವತ್ಛತೆ ಕಾಪಾಡಬೇಕು. ಗ್ರಾಮದಲ್ಲಿ ಪರಿಸರ ನೈರ್ಮಲ್ಯಕ್ಕೆ ಮಹತ್ವ ಕೊಡಬೇಕು. ನೊಣಗಳ ಹಾವಳಿ ಹತೋಟಿಯಲ್ಲಿಡಬೇಕು. ತಾಜಾ ಹಾಗೂ ಬಿಸಿಯಾದ ಆಹಾರ ಪದಾರ್ಥ ಸೇವಿಸಬೇಕು. ತರಕಾರಿ, ಸೊಪ್ಪು-ಹಣ್ಣುಗಳನ್ನು ಬಿಸಿ ನೀರು ಅಥವಾ ಉಪ್ಪು ಮಿಶ್ರಿತ ನೀರಿನಲ್ಲಿ ಚೆನ್ನಾಗಿ ತೊಳೆದು ಉಪಯೋಗಿಸಬೇಕು. ಯಾವುದೇ ಸಾಂಕ್ರಾಮಿಕ ರೋಗ ಕಾಣಿಸಿದ ಕೂಡಲೇ ಆರೋಗ್ಯ ಇಲಾಖೆ ಸಿಬ್ಬಂದಿಗೆ ಮಾಹಿತಿ ನೀಡುವಂತೆ ಆರೋಗ್ಯ ಇಲಾಖೆ ಮನವಿ ಮಾಡಿದೆ.
ರೋಗಗಳು ಹರಡದಂತೆ ಮುಂಜಾಗ್ರತಾ ಕ್ರಮ: ಸೊಳ್ಳೆಗಳಿಂದ ಮಲೇರಿಯಾ, ಡೆಂಘೀ ಜ್ವರ, ಫೈಲೇರಿಯಾ, ಮೆದುಳು ಜ್ವರ, ಚಿಕೂನ್ ಗುನ್ಯಾ ರೋಗಗಳು ಹರಡುತ್ತವೆ. ಈ ರೋಗಗಳು ಹರಡದಂತೆ ಮುನ್ನೆಚ್ಚರಿಕೆ ಕ್ರಮ ಅನುಸರಿಸಬೇಕು. ನೀರು ಇಟ್ಟಿರುವ ಪಾತ್ರೆ, ಟ್ಯಾಂಕುಗಳನ್ನು ಸರಿಯಾಗಿ ಮುಚ್ಚಿಡುವುದು. ಸಿಮೆಂಟ್ ಟ್ಯಾಂಕ್, ಹೂವಿನ ದಾನಿಗಳಲ್ಲಿರುವ ನೀರನ್ನು ವಾರಕ್ಕೊಂದು ಸಾರಿ ಖಾಲಿ ಮಾಡಿ ಒಣಗಿಸಿ ನಂತರ ತುಂಬುವುದು. ಯಾವುದೇ ಜ್ವರಕ್ಕಾಗಲಿ ರಕ್ತ ಪರೀಕ್ಷೆ ಮಾಡಿಸಿಕೊಳ್ಳಿ. ಬಾವಿ, ಕಾರಂಜಿ ಹಾಗೂ ಸಿಮೆಂಟ್ ಟ್ಯಾಂಕ್‌ಗಳಲ್ಲಿ ಲಾರ್ವಾಹಾರಿ ಮೀನುಗಳನ್ನು ಬಿಡುವುದು. ಮಲಗುವಾಗ ಸೊಳ್ಳೆ ಪರದೆ ಕಟ್ಟಿಕೊಳ್ಳುವುದು. ಸಾರ್ವಜನಿಕರು ಮನೆಯ ಸುತ್ತಮುತ್ತ ಪರಿಸರ ನೈರ್ಮಲ್ಯ ಕಾಪಾಡಿಕೊಳ್ಳುವುದು. ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಜಿಲ್ಲೆಯಲ್ಲಿ ಜಲಜನ್ಯ-ಕೀಟಜನ್ಯ ರೋಗಗಳು ಹರಡದಂತೆ ಎಲ್ಲ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ|ಬಿ.ಸಿ.ಕರಿಗೌಡರ ತಿಳಿಸಿದ್ದಾರೆ.
ಡೆಂಘೀ ಹಾವಳಿ
2015ರಲ್ಲಿ 46, 2016ರಲ್ಲಿ 97, 2017ರಲ್ಲಿ 172, 2018ರಲ್ಲಿ 112, 2019ರಲ್ಲಿ 250, 2020ರಲ್ಲಿ 36 ಜನರಲ್ಲಿ ಡೆಂಘೀ ರೋಗ ದೃಢಪಟ್ಟಿತ್ತು. ಈ ಪೈಕಿ ಕೊರೊನಾ ಲಾಕ್‌ಡೌನ್ ಸಮಯದಲ್ಲಿಯೇ 2020ರಲ್ಲಿ ಡೆಂಘೀಗೆ ಹುಬ್ಬಳ್ಳಿಯಲ್ಲಿ ಒಬ್ಬರು ಮೃತಪಟ್ಟಿದ್ದರು. ಸದ್ಯ ಈ ವರ್ಷದ ಆರು ತಿಂಗಳಲ್ಲಿ 579 ಜನರಲ್ಲಿ ಡೆಂಘೀ ರೋಗ ಲಕ್ಷಣ ಕಂಡು ಬಂದಿದ್ದು, ಈ ಪೈಕಿ ತಪಾಸಣೆಗೊಳಪಡಿಸಿದಾಗ 59 ಜನರಲ್ಲಿ ಡೆಂಘೀ ಪತ್ತೆಯಾಗಿದೆ. ಈ ಪೈಕಿ ಧಾರವಾಡ ಗ್ರಾಮೀಣದಲ್ಲಿ 13, ಹುಬ್ಬಳ್ಳಿ ಗ್ರಾಮೀಣದಲ್ಲಿ 5, ಕಲಘಟಗಿಯಲ್ಲಿ 2, ಕುಂದಗೋಳದಲ್ಲಿ 6, ನವಲಗುಂದಲ್ಲಿ 3, ಧಾರವಾಡ ಶಹರದಲ್ಲಿ 17, ಹುಬ್ಬಳ್ಳಿ ಶಹರದಲ್ಲಿ 12 ಜನರಲ್ಲಿ ಡೆಂಘೀ ಪತ್ತೆಯಾಗಿದೆ.
ಹೀಗೆ ಮಾಡಬೇಡಿ
ಬಯಲಿನಲ್ಲಿ ನೀರಿನ ಸ್ಥಾವರಗಳ ಸುತ್ತಮುತ್ತ ದನಕರುಗಳ ಮೈ ತೊಳೆಯುವುದು, ಬಟ್ಟೆ-ಪಾತ್ರೆಗಳನ್ನು ತೊಳೆಯುವುದು. ಕುಡಿಯುವ ನೀರಿನಲ್ಲಿ ಕೈ ಅದ್ದುವುದು. ಬೀದಿ ಬದಿಯಲ್ಲಿ ತೆರೆದಿಟ್ಟ ಮತ್ತು ಕರಿದ ಆಹಾರ ಪದಾರ್ಥ, ಕತ್ತರಿಸಿಟ್ಟ ಹಣ್ಣುಗಳನ್ನು ತಿನ್ನುವುದು. ಮನೆ ಮದ್ದು ಮಾಡಿಕೊಳ್ಳುವುದು. ಮೊದಲೇ ಸಿದ್ಧಪಡಿಸಿದ ಆಹಾರ ಸೇವಿಸುವುದು. ಕೆರೆ, ನದಿ, ಹಳ್ಳ, ಹೊಂಡ, ಹೊಲಗದ್ದೆ ಮತ್ತು ಹರಿಯುವ ಕಾಲುವೆ ನೀರನ್ನು ಕುಡಿಯುವುದು. ಬಯಲಿನಲ್ಲಿ ಮಲ -ಮೂತ್ರ ವಿಸರ್ಜನೆ ಮಾಡಬಾರದೆಂದು ಆರೋಗ್ಯ ಇಲಾಖೆ ಸಲಹೆ ನೀಡಿದೆ.
ಚಿಕೂನ್ಗುನ್ಯಾ ಕಾಟ
2015ರಲ್ಲಿ 17, 2016ರಲ್ಲಿ 6, 2017ರಲ್ಲಿ 11, 2018ರಲ್ಲಿ 85, 2019ರಲ್ಲಿ 121, 2020ರಲ್ಲಿ 17 ಜನರಲ್ಲಿ ಚಿಕೂನ್ ಗುನ್ಯಾ ಕಾಣಿಸಿಕೊಂಡು ತೊಂದರೆ ಉಂಟು ಮಾಡಿತ್ತು. ಇದೀಗ ಆರು ತಿಂಗಳಲ್ಲಿ ಚಿಕೂನ್ ಗುನ್ಯಾ ರೋಗ ಲಕ್ಷಣವುಳ್ಳ 249 ಜನರನ್ನು ತಪಾಸಣೆಗೊಳಪಡಿಸಿದಾಗ 10 ಜನರಲ್ಲಿ ದೃಢಪಟ್ಟಿದೆ. ಧಾರವಾಡ ಗ್ರಾಮೀಣದಲ್ಲಿ 5, ಹುಬ್ಬಳ್ಳಿ ಗ್ರಾಮೀಣದಲ್ಲಿ 2, ಕುಂದಗೋಳದಲ್ಲಿ 1, ಧಾರವಾಡ ಶಹರ ವ್ಯಾಪ್ತಿಯಲ್ಲಿ ಇಬ್ಬರಲ್ಲಿ ದೃಢಪಟ್ಟಿದೆ.
ಮಲೇರಿಯಾ– ಮೆದುಳು ಜ್ವರ
2015ರಲ್ಲಿ 96, 2016ರಲ್ಲಿ 78, 2017ರಲ್ಲಿ 76, 2018ರಲ್ಲಿ 25, 2019ರಲ್ಲಿ 17, 2020ರಲ್ಲಿ 8 ಜನರಲ್ಲಿ ಕಾಣಿಸಿಕೊಂಡಿದೆ. ಆರು ತಿಂಗಳಲ್ಲಿ ಕುಂದಗೋಳದಲ್ಲಿ ಒಬ್ಬರಲ್ಲಿ ಮಲೇರಿಯಾ ಪತ್ತೆಯಾಗಿದ್ದರೆ, ಮೆದುಳು ಜ್ವರ ಲಕ್ಷಣಗಳು ಕಂಡು ಬಂದರೂ ತಪಾಸಣೆಯಲ್ಲಿ ದೃಢಪಟ್ಟಿಲ್ಲ.
ಮತ್ತೆ ಕೋವಿಡ್-19 ಆತಂಕ
ಕೊರೊನಾದ 4ನೇ ಅಲೆಯ ಆತಂಕ ಎದುರಾಗಿದ್ದು, ಈವರೆಗೂ ಶೂನ್ಯ ಸಾಧನೆಯಲ್ಲಿದ್ದ ಜಿಲ್ಲೆಯಲ್ಲಿ ಈಗ ಮತ್ತೇ ಕೋವಿಡ್-19 ಪ್ರಕರಣಗಳು ಕಂಡು ಬಂದಿದೆ. ದಿನದಿಂದ ದಿನಕ್ಕೆ ಪ್ರಕರಣಗಳ ಸಂಖ್ಯೆ ಏರು ಮುಖ ಮಾಡಿದ್ದು, ಈ ಪೈಕಿ ಜುಲೈ ತಿಂಗಳ 10 ದಿನಗಳಲ್ಲಿಯೇ 69 ಕೋವಿಡ್-19 ಪ್ರಕರಣಗಳು ದೃಢಪಟ್ಟಿವೆ. ಈ ಪೈಕಿ 40 ಪ್ರಕರಣಗಳು ಸಕ್ರಿಯವಾಗಿವೆ.
-ಶಶಿಧರ್ ಬುದ್ನಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
NABARD ನಿರ್ಧಾರದಿಂದ ಕೃಷಿಗೆ ಹಿನ್ನಡೆ; ಸಾಲದ ಮೊತ್ತ ಕಡಿತ ಮಾಡದಿರಲು ಸಚಿವ ಪಾಟೀಲ ಆಗ್ರಹ
ಸಿಎಂ ಆಗಿದ್ದವರು ಈ ರೀತಿ ಹೇಳಿಕೆ ನೀಡುವ ಬದಲು, ಸ್ಪಷ್ಟ ಹೇಳಿಕೆ ನೀಡಲಿ: ಸಚಿವ ಶಿವಾನಂದ
dharwad: ಪೊಲೀಸ್ ಪೇದೆ ಮೇಲೆ ಕೈ ಮುಖಂಡ ತಮಟಗಾರ ಸಹೋದರ ಬ್ಲೇಡ್ ನಿಂದ ಹಲ್ಲೆ
Covid Scam: ಸಚಿವ ಸಂಪುಟದಲ್ಲಿ ಚರ್ಚಿಸಿ ಮುಂದಿನ ಕ್ರಮ: ಸಿಎಂ ಸಿದ್ದರಾಮಯ್ಯ
By Election: ಹಣ ಕೊಟ್ಟರೂ ಸಿಎಂ ಕಾರ್ಯಕ್ರಮಕ್ಕೆ ಜನ ಬರುತ್ತಿಲ್ಲ: ಬಿಎಸ್ ವೈ
MUST WATCH
ಹೊಸ ಸೇರ್ಪಡೆ
Test: ಇಂಗ್ಲೆಂಡ್ ಸರಣಿಯ ಬಳಿಕ ಟೆಸ್ಟ್ ಕ್ರಿಕೆಟ್ ನಿಂದ ದೂರವಾಗಲಿದ್ದಾರೆ ಕಿವೀಸ್ ಆಟಗಾರ
Priyanka Upendra: ಬ್ಯೂಟಿಫುಲ್ ಲೈಫ್ ನಲ್ಲಿ ಪ್ರಿಯಾಂಕಾ
Shimoga; ಕಾಂಗ್ರೆಸ್-ಮುಸ್ಲಿಮರ ವಿರುದ್ದ ಹೇಳಿಕೆ: ಈಶ್ವರಪ್ಪ ವಿರುದ್ದ ಸುಮೋಟೋ ಪ್ರಕರಣ
Bantwala: ಶಾಲಾ ವಾಹನ ಡಿಕ್ಕಿಯಾಗಿ ಗಂಭೀರ ಗಾಯಗೊಂಡಿದ್ದ ಸ್ಕೂಟರ್ ಸವಾರ ಮೃತ್ಯು
Manipal: ನಿತ್ಯ ಅಪಘಾತ ತಾಣವಾದ ಈಶ್ವರ ನಗರ-ಪರ್ಕಳ ರಸ್ತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.