ಮಳೆ ಕೊರತೆ ಗಾಯಕ್ಕೆ ಕೀಟ-ರೋಗ ಬಾಧೆ ಬರೆ!
Team Udayavani, Jul 25, 2018, 5:18 PM IST
ಹುಬ್ಬಳ್ಳಿ: ಮುಂಗಾರು ಪೂರ್ವ ಮಳೆಯಿಂದ ಉತ್ತೇಜಿತಗೊಂಡಿದ್ದ ರೈತ ಸಮುದಾಯ ಉತ್ತಮ ಮುಂಗಾರು ಹಂಗಾಮು ನಿರೀಕ್ಷೆಯೊಂದಿಗೆ ಕೃಷಿ ಕಾಯಕಕ್ಕೆ ಮುಂದಾಗಿದ್ದರು. ಆದರೆ ಜೂನ್ ಮತ್ತು ಜುಲೈನಲ್ಲಿ ನಿರೀಕ್ಷೆಗಿಂತ ಕಡಿಮೆ ಮಳೆ ಬಿದ್ದು, ನಿರೀಕ್ಷೆಗೂ ಮೀರಿ ಬಿತ್ತನೆಯಾದ ಬೆಳೆಗಳು ಇದೀಗ ಸಂಕಷ್ಟ ಎದುರಿಸುವಂತಾಗಿದೆ. ಮಳೆ ಕೊರತೆ ಒಂದು ಕಡೆಯಾದರೆ, ಮೋಡ ಕವಿದ ವಾತಾವರಣದಿಂದ ಅಷ್ಟು ಇಷ್ಟು ಬೆಳೆದು ನಿಂತ ಇಲ್ಲವೆ ಬೆಳೆಯುವ ಹಂತದಲ್ಲಿರುವ ಬೆಳೆಗಳಿಗೆ ಕೀಟಬಾಧೆ ಹೆಚ್ಚಿರುವುದು ರೈತರನ್ನು ಚಿಂತೆಗೀಡು ಮಾಡಿದೆ.
ಮೇನಲ್ಲಿ ಹುಬ್ಬಳ್ಳಿ ತಾಲೂಕಿನಲ್ಲಿ 87.8 ಮಿಮೀ ಮಳೆಯಾಗಬೇಕಿತ್ತು. ಆದರೆ 187.4 ಮಿಮೀ ಮಳೆಯಾಗಿತ್ತು. ಹುಬ್ಬಳ್ಳಿ ಹೋಬಳಿಯಲ್ಲಿ 89.7 ಮಿಮೀ ಬದಲು 196.9, ಛಬ್ಬಿ ಹೋಬಳಿಯಲ್ಲಿ 88.4 ಮಿಮೀ ಬದಲಾಗಿ 178.8 ಮಿಮೀ, ಶಿರಗುಪ್ಪಿ ಹೋಬಳಿಯಲ್ಲಿ 87.2 ಮಿಮೀ ಬದಲಾಗಿ 187.1 ಮಿಮೀ ಮಳೆಯಾಗಿತ್ತು.
ಮುಂಗಾರು ಪೂರ್ವ ಮಳೆ ಉತ್ತಮವಾಗಿ ಬಿದ್ದಿದ್ದರಿಂದ ಉತ್ತಮ ಮುಂಗಾರು ಹಂಗಾಮು ನಿರೀಕ್ಷೆಯೊಂದಿಗೆ ರೈತರು ನಿರೀಕ್ಷೆಗಿಂತ ಹೆಚ್ಚಿನ ಪ್ರದೇಶದಲ್ಲಿ ಬಿತ್ತನೆ ಮಾಡಿದ್ದರು. ಆದರೆ, ಮುಂಗಾರು ಆರಂಭದ ನಂತರ ಮಳೆ ಪ್ರಮಾಣ ಕುಗ್ಗಿತು. ಜುಲೈ 24ರ ವರೆಗೆ ವಾಡಿಕೆ ಮಳೆಗೆ ಹೋಲಿಸಿದರೆ ತಾಲೂಕಿನಲ್ಲಿ ಮಳೆ ಪ್ರಮಾಣ ಕೊರತೆಯಾಗಿರುವುದು ಕಂಡುಬಂದಿದೆ. ಹುಬ್ಬಳ್ಳಿ ತಾಲೂಕಿನಲ್ಲಿ ವಾಡಿಕೆಗಿಂತ ಸರಾಸರಿ ಶೇ. 1 ಕಡಿಮೆ ಮಳೆಯಾಗಿದೆ. ಶಿರಗುಪ್ಪಿ ಹೋಬಳಿಯಲ್ಲಿ ಶೇ.16 ಮಳೆ ಕೊರತೆ ಉಂಟಾಗಿದೆ. ಹುಬ್ಬಳ್ಳಿ ಹೋಬಳಿಯಲ್ಲಿ ಶೇ.3 ಹಾಗೂ ಛಬ್ಬಿ ಹೋಬಳಿಯಲ್ಲಿ ಶೇ.19 ಹೆಚ್ಚು ಮಳೆಯಾಗಿದೆ.
ಕೀಟ ಬಾಧೆ: ತಾಲೂಕಿನ ನಗರ ಪ್ರದೇಶದಲ್ಲಿ ಅಲ್ಪ ಮಳೆಯಾಗುತ್ತಿದ್ದು ಗ್ರಾಮೀಣ ಭಾಗದಲ್ಲಿ ಜಿಟಿ ಜಿಟಿ ಮಳೆಯಾಗುತ್ತಿದೆ. ಮೋಡ ಕವಿದ ವಾತಾವರಣ ಇರುವುದರಿಂದ ಅಲ್ಲಲ್ಲಿ ಕೀಟಬಾಧೆ ಕಂಡು ಬಂದಿದೆ. ಅತೀ ಹೆಚ್ಚು ಬಿತ್ತನೆಯಾಗಿರುವ ಹೆಸರು ಬೆಳೆಗೆ ಬೂದಿ ರೋಗ ಹರಡುತ್ತಿದ್ದರೆ, ಶೇಂಗಾ ಬೆಳೆಗೆ ರಸ ಹೀರುವ ಕೀಟದ ಬಾಧೆ ಆರಂಭವಾಗಿದೆ.
ಕೀಟ-ರೋಗ ನಿಯಂತ್ರಣಕ್ಕೆ ಬೇಕಾದ ಕ್ರಮಗಳ ಕುರಿತಾಗಿ ಕೃಷಿ ಇಲಾಖೆ ಅಗತ್ಯ ಮಾಹಿತಿ ನೀಡುತ್ತಿದೆ. ತಾಲೂಕಿನ 50580 ಹೆಕ್ಟೇರ್ ಸಾಗುವಳಿ ಪ್ರದೇಶದಲ್ಲಿ ಈ ಬಾರಿ ಸುಮಾರು 32,636 ಹೆಕ್ಟೇರ್ ಪ್ರದೇಶದಲ್ಲಿ ಮುಂಗಾರು ಹಂಗಾಮು ಬಿತ್ತನೆ ಗುರಿ ಹೊಂದಲಾಗಿತ್ತು. ಆದರೆ ನಿರೀಕ್ಷಿತ ಗುರಿ ಮೀರಿ ಸುಮಾರು 37,247 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದೆ.
ಬಿತ್ತನೆ ಪ್ರಮಾಣ: ಸುಮಾರು 11,166 ಹೆಕ್ಟೇರ್ ಪ್ರದೇಶದಲ್ಲಿ ಹೆಸರು ಬಿತ್ತನೆ ಮಾಡಲಾಗಿದ್ದು, 9250 ಹೆಕ್ಟೇರ್ ಪ್ರದೇಶದಲ್ಲಿ ಸೋಯಾಬೀನ್, 4350 ಹೆಕ್ಟೇರ್ ಪ್ರದೇಶದಲ್ಲಿ ಬಿ.ಟಿ. ಹತ್ತಿ, 4134 ಹೆಕ್ಟೇರ್ ಪ್ರದೇಶದಲ್ಲಿ ಗೋವಿನ ಜೋಳ, 784 ಹೆಕ್ಟೇರ್‌ನಲ್ಲಿ ಉದ್ದು, 321 ಹೆಕ್ಟೇರ್‌ನಲ್ಲಿ ತೊಗರಿ, 116 ಹೆಕ್ಟೇರ್ ಪ್ರದೇಶದಲ್ಲಿ ಕಬ್ಬು, 97 ಹೆಕ್ಟೇರ್‌ನಲ್ಲಿ ಸಿರಿಧಾನ್ಯ, 95 ಹೆಕ್ಟೇರ್‌ನಲ್ಲಿ ಭತ್ತ, 85 ಹೆಕ್ಟೇರ್‌ನಲ್ಲಿ ಜೋಳ, 51 ಹೆಕ್ಟೇರ್ ಪ್ರದೇಶದಲ್ಲಿ ಗುರೆಳ್ಳು, 44 ಹೆಕ್ಟೇರ್ ಪ್ರದೇಶದಲ್ಲಿ ಎಳ್ಳು ಬಿತ್ತನೆ ಮಾಡಲಾಗಿದೆ.
ಇಲಾಖೆಯಿಂದ ಬೀಜ ವಿತರಣೆ: ಕೃಷಿ ಇಲಾಖೆಯಿಂದ ಈಗಾಗಲೇ ಬಿತ್ತನೆ ಬೀಜ ವಿತರಣೆ ಮಾಡಲಾಗಿದ್ದು, 5340 ಕ್ವಿಂಟಲ್ ಸೋಯಾಬೀನ್, 713 ಕ್ವಿಂಟಲ್ ಶೇಂಗಾ, 328 ಕ್ವಿಂಟಲ್ ಹೆಸರು, 228 ಕ್ವಿಂಟಲ್ ಮುಸುಕಿನ ಜೋಳ, 101 ಕ್ವಿಂಟಲ್ ಉದ್ದು, 14 ಕ್ವಿಂಟಲ್ ತೊಗರಿ ಬೀಜಗಳನ್ನು ವಿತರಣೆ ಮಾಡಲಾಗಿದೆ.
ನಿರೀಕ್ಷಿತ ಮಳೆ ಇಲ್ಲದೆ ಬಿತ್ತನೆ ಮಾಡಿದ ಬೆಳೆಗಳನ್ನು ಉಳಿಸಿಕೊಳ್ಳಲು ರೈತರು ಪರದಾಡುತ್ತಿದ್ದಾರೆ. ಕಳೆದ ಮೂರು ವರ್ಷಗಳಿಂದ ಸತತ ಬರದಿಂದ ಕಂಗೆಟ್ಟಿರುವ ಕೃಷಿಕರು ಈ ಬಾರಿಯ ಮುಂಗಾರಿನಲ್ಲಿ ಉತ್ತಮ ಫಸಲಿನ ನಿರೀಕ್ಷೆ ಹೊಂದಿದ್ದರು. ಆದರೆ ಎರಡು ತಿಂಗಳ ಮಳೆ ಕೊರತೆ ಮತ್ತೂಮ್ಮೆ ಬರದ ಛಾಯೆಯ ಆತಂಕ ಸೃಷ್ಟಿಸಿದೆ. ವಾರದೊಳಗೆ ಮಳೆ ಬೀಳದಿದ್ದರೆ ಬೆಳೆ ಹಾನಿಗೀಡಾಗಲಿದೆ ಎಂಬ ಅಳಲು ರೈತರದ್ದಾಗಿದೆ.
ಮೋಡ ಕವಿದ ವಾತಾವರಣವಿದ್ದು, ಇದರಿಂದ ಕೆಲವೊಂದು ಪ್ರದೇಶಗಳಲ್ಲಿ ಬೆಳೆಗೆ ಕೀಟಬಾಧೆ ಕಂಡು ಬರುತ್ತಿದೆ. ಹೆಸರು ಬೆಳೆಗೆ ಬೂದಿ ರೋಗ, ಶೇಂಗಾದಲ್ಲಿ ರಸ ಹೀರುವ ಕೀಟದ ರೋಗ ಕಂಡು ಬರುತ್ತಿದ್ದು ರೈತರು ಅಗತ್ಯ ಕ್ರಮಕ್ಕೆ ಮುಂದಾಗಬೇಕು. ಇದಕ್ಕೆ ಬೇಕಾದ ಕ್ರಿಮಿನಾಶಕ ರೈತ ಸಂಪರ್ಕ ಕೇಂದ್ರದಲ್ಲಿ ದಾಸ್ತಾನು ಇದ್ದು, ರೈತರು ಇದರ ಸದುಪಯೋಗ ಪಡಿಸಿಕೊಳ್ಳಬೇಕು.
ರಾಜಶೇಖರ ಅನಗೌಡರ,
ಸಹಾಯಕ ಕೃಷಿ ನಿರ್ದೇಶಕ
ಬಸವರಾಜ ಹೂಗಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hubballi-Dharwad ಪ್ರತ್ಯೇಕ ಮಹಾನಗರ ಪಾಲಿಕೆ: ಸರ್ಕಾರದಿಂದ ಮಧ್ಯಂತರ ರಾಜ್ಯಪತ್ರ
ಸದ್ಯಕ್ಕೆ ಸಿಎಂ ಚರ್ಚೆ ಗೊಡವೆಯೇ ನನಗೆ ಬೇಡ: ಡಿ.ಕೆ.ಶಿವಕುಮಾರ್
Hubli: ಸರ್ಕಾರ ಮತ್ತು ವಿಜಯೇಂದ್ರ ನಡುವೆ ಉತ್ತಮ ಅಡ್ಜಸ್ಟ್‌ಮೆಂಟ್ ಇದೆ: ಯತ್ನಾಳ್ ಆರೋಪ
Hubli: ಕಸದ ವಾಹನಕ್ಕೆ ಸ್ಕೂಟಿ ಡಿಕ್ಕಿ: ಓರ್ವ ವಿದ್ಯಾರ್ಥಿ ಸಾವು, ಮತ್ತೋರ್ವ ಗಂಭೀರ
BJP ರಾಜ್ಯಾಧ್ಯಕ್ಷರ ಬದಲಾವಣೆ ಬಗ್ಗೆ ಗೊತ್ತಿಲ್ಲ: ಸಚಿವ ಜೋಶಿ