ಹನಸಿಯಲ್ಲಿ ಕೋನರಡ್ಡಿ ಮುನಿಸು!
Team Udayavani, Jul 31, 2017, 12:46 PM IST
ನವಲಗುಂದ: ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ 50:50 ಅನುಪಾತದಲ್ಲಿ ಪ್ರಧಾನಮಂತ್ರಿ ಫಸಲ್ ಬೀಮಾ ಯೋಜನೆ ಜಾರಿ ಮಾಡಲಾಗಿದ್ದು, ಉಭಯ ಸರ್ಕಾರಗಳ ದಂದ್ವ ನೀತಿಯಿಂದಾಗಿ ರೈತರಿಗೆ ಬೆಳೆವಿಮೆ ಪರಿಹಾರ ವಿಳಂಬವಾಗುತ್ತಿದೆ. ಪರಿಣಾಮ ರೈತರು ಸಂಕಷ್ಟ ಎದುರಿಸುವಂತಾಗಿದೆ ಎಂದು ಶಾಸಕ ಎನ್.ಎಚ್. ಕೋನರಡ್ಡಿ ಅಸಮಾಧಾನ ವ್ಯಕ್ತಪಡಿಸಿದರು.
ಶನಿವಾರ ಸಂಜೆ ತಾಲೂಕಿನ ಹನಸಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಮೂರನೇ ಗ್ರಾಮ ವಾಸ್ತವ್ಯದ ವೇಳೆ 2.44 ಕೋಟಿ ವೆಚ್ಚದ ಹನಸಿ- ದಡೇರಕೊಪ್ಪ ರಸ್ತೆ ಡಾಂಬರೀಕರಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು. ಜಿಲ್ಲೆಯಲ್ಲಿ 86 ಸಾವಿರ ರೈತರು ಫಸಲ್ ಬೀಮಾ ಯೋಜನೆಯಡಿ ನೋಂದಾಯಿಸಿದ್ದರು.
ಅವರಿಗೆ 172 ಕೋಟಿ ರೂ. ವಿಮೆ ಪರಿಹಾರ ಮೊತ್ತ ನಿಗದಿಯಾಗಿದೆ. ಕೇಂದ್ರ ಸರ್ಕಾರ ತನ್ನ ಪಾಲಿನ ಹಣ ನೀಡಿದೆ ಎಂದು ಸಂಸದ ಪ್ರಹ್ಲಾದ ಜೋಶಿಯವರು ಹೇಳುತ್ತಿದ್ದಾರೆ. ಹಾಗಿದ್ದರೆ ಈವರೆಗೆ ನಮ್ಮ ರೈತರ ಬ್ಯಾಂಕ್ ಖಾತೆಗೆ ಹಣ ಏಕೆ ಜಮಾ ಆಗಿಲ್ಲ ಎಂದು ಉತ್ತರಿಸಬೇಕು. ಸರ್ಕಾರ ಟಾಟಾ ಎಐಜಿ ವಿಮಾ ಕಂಪನಿಗೆ ಬೆಳೆವಿಮೆ ಜವಾಬ್ದಾರಿ ನೀಡುವಾಗ ಸರಿಯಾದ ಮಾನದಂಡಗಳನ್ನು ಅನುಸರಿಸಿಲ್ಲ.
ಹೀಗಾಗಿ ತಾಂತ್ರಿಕ ಕಾರಣಗಳನ್ನು ಮುಂದಿಟ್ಟು ಕಂಪನಿ ರೈತರಿಗೆ ಬೆಳೆವಿಮೆ ಪಾವತಿಸುವಲ್ಲಿ ವಿಳಂಬ ಮಾಡುತ್ತಿದೆ. ಕೇಂದ್ರ ಸರ್ಕಾರ ಟಾಟಾ ಕಂಪನಿಯ ಕೈಗೊಂಬೆಯಂತೆ ವರ್ತಿಸುತ್ತಿದೆ ಎಂದು ಆರೋಪಿಸಿದರು. 172 ಕೋಟಿಯಲ್ಲಿ ಕೇವಲ 61 ಕೋಟಿ ರೂ. ಮಾತ್ರ ರೈತರ ಬ್ಯಾಂಕ್ ಖಾತೆಗೆ ಜಮೆ ಆಗಿದೆ.
ರಾಜ್ಯ ಸರ್ಕಾರ ರೈತರ ಸಮರ್ಪಕ ಮಾಹಿತಿ ನೀಡದ ಹಿನ್ನೆಲೆಯಲ್ಲಿ ಇನ್ನುಳಿದ 111 ಕೋಟಿಯಲ್ಲಿ 41.22 ಕೋಟಿ ರೂ. ರೈತರ ಬ್ಯಾಂಕ್ ಖಾತೆಗೆ ಈವರೆಗೆ ಜಮಾ ಆಗಿಲ್ಲ. ಮೆಣಸಿನಕಾಯಿ ಹಾಗೂ ಹತ್ತಿ ಬೆಳೆದ ರೈತರಿಗೆ 52 ಕೋಟಿ ರೂ. ನೀಡಬೇಕಿದ್ದು, ಮಲತಾಯಿ ಧೋರಣೆ ಸರಿಯಲ್ಲ. ಭತ್ತದ ಫಸಲಿನ ರೈತರಿಗೆ ಇನ್ನೂ 9.63 ಕೋಟಿ ರೂ. ಪಾವತಿಸಬೇಕಿದೆ. ಬೆಳೆವಿಮೆ ಸಮಸ್ಯೆ ಶೀಘ್ರ ಪರಿಹರಿಸದಿದ್ದರೆ ಜೆಡಿಎಸ್ ವತಿಯಿಂದ ಬೃಹತ್ ಹೋರಾಟ ಅನಿವಾರ್ಯವಾಗಲಿದೆ ಎಂದು ಎಚ್ಚರಿಸಿದರು.
ಆರತಿ-ಚಕ್ಕಡಿ ಮೆರವಣಿಗೆ: ಶಾಸಕರ ಗ್ರಾಮವಾಸ್ತವ್ಯಕ್ಕೆ ಹನಸಿ ಗ್ರಾಮಸ್ಥರಿಂದ ಉತ್ತಮ ಸ್ಪಂದನೆ ದೊರೆಯಿತು. ನೂರಾರು ರೈತರು ಅವರನ್ನು ಚಕ್ಕಡಿ ಮೆರವಣಿಗೆಯಲ್ಲಿ ಕರೆತಂದರು. ಗ್ರಾಮದ ಪ್ರವೇಶ ದ್ವಾರ ಬಳಿ ಮಹಿಳೆಯರು ಆರತಿ ಬೆಳಗಿ ಕೋನರಡ್ಡಿ ಅವರನ್ನು ಬರಮಾಡಿಕೊಂಡರು.
ಪೈಲ್ವಾನ್ ಮನೆಯಲ್ಲಿ ವಾಸ್ತವ್ಯ: ಮಾಜಿ ಪೈಲ್ವಾನ್‌ರಿಗೆ ಮಾಸಾಶನ ಕೊಡಿಸಲು ಶಾಸಕರಾಗುವ ಮುನ್ನ ಹೋರಾಟ ನಡೆಸಿದ್ದ ಕೋನರಡ್ಡಿ, ಹನಸಿಯ ಪೈಲ್ವಾನ್ ದಿ| ರುದ್ರಪ್ಪ ಮಡಿವಾಳರ ಮನೆಯಲ್ಲಿ ವಾಸ್ತವ್ಯ ಮಾಡಿದರು. ಮಧ್ಯರಾತ್ರಿ 12:30ರ ವರೆಗೆ ಗ್ರಾಮಸ್ಥರು ಹಾಗೂ ವಿವಿಧ ಮಹಿಳಾ ಮಂಡಳಿಗಳ ಬೇಡಿಕೆ ಆಲಿಸಿದರು.
ಹನಸಿ ಶಾಲೆ ಹಾಗೂ ಶಿರೂರ ಗ್ರಾಮದ ಶಾಲೆಗೆ ತಲಾ 4 ಕೊಠಡಿಗಳ ನಿರ್ಮಾಣಕ್ಕೆ ಪ್ರತ್ಯೇಕವಾಗಿ 29 ಲಕ್ಷ ರೂ. ಅನುದಾನ ಬಿಡುಗಡೆಗೊಳಿಸಲಾಗಿದ್ದು, ಶೀಘ್ರದಲ್ಲಿಯೇ ಟೆಂಡರ್ ಪ್ರಕ್ರಿಯೆ ಮುಗಿಸಿ, ಭೂಮಿಪೂಜೆ ನೆರವೇರಿಸಲಾಗುವುದು. ಇನ್ನುಳಿದ ಆರು ಕೊಠಡಿಗಳ ಬೇಡಿಕೆ ಈಡೇರಿಕೆಗೆ ಮುಂದಿನ ದಿನಗಳಲ್ಲಿ ಯತ್ನಿಸುವುದಾಗಿ ಶಾಸಕರು ಗ್ರಾಮಸ್ಥರಿಗೆ ಭರವಸೆಯಿತ್ತರು.
ತಾಪಂ ಸದಸ್ಯರಾದ ಮಹಾದೇವಿ ಉಗರಗೋಳ, ಮಲ್ಲಪ್ಪ ಕುರಹಟ್ಟಿ, ಶಿರಕೋಳ ಗ್ರಾಪಂ ಅಧ್ಯಕ್ಷ ಪರಪ್ಪ ಗಾಣಗೇರ, ಮಂಜು ಜಕಾತಿ, ವೀರಣ್ಣ ನೀರಲಗಿ, ಎಂ.ಎಸ್. ರೋಣದ, ಶೀವಲೀಲಾ ಬೋರಶೆಟ್ಟರ, ಮಲ್ಲಿಕಾಜಪ್ಪ ಜಕಾತಿ, ವೀರಪ್ಪ ಮುಗಳಿ, ಶರಣು ಹಿರೇಮಠ ಯಮನೂರ, ಉಮೇಶ ಜಕಾತಿ,
-ಮಲ್ಲಿಕಾರ್ಜುನ ಗುಜ್ಜಳ, ಮಲ್ಲಿಕಾರ್ಜುನ ಜಾಲಕ್ಕನವರ, ರಾಚಯ್ಯ ಚಿಕ್ಕಮಠ, ಶಿವಪ್ಪ ಗುಜ್ಜನವರ, ಫಕ್ಕೀರೇಶ ಮಡಿವಾಳವರ, ಗುರನಗೌಡ ಪಾಟೀಲ, ಈರಪ್ಪ ಮಾಳವಾಡ, ರಾಮಣ್ಣ ನಾಯ್ಕರ್, ಸುರೇಶ ಕೇಸರಿ, ತಹಶೀಲ್ದಾರ್ ನವೀನ್ ಹುಲ್ಲೂರ, ತಾಪಂ ಇಒ ಜಿ.ಡಿ. ಜೋಶಿ, ಎಂ.ಎಲ್. ಪಾಟೀಲ ಇತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mangaluru: ಮಿದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯ ಅಂಗಾಂಗ ದಾನ
Vijayapura: ಕರ್ನಾಟಕ ಸಾವಿನ ಮನೆಯಾಗಿದೆ: ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ
Viral: ಇದು ಇರುವೆಗಳ ಎಂಜಿನಿಯರಿಂಗ್ ಕೌಶಲ್ಯ! ನೀರು ದಾಟಲು ಇರುವೆಗಳ ಸೇತುವೆ ನಿರ್ಮಾಣ
Indian Cricket: ಕ್ರಿಕೆಟ್ ಜೀವನಕ್ಕೆ ಗುಡ್ ಬೈ ಹೇಳಿದ ಆರ್‌ಸಿಬಿ ಮಾಜಿ ಆಟಗಾರ
Nature: ಶ್ರೀಮಂತನಾದರೂ, ಬಡವನಾದರೂ ಪ್ರಕೃತಿಗೆ ಅವಲಂಬಿಯೇ ಅಲ್ಲವೇ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.