ಹುಯ್ಯೋ..ಹುಯ್ಯೋ..ಮಳೆರಾಯ
ಜಿಲ್ಲೆಯಲ್ಲಿವೆ 1200ಕ್ಕೂ ಅಧಿಕ ಕೆರೆಗಳು
Team Udayavani, Aug 2, 2020, 10:25 AM IST
ಸಾಂದರ್ಭಿಕ ಚಿತ್ರ
ಧಾರವಾಡ: ಒಣಗಿ ಹೋಗಿರುವ ಕೆರೆಯ ಮಡಿಲು ತುಂಬದ ಗಂಗಾಮಾತೆ, ಭತ್ತದ ಗದ್ದೆಗಳಲ್ಲಿ ಚಿಲಕ್ ನೀರು ಇಲ್ಲದಂತಾದರೂ ಕರುಣೆ ತೋರದ ವರುಣ, ಭರ್ಜರಿ ಬೆಳೆಗಳಿದ್ದರೂ ಇನ್ನಷ್ಟು ತೇವಾಂಶವಿಲ್ಲದೇ ಸೊರಗುವ ಆತಂಕ, ಒಟ್ಟಿನಲ್ಲಿ ಹುಯ್ಯೋ ಹುಯ್ಯೋ ಮಳೆರಾಯ ಬೆಳೆಗಳಿಗೆ ನೀರಿಲ್ಲ…ಎನ್ನುತ್ತಿದ್ದಾರೆ ಅನ್ನದಾತರು.
ಆದರಿ ಮಳೆ ಕೈಯಲ್ಲಿ ಆರು ಮಳೆ ಎನ್ನುವ ರೈತರ ಮಾತು ನಿಜವೇ ಆಗಿದ್ದು, ಕಳೆದ ತಿಂಗಳ ಮಧ್ಯಭಾಗದಿಂದ ಈ ವರೆಗೂ ಸುರಿದ ಆದರಿ ಮಳೆಯ ಪ್ರಮಾಣವೇ ಈ ವರ್ಷದ ಮಳೆ ಇಷ್ಟೇ ಎಂಬುದನ್ನು ಸಾಂಕೇತಿಕರಿಸುತ್ತಿದೆ. ಕಳೆದ ವರ್ಷ ಇಷ್ಟೊತ್ತಿಗಾಗಲೇ ಜಿಲ್ಲೆಯ ಎಲ್ಲಾ ಕೆರೆಯಂಗಳದಲ್ಲಿ ವರುಣ ನರ್ತನವಾಡಿ ಅರ್ಧದಷ್ಟು ಕೆರೆಗಳು ಕೋಡಿ ಬಿದ್ದಾಗಿತ್ತು. ಆದರೆ ಈ ವರ್ಷ ಹೊಲ ಮತ್ತು ಬೆಳೆ ಮಟ್ಟಿಗೆ ಮಾತ್ರ ಮಳೆ ಕೊಂಚ ಕೈ ಹಿಡಿದಿದ್ದು, ಹಳ್ಳ, ಕೊಳ್ಳ, ಕೆರೆ ಕುಂಟೆಗಳಲ್ಲಿ ನೀರೇ ಇಲ್ಲವಾಗಿದೆ. ಮುಂದಿನ ಮಳೆಗಳು ಸರಿಯಾಗಿ ಸುರಿಯದೇ ಹೋದರೆ ಮತ್ತೆ ಬೇಸಿಗೆ ಕಾಲಕ್ಕೆ ನೀರಿನ ಹಾಹಾಕಾರ ಉಂಟಾಗುವುದು ನಿಶ್ಚಿತವಾದಂತಾಗಿದೆ.
ಜುಲೈ ತಿಂಗಳಿನಲ್ಲಿ 131 ಮಿಮೀ ವಾಡಿಕೆ ಮಳೆಯಾಗಬೇಕಿತ್ತು. ಆದರೆ 121 ಮಿಮೀ ಮಾತ್ರ ಸುರಿದಿದೆ. ಇನ್ನು ಆಗಸ್ಟ್ ತಿಂಗಳ ಮೊದಲ ವಾರದಲ್ಲಿ ಕಳೆದ ವರ್ಷ ವರುಣ ಆರ್ಭಟಿಸಿದ್ದ. ಈ ವರ್ಷವೂ ಆರ್ಭಟಿಸಿದರೂ ಪರವಾಗಿಲ್ಲ, ಆದರೆ ಚೆನ್ನಾಗಿ ಕೆರೆಕಟ್ಟೆಗಳಲ್ಲಿ ನೀರು ತುಂಬಿಕೊಳ್ಳುವಷ್ಟಾದರೂ ಮಳೆಯಾಗಬೇಕು ಎಂದು ಚಾತಕ ಪಕ್ಷಿಗಳಿಂದ ಕಾಯುತ್ತಿದ್ದಾರೆ ರೈತರು.
ಸಣ್ಣ ನೀರಾವರಿಗೆ ಕುತ್ತು: ಜಿಲ್ಲೆಯಲ್ಲಿ 112ಕ್ಕೂ ಹೆಚ್ಚು ಕೆರೆಗಳು ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಗೆ ಬರುತ್ತಿದ್ದು, ಈ ಕೆರೆಗಳಿಂದ 1.11 ಲಕ್ಷ ಎಕರೆ ಪ್ರದೇಶಕ್ಕೆ ನೀರು ಪೂರೈಕೆಯಾಗುತ್ತಿತ್ತು. ಇದೀಗ ಸಣ್ಣ ನೀರಾವರಿ ವ್ಯಾಪ್ತಿಯ ಒಂದೇ ಒಂದು ಕೆರೆಯೂ ಕೋಡಿ ಬಿದ್ದಿಲ್ಲ. ಪೂರ್ಣ ಭರ್ತಿ ಕೂಡ ಆಗಿಲ್ಲ. ಹೀಗಾಗಿ ಕೆರೆಗಳನ್ನು ಅವಲಂಬಿಸಿ ಭತ್ತ ಬೆಳೆಯುತ್ತಿದ್ದ ಧಾರವಾಡ ಮತ್ತು ಕಲಘಟಗಿ ತಾಲೂಕಿನ 87 ದೊಡ್ಡ ಕೆರೆಗಳು ಸಂಪೂರ್ಣ ಖಾಲಿಯಾಗಿದ್ದು, ಅವುಗಳ ಮಡಿಲಲ್ಲಿ ಒಂದಡಿ ನೀರು ಕೂಡ ಶೇಖರಣೆಯಾಗಿಲ್ಲ. ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿ ಅಂಕಿ ಸಂಖ್ಯೆ ಪ್ರಕಾರ ಜಿಲ್ಲೆಯಲ್ಲಿರುವ 417 ಕೆರೆಗಳಲ್ಲಿ ಅರ್ಧಕ್ಕಿಂತ ಹೆಚ್ಚು ಕೆರೆಗಳು ಸಂಪೂರ್ಣ ಖಾಲಿಯಾಗಿವೆ. ಇನ್ನು ಧಾರವಾಡ ಜಿ.ಪಂ.ವ್ಯಾಪ್ತಿಯಲ್ಲಿನ 305 ಕೆರೆಗಳಲ್ಲಿಯೂ ನೀರಿಲ್ಲ. ಇನ್ನು ತಾಲೂಕುಗಳ ಅನ್ವಯ ಧಾರವಾಡ- 62, ಹುಬ್ಬಳ್ಳಿ-41, ಕಲಘಟಗಿ-66, ಕುಂದಗೋಳ-77,ನವಲಗುಂದ-59 ಕೆರೆಗಳ ಪೈಕಿ ಶೇ.70 ಕೆರೆಗಳು ಸಂಪೂರ್ಣ ಖಾಲಿಯಾಗಿವೆ.
ಕೆರೆ ಭರಣ ಅನಿವಾರ್ಯ: ಜಿಲ್ಲೆಯಲ್ಲಿ ಮಳೆಗಾಲದ ಮೂರು ತಿಂಗಳು ಮಾತ್ರವೇ ಚೆನ್ನಾಗಿ ತುಂಬಿ ಹರಿಯುವ ತುಪರಿಹಳ್ಳ, ಬೆಣ್ಣೆಹಳ್ಳ ಮತ್ತು ಬೇಡ್ತಿಹಳ್ಳದಿಂದ ಜಿಲ್ಲೆಯ 140ಕ್ಕೂ ಅಧಿಕ ಕೆರೆಗಳನ್ನು ತುಂಬಿಸುವ ಯೋಜನೆ ಹಲವು ದಶಕಗಳಿಂದ ಚರ್ಚೆಯಲ್ಲಿದೆ. ಆದರೆ ಈ ವರೆಗೂ ಜಾರಿಗೆ ಬಂದಿಲ್ಲ. ಸದ್ಯಕ್ಕೆ ತುಪರಿ ಹಳ್ಳದಿಂದ 10 ಸಾವಿರ ಎಕರೆಯಷ್ಟು ಭೂಮಿ ನೀರಾವರಿ ಮಾಡುವ ಮತ್ತು 13 ಹಳ್ಳಿಗಳ ಕೆರೆ ತುಂಬುವ ಯೋಜನೆ ಸಮೀಕ್ಷೆ ಹಂತದಲ್ಲಿದೆ. ಆದರೆ ಬೇಡ್ತಿಹಳ್ಳದಿಂದ ಕೆರೆ ತುಂಬಿಸುವ ಯೋಜನೆ ನನೆಗುದಿಗೆ ಬಿದ್ದಿದೆ.
2015ರಲ್ಲಿ ವಾಡಿಕೆಗಿಂತ ಶೇ.9 ಕೊರತೆಯಾಗಿತ್ತು. 2016ರಲ್ಲಿ ವಾಡಿಕೆಗಿಂತ ಶೇ.16 ಕೊರತೆ, 2017ರಲ್ಲಿ ವಾಡಿಕೆಗಿಂತ ಶೇ.39 ಕೊರತೆ 2018ರಲ್ಲಿ ಶೇ.24 ಮಳೆ ಕೊರತೆಯಾಗಿತ್ತು. 2019 ಜುಲೈ ಅಂತ್ಯಕ್ಕೆ ವಾಡಿಕೆಗಿಂತ 139 ಮಿಮೀ ಮಳೆ ಅಧಿಕ, 2020ರ ಜುಲೈ ಅಂತ್ಯದ ವರೆಗೆ 149 ಮಿಮೀ ಆಗಬೇಕಿತ್ತು. ಆದರೆ ಮಳೆಯ ಕೊರತೆ ಎದುರಾಗಿದೆ. ಮಳೆಯ ಲೆಕ್ಕಾಚಾರದಲ್ಲಿ ಹತ್ತು ವರ್ಷಗಳಲ್ಲಿ ಒಂದು ಬಾರಿ ಮಾತ್ರ ಕೆರೆಗಳು ತುಂಬುತ್ತಿವೆ. ಹೀಗಾಗಿ ಹೊರಗಡೆಯಿಂದ ನೀರು ತಂದು ತುಂಬಿಸುವುದೇ ಮುಂದಿನ ದಿನಗಳಲ್ಲಿ ಅನಿವಾರ್ಯ ಎನ್ನುತ್ತಿದ್ದಾರೆ ನೀರಾವರಿ ತಜ್ಞರು ಮತ್ತು ರೈತರು.
ಹಿಡಿದಿಡಲಿಲ್ಲ ಕಳೆದ ವರ್ಷ: ಕಳೆದ ವರ್ಷ ಸುರಿದ ವಿಪರೀತ ಮಳೆಯಿಂದ ಜಿಲ್ಲೆಯಲ್ಲಿ 15 ಟಿಎಂಸಿ ಅಡಿಯಷ್ಟು ನೀರು ತುಪರಿ, ಬೆಣ್ಣೆ, ಬೇಡ್ತಿ, ಸಣ್ಣಹಳ್ಳ, ಶಾಲ್ಮಲಾ ಕೊಳ್ಳದ ಮೂಲಕ ಸುಖಾಸುಮ್ಮನೆ ಹರಿದು ಹೋಯಿತು. 10 ಸಾವಿರದಷ್ಟು ಕೃಷಿ ಹೊಂಡಗಳಲ್ಲಿ ಕೊಂಚ ನೀರು ಹಿಡಿದಿಟ್ಟುಕೊಂಡಿದ್ದರಿಂದ ಮತ್ತು ಚೆಕ್ ಡ್ಯಾಂಗಳಲ್ಲಿ ನೀರು ಶೇಖರಣೆಯಾಗಿದ್ದರಿಂದ ಅಂತರ್ಜಲ ಸದ್ಯಕ್ಕೆ ರೈತರ ಕೈ ಹಿಡಿದಿದೆ. ಕೊಳವೆಬಾವಿಗಳು ಒಂದಿಷ್ಟು ನೀರು ಹೊರಗೆ ಹಾಕುತ್ತಿವೆ.
ಕೆರೆಯಂಗಳದಲ್ಲಿ ಶೇ.20 ನೀರಿಲ್ಲ : ಜಿಲ್ಲೆಯಲ್ಲಿ ಒಂದೇ ಒಂದು ನದಿ ಹರಿವು ಇಲ್ಲ. ಇಲ್ಲಿರುವುದು ಬರೀ ಕೆರೆಕುಂಟೆಗಳು, ಹಳ್ಳ ತೊರೆಗಳು, ಕೃಷಿ ಹೊಂಡಗಳು ಮತ್ತು ಚೆಕ್ ಡ್ಯಾಂಗಳು. ಇವು ತುಂಬಿ ಹರಿದರೆ ಕೃಷಿ, ಹೈನುಗಾರಿಕೆ, ಮೇಕೆ ಸಾಕಾಣಿಕೆ ಸೇರಿದಂತೆ ಎಲ್ಲದಕ್ಕೂ ಅನುಕೂಲ. ಕಳೆದ ವರ್ಷದ ದೈತ್ಯ ಮಳೆಗೆ ಕೆಲವು ಕೆರೆಯ ಮಡಿಲು ಈಗಲೂ ಹಸಿಯಾಗಿವೆ. ಕಳೆದ ವರ್ಷ ಸುರಿದ ಅರ್ಧದಷ್ಟು ಮಳೆಯಾದರೂ ಸಾಕು ಕೆರೆಯಂಗಳ ವರ್ಷದ ಬೇಸಿಗೆ ವರೆಗೆ ನೀರು ಹಿಡಿದಿಟ್ಟುಕೊಳ್ಳುತ್ತವೆ. ಆದರೆ ಮಳೆ ತೀವ್ರತೆ ಪಡೆದುಕೊಳ್ಳುತ್ತಲೇ ಇಲ್ಲ. ಜುಲೈ ಮತ್ತು ಆಗಸ್ಟ್ ಎರಡು ತಿಂಗಳಲ್ಲಿ ಸುರಿಯುವ ಮಳೆಗೆ ಕೆರೆಯಂಗಳಗಳು ಹೆಚ್ಚು ತುಂಬಿಕೊಳ್ಳುತ್ತವೆ. ಆದರೆ ಜುಲೈ ಮುಗಿದರೂ ಜಿಲ್ಲೆಯ 700ಕ್ಕೂ ಅಧಿಕ ಕೆರೆಯಂಗಳದಲ್ಲಿ ಶೇ.20 ನೀರಿಲ್ಲ.
ವಿದ್ಯುತ್ ಉತ್ಪಾದನೆ ನೆಪದಲ್ಲಿ ಕಾಳಿನದಿಯಿಂದ ಟಿಎಂಸಿಗಟ್ಟಲೇ ನೀರು ಸುಖಾಸುಮ್ಮನೆ ಹರಿದು ಸಮುದ್ರ ಸೇರುತ್ತಿದೆ. ಈ ಪೈಕಿ ಶೇ.2 ನೀರು ಪೂರ್ವಭಾಗದ ಧಾರವಾಡ ಜಿಲ್ಲೆಯತ್ತ ಮುಖ ಮಾಡಿದರೆ ಸಾಕು ಇಲ್ಲಿನ ಎಲ್ಲಾ ಕೆರೆಗಳಿಗೂ ಸಮೃದ್ಧವಾಗಿ ನೀರು ತುಂಬಿಕೊಳ್ಳುತ್ತದೆ. ಮಳೆ ಜೂಜಾಟ ನೋಡಿ ರೈತರಿಗೆ ಸಾಕಾಗಿದೆ. ಇನ್ನಾದರೂ ಕಾಳಿನದಿ ನೀರನ್ನು ಜಿಲ್ಲೆಯ ಕೆರೆ ತುಂಬಿಸುವುದಕ್ಕೆ ಸರ್ಕಾರ ಕ್ರಮ ವಹಿಸಬೇಕು.- ಶ್ರೀಶೈಲಗೌಡ ಕಮತರ, ಕೆರೆ ಉಳಿಸಿ ಹೋರಾಟ ಸಮಿತಿ ಸದಸ್ಯ
ಇಷ್ಟೊತ್ತಿಗಾಗಲೇ ಕೆರೆಕುಂಟೆಗಳಲ್ಲಿ ತಕ್ಕಮಟ್ಟಿಗೆ ನೀರು ಸಂಗ್ರಹವಾಗಬೇಕಿತ್ತು. ಆದರೆ ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳಿನಲ್ಲಿ ಭಾರಿ ಮಳೆ ಸುರಿಯುವ ಮುನ್ಸೂಚನೆ ಇದೆ. ಈ ವರ್ಷ ಬೆಳೆಗಳ ಮಟ್ಟಿಗೆ ಮಳೆ ರೈತರ ಕೈ ಹಿಡಿದಿದೆ. ಆದರೆ ಕೆರೆಕುಂಟೆಗಳಲ್ಲಿ ನೀರಿಲ್ಲದೇ ಇರುವುದು ವಿಷಾದನೀಯ. – ಡಾ| ರವಿ ಪಾಟೀಲ, ಪ್ರಾಧ್ಯಾಪಕರು, ಕೃಷಿ ವಿವಿ ಹವಾಮಾನ ಅಧ್ಯಯನ ವಿಭಾಗ
-ಡಾ| ಬಸವರಾಜ ಹೊಂಗಲ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kundgol: ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಬೈಕ್; ಸವಾರರು ಕಣ್ಮರೆ
Hubli: ಗ್ಯಾರಂಟಿ ಯೋಜನೆ ಹಣ ನಿರ್ಹವಣೆಗೆ ಬಿಪಿಎಲ್ ಕಾರ್ಡ್ ರದ್ದು: ವಿಜಯೇಂದ್ರ ಆರೋಪ
ತಮ್ಮದೇ ಮಕ್ಕಳ “ಅಪಹರಣ’ನಾಟಕವಾಡಿದ ಗೃಹಿಣಿಯರು
ಅನ್ನಭಾಗ್ಯ ಯೋಜನೆ ಮುನ್ನಡೆಸಲು ಸಾಧ್ಯವಾಗದೆ ಸರಕಾರ ಬಿಪಿಎಲ್ ಕಾರ್ಡು ರದ್ದು ಮಾಡಲು ಹೊರಟಿದೆ
Hubli: ಅಡವಿಸಿದ್ದೇಶ್ವರ ಮಠದ ಶ್ರೀ ಶಿವಲಿಂಗೇಶ್ವರ ಸ್ವಾಮೀಜಿ ಲಿಂಗೈಕ್ಯ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.