Team Udayavani, Apr 17, 2019, 11:13 AM IST
ಚಿಂಚೋಳಿ: ಮೀಸಲು (ಪರಿಶಿಷ್ಟ ಜಾತಿ)ವಿಧಾನಸಭೆ ಮತಕ್ಷೇತ್ರಕ್ಕೆ ಕಾಂಗ್ರೆಸ್ ಪಕ್ಷದ ಮಾಜಿ ಶಾಸಕ ಡಾ| ಉಮೇಶ ಜಾಧವ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರಿದ್ದರಿಂದ ತೆರವಾಗಿರುವ ಚಿಂಚೋಳಿ ವಿಧಾನಸಭೆ ಮತಕ್ಷೇತ್ರಕ್ಕೆ ಮೇ 19ರಂದು ಉಪ ಚುನಾವಣೆ ವೇಳಾ ಪಟ್ಟಿ ಪ್ರಕಟ ಆಗುತ್ತಿದಂತೆಯೇ ಇತ್ತ ಟಿಕೆಟ್ ಆಕಾಂಕ್ಷಿಗಳು ಚುನಾವಣೆಯಲ್ಲಿ ಸ್ಪರ್ಧಿಸಲು ತೆರೆಮರೆ ಕರಸತ್ತು ನಡೆಸುತ್ತಿರುವುದರಿಂದ ಈಗ ಲೋಕಸಭೆ ಚುನಾವಣೆಯೊಂದಿಗೆ ವಿಧಾನಸಭೆ ಉಪ ಚುನಾವಣೆಯ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ.
ಚಿಂಚೋಳಿ ಮೀಸಲು ವಿಧಾನಸಭೆ ಮತಕ್ಷೇತ್ರದ ಉಪ ಚುನಾವಣೆಗೆ ಸ್ಪರ್ಧಿಸಲು ಬಿಜೆಪಿಗೆ ರಾಜೀನಾಮೆ ನೀಡಿ ಕಾಂಗ್ರೆಸ್‌ಗೆ ಸೇರಿದ ಬಂಜಾರಾ ಸಮಾಜದ ಯುವ ಮುಖಂಡ ಸುಭಾಷ ರಾಠೊಡ, ಮಾಜಿ ಸಚಿವ ಬಾಬುರಾವ ಚವ್ಹಾಣ ಈಗಾಗಲೇ ಚಿಂಚೋಳಿ ಮತಕ್ಷೇತ್ರದಲ್ಲಿ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಗೆಲುವಿಗಾಗಿ ಬಿರುಸಿನ ಪ್ರಚಾರ ನಡೆಸುತ್ತಿದ್ದಾರೆ. ಮಾಜಿ ಸಚಿವ ಬಾಬುರಾವ ಚವ್ಹಾಣ 2008ರಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿ ಕೇವಲ ಐದು ಸಾವಿರ ಮತಗಳ ಅಂತರದಿಂದ ಸೋಲು ಕಂಡಿದ್ದಾರೆ.
ನಂತರ ರಾಜಕೀಯ ಬೆಳವಣಿಗೆಯಲ್ಲಿ ಕೆಜೆಪಿಯಿಂದ ಬಿಜೆಪಿ ಸೇರ್ಪಡೆಯಾಗಿದ್ದಾರೆ. ಈಗ ಬಿಜೆಪಿಗೆ ಗುಡಬೈ ಹೇಳಿ ಈಗ ಕಾಂಗ್ರೆಸ್ ಪಕ್ಷಕ್ಕೆ ಮರಳಿದ್ದಾರೆ. ಅದರಂತೆ ಬೇಟಿ ಪಡಾವೋ ಬೇಟಿ ಬಚಾವೋ ರಾಜ್ಯ ಸಂಚಾಲಕ ಸ್ಥಾನಕ್ಕೆ ರಾಜೀನಾಮೆ
ನೀಡಿ ಕಾಂಗ್ರೆಸ್‌ಗೆ ಸೇರ್ಪಡೆ ಆಗಿರುವ ಸುಭಾಷ ರಾಠೊಡ ಈಗ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಲು ಟಿಕೆಟ್ ಆಕಾಂಕ್ಷಿಯಾಗಿದ್ದಾರೆ.
ಸದ್ಯ ನಡೆಯುತ್ತಿರುವ ಲೋಕಸಭೆ ಚುನಾವಣೆಯಲ್ಲಿ ಕಲಬುರಗಿ ಮತ್ತು ಬೀದರ ಲೋಕಸಭೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಗಳಾದ ಸಂಸದ ಡಾ| ಮಲ್ಲಿಕಾರ್ಜುನ ಖರ್ಗೆ ಮತ್ತು ಕೆಪಿಸಿಸಿ (ಐ) ಈಶ್ವರ ಖಂಡ್ರೆ ಗೆಲುವಿಗೆ ಇವರೆಲ್ಲರ ಪರಿಶ್ರಮ ಅತಿ ಮುಖ್ಯವಾಗಿದೆ. ಸುಭಾಷ ರಾಠೊಡ ಮೊದಲಿನಿಂದಲೂ ಚಿಂಚೋಳಿಗೆ ನಂಟು ಹೊಂದಿದ್ದಾರೆ. ಜಿಲ್ಲಾ ಪಂಚಾಯತ ವಿರೋಧ ಪಕ್ಷದ ನಾಯಕರಾಗಿದ್ದಾಗ ಚಿಂಚೋಳಿ ಕುಂಚಾವರಂ ಅರಣ್ಯಪ್ರದೇಶದ ತಾಂಡಾಗಳಲ್ಲಿ ಹೆಣ್ಣು ಶಿಶು ಮಾರಾಟ ಮತ್ತು ಅರಣ್ಯ ಭೂಮಿ ಸಕ್ರಮಗೊಳಿಸಿ ಬಂಜಾರಾ ಸಮಾಜಕ್ಕೆ ಬೇಕಾಗುವ ಸವಲತ್ತುಗಳನ್ನು ಕೊಡಿಸಿದ ಶ್ರೇಯಸ್ಸು ಇವರಿಗಿದೆ.
ಕಾಂಗ್ರೆಸ್ ಪಕ್ಷದ ಹೈಕಮಾಂಡ್ ಸುಭಾಷ ರಾಠೊಡ ಮತ್ತು ಮಾಜಿ ಸಚಿವ ಬಾಬುರಾವ ಚವ್ಹಾಣ ಇವರಲ್ಲಿ ಯಾರಿಗೆ ಟಿಕೆಟ್ ನೀಡಬೇಕು ಎನ್ನುವ ಚರ್ಚೆ ನಡೆಯುತ್ತಿದೆ. ಸುಭಾಷ ರಾಠೊಡ ಅವರು ಚಿಂಚೋಳಿ ತಾಲೂಕಿಗೆ ನಿಕಟ ಸಂಪರ್ಕ ಹೊಂದಿ ತಾಂಡಾಗಳಲ್ಲಿ ನಡೆಯುವ ಜಾತ್ರೆ, ಸಭೆ ಸಮಾರಂಭ ಮತ್ತು ಸೇವಾಲಾಲ ಜಯಂತಿಯಲ್ಲಿ ಭಾಗವಹಿಸಿದ್ದರಿಂದ ನಮ್ಮ ತಾಂಡಾದವರೆ ಎನ್ನುವ ಭಾವನೆ ಲಂಬಾಣಿ ಜನರಲ್ಲಿ ಮೂಡಿದೆ. ಇವರಿಗೆ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಲು ಟಿಕೆಟ್ ನೀಡಬೇಕೆಂಬ ಬಲವಾದ ಒತ್ತಡ ಬಂಜಾರಾ ಸಮಾಜದವರು ಕಾಂಗ್ರೆಸ್ ಪಕ್ಷದ ಮುಖಂಡರಿಗೆ ಒತ್ತಾಯಿಸುತ್ತಿದ್ದಾರೆ.
ಬಾಬುರಾವ ಚವ್ಹಾಣ 2008ರಲ್ಲಿ ಸ್ಪರ್ಧಿಸಿ ಸೋಲು ಕಂಡಿದ್ದರು. ನಂತರ ಚಿಂಚೋಳಿಯತ್ತ ಮುಖ ಮಾಡದ ಇವರು ಕಲಬುರಗಿ ಲೋಕಸಭೆ ಚುನಾವಣೆ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ ಕಾಂಗ್ರೆಸ್ ಪಕ್ಷದಿಂದ ಬಿಜೆಪಿಗೆ ಸೇರಿದ ಡಾ| ಉಮೇಶ ಜಾಧವ ಅವರಿಗೆ ಲೋಕಸಭೆ ಟಿಕೆಟ ನೀಡಿದ್ದರಿಂದ ತೀವ್ರ ಅಸಮಾಧಾನವಾಗಿದ್ದ ಬಾಬುರಾವ ಚವ್ಹಾಣ ಕಾಂಗ್ರೆಸ್ ಪಕ್ಷಕ್ಕೆ ಸೇರಿದ್ದಾರೆ. ಅವರು ಕೂಡ ಚಿಂಚೋಳಿ ವಿಧಾನಸಭೆ ಉಪ ಚುನಾವಣೆ ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ.
ಆದರೆ ಡಾ| ಮಲ್ಲಿಕಾರ್ಜುನ ಖರ್ಗೆ ಮತ್ತು ಕೆಪಿಸಿಸಿ (ಐ) ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಅವರೇ ಅಭ್ಯರ್ಥಿ ಆಯ್ಕೆ ಮಾಡಲಿದ್ದಾರೆ ಎನ್ನಲಾಗುತ್ತಿದೆ. ಸಂಸದ ಡಾ| ಮಲ್ಲಿಕಾರ್ಜುನ ಖರ್ಗೆ ಕಾಂಗ್ರೆಸ್ ವತಿಯಿಂದ ಸುಭಾಷ ರಾಠೊಡ ಅವರಿಗೆ ಟಿಕೆಟ್ ನೀಡುವ ಒಲವು ತೋರಿಸಿದ್ದಾರೆ ಎನ್ನಲಾಗಿದೆ.
ಬಿಜೆಪಿಯಿಂದ ಮಾಜಿ ಸಚಿವ ಸುನೀಲ ವಲ್ಯಾಪುರೆ, ಜಿಪಂ ಸದಸ್ಯ ಸಂಜೀವನ್ ಯಾಕಾಪುರ, ಮಾಜಿ ಶಾಸಕರ ಸಹೋದರ ರಾಮಚಂದ್ರ ಜಾಧವ, ಅಳಿಯ ಅರುಣ ಪವಾರ ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ. ಈಗಾಗಲೇ ಮಾಜಿ ಸಚಿವ ಸುನೀಲ ವಲ್ಯಾಪುರೆ ಅವರು ಉಪ ಚುನಾವಣೆಯಲ್ಲಿ ನಾನೇ ಬಿಜೆಪಿ ಅಭ್ಯರ್ಥಿ ಆಗಿರುತ್ತೇನೆ ಎಂದು ಹೇಳಿಕೆ ನೀಡಿದ್ದರು. ಆದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ಮಾಜಿ ಶಾಸಕ ಡಾ| ಉಮೇಶ ಜಾಧವ ಬಿಜೆಪಿ ಸೇರ್ಪಡೆ ಆಗುವ ಮೊದಲು ರಾಮಚಂದ್ರ ಜಾಧವ ಇಲ್ಲವೆ ಅರುಣ ಪವಾರ ಅವರಿಗೆ ಟಿಕೆಟ್ ನೀಡಬೇಕೆಂಬ ಒಳ ಒಪ್ಪಂದ ಮಾಡಿಕೊಂಡಿದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತಿವೆ.
ಜಿಪಂ ಮಾಜಿ ಅಧ್ಯಕ್ಷ ಭೀಮರಾವ ತೇಗಲತಿಪ್ಪಿ, ಮಾದಿಗ ಸಮಾಜದ ಮುಖಂಡ ಗೋಪಾಲರಾವ ಕಟ್ಟಿಮನಿ ಕಾಂಗ್ರೆಸ್
ಪಕ್ಷದ ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ. ಒಟ್ಟಾರೆ ಚಿಂಚೋಳಿ ಮೀಸಲು ವಿಧಾನಸಭೆ ಉಪ ಚುನಾವಣೆಯಲ್ಲಿ ಕಾಂಗ್ರೆಸ್
ಮತ್ತು ಬಿಜೆಪಿ ಮುಖಂಡರು ಸ್ಪರ್ಧಿಸಲು ಟಿಕೆಟ್ ಆಕಾಂಕ್ಷಿಗಳಲ್ಲಿ ಜಿದ್ದಾಜಿದ್ದಿ ಪ್ರಾರಂಭವಾಗಿದೆ.
ಶಾಮರಾವ ಚಿಂಚೋಳಿ