ಸ್ವಂತ ಕಟ್ಟಡದ ಸಂಭ್ರಮದಲ್ಲಿ ಕಿಸಾನ್ ಸಂಘ
ಹುಬ್ಬಳ್ಳಿಯಲ್ಲಿ ದಕ್ಷಿಣ ಭಾರತದ ಮೊದಲ ಬಿಕೆಎಸ್ ರೈತ ಸೌಧ ; ರೈತರು-ದಾನಿಗಳ ದೇಣಿಗೆಯಿಂದಲೇ ನಿರ್ಮಾಣ
Team Udayavani, Nov 24, 2022, 3:02 PM IST
ಹುಬ್ಬಳ್ಳಿ: ಗೋ ಅಧಾರಿತ ಕೃಷಿ-ಸಾವಯವ ಕೃಷಿ ಮನನ ಸೇರಿದಂತೆ ರೈತ-ರಾಷ್ಟ್ರೀಯ ಹಿತಕ್ಕೆ ಪೂರಕ ತರಬೇತಿ ನಿಟ್ಟಿನಲ್ಲಿ ಭಾರತೀಯ ಕಿಸಾನ್ ಸಂಘ ರೈತರ ಹಾಗೂ ದಾನಿಗಳ ನೆರವಿನೊಂದಿಗೆ ದಕ್ಷಿಣ ಭಾರತದ ಮೊದಲ ಸ್ವಂತ ಕಟ್ಟಡದ ಸಂತಸದಲ್ಲಿದೆ. ದಕ್ಷಿಣ ಭಾರತದ ಏಕೈಕ ಸ್ವಂತ ಕಟ್ಟಡಕ್ಕೆ ಹುಬ್ಬಳ್ಳಿ ವೇದಿಕೆಯಾಗಿದೆ.
ಭಾರತೀಯ ಕಿಸಾನ್ ಸಂಘ ಜನ್ಮ ತಳೆದು ಸುಮಾರು 44 ವರ್ಷಗಳಾಗುತ್ತಿದ್ದರೂ ಮಧ್ಯಪ್ರದೇಶ, ಉತ್ತರ ಪ್ರದೇಶ ಸೇರಿದಂತೆ ಕೆಲ ರಾಜ್ಯಗಳಲ್ಲಿ ಸ್ವಂತ ಕಟ್ಟಡ ಹೊಂದಿದೆ. ರಾಜ್ಯದಲ್ಲಿ ಹಲವು ವರ್ಷಗಳಿಂದ ಭಾರತೀಯ ಕಿಸಾನ್ ಸಂಘ ಕಾರ್ಯನಿರ್ವಹಿಸುತ್ತ ಬಂದಿದೆಯಾದರೂ ಇದುವರೆಗೂ ತನ್ನದೇಯಾದ ಸ್ವಂತ ಕಟ್ಟಡ ಹೊಂದಿರಲಿಲ್ಲ. ಹುಬ್ಬಳ್ಳಿಯಲ್ಲಿ ಸ್ವಂತ ಕಟ್ಟಡ ನಿರ್ಮಿಸಬೇಕೆಂಬ ಹಲವು ವರ್ಷಗಳ ಭಾರತೀಯ ಕಿಸಾನ್ ಸಂಘ ಉತ್ತರ ಪ್ರಾಂತದ ಯತ್ನ ಇದೀಗ ಸಾಕಾರಗೊಂಡಿದೆಯಲ್ಲದೆ, ಹುಬ್ಬಳ್ಳಿಯಲ್ಲಿ ತಲೆ ಎತ್ತಿರುವ ರೈತ ಸೌಧ ಕಟ್ಟಡ ದಕ್ಷಿಣ ಭಾರತದ ಹಲವು ರಾಜ್ಯಗಳಿಗೆ ಮಾದರಿಯಾಗಿದ್ದು, ನ.24ರಂದು ಲೋಕಾರ್ಪಣೆಗೊಳ್ಳಲಿದೆ.
ಭಾರತೀಯ ಕಿಸಾನ್ ಸಂಘ(ಬಿಕೆಎಸ್) ರಾಷ್ಟ್ರೀಯ ಸ್ವಯಂ ಸಂಘದ ಭಾಗವಾಗಿ ಕಾರ್ಯನಿರ್ವಹಿಸುತ್ತಿದೆ. ಕರ್ನಾಟಕ ಸೇರಿದಂತೆ ದೇಶಾದ್ಯಂತ ತನ್ನ ಸಂಪರ್ಕ ಜಾಲ ಹೊಂದಿದ್ದು, ರೈತರ ಸಮಸ್ಯೆ, ರಾಷ್ಟ್ರೀಯ ಹಿತಕ್ಕೆ ಧಕ್ಕೆ ಇನ್ನಿತರ ವಿಷಯಗಳಿಗೆ ಸಂಬಂಧಿಸಿದಂತೆ ಜಾಗೃತಿ ಹಾಗೂ ಹೋರಾಟ ಮಾಡುತ್ತ ಬಂದಿದೆ. 1978ರಲ್ಲಿ ದತ್ತೋಪಂತ ತೇಂಗಡಿ ಅವರಿಂದ ಸ್ಥಾಪಿಸಲ್ಪಟ್ಟ ಬಿಕೆಎಸ್ ದೇಶದ ಸುಮಾರು 350ಕ್ಕೂ ಅಧಿಕ ಜಿಲ್ಲೆಗಳು 11ರಿಂದ 12 ಸಾವಿರ ಗ್ರಾಮಗಳಲ್ಲಿ ತನ್ನ ಸಂಪರ್ಕ ಹೊಂದಿದೆ.
ಭಾರತೀಯ ಕಿಸಾನ್ ಸಂಘ ಸಂಘ ಧ್ಯೇಯದಡಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಹೆಚ್ಚಿನ ಪ್ರಚಾರವಿಲ್ಲದೆ ರೈತ ಮಧ್ಯ ತನ್ನನ್ನು ತಾನು ತೊಡಗಿಸಿಕೊಂಡಿದೆ. ರಾಜಸ್ಥಾನದಲ್ಲಿ ಮೊದಲ ಶಾಖೆ ಆರಂಭವಾಗಿತ್ತು. 1979ರಲ್ಲಿ ರಾಜಸ್ಥಾನದ ಕೋಟಾದಲ್ಲಿ ನಡೆದ ಭಾರತೀಯ ಕಿಸಾನ್ ಸಂಘದ ಮೊದಲ ಅಖೀಲ ಭಾರತ ಸಮಾವೇಶಕ್ಕೆ ದೇಶದ ವಿವಿಧ ರಾಜ್ಯಗಳ 650ಕ್ಕೂ ಹೆಚ್ಚು ಪ್ರತಿನಿಧಿಗಳು ಪಾಲ್ಗೊಂಡು, ಸಂಘ ಕಾರ್ಯಚಟುವಟಿಕೆ ವಿಸ್ತರಣೆ, ರೈತರ ಸಂಘಟನೆ-ಜಾಗೃತಿಗೆ ಮುನ್ನಡೆ ಬರೆಯಲಾಗಿತ್ತು.
ಸಂಘ ಹಿನ್ನೆಲೆಯೊಂದಿಗೆ ಇದು ಬಿಜೆಪಿಯೊಂದಿಗೆ ಗಾಢ ನಂಟು ಹೊಂದಿದೆ ಎಂಬ ಅನಿಸಿಕೆಗಳ ನಡುವೆಯೂ ರೈತರಿಗೆ ಮಾರಕ ಕಾಯ್ದೆ, ನೀತಿ, ಕ್ರಮಗಳ ವಿಚಾರಕ್ಕೆ ಬಂದಾಗ ಬಿಜೆಪಿ ಅಧಿಕಾರ ಇದ್ದ ಕಡೆಗಳಲ್ಲಿಯೂ ಹೋರಾಟ ನಡೆಸಿದ ಉದಾಹರಣೆಗಳು ಸಾಕಷ್ಟು ಇವೆ. ಭಾರತೀಯ ಕಿಸಾನ್ 1981ರಲ್ಲಿ ಆಂಧ್ರಪದೇಶ ವಿಧಾನಸೌಧದ ಎದುರು ರೈತ ವಿರೋಧಿ ನೀತಿ ಖಂಡಿಸಿ ಭಾರತೀಯ ಕಿಸಾನ್ ಸಂಘ ನಡೆಸಿದ್ದ ಹೋರಾಟ ಹಸಿರು ಕ್ರಾಂತಿ ಅನುಷ್ಠಾನಗೊಂಡ ನಂತರದ ಅತಿದೊಡ್ಡ ಹೋರಾಟ ಎಂದು ಬಿಂಬಿತವಾಗಿದೆ. 1986-87ರಲ್ಲಿ ಗುಜರಾತ್‌ನಲ್ಲಿ ಹೋರಾಟದಲ್ಲಿ ಸುಮಾರು 4 ಲಕ್ಷ ರೈತರನ್ನು ಸೇರಿಸುವ ಸಾಧನೆ ತೋರಿತ್ತು.
ದಕ್ಷಿಣ ಭಾರತದ ಮೊದಲ ಸ್ವಂತ ಕಟ್ಟಡ: ಭಾರತೀಯ ಕಿಸಾನ್ ಸಂಘದ ದಕ್ಷಿಣ ಭಾರತದ ಮೊದಲ ಕಟ್ಟಡ ಹುಬ್ಬಳ್ಳಿಯಲ್ಲಿ ತಲೆ ಎತ್ತಿದೆ. ಸುಮಾರು 2,200 ಚದರ ಅಡಿಗಿಂತ ಹೆಚ್ಚಿನ ಜಾಗದಲ್ಲಿ ಕಟ್ಟಡ ಕಂಗೊಳಿಸುತ್ತಿದೆ. 2019ರ ನವೆಂಬರ್ 7ರಂದು ಆರಂಭವಾಗಿದ್ದ ಕಟ್ಟಡ ಇದೀಗ ರೈತರ ಬಳಕೆಗೆ ಸಜ್ಜುಗೊಂಡಿದೆ.
ರೈತರ-ದಾನಿಗಳ ದೇಣಿಗೆಯೊಂದಿಗೆ ನಿರ್ಮಾಣಗೊಂಡ ಮೊದಲ ಸ್ವಂತ ಕಟ್ಟಡ ಎಂಬ ಹೆಗ್ಗಳಿಕೆ ಹುಬ್ಬಳ್ಳಿ ಕಟ್ಟಡ ಹೊಂದಿದೆ. ಅಂದಾಜು 1 ಕೋಟಿ ರೂ.ವೆಚ್ಚದಲ್ಲಿ ನೆಲಮಹಡಿ ಸೇರಿದಂತೆ ಒಟ್ಟು 3 ಮಹಡಿ ಕಟ್ಟಡವನ್ನು ಇದು ಹೊಂದಿದೆ. ಮೇಲಿನ ಮಹಡಿಯಲ್ಲಿ 150-200 ರೈತರು ಕುಳಿತುಕೊಳ್ಳಬಹುದಾದ ಸಭಾಭವನ ಹೊಂದಿದೆ. ಮಧ್ಯದ ಮಹಡಿಯಲ್ಲಿ ರೈತರಿಗೆ ಉಪಹಾರ-ಭೋಜನಕ್ಕೆ ಅಡುಗೆ ತಯಾರಿಗೆ ಸ್ಥಳವಕಾಶ ಕಲ್ಪಿಸಲಾಗಿದೆ. ಇದಲ್ಲದೆ ಅತಿಥಿಗಳು ಯಾರಾದರು ಬಂದರೆ ಅವರು ಉಳಿದುಕೊಳ್ಳುವುದಕ್ಕೆ ಮೂರು ಕೋಣೆಗಳ ವ್ಯವಸ್ಥೆಯನ್ನು ಕಟ್ಟಡ ಹೊಂದಿದೆ.
ಬಿಕೆಎಸ್ ರೈತ ಸೌಧದಲ್ಲಿ ರೈತರಿಗೆ ಗೋ ಆಧಾರಿತ ಹಾಗೂ ಸಾವಯವ ಕೃಷಿ ಕಡೆಗೆ ಆಕರ್ಷಿಸುವ ನಿಟ್ಟಿನಲ್ಲಿ ಅಗತ್ಯ ತರಬೇತಿ, ಮಾರ್ಗದರ್ಶನ, ಭೂಮಿ ಫಲವತ್ತತೆ, ಪರಿಸರ ಮೇಲಾಗುವ ಪ್ರಯೋಜನ, ವಿಷಮುಕ್ತ ಕೃಷಿ ಅಗತ್ಯತೆ, ದೇಸಿ ಗೋವು ಸಾಕಣೆಯಿಂದ ದೊರೆಯುವ ಲಾಭ, ಸ್ವಾವಲಂಬಿ ಗ್ರಾಮ, ಸಮರ್ಥ ಭಾರತ ನಿರ್ಮಾಣ ನಿಟ್ಟಿನಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ತರಬೇತಿ ನೀಡಲಾಗುತ್ತದೆ.
ರೈತರೊಂದಿಗೆ ಸಂವಾದ, ತಜ್ಞರ ಮಾರ್ಗದರ್ಶನ, ರೈತರ ಸಮಾವೇಶಕ್ಕೆ ರೈತ ಸೌಧ ಕಟ್ಟಡ ವೇದಿಕೆಯಾಗಲಿದೆ. ಪರಸ್ಥಳಗಳಿಂದ ಹುಬ್ಬಳ್ಳಿಗೆ ಬಂದ ರೈತರ ವಾಸ್ತವ್ಯಕ್ಕೂ ಇದು ಆಸರೆಯಾಗಲಿದೆ. ಭಾರತೀಯ ಕೃಷಿ ಮೂಲಪುರುಷ ಎಂದೇ ಭಾವಿಸುವ ಬಲರಾಮನ ಆಳೆತ್ತರದ ಚಿತ್ರ ಹೊಂದಿರುವ ಭಾರತೀಯ ಕಿಸಾನ್ ಸಂಘದ ರೈತ ಸೌಧ ನ.24ರಿಂದ ಅನ್ನದಾತನ ಬಳಕೆಗೆ ತನ್ನನ್ನು ತಾನು ತೊಡಗಿಸಿಕೊಳ್ಳಲಿದೆ. ಇತರೆ ರಾಜ್ಯಗಳಿಗೆ ಸ್ವಂತ ಕಟ್ಟಡಕ್ಕೆ ಪ್ರೇರಣಾ ಶಕ್ತಿಯಾಗಲಿದೆ.
ಗೋ ಆಧಾರಿತ ಕೃಷಿ, ರೈತರ ಹಿತ ನಿಟ್ಟಿನಲ್ಲಿ ಸದಾ ಕಾರ್ಯನಿರ್ವಹಿಸುತ್ತಿರುವ ಭಾರತೀಯ ಕಿಸಾನ ಸಂಘ ಸ್ವಂತ ಕಟ್ಟಡ ಹೊಂದಬೇಕೆಂಬ ಕನಸು ರಾಜ್ಯದ ಅನೇರದ್ದಾಗಿತ್ತು. ಈ ನಿಟ್ಟಿನಲ್ಲಿ ಹಲವು ಕಡೆಗಳಲ್ಲಿ ಯತ್ನಗಳು ನಡೆದಿದ್ದವದರೂ, ಹುಬ್ಬಳ್ಳಿಯಲ್ಲಿ ಸಮುದಾಯ ಬಳಕೆ ಜಾಗ ದೊರೆತಿದ್ದರಿಂದ ರೈತ ಸೌಧ ನಿರ್ಮಾಣಕ್ಕೆ ಮುಂದಾದ ಸಂಘಕ್ಕೆ ಅನ್ನದಾತರು, ದಾನಿಗಳ ನೆರವು ಬಹುದೊಡ್ಡ ಉತ್ತೇಜನ ನೀಡಿತು. ಹಲವು ಹಿರಿಯರ ಮಾರ್ಗದರ್ಶನ ಜತೆಗೆ ಸಂಘದ ರಾಜ್ಯಾಧ್ಯಕ್ಷ ಭೀಮಸೇನ ಕೋಕರೆ, ಕಟ್ಟಡ ಸಮಿತಿ ಕಾರ್ಯಾಧ್ಯಕ್ಷ ರಮೇಶ ಕೊರವಿ, ಉತ್ತರ ಪ್ರಾಂತ್ಯ ಅಧ್ಯಕ್ಷ ವಿವೇಕ ಮೋರೆ ಸೇರಿದಂತೆ ಅನೇಕರ ಪರಿಶ್ರಮದ ಫಲವಾಗಿ ಸೌಧ ಎದ್ದು ನಿಂತಿದೆ. ಕಟ್ಟಡ ಕಾಮಗಾರಿ ಬಹುತೇಕ ಪೂರ್ಣಗೊಂಡು ಬಳಕೆಗೆ ಸಿದ್ಧವಿದ್ದು, ಕಂಪೌಂಡ್ ನಿರ್ಮಾಣ ಇನ್ನು ಬಾಕಿ ಇದೆ. ಹುಬ್ಬಳ್ಳಿಯಲ್ಲಿನ ರೈತ ಸೌಧ ದಕ್ಷಿಣ ಭಾರತದಕ್ಕೇ ಕೇಂದ್ರ ಬಿಂದುವಾಗಿ ಮಿಂಚುತ್ತಿದೆ ಎಂಬ ಸಂತಸ ನಮ್ಮೆಲ್ಲರದ್ದಾಗಿದೆ. ಇದರ ಹಿಂದಿನ ಹಲವರ ಪರಿಶ್ರಮ, ಶ್ರಮದಾನ, ದಾನಿಗಳ ನೆರವನ್ನು ಯಾವ ಕಾರಣಕ್ಕೂ ಮರೆಯುವಂತಿಲ್ಲ. -ಪುಟ್ಟಸ್ವಾಮಿ, ಭಾರತೀಯ ಕಿಸಾನ್ ಸಂಘ ಸಂಘಟನಾ ಕಾರ್ಯದರ್ಶಿ
-ಅಮರೇಗೌಡ ಗೋನವಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hubli: ಗ್ಯಾರಂಟಿ ಯೋಜನೆ ಹಣ ನಿರ್ಹವಣೆಗೆ ಬಿಪಿಎಲ್ ಕಾರ್ಡ್ ರದ್ದು: ವಿಜಯೇಂದ್ರ ಆರೋಪ
ತಮ್ಮದೇ ಮಕ್ಕಳ “ಅಪಹರಣ’ನಾಟಕವಾಡಿದ ಗೃಹಿಣಿಯರು
ಅನ್ನಭಾಗ್ಯ ಯೋಜನೆ ಮುನ್ನಡೆಸಲು ಸಾಧ್ಯವಾಗದೆ ಸರಕಾರ ಬಿಪಿಎಲ್ ಕಾರ್ಡು ರದ್ದು ಮಾಡಲು ಹೊರಟಿದೆ
Hubli: ಅಡವಿಸಿದ್ದೇಶ್ವರ ಮಠದ ಶ್ರೀ ಶಿವಲಿಂಗೇಶ್ವರ ಸ್ವಾಮೀಜಿ ಲಿಂಗೈಕ್ಯ
Hubli: ದಿವಾಳಿಯಾದ ಸರ್ಕಾರ ಬಿಪಿಎಲ್ ಕಾರ್ಡ್ ಕಡಿತ ಮಾಡುತ್ತಿದೆ: ಪ್ರಹ್ಲಾದ ಜೋಶಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.