ಉದಯವಾಣಿ ಸಂದರ್ಶನ : ಅಭಿವೃದ್ಧಿ-ರಿಸ್ಕ್ ನಿರ್ವಹಣೆಗೆ ಮೋದಿಗೆ ಮೋದಿಯೇ ಸಾಟಿ: ಸಚಿವ ಶೆಟ್ಟರ
ಎಸ್.ಎಸ್.ಶೆಟ್ಟರ ಫೌಂಡೇಶನ್‌ನಿಂದ 20 ಸಾವಿರ ದಿನಸಿ ಕಿಟ್ ವಿತರಣೆ ; ಅವಳಿನಗರ ಅಭಿವೃದ್ಧಿ ಪರ್ವದಲ್ಲಿ ಶೆಟ್ಟರ ಪ್ರಮುಖ ಪಾಲು
Team Udayavani, Jun 12, 2020, 8:35 AM IST
ರಾಜ್ಯದ ಮುಖ್ಯಮಂತ್ರಿಯಾಗಿ, ಬಿಜೆಪಿ ರಾಜ್ಯಾಧ್ಯಕ್ಷರಾಗಿ, ವಿಧಾನಸಭೆ ವಿರೋಧ ಪಕ್ಷದ ನಾಯಕರಾಗಿ, ಸ್ಪೀಕರ್, ಸಚಿವರಾಗಿ ವಿವಿಧ ಹುದ್ದೆಗಳನ್ನು ಸಮರ್ಥವಾಗಿ ನಿಭಾಯಿಸಿರುವ ಹಿರಿಯ ರಾಜಕಾರಣಿ ಜಗದೀಶ ಶೆಟ್ಟರ, ಸದಾ ಹಸನ್ಮುಖೀ, ಸಜ್ಜನ ರಾಜಕಾರಣಿ ಎಂದೇ ಗುರುತಿಸಿಕೊಂಡವರು. ಅಭಿವೃದ್ಧಿ ಚಿಂತನೆಯೊಂದಿಗೆ ರಾಜಕೀಯದ ಯಶಸ್ವಿ ಪಯಣ ಮುಂದುವರಿಸಿದವರು. ಇದೀಗ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವರಾಗಿ ರಾಜ್ಯದಲ್ಲಿ ಉದ್ಯಮ ಅಭಿವೃದ್ಧಿಗೆ ಕಂಕಣ ತೊಟ್ಟಿದ್ದಾರೆ. ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರಕಾರ ಎರಡನೇ ಅವಧಿಯ ಮೊದಲ ವರ್ಷ ಪೂರ್ಣಗೊಳಿಸಿದ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿಯವರ ಸಾಧನೆ, ಅಭಿವೃದ್ಧಿ ಸಂಕಲ್ಪ, ವಿಶ್ವಕ್ಕೆ ಮಾದರಿ ಆಡಳಿತ, ಕೊರೊನಾ ನಿಯಂತ್ರಣಕ್ಕೆ ಕೈಗೊಂಡ ದಿಟ್ಟ ಕ್ರಮಗಳ ಕುರಿತು ಮತ್ತು ರಾಜ್ಯದಲ್ಲಿ ಕೋವಿಡ್-19 ನಿರ್ವಹಣೆ, ಉದ್ಯಮ ಬೆಳವಣಿಗೆ, ಭವಿಷ್ಯದಲ್ಲಿ ಉದ್ಯಮದ ನೆಗೆತದ ಕುರಿತು ಉದಯವಾಣಿಗೆ ನೀಡಿದ ಸಂದರ್ಶನದಲ್ಲಿ ತಮ್ಮ ಮನದ ಮಾತುಗಳನ್ನು ಹಂಚಿಕೊಂಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯವರು ದೇಶದ ಅಧಿಕಾರ ಚುಕ್ಕಾಣಿ ಹಿಡಿದು ಆರು ವರ್ಷ ಕಳೆದಿವೆ. ಆರು ವರ್ಷಗಳಲ್ಲಿ ವಿಶ್ವ ಮಟ್ಟದಲ್ಲಿ ಭಾರತದ ವರ್ಚಸ್ಸು ಹೆಚ್ಚುವಂತೆ ಮಾಡಿದ್ದಾರೆ. ದೇಶ ಎಲ್ಲ ಕ್ಷೇತ್ರಗಳಲ್ಲೂ ಅಭಿವೃದ್ಧಿಯ ಹೆಜ್ಜೆ ಇರಿಸುವಲ್ಲಿ ಅವರ ಶ್ರಮ-ಚಿಂತನೆ, ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವ ವ್ಯಕ್ತಿತ್ವ ಅಪ್ರತಿಮ. ಪ್ರಸ್ತುತದ ಅಭಿವೃದ್ಧಿ, ದೇಶದ ಬಲವರ್ಧನೆ ನಿಟ್ಟಿನಲ್ಲಿ ಮೋದಿಯವರಿಗೆ ಮೋದಿಯವರೇ ಸಾಟಿ. ಮೋದಿಯವರ ವ್ಯಕ್ತಿತ್ವ, ಸರಳತೆ, ವರ್ಚಸ್ಸು ಕೋಟ್ಯಂತರ ಜನರಿಗೆ ಪ್ರೇರಣೆ ಹಾಗೂ ಮಾರ್ಗದರ್ಶಿ ಎಂಬುದು ನನ್ನ ಸ್ಪಷ್ಟ ಅನಿಸಿಕೆ..
ಮೋದಿ ನೇತೃತ್ವದ ಸರಕಾರ 2.0ದ ಮೊದಲ ವರ್ಷದ ಸಾಧನೆ ಬಗ್ಗೆ ನಿಮ್ಮ ಅನಿಸಿಕೆ?
– ಪ್ರಧಾನಿ ನರೇಂದ್ರ ಮೋದಿಯವರು ಮೊದಲ ಅವಧಿಯಲ್ಲಿಯೂ ಸಮರ್ಪಕ ಆಡಳಿತ ನೀಡಿದ್ದರ ಪರಿಣಾಮವಾಗಿಯೇ ದೇಶದ ಜನ ಎರಡನೇ ಅವಧಿಯಲ್ಲಿಯೂ ನಿರೀಕ್ಷೆಗೆ ಮೀರಿ ಬೆಂಬಲ ನೀಡಿದರು. ಬಿಜೆಪಿ ಹಲವು ದಶಕಗಳಿಂದ ಚುನಾವಣಾ ಪ್ರಣಾಳಿಕೆಯಲ್ಲಿ ಪ್ರಸ್ತಾಪಿಸುತ್ತ ಬಂದಿದ್ದ ಅನೇಕ ವಿಷಯಗಳಲ್ಲಿ ಬಹುತೇಕವೆಲ್ಲ ಮೋದಿಯವರ ಆಡಳಿತದಲ್ಲಿ ಸಾಕಾರಗೊಂಡ ಖುಷಿ ಪಕ್ಷಕ್ಕಷ್ಟೇ ಅಲ್ಲ, ದೇಶದ ಜನತೆಗೂ ಇದೆ. ಮೋದಿ ನೇತೃತ್ವದ ಸರಕಾರ ಅನೇಕ ಐತಿಹಾಸಿಕ-ಕ್ರಾಂತಿಕಾರ ಕಾಯ್ದೆಗಳನ್ನು ಜಾರಿಗೊಳಿಸಿದೆ, ಮಹತ್ವದ ನಿಲುವುಗಳಿಗೆ ಸಾಕ್ಷಿಯಾಗಿದೆ. ತ್ರಿಬಲ್ ತಲಾಖ್ ನಿಷೇಧ, 370 ಕಲಂ ರದ್ದು, ಶ್ರೀರಾಮ ಮಂದಿರ ನಿರ್ಮಾಣ ಸಂಕಲ್ಪಕ್ಕೆ ಕಾನೂನು ಸಮರದ ಜಯದೊಂದಿಗೆ ಮಂದಿರ ಅನುಷ್ಠಾನಕ್ಕೆ ಕ್ರಮ, ಒಂದು ದೇಶ ಒಂದು ತೆರಿಗೆ (ಜಿಎಸ್‌ಟಿ), ಒಂದು ದೇಶ ಒಂದು ಪಡಿತರ, ಎನ್‌ಆರ್‌ಸಿ, ಸಿಎಎ, ಭಯೋತ್ಪಾದನೆ ವಿರುದ್ಧ ದಿಟ್ಟ ಕ್ರಮ, ನೋಟುಗಳ ರದ್ದತಿ, ಕಾರ್ಪೊರೆಟ್ ತೆರಿಗೆ ಕಡಿತ, ಕಿಸಾನ್ ಸಮ್ಮಾನ್, ಅಕ್ರಮ ನುಸುಳುವಿಕೆ ತಡೆ, ಹಗರಣ ಮುಕ್ತ ಆಡಳಿತ ಹೀಗೆ ಅನೇಕ ಸಾಲು ಸಾಲು ಸಾಧನೆಗಳನ್ನು ಮೋದಿಯವರು ಮಾಡಿ ತೋರಿಸಿದ್ದಾರೆ.
ಕೋವಿಡ್ ಸಂಕಷ್ಟವನ್ನು ಕೇಂದ್ರ ಸರಕಾರ ಸಮರ್ಥವಾಗಿ ನಿರ್ವಹಿಸಿದೆ ಎಂದೆನಿಸುತ್ತದೆಯೇ?
ನೋಡಿ, ನರೇಂದ್ರ ಮೋದಿಯವರು ಗುಜರಾತ್ ಮುಖ್ಯಮಂತ್ರಿಯಾಗಿ ಅನೇಕ ಸಂಕಷ್ಟದ ಸ್ಥಿತಿಗಳನ್ನು ಸಮರ್ಪಕವಾಗಿ ನಿರ್ವಹಿಸಿದ ಅನುಭವ ಹೊಂದಿದ್ದರು. ಹೀಗಾಗಿ ದೇಶಕ್ಕೆ ಎದುರಾದ ಕೋವಿಡ್ ಮಹಾಮಾರಿಯನ್ನು ಅಷ್ಟೇ ಸಮರ್ಥವಾಗಿ ನಿರ್ವಹಿಸಿದರು. ಲಾಕ್‌ಡೌನ್ ಮೂಲಕ ಕಾನೂನು ಜತೆಗೆ ದೇಶದ ಜನರಿಗೆ ರೋಗದ ಬಗ್ಗೆ ಮನವರಿಕೆ ಮಾಡಿಕೊಡುವ ಕಾರ್ಯವನ್ನು ಪ್ರಧಾನಿ ಸಮರ್ಥವಾಗಿ ಕೈಗೊಂಡರು. ತಜ್ಞರೊಂದಿಗೆ ಸಮಾ ಲೋಚನೆ, ರಾಷ್ಟ್ರವನ್ನುದ್ದೇಶಿಸಿ ಭಾಷಣ – ಸಂದೇಶ, ಕೇಂದ್ರದಿಂದ ಹಲವು ಮಾರ್ಗಸೂಚಿ ಈ ಎಲ್ಲ ಕ್ರಮಗಳಿಂದ ಕೋವಿಡ್ ನಿಯಂತ್ರಣ ನಿಟ್ಟಿನಲ್ಲಿ ಮಾದರಿಯಾಗಿದ್ದಾರೆ. ಇಂತಹ ಸ್ಥಿತಿಯಲ್ಲಿ ಬೇರೆಯವರು ಈ ಜಾಗದಲ್ಲಿದ್ದರೆ ದೇಶದ ಸ್ಥಿತಿ ಊಹಿಸಿಕೊಳ್ಳುವುದಕ್ಕೂ ಆಗುತ್ತಿರಲಿಲ್ಲ.
ಮುಂದುವರೆದ ದೇಶಗಳೇ ತತ್ತರಿಸಿರುವಾಗ ನಮ್ಮಲ್ಲಿ ಕೋವಿಡ್ ನಿಯಂತ್ರಣದ ಹಿಂದಿನ ಶಕ್ತಿ?
ದೇಶದ ಆಡಳಿತ ಚುಕ್ಕಾಣಿಯ ನಾಯಕ ಸರಿ ಇದ್ದರೆ ಎಲ್ಲವೂ ಸರಿ ಇರುತ್ತದೆ ಎಂಬುದಕ್ಕೆ ಭಾರತವೇ ಸಾಕ್ಷಿ. ಕೋವಿಡ್ ಮಹಾಮಾರಿಗೆ ಅಮೆರಿಕಾ, ಫ್ರಾನ್ಸ್, ಇಟಲಿ, ರಷ್ಯಾದಂತಹ ಮುಂದುವರೆದ ದೇಶಗಳೇ ತತ್ತರಿಸಿ, ಹತಾಶೆ ಸ್ಥಿತಿ ತಲುಪಿದವು. ಆದರೆ, ಭಾರತದಲ್ಲಿ 133 ಕೋಟಿ ಜನಸಂಖ್ಯೆ. ವಿಭಿನ್ನ ಪಕ್ಷ-ಸ್ವಭಾವದ ಮುಖ್ಯಮಂತ್ರಿಗಳು, ಪ್ರತಿಯೊಂದು ನಿರ್ಧಾರವನ್ನೂ ರಾಜಕೀಯ ಕಾರಣದಿಂದ ವಿರೋಧಿಸುವ ವಿಪಕ್ಷಗಳು ಇಂತಹ ಸಂಕಷ್ಟ ಸ್ಥಿತಿಯಲ್ಲಿ ರಿಸ್ಕ್ ತೆಗೆದುಕೊಳ್ಳುವ, ಸಮರ್ಥವಾಗಿ ನಿಭಾಯಿಸುವುದು ಮೋದಿಯವರಿಂದ ಮಾತ್ರ ಸಾಧ್ಯ ಎಂಬುದಕ್ಕೆ ಇಂದಿನ ಸ್ಥಿತಿಯೇ ಸಾಕ್ಷಿಯಾಗಿದೆ.
ಕೋವಿಡ್ ಸಮರ್ಥ ನಿರ್ವಹಣೆ ಮೋದಿಯವರನ್ನು ಮತ್ತೆ ವಿಶ್ವದ ಅಗ್ರಪಟ್ಟಕ್ಕೇರಿಸಿದೆಯೇ?
ಸ್ವಚ್ಛ ಆಡಳಿತ, ವರ್ಚಸ್ಸಿನಿಂದ ಈಗಾಗಲೇ ಅವರು ವಿಶ್ವನಾಯಕರಾಗಿದ್ದಾರೆ. ಲಾಕ್‌ಡೌನ್ ಘೋಷಣೆ ಅಷ್ಟೇ ಅಲ್ಲ. ಜನರಿಗೆ ಇದರ ಬಗ್ಗೆ ಮನವರಿಕೆ ಮಾಡಿಕೊಟ್ಟಿದ್ದು, ಆರ್ಥಿಕ ಸ್ಥಿತಿ ಸುಧಾರಣೆಗೆ ಎಂಎಸ್‌ಎಂಇಗೆ ಮೂರು ಲಕ್ಷ ಕೋಟಿ, ಕೃಷಿಗೆ ಐದು ಲಕ್ಷ ಕೋಟಿ ಸೇರಿದಂತೆ 20 ಲಕ್ಷ ಕೋಟಿ ರೂ.ಗಳ ಪ್ಯಾಕೇಜ್ ನೀಡಿ ಉದ್ಯಮಿಗಳು, ಕಾರ್ಮಿಕರು, ರೈತರು, ವ್ಯಾಪಾರಿಗಳು ಹೀಗೆ ವಿವಿಧ ವಲಯಗಳಲ್ಲಿ ವಿಶ್ವಾಸ ತುಂಬಿದ್ದು, ಮುಂದುವರೆದ ದೇಶಗಳಿಗೆ ಹೋಲಿಸಿದರೆ, ಭಾರತದಲ್ಲಿ ಕೋವಿಡ್ ಸಮಸ್ಯೆಯನ್ನು ತಕ್ಕಮಟ್ಟಿಗೆ ಕಟ್ಟಿ ಹಾಕುವಲ್ಲಿ ಯಶಸ್ವಿಯಾಗಿರುವುದು ಸಹಜವಾಗಿಯೇ ಮೋದಿಯವರನ್ನು ವಿಶ್ವನಾಯಕರ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೆ ನಿಲ್ಲಿಸಿದೆ.
ಮೋದಿಯವರ ಯಾವ ಗುಣಗಳು ನಿಮ್ಮನ್ನು ಆಕರ್ಷಿಸಿವೆ?
ಅವರ ಕಠಿಣ ಪರಿಶ್ರಮ, ಪ್ರಾಮಾಣಿಕತೆ, ವಿಶ್ರಾಂತಿ ರಹಿತ ಹಾಗೂ ನಿಸ್ವಾರ್ಥ ಸೇವೆ, ವೈಯಕ್ತಿಕ ಹಿತಾಸಕ್ತಿ ಬದಿಗಿರಿಸಿ ದೇಶ ಮೊದಲು ಎಂಬ ಮನೋಭಾವ, ಬಲಿಷ್ಠ ಭಾರತ ನಿರ್ಮಾಣ ಚಿಂತನೆಗಳು ನನ್ನಂತಹ ಅದೆಷ್ಟೋ ಜನರಿಗೆ ಪ್ರೇರಣೆ ನೀಡಿವೆಯಲ್ಲದೆ ಪ್ರಭಾವ ಬೀರಿವೆ. ಅವರ ಪ್ರೇರಣೆ-ಪ್ರಭಾವವನ್ನು ನಮ್ಮ ಜೀವನ-ಆಡಳಿತದಲ್ಲಿ ಅಳವಡಿಸಿಕೊಂಡರೆ ಸಾಕು.
ಆರ್ಥಿಕ ಸಂಕಷ್ಟ ಪರಿಹಾರಕ್ಕೆ ರಾಜ್ಯಕ್ಕೆ ಕೇಂದ್ರದ ಕೊಡುಗೆ ಏನು?
ಆರ್ಥಿಕ ಸಂಕಷ್ಟ ನಿವಾರಣೆಗೆ ಕೇಂದ್ರದಿಂದ ರಾಜ್ಯಕ್ಕೆ ದೊರೆತ ವಿಶೇಷ ಪ್ಯಾಕೇಜ್ ಪ್ರಾಮಾಣಿಕವಾಗಿ ಅನುಷ್ಠಾನಗೊಳ್ಳುವುದು ಅವಶ್ಯವಾಗಿದೆ. ಕೇಂದ್ರ ನೆರವಿನ ನರೇಗಾ ಯೋಜನೆ ಗ್ರಾಮೀಣ ಭಾಗದಲ್ಲಿ ಉದ್ಯೋಗ ಸೃಷ್ಟಿಗೆ ಮಹತ್ವದ ಕೊಡುಗೆ ನೀಡುತ್ತಿದೆ.
ರಾಜ್ಯದಲ್ಲಿ ಉದ್ಯಮ ಕ್ಷೇತ್ರದ ವೇಗೋತ್ಕರ್ಷ ನನ್ನ ಬಯಕೆ
ಉದ್ಯಮ ಬೆಳವಣಿಗೆ, ಬಲವರ್ಧನೆಗೆ ನನ್ನದೇಯಾದ ನೀಲನಕ್ಷೆ ಹೊಂದಿದ್ದೇನೆ. ವಿಶೇಷವಾಗಿ 2-3ನೇ ಸ್ತರದ ನಗರಗಳಲ್ಲಿ ಉದ್ಯಮ ವೇಗೋತ್ಕರ್ಷವಾಗಬೇಕು ಎಂಬ ಬಯಕೆ ನನ್ನದು. ನೂತನ ಕೈಗಾರಿಕಾ ನೀತಿ ಶೀಘ್ರ ಅನುಷ್ಠಾನಗೊಳ್ಳಲಿದೆ. ಉದ್ಯಮಕ್ಕೆ ಪೂರಕ ವಾತಾವರಣದ ಮೂಲಕ ದೇಶ-ವಿದೇಶಗಳ ಉದ್ಯಮ-ಉದ್ಯಮಿಗಳ ಆಕರ್ಷಣೆಗೆ ರಾಜ್ಯವನ್ನು ಎಲ್ಲ ರೀತಿಯಿಂದಲೂ ಸನ್ನದ್ಧವಾಗಿಸುವ ಕ್ರಮ ಕೈಗೊಂಡಿದ್ದೇನೆ. ಕೋವಿಡ್ ಹೊಡೆತದಿಂದ ಸಣ್ಣ ಮತ್ತು ಅತಿ ಸಣ್ಣ ಉದ್ಯಮ ತತ್ತರಿಸಿದೆಯಾದರೂ, ಮತ್ತೆ ಪುಟಿದೇಳುವ ನಿಟ್ಟಿನಲ್ಲಿ ಸಾಗುತ್ತಿದೆ. ಇದಕ್ಕೆ ಪೂರಕವಾಗಿ ಸರಕಾರಗಳು ನೆರವಿಗೆ ಮುಂದಾಗಿವೆ.
ಲಾಕ್‌ಡೌನ್‌ನಿಂದ ಉದ್ಯಮ ವಲಯ ಉತ್ತೇಜನಕ್ಕೆ ರಾಜ್ಯ ಸರಕಾರದ ಕ್ರಮಗಳೇನು?
ರಾಜ್ಯದಲ್ಲಿ ಉದ್ಯಮ ಉತ್ತೇಜನ, ರಕ್ಷಣೆ ಹಾಗೂ ವಿಶ್ವಾಸ ವೃದ್ಧಿ ವಿಚಾರದಲ್ಲಿ ಸಾಕಷ್ಟು ಪರಿಹಾರ ಹಾಗೂ ಕ್ರಮಗಳನ್ನು ಕೈಗೊಳ್ಳಲಾಗಿದೆ. ಹೂಡಿಕೆದಾರರ ಆಕರ್ಷಣೆ ನಿಟ್ಟಿನಲ್ಲಿ ಉದ್ಯಮ ಆರಂಭಕ್ಕೆ ಏಕಗವಾಕ್ಷಿ ಪರಿಣಾಮಕಾರಿ ಅನುಷ್ಠಾನ, ಭೂ ಸುಧಾರಣೆ ಕಾಯ್ದೆಗೆ ತಿದ್ದುಪಡಿಯೊಂದಿಗೆ ಕಲಂ 63, 79 ಎ ಮತ್ತು ಬಿ, 109ನೇ ಕಲಂಗಳ ತಿದ್ದುಪಡಿಯೊಂದಿಗೆ ಉದ್ಯಮಕ್ಕೆ ಭೂಮಿ ಖರೀದಿ ಸರಳೀಕರಣ, ಅನೇಕ ರಿಯಾಯಿತಿಗಳನ್ನು ಘೋಷಿಸಿದ್ದೇವೆ. ನಮ್ಮಲ್ಲಿ ವಿದ್ಯುತ್ ಕೊರತೆ ಇಲ್ಲ, ಹತ್ತಾರು ಸಾವಿರ ಎಕರೆ ಭೂಮಿ ಇದೆ. ಇನ್ನೂ 20 ಸಾವಿರ ಎಕರೆ ಭೂಮಿ ಸ್ವಾಧೀನಕ್ಕೆ ಚಿಂತನೆ ನಡೆದಿದೆ. ಉದ್ಯಮ ಆಕರ್ಷಣೆಗೆ ಮೂಲಭೂತ ಸೌಕರ್ಯ ಕಲ್ಪಿಸುವುದಕ್ಕೆ ಇಲಾಖೆ ಮೊದಲ ಆದ್ಯತೆ ನೀಡಿದೆ.
ಹೊಸ ಕೈಗಾರಿಕಾ ನೀತಿ ಅನುಷ್ಠಾನ ಕುರಿತು ಏನು ಹೇಳುತ್ತೀರಿ?
ಹೊಸ ಕೈಗಾರಿಕಾ ನೀತಿ ಸಿದ್ಧಗೊಂಡಿದ್ದು, ಹಣಕಾಸು ಇಲಾಖೆಗೆ ಹೋಗಿದೆ. ಕೋವಿಡ್ ಸಂಕಷ್ಟದಿಂದ ಒಂದಿಷ್ಟು ವಿಳಂಬವಾಯಿತು. ಈಗಾಗಲೇ ಈ ಕುರಿತು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರೊಂದಿಗೆ ಚರ್ಚಿಸಿದ್ದು, ಅವರು ಸಹ ಹಣಕಾಸು ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದು, ಶೀಘ್ರದಲ್ಲಿಯೇ ನೀತಿ ಅನುಷ್ಠಾನಗೊಳ್ಳಲಿದೆ. ಹೊಸ ನೀತಿಯಲ್ಲಿ ವಿಶೇಷವಾಗಿ 2-3ನೇ ಸ್ತರದ ನಗರಗಳಲ್ಲಿ ಉದ್ಯಮ ಬೆಳವಣಿಗೆಗೆ ಒತ್ತು ನೀಡಲಾಗಿದೆ. ಇದಕ್ಕೆ ಪೂರಕವಾಗಿಯೇ ಫೆಬ್ರವರಿ 14ರಂದು ಹುಬ್ಬಳ್ಳಿಯಲ್ಲಿ ಇನ್ವೆಸ್ಟ್ ಕರ್ನಾಟಕ ಸಮಾವೇಶ ನಡೆಸಲಾಗಿತ್ತು. ಬೆಂಗಳೂರಿನ ಉದ್ಯಮ ಒತ್ತಡ ಕಡಿಮೆ ಮಾಡುವ ಉದ್ದೇಶ ದಿಂದಲೇ ಇಂತಹ ಯತ್ನಗಳನ್ನು ಕೈಗೊಳ್ಳ ಲಾಗುತ್ತಿದೆ.
ಎಂಎಸ್‌ಎಂಇ- ನವೋದ್ಯಮ ಹೆಚ್ಚು ಸಂಕಷ್ಟಕ್ಕೆ ಸಿಲುಕಿದ್ದು ಇದಕ್ಕೆ ಪರಿಹಾರ ಕ್ರಮಗಳೇನು?
ನಿಜ, ಕೋವಿಡ್ ಸಂಕಷ್ಟದಿಂದ ವಿಶೇಷವಾಗಿ ಎಂಎಸ್‌ಎಂಇ ಸಂಕಷ್ಟಕ್ಕೆ ಸಿಲುಕಿದೆ. ಎಂಎಸ್‌ಎಂಇ-ನವೋದ್ಯಮ ಉತ್ತೇಜನಕ್ಕೆ ರಾಜ್ಯ ಸರಕಾರ ಈಗಾಗಲೇ ಹಲವು ಕ್ರಮಗಳನ್ನು ಕೈಗೊಂಡಿದೆ. ಕೇಂದ್ರ ಸರಕಾರದ ನಿರ್ದೇಶನದಂತೆ ಬ್ಯಾಂಕರ್ಸ್‌ಗಳು ಉದ್ಯಮಿಗಳನ್ನು ಸಂಪರ್ಕಿಸಿ ಸಾಲ ನೀಡಿಕೆಗೆ ಮುಂದಾಗಿದ್ದು, ಉದ್ಯಮಿಗಳು ಹಾಗೂ ಬ್ಯಾಂಕರ್ಸ್‌ಗಳ ಸಮಾಲೋಚನಾ ಸಭೆ ಆಯೋಜಿಸುವಂತೆ ಮುಖ್ಯಕಾರ್ಯದರ್ಶಿಗೆ ತಿಳಿಸಿದ್ದೇನೆ. ಬ್ಯಾಂಕ್‌ಗಳ ಹೊಸ ಸಾಲ ನೀಡಿಕೆ, ಇನ್ನಿತರ ಉತ್ತೇಜನಾ ಕ್ರಮಗಳು ಖಂಡಿತವಾಗಿಯೂ ರಾಜ್ಯದಲ್ಲಿ ಎಂಎಸ್‌ಎಂಇ-ನವೋದ್ಯಮ ಸೇರಿದಂತೆ ಉದ್ಯಮ ವಲಯ ಬಲವರ್ಧನೆಗೆ ಸಹಕಾರಿಯಾಗುವ ವಿಶ್ವಾಸವಂತೂ ಇದೆ.
ಉತ್ತರ ಕರ್ನಾಟಕದಲ್ಲಿ ಉದ್ಯಮ ಬಲವರ್ಧನೆಗೆ ನಿಮ್ಮ ನೀಲನಕ್ಷೆ ಏನು?
ಉತ್ತರ ಕರ್ನಾಟಕದಲ್ಲಿ ಉದ್ಯಮ ಬೆಳವಣಿಗೆ ಅತ್ಯವಶ್ಯವಾಗಿದೆ. ಮೂಲ ಸೌಕರ್ಯಗಳನ್ನು ಕಲ್ಪಿಸುವುದು ಅತ್ಯಂತ ಮಹತ್ವದ್ದಾಗಿದ್ದು, ಇಲಾಖೆ ಅದನ್ನು ಸವಾಲು ಹಾಗೂ ಗಂಭೀರವಾಗಿ ಪರಿಗಣಿಸಿ ಆ ನಿಟ್ಟಿನಲ್ಲಿ ಹಲವು ಹೆಜ್ಜೆಗಳನ್ನಿರಿಸಿದೆ. ಮುಖ್ಯವಾಗಿ ಈ ಭಾಗದ ಉದ್ಯಮ ಬೆಳವಣಿಗೆಗೆ ಹುಬ್ಬಳ್ಳಿ – ಅಂಕೋಲಾ ರೈಲ್ವೆ ಮಾರ್ಗ ಆಗಲೇಬೇಕಾಗಿದೆ. ಇದನ್ನು ಮುಖ್ಯಮಂತ್ರಿಯವರಿಗೂ ಮನವರಿಕೆ ಮಾಡಿದ್ದೆ. ಅದಕ್ಕೆ ಸ್ಪಂದಿಸಿದ್ದ ಅವರು ವನ್ಯಜೀವಿ ಮಂಡಳಿ ಸಭೆಗೆ ವಿಶೇಷ ಆಹ್ವಾನಿತರಾಗಿ ಬರಲು ತಿಳಿಸಿದ್ದರು. ನಾನಷ್ಟೇ ಅಲ್ಲದೆ ಸಚಿವ ಶಿವರಾಮ ಹೆಬ್ಟಾರ, ಮಾಜಿ ಸಚಿವ ಆರ್.ವಿ.ದೇಶಪಾಂಡೆ ಅವರಿಗೂ ಅವಕಾಶ ಕಲ್ಪಿಸುವಂತೆ ಕೇಳಿದ್ದರಿಂದ ಸಿಎಂ ಅದಕ್ಕೂ ಒಪ್ಪಿದರು. ನಾವೆಲ್ಲ ಸಭೆಗೆ ಹೋಗಿ ಅಲ್ಲಿ ಹುಬ್ಬಳ್ಳಿ-ಅಂಕೋಲಾ ರೈಲ್ವೆ ಮಾರ್ಗದ ಅವಶ್ಯತೆ, ಅಭಿವೃದ್ಧಿಗೆ ಅದರ ಕೊಡುಗೆ ಬಗ್ಗೆ ವಿವರಿಸಿದ್ದು, ಉತ್ತರ ಕರ್ನಾಟಕ ಹಾಗೂ ಕರಾವಳಿ ನಡುವಿನ ವಹಿವಾಟು ಸಂಬಂಧ ಇನ್ನಷ್ಟು ವೃದ್ಧಿಸಲಿದೆ, ಪ್ರವಾಸೋದ್ಯಮಕ್ಕೂ ಅನುಕೂಲವಾಗಲಿದೆ. ಜತೆಗೆ ಬೇಲೇಕೇರಿ ಬಂದರು ಅಭಿವೃದ್ಧಿ ಅವಶ್ಯವಾಗಿದೆ. ಇದರಿಂದ ರಫ್ತು ಉದ್ಯಮಕ್ಕೂ ಉತ್ತೇಜನ ದೊರೆಯುತ್ತದೆ ಎಂಬುದನ್ನು ಸ್ಪಷ್ಟಪಡಿಸಿದ್ದೇವೆ.
ಕೋವಿಡ್ ನಿಂದರಾಜ್ಯದಲ್ಲಿ ಉದ್ಯಮಕ್ಕೆ ಕಾರ್ಮಿಕ ಸಮಸ್ಯೆ ಎದುರಾಗಿದ್ದು ಇದಕ್ಕೆ ಪರಿಹಾರ?
ಕೋವಿಡ್ ನಿಂದ ಅನ್ಯ ರಾಜ್ಯಗಳ ಕಾರ್ಮಿಕರು ತಮ್ಮ ತಮ್ಮ ರಾಜ್ಯಗಳಿಗೆ ಹಿಂದಿರುಗಿದ್ದು ನಿಜ. ಆದರೆ, ಉದ್ಯಮಗಳು ಸ್ಥಳೀಯ ಉದ್ಯೋಗಿಗಳನ್ನು ಹೆಚ್ಚು ಅವಲಂಬಿಸಿದ್ದರಿಂದ ದೊಡ್ಡ ತೊಂದರೆ ಕಂಡಿಲ್ಲ. ಕಟ್ಟಡ ವಲಯದಲ್ಲಿ ಹೆಚ್ಚು ಕಾರ್ಮಿಕರು ಅನ್ಯರಾಜ್ಯದವರಿದ್ದು, ಆ ಕ್ಷೇತ್ರಕ್ಕೆ ಕೊಂಚ ಕೊರತೆ ಆಗಿದೆ. ನನ್ನ ಅನಿಸಿಕೆ ಪ್ರಕಾರ ಈ ಕೊರತೆ ತಾತ್ಕಾಲಿಕ ಮಾತ್ರ. 2-3 ತಿಂಗಳಲ್ಲಿ ಕಾರ್ಮಿಕರು ಮತ್ತೆ ಮರಳುವ ವಿಶ್ವಾಸವಿದೆ. ಕೌಶಲ ಕಾರ್ಮಿಕರ ಕೊರತೆ ನೀಗಿಸುವ ನಿಟ್ಟಿನಲ್ಲಿ ರಾಜ್ಯ ಸರಕಾರ ಹಲವು ಕ್ರಮಗಳಿಗೆ ಮುಂದಾಗಿದೆ.
ಬೃಹತ್-ಮಧ್ಯಮ ಕೈಗಾರಿಕಾ ಸಚಿವರಾಗಿ ಕಾರ್ಯ ತೃಪ್ತಿ ತಂದಿದೆಯೇ?
ನೂರಕ್ಕೆ ನೂರರಷ್ಟು ನನ್ನ ಕಾರ್ಯ ತೃಪ್ತಿ ತಂದಿದೆ. ಕೋವಿಡ್ ಕಾರಣ ಕಳೆದ ಮೂರು ತಿಂಗಳಿಂದ ನಮ್ಮ ವೇಗಕ್ಕೆ ಕೊಂಚ ಹಿನ್ನಡೆ ಆಗಿರುವುದು ಬೇಜಾರು ತರಿಸಿದೆ. ಉದ್ಯಮ ಬಲವರ್ಧನೆಗೆ ನನ್ನದೇ ಹಲವು ಚಿಂತನೆಗಳಿವೆ. ಹುಬ್ಬಳ್ಳಿಯಲ್ಲಿ ನಡೆದ ಹೂಡಿಕೆದಾರರ ಸಮಾವೇಶದಲ್ಲಿ ಅಂದಾಜು 72 ಸಾವಿರ ಕೋಟಿ ರೂಪಾಯಿಯಷ್ಟು ಹೂಡಿಕೆ ಭರವಸೆ ಸಣ್ಣದೇನಲ್ಲ. 2-3ನೇ ಸ್ತರದ ನಗರಗಳಲ್ಲಿ ಹೂಡಿಕೆಗೆ ಉದ್ಯಮಿಗಳು ಮುಂದೆ ಬಂದಿರುವುದು, ಯಾದಗಿರಿ ಜಿಲ್ಲೆಯಲ್ಲಿ ದೊಡ್ಡ ಮಟ್ಟದ ಹೂಡಿಕೆಗೆ ಭರವಸೆ ದೊರೆತಿರುವುದು ನಿಜಕ್ಕೂ ಸಂತಸ ಮೂಡಿಸಿದೆ. ಇಲಾಖೆಯಲ್ಲಿ ಇನ್ನಷ್ಟು ಸಾಧನೆ-ಅಭಿವೃದ್ಧಿಯ ತವಕವಂತೂ ಇದ್ದೇ ಇದೆ.
ಕೋವಿಡ್ ನಿಯಂತ್ರಣ ನಿಟ್ಟಿನಲ್ಲಿ ಧಾರವಾಡ ಜಿಲ್ಲಾಡಳಿತ ಶ್ರಮದ ಬಗ್ಗೆ ಏನು ಹೇಳುತ್ತೀರಿ?
ನಿಜವಾಗಿಯೂ ಧಾರವಾಡ ಜಿಲ್ಲಾಡಳಿತ ಉತ್ತಮ ಸಾಧನೆ ತೋರಿದೆ. ಜಿಲ್ಲಾಡಳಿತ, ಆರೋಗ್ಯ, ಪೊಲೀಸ್ ಇಲಾಖೆ, ಮಹಾನಗರ ಪಾಲಿಕೆ, ಕಿಮ್ಸ್ ವೈದ್ಯರು,
ಆಶಾ ಕಾರ್ಯಕರ್ತೆಯರು ಇನ್ನಿತರ ಇಲಾಖೆಗಳ ಅಧಿಕಾರಿಗಳ ಕಾರ್ಯ ಶ್ಲಾಘನೀಯ. ಕೊರೊನಾ ಆತಂಕ ಹೋಗಲಾಡಿಸುವುದರ ಜತೆಗೆ ಜಾಗೃತಿ, ರೋಗ ನಿಯಂತ್ರಣಕ್ಕೆ ಲಾಕ್‌ಡೌನ್, ಸೀಲ್‌ಡೌನ್ ಕಟ್ಟುನಿಟ್ಟಾಗಿ ಜಾರಿ, 16 ಸಾವಿರಕ್ಕೂ ಅಧಿಕ ಜನರ ತಪಾಸಣೆ, ಸೋಂಕಿತರಿಗೆ ಸಕಾಲಿಕ ಚಿಕಿತ್ಸೆ, ಶಂಕಿತರು ಹಾಗೂ ಹೊರ ರಾಜ್ಯಗಳಿಂದ ಬಂದವರಿಗೆ ಸಾಂಸ್ಥಿಕ ಹಾಗೂ ಹೋಮ್ ಕ್ವಾರಂಟೈನ್‌ನಂತಹ ವ್ಯವಸ್ಥೆ, ಮಾಸ್ಕ್, ಸ್ಯಾನಿಟೈಸರ್ ಬಳಕೆ, ಸಾಮಾಜಿಕ ಅಂತರ ಕಾಯ್ದುಕೊಳ್ಳುವಿಕೆ ನಿಟ್ಟಿನಲ್ಲಿ ಜಿಲ್ಲಾಧಿಕಾರಿ ನೇತೃತ್ವದ ಅಧಿಕಾರಿಗಳ ತಂಡ ಅತ್ಯುತ್ತಮ ಕಾರ್ಯನಿರ್ವಹಿಸಿದೆ.
ಕೊರೊನಾ ತಡೆಗೆ ಅಗತ್ಯ ಸೂಚನೆ-ಸಂಕಷ್ಟಕ್ಕೆ ಸ್ಪಂದನೆ
ಕೋವಿಡ್ ತಡೆಗಾಗಿ ಹಾಗೂ ಲಾಕ್‌ಡೌನ್ ಸಂಕಷ್ಟಕ್ಕೆ ಧಾರವಾಡ ಹಾಗೂ ಬೆಳಗಾವಿ ಜಿಲ್ಲೆಗಳ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ ಉತ್ತಮವಾಗಿ ಕಾರ್ಯನಿರ್ವಹಿಸಿದ್ದಾರೆ. ರೋಗ ವ್ಯಾಪಕವಾಗಿ ಹರಡದಂತೆ ಎರಡೂ ಜಿಲ್ಲೆಯ ಜಿಲ್ಲಾಡಳಿತಗಳಿಗೆ ಸೂಕ್ತ ಮಾರ್ಗದರ್ಶನ ನೀಡಿದ್ದಾರಲ್ಲದೆ, ತಾವು ಪ್ರತಿನಿಧಿಸುವ ಹುಬ್ಬಳ್ಳಿ-ಧಾರವಾಡ ಕೇಂದ್ರ ವಿಧಾನಸಭಾ ಕ್ಷೇತ್ರದಲ್ಲಿ ರೋಗ ತಡೆ ಜಾಗೃತಿ, ಬಡವರು, ದಿನಗೂಲಿಗಳು, ನಿರ್ಗತಿಕರಿಗೆ ಆಹಾರ ಧಾನ್ಯಗಳ ಸಾವಿರಾರು ಕಿಟ್‌ಗಳನ್ನು ವಿತರಿಸುವ ಮೂಲಕ ಜನ ಮೆಚ್ಚುಗೆ ಗಳಿಸಿದ್ದಾರೆ.
ಹುಬ್ಬಳ್ಳಿ-ಧಾರವಾಡ ಕೇಂದ್ರ ವಿಧಾನಸಭಾ ಕ್ಷೇತ್ರವನ್ನು ಸತತ ಆರು ಬಾರಿ ಪ್ರತಿನಿಧಿಸುತ್ತಿರುವ ಜಗದೀಶ ಶೆಟ್ಟರ, ಕ್ಷೇತ್ರದ ಜನತೆಯ ಕುಂದು-ಕೊರತೆಗಳಿಗೆ ಖುದ್ದಾಗಿ ಸ್ಪಂದಿಸುತ್ತಿದ್ದಾರೆ. ಕೋವಿಡ್ ಸಂಕಷ್ಟದಲ್ಲೂ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವರಾಗಿ ರಾಜ್ಯ ಪ್ರತಿನಿಧಿಸುವ, ಧಾರವಾಡ-ಬೆಳಗಾವಿ ಜಿಲ್ಲೆಗಳ ಉಸ್ತುವಾರಿ ಸಚಿವರಾಗಿ ಎರಡು ಜಿಲ್ಲೆಗಳ ನಿರ್ವಹಣೆಯ ಒತ್ತಡದಲ್ಲೂ , ಹು.ಧಾ.ಕೇಂದ್ರ ವಿಧಾನಸಭಾ ಕ್ಷೇತ್ರದಲ್ಲಿ ಕಿಂಚಿತ್ತು ಲೋಪವಾಗದ ರೀತಿಯಲ್ಲಿ ಕಾಳಜಿ ತೋರಿದ್ದಾರೆ. ಕ್ಷೇತ್ರದಾದ್ಯಂತ ಸುತ್ತಾಡಿ ಜನರ ಸಮಸ್ಯೆ ಆಲಿಸಿದ್ದಾರೆ. 3-4 ದಿನಕ್ಕೊಮ್ಮೆ ಅಧಿಕಾರಿಗಳ ಸಭೆ ನಡೆಸಿ ಮಾಹಿತಿ ಪಡೆದಿದ್ದಾರಲ್ಲದೆ ಅನೇಕ ಸಲಹೆ, ಸೂಚನೆ ನೀಡಿದ್ದಾರೆ.
ಪ್ರತಿಷ್ಠಾನದಿಂದ 20 ಸಾವಿರ ಕಿಟ್: ಸಚಿವ ಜಗದೀಶ ಶೆಟ್ಟರ ಕುಟುಂಬದ ಎಸ್.ಎಸ್.ಶೆಟ್ಟರ ಫೌಂಡೇಶನ್‌ನಿಂದ ಕೋವಿಡ್ ಸಂಕಷ್ಟ ಸಂದರ್ಭದಲ್ಲಿ ದಿನಗೂಲಿಗಳು, ಆಟೋರಿಕ್ಷಾ ಚಾಲಕರು, ಧೋಬಿಗಳು, ತರಕಾರಿ ಮಾರಾಟ ಮಾಡುವವರು, ಪೌರಕಾರ್ಮಿಕರು, ಆಶಾ ಕಾರ್ಯಕರ್ತೆಯರು ಹೀಗೆ ಅನೇಕರಿಗೆ ಆಹಾರ ಧಾನ್ಯಗಳ ಕಿಟ್‌ಗಳನ್ನು ವಿತರಣೆ ಮಾಡಲಾಗಿದೆ.
ಫೌಂಡೇಶನ್‌ನಿಂದ ಸುಮಾರು 20 ಸಾವಿರ ಕಿಟ್‌ಗಳನ್ನು ಹು.ಧಾ. ಕೇಂದ್ರ ವಿಧಾನಸಭಾ ಕ್ಷೇತ್ರದಲ್ಲಿ ಬಹುತೇಕ, ಹಾಗೂ ಹು.ಧಾ. ಪೂರ್ವ ವಿಧಾನಸಭಾ ಕ್ಷೇತ್ರದಲ್ಲಿ ಅಲ್ಪ ಪ್ರಮಾಣದಲ್ಲಿ ಹಂಚಿಕೆ ಮಾಡಲಾಗಿದೆ. ಐದು ಕೆ.ಜಿ. ಅಕ್ಕಿ, ಒಂದು ಕೆ.ಜಿ. ಸಕ್ಕರೆ, ಒಂದು ಲೀಟರ್ ಅಡುಗೆ ಎಣ್ಣೆ, ಒಂದು ಕೆ.ಜಿ. ಗೋಧಿ ಹಿಟ್ಟು, ಒಂದು ಕೆ.ಜಿ. ಉಪ್ಪಿಟ್ಟು ರವಾ, ಒಂದು ಕೆ.ಜಿ. ಅವಲಕ್ಕಿ, ಒಂದು ಕೆ.ಜಿ. ತೊಗರಿ ಬೇಳೆ ಸೇರಿದಂತೆ ವಿವಿಧ ಪದಾರ್ಥಗಳನ್ನೊಳಗೊಂಡ ಕಿಟ್ ನೀಡಲಾಗಿದೆ.
ಇದಲ್ಲದೆ ಇನ್ಫೋಸಿಸ್ ಪ್ರತಿಷ್ಠಾನದಿಂದ ದೊರೆತ ಸುಮಾರು 1,000 ದಿನಸಿ ಕಿಟ್‌ಗಳು ಹಾಗೂ ಸ್ಟಾರ್ ಏರ್‌ವೇಸ್‌ನಿಂದ ಬಂದ 1,000 ಕಿಟ್‌ಗಳನ್ನು ಹು.ಧಾ. ಕೇಂದ್ರ ವಿಧಾನಸಭಾ ಕ್ಷೇತ್ರದಲ್ಲಿ ಹಂಚಿಕೆ ಮಾಡಲಾಗಿದೆ. ಜಿಲ್ಲಾಡಳಿತದಿಂದ ಬಂದ ಕಿಟ್‌ಗಳನ್ನು ನೀಡಲಾಗಿದೆ. ಜತೆಗೆ ಕಾರ್ಮಿಕ ಇಲಾಖೆಯಿಂದ ಬಂದ ಸುಮಾರು 6,000 ಕಿಟ್‌ಗಳನ್ನು ಕ್ಷೇತ್ರದ ಜನಪ್ರತಿನಿಧಿಯಾಗಿ ಸ್ವತಃ ಜಗದೀಶ ಶೆಟ್ಟರ ಅವರೇ ಕ್ಷೇತ್ರದ ಮೂಲೆ, ಮೂಲೆಗೆ ತೆರಳಿ ವಿತರಣೆ ಮಾಡಿದ್ದಾರೆ.
ಮಾಸ್ಕ್ ವಿತರಣೆ: ಕೋವಿಡ್-19ನಿಂದ ರಕ್ಷಣೆ ನಿಟ್ಟಿನಲ್ಲಿ ಹು.ಧಾ. ಕೇಂದ್ರ ವಿಧಾನಸಭಾ ಕ್ಷೇತ್ರ ವಾಪ್ತಿಯಲ್ಲಿ ಇದುವರೆಗೂ ಸುಮಾರು 50ಸಾವಿರಕ್ಕೂ ಅಧಿಕ ಮಾಸ್ಕ್ಗಳನ್ನು ವಿತರಣೆ ಮಾಡಲಾಗಿದೆ. ಎಸ್.ಎಸ್.ಶೆಟ್ಟರ ಫೌಂಡೇಶನ್‌ನಿಂದ ಮಹಿಳಾ ತಂಡಗಳು ತಯಾರಿಸಿಕೊಟ್ಟ ಮಾಸ್ಕ್ ಗಳು, ಬೇರೆ ಕಡೆಯಿಂದ ಖರೀದಿಸಿದ್ದು, ದಾನಿಗಳು ನೀಡಿದ್ದು ಸೇರಿದಂತೆ ಒಟ್ಟಾರೆ 50 ಸಾವಿರಕ್ಕೂ ಅಧಿಕ ಮಾಸ್ಕ್ ಗಳನ್ನು ಕ್ಷೇತ್ರಾದ್ಯಂತ ವಿತರಿಸಲಾಗಿದೆ. ಪ್ರತಿಷ್ಠಾನ ಹಾಗೂ ದಾನಿಗಳಿಂದ ಬಂದ ಕಿಟ್, ಮಾಸ್ಕ್ ಗಳ ವಿತರಣೆಯಲ್ಲಿ ಬಿಜೆಪಿ ಮುಖಂಡರು, ಕಾರ್ಯಕರ್ತರು, ಶೆಟ್ಟರ ಅಭಿಮಾನಿಗಳು ಹಗಲಿರಳು ಶ್ರಮಿಸಿದ್ದಾರೆ.
ಕೋವಿಡ್ ವಾರಿಯರ್ಸ್ ಆಗಿ ಶ್ರಮಿಸಿದ ಪಾಲಿಕೆ ಪೌರ ಕಾರ್ಮಿಕರು, ಆಶಾ ಕಾರ್ಯಕರ್ತೆಯರನ್ನು ಸಚಿವ ಜಗದೀಶ ಶೆಟ್ಟರ ಸನ್ಮಾನಿಸುವ ಹಾಗೂ ಅವರ ಸೇವೆ ಪ್ರಶಂಸಿಸುವ ಮೂಲಕ ಇನ್ನಷ್ಟು ಸೇವೆಗೆ ಉತ್ತೇಜಿಸಿದ್ದಾರೆ. ಸೋಂಕಿತರ ಸೇವೆಯಲ್ಲಿ ತೊಡಗಿದ ಕಿಮ್ಸ್ ವೈದ್ಯರು ಹಾಗೂ ಸಿಬ್ಬಂದಿ ಕಾರ್ಯಕ್ಕೂ ಮೆಚ್ಚುಗೆ ಮೂಲಕ ಅವರನ್ನು ಪ್ರೋತ್ಸಾಹಿಸುವ ಕಾರ್ಯ ಮಾಡಿದ್ದಾರೆ.
ಕೋವಿಡ್ ಕಟ್ಟಿ ಹಾಕಲು ಮಾರ್ಗದರ್ಶನ: ಧಾರವಾಡ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಾಗಿ ಜಗದೀಶ ಶೆಟ್ಟರ ಅವರು, ಕೊರೊನಾ ಕಟ್ಟಿ ಹಾಕುವ ನಿಟ್ಟಿನಲ್ಲಿ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಕುರಿತಾಗಿ ಮಹತ್ವದ ಮಾರ್ಗದರ್ಶನ ಮಾಡಿದ್ದಾರೆ. ಎರಡು ಜಿಲ್ಲೆಗಳ ಜಿಲ್ಲಾಧಿಕಾರಿಗಳು, ಆರೋಗ್ಯ, ಕಂದಾಯ, ಮಹಾನಗರ ಪಾಲಿಕೆ ಸೇರಿದಂತೆ ವಿವಿಧ ಇಲಾಖೆಗಳ ಸಭೆಗಳನ್ನು ಸಕಾಲಿಕವಾಗಿ ನಡೆಸುವ ಮೂಲಕ ಅಗತ್ಯ ಮಾಹಿತಿ ಸಂಗ್ರಹ ಹಾಗೂ ಮುಂಜಾಗ್ರತಾ ಕ್ರಮಗಳ ಕುರಿತಾಗಿ ಹಲವು ಸೂಚನೆಗಳನ್ನು ನೀಡಿದ್ದರಿಂದಾಗಿಯೇ ಎರಡು ಜಿಲ್ಲೆಗಳಲ್ಲಿ ಕೋವಿಡ್ ತೀವ್ರ ಸ್ವರೂಪ ಪಡೆಯದೆ ತಕ್ಕಮಟ್ಟಿಗೆ ನಿಯಂತ್ರಣದಲ್ಲಿದೆ ಎಂದೇ ಹೇಳಬಹುದು.
ಲಾಕ್‌ಡೌನ್ ಹಾಗೂ ಸೀಲ್‌ಡೌನ್ ಪರಿಣಾಮಕಾರಿ ಅನುಷ್ಠಾನಕ್ಕೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು. ಹುಬ್ಬಳ್ಳಿಯಲ್ಲಿ ಕೋವಿಡ್ ಸೋಂಕು ಪ್ರಕರಣ ಕಂಡು ಬಂದ ಹಿನ್ನೆಲೆಯಲ್ಲಿ ಸಚಿವ ಜಗದೀಶ ಶೆಟ್ಟರ ಅವರ ನಿವಾಸಕ್ಕೆ ತೆರಳುವ ರಮೇಶ ಭವನದ ಬಳಿಯ ಮುಖ್ಯ ರಸ್ತೆಯನ್ನು ಅಧಿಕಾರಿಗಳು ಬಂದ್ ಮಾಡಿದ್ದರು. ಸಚಿವರ ಕೆಲ ಬೆಂಬಲಿಗರು ಸೋಂಕು ಕಂಡು ಬಂದ ಪ್ರಕರಣ ದೂರವಿದ್ದು, ಮುಖ್ಯ ರಸ್ತೆಯನ್ನು ಸಂಚಾರಕ್ಕೆ ಮುಕ್ತಗೊಳಿಸುವಂತೆ ಸೂಚಿಸಿ ಎಂದಿದ್ದಕ್ಕೆ, ಸಚಿವ ಶೆಟ್ಟರ ಅವರು, ‘ಅಧಿಕಾರಿಗಳು ತಮ್ಮ ಕರ್ತವ್ಯ ನಿರ್ವಹಣೆ ಮಾಡಿದ್ದಾರೆ. ಅದು ಸರಿ ಇದೆ. 15 ದಿನ ನಾವು ಒಂದಿಷ್ಟು ಸುತ್ತುವರೆದು ಮನೆಗೆ ತಲುಪಿದರಾಯಿತು’ ಎಂದು ಹೇಳುವ ಮೂಲಕ ಕಾನೂನು ಪಾಲನೆ ಜವಾಬ್ದಾರಿ ತೋರಿದ್ದಾರೆ.
ಅದೇ ರೀತಿ ಲಾಕ್‌ಡೌನ್ ಸಂದರ್ಭದಲ್ಲಿ ರಾತ್ರಿ ವೇಳೆ ಪೊಲೀಸರು ಅನೇಕ ವಾಹನಗಳ ತಪಾಸಣೆ, ಅನಗತ್ಯ ತಿರುಗುವವರ ವಾಹನಗಳ ವಶಕ್ಕೆ ಮುಂದಾಗಿದ್ದಾಗ ಕೆಲವರು, ಹೆಚ್ಚಿನ ಸಂಖ್ಯೆಯಲ್ಲಿ ವಾಹನ ಜಫ್ತು ಮಾಡುತ್ತಿದ್ದು, ಪೊಲೀಸ್ ಅಧಿಕಾರಿಗಳಿಗೆ ಹೇಳಿ ಎಂದಿದ್ದಕ್ಕೆ ಸಚಿವರು, ‘ಪೊಲೀಸರು ಉತ್ತಮ ಕಾರ್ಯ ತೋರುತ್ತಿದ್ದಾರೆ. ಅನಗತ್ಯ ತಿರುಗುವವರು ದಂಡ ಕಟ್ಟಲಿ ಆಗ ಅನಗತ್ಯ ಸಂಚಾರ ಮಾಡಬಾರದು ಎಂಬ ಬುದ್ಧಿ ಬರುತ್ತದೆ ಎಂದಿದ್ದರಂತೆ.
ಸಚಿವ ಜಗದೀಶ ಶೆಟ್ಟರ ಕೋವಿಡ್ ಸಂದರ್ಭದಲ್ಲಿ ಜಿಲ್ಲೆ ಹಾಗೂ ಕ್ಷೇತ್ರದ ಜವಾಬ್ದಾರಿ ಉತ್ತಮ ನಿರ್ವಹಣೆ ಜತೆಗೆ ಕ್ಷೇತ್ರದ ಅಭಿವೃದ್ಧಿ ನಿಟ್ಟಿನಲ್ಲೂ ಸಾಕಷ್ಟು ಸಾಧನೆಗಳ ಹೆಜ್ಜೆಗಳನ್ನಿರಿಸಿದ್ದಾರೆ. ಮಹಾನಗರ ಅಭಿವೃದ್ಧಿಗೆ ಕೇಂದ್ರದಿಂದ ವಿಶೇಷ ಅನುದಾನ ತರುವ ನಿಟ್ಟಿನಲ್ಲಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರೊಂದಿಗೆ ಸೇರಿ ವಿಶೇಷ ಶ್ರಮ ವಹಿಸಿದ್ದಕ್ಕೆ ಇಂದು ಮಹಾನಗರದಲ್ಲಿ ಆಗುತ್ತಿರುವ ಸಿಮೆಂಟ್ ರಸ್ತೆಗಳೇ ಸಾಕ್ಷಿಯಾಗಿವೆ.
ಉತ್ತರ ಕರ್ನಾಟಕದಲ್ಲೇ ಮೊದಲೆನ್ನುವ ಟೆಂಡರ್ ಶ್ಯೂರ್ ರಸ್ತೆ ಹುಬ್ಬಳ್ಳಿಯಲ್ಲಿ ರೂಪುಗೊಳ್ಳುವುದರ ಹಿಂದೆ ಶೆಟ್ಟರ ಪ್ರಯತ್ನ ಸಾಕಷ್ಟಿದೆ. ಮಹಾನಗರದ ಬಹು ವರ್ಷಗಳ ಬೇಡಿಕೆ ಹುಬ್ಬಳ್ಳಿ ಚನ್ನಮ್ಮ ವೃತ್ತ ಹಾಗೂ ಧಾರವಾಡದ ಜ್ಯುಬಲಿ ವೃತ್ತದಲ್ಲಿ ಫ್ಲೈಓವರ್ ನಿರ್ಮಾಣ ಕಾಮಗಾರಿಗೆ ಕಾಲಕೂಡಿ ಬರುವಂತೆ ಮಾಡುವಲ್ಲಿ ಶೆಟ್ಟರ ಯತ್ನಿಸಿದ್ದಾರೆ. ದೇಶಕ್ಕೆ ಮಾದರಿಯಾದ ಹುಬ್ಬಳ್ಳಿ-ಧಾರವಾಡದಲ್ಲಿ 24×7 ನೀರು ಪೂರೈಕೆ ಯೋಜನೆ ಅನುಷ್ಠಾನ, ವಿಸ್ತರಣೆ ಹಾಗೂ ಇದೀಗ ಅವಳಿನಗರದ ಎಲ್ಲ ವಾರ್ಡ್‌ಗಳಿಗೂ ವಿಸ್ತರಣೆ, ಮಲಪ್ರಭಾ ನದಿಯಿಂದ ಸಗಟು ನೀರು ತರಲು ಅಂದಾಜು 26 ಕೋಟಿ ರೂ.ವೆಚ್ಚದ ಯೋಜನೆ ಯಶಸ್ವಿ ಅನುಷ್ಠಾನ, ರಾಜ್ಯದಲ್ಲೇ ಮೊದಲೆನ್ನುವ ಬಿಆರ್‌ಟಿಎಸ್ ಯೋಜನೆ ಜಾರಿ, ಹುಬ್ಬಳ್ಳಿ ನಗರಕ್ಕೆ ಬೈಪಾಸ್ ರಸ್ತೆ ವ್ಯವಸ್ಥೆ, ರೈತರ ಸಮಸ್ಯೆಗಳಿಗೆ ಸ್ಪಂದನೆ, ಅವಳಿ ನಗರದಲ್ಲಿನ ವಿವಿಧ ಪಾರ್ಕ್‌ಗಳ ಅಭಿವೃದ್ಧಿ, ಕೇಂದ್ರ ಸರಕಾರದ ಮಹತ್ವಾಕಾಂಕ್ಷಿ ಯೋಜನೆ ಸ್ಮಾರ್ಟ್ ಸಿಟಿ ಯೋಜನೆ ಪಟ್ಟಿಗೆ ಹುಬ್ಬಳ್ಳಿ – ಧಾರವಾಡ ಸೇರ್ಪಡೆ ನಿಟ್ಟಿನಲ್ಲಿ ಪ್ರಯತ್ನ, ಸ್ಮಾರ್ಟ್ ಸಿಟಿ ಯೋಜನೆ ಸಮರ್ಪಕ ಅನುಷ್ಠಾನಕ್ಕೆ ಅಧಿಕಾರಿಗಳಿಗೆ ಸಲಹೆ – ಸೂಚನೆ ಹೀಗೆ ವಿವಿಧ ಅಭಿವೃದ್ಧಿ ಕಾರ್ಯಗಳಲ್ಲಿ ಜಗದೀಶ ಶೆಟ್ಟರ ತಮ್ಮದೇಯಾದ ಮಹತ್ವದ ಕೊಡುಗೆ ನೀಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Dharwad: ಜಿಲ್ಲಾಧಿಕಾರಿ ಕಚೇರಿಯಲ್ಲಿ ಬ್ಯಾಟರಿ ಕಳ್ಳತನ
ಮಾಣಿಪ್ಪಾಡಿ ಪ್ರಕರಣವನ್ನು ಸರಕಾರ ಸಿಬಿಐ ಗೆ ನೀಡಲಿ, ಸತ್ಯಾಸತ್ಯತೆ ಹೊರಬರುತ್ತೆ: ಈಶ್ವರಪ್ಪ
Hubli: ಬಿಜೆಪಿಯವರಿಗೆ ಯಾವುದೇ ಆಸಕ್ತಿ ಇಲ್ಲ. ಅವರಿಗೆ ರಾಜಕಾರಣವೇ ಮುಖ್ಯ :ಡಿ.ಕೆ.ಶಿ
Hubballi: ಸಿಎಂ ಸಿದ್ದರಾಮಯ್ಯ ಮುಸ್ಲಿಮರಿಗೆ ಮುತ್ತು ಕೊಡ್ತಾರೆ, ನಮಗೆ ಲಾಠಿ ಏಟು: ಬೆಲ್ಲದ್
Hubli: ಕ್ರಿಮಿನಲ್ ಜತೆಯೇ ಪೊಲೀಸ್ ಪೇದೆ ಎಸ್ಕೇಪ್! ಹುಬ್ಬಳ್ಳಿಯಲ್ಲಿ ಪೊಲೀಸ್ ಕಾರ್ಯಾಚರಣೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kudur: ಮನೆ ಕಳ್ಳತನ ಪ್ರಕರಣ; 24ಗಂಟೆಯಲ್ಲೇ ಕಳ್ಳರ ಹೆಡೆಮುರಿ ಕಟ್ಟಿದ ಕುದೂರು ಪೊಲೀಸರು
Allu Arjun: ನಟ ಅಲ್ಲು ಅರ್ಜುನ್ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ
Malpe: ಮನೆ ಮನೆಗಳಲ್ಲಿ ಕ್ಯಾರೋಲ್ ಗಾಯನ
Turkey: ಟೇಕ್ ಆಫ್ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು
87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.