ದೇವರಿಗೇ ಪ್ರೀತಿ ಹಿರೇಪೇಟ ರಸ್ತೆ ಸ್ಥಿತಿ!
Team Udayavani, Apr 24, 2017, 2:59 PM IST
ಹುಬ್ಬಳ್ಳಿ: ಹಿರೇಪೇಟ ರಸ್ತೆಗಳ ದುರ್ಗತಿ ನೋಡಿದರೆ ಮಾರುಕಟ್ಟೆ ಪ್ರದೇಶ ಮಹಾನಗರ ಪಾಲಿಕೆ ವ್ಯಾಪ್ತಿಗೆ ಬರುತ್ತದೆಯೋ ಇಲ್ಲವೋ ಎಂಬ ಸಂದೇಹ ಮೂಡುತ್ತದೆ. ಹುಬ್ಬಳ್ಳಿ ನಗರದ ಕೇಂದ್ರ ಸ್ಥಾನವಾಗಿರುವ ಹಿರೇಪೇಟ ಮಾರುಕಟ್ಟೆ ಪ್ರದೇಶ ಪಾಲಿಕೆಯ ನಿರ್ಲಕ್ಷ್ಯಕ್ಕೆ ಒಳಗಾಗಿದ್ದು, ರಸ್ತೆಯ ದುಸ್ಥಿತಿಯಿಂದಾಗಿ ವ್ಯಾಪಾರಸ್ಥರು, ನಿವಾಸಿಗಳು ಪಾಲಿಕೆಗೆ ಹಿಡಿಶಾಪ ಹಾಕುತ್ತಿದ್ದಾರೆ.
ಹು-ಧಾ ಮಹಾನಗರ ಪಾಲಿಕೆಗೆ ಅನುದಾನ ಹರಿದು ಬರುತ್ತಿದೆ. ಸ್ಮಾರ್ಟ್‌ಸಿಟಿ ಹಾಗೂ ಕೇಂದ್ರ ಸರಕಾರದ ಅಮೃತ ಯೋಜನೆಗೂ ಆಯ್ಕೆಯಾಗಿದೆ. ಇಷ್ಟೆಲ್ಲಾ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿದ್ದರೂ ಹಿರೇಪೇಟ ರಸ್ತೆ ಸುಧಾರಣೆಯಾಗುತ್ತಿಲ್ಲ. ಪಾಲಿಕೆ ವಾರ್ಡ್ ನಂ.55ರಲ್ಲಿ ಬರುವ ಹಿರೇಪೇಟ, ಭೂಸಪೇಟ, ಬಮ್ಮಾಪುರ ಓಣಿಯಲ್ಲಿ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿಲ್ಲ.
ಪಾಲಿಕೆ ಕರ ಸಂದಾಯಕ್ಕೆ ಮಾತ್ರ ಸೀಮಿತವಾಗಿದೆಯೇ ಎಂಬ ಪ್ರಶ್ನೆ ಇಲ್ಲಿನ ಜನರಿಗೆ ಕಾಡುತ್ತಿದೆ. ಈ ಕುರಿತು ಹಲವು ಬಾರಿ ಶಾಸಕರು, ಪಾಲಿಕೆ ಸದಸ್ಯರನ್ನು ಭೇಟಿ ಮಾಡಿ ಸಮಸ್ಯೆ ಹೇಳಿಕೊಂಡರೂ ಯಾವುದೇ ಪ್ರಯೋಜನವಾಗಿಲ್ಲ. ಇದರಿಂದ ರೋಸಿ ಹೋದ ನಿವಾಸಿಗಳು ಪ್ರತಿಭಟನೆ ಮಾಡಲು ಸಜ್ಜಾಗಿದ್ದಾರೆ.
ಜನಪ್ರತಿನಿಧಿಗಳ ಮಾತಿಗಿಲ್ಲ ಕಿಮ್ಮತ್ತು: ಇತ್ತೀಚಿಗೆ ಹಿರೇಪೇಟ, ಬಮ್ಮಾಪುರ ಓಣಿಗೆ ಭೇಟಿ ನೀಡಿದ ಶಾಸಕ ಪ್ರಸಾದ ಅಬ್ಬಯ್ಯ, ಸದ್ಯ ನಡೆಯಬೇಕಾದ ಕಾಮಗಾರಿಗಳ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದು ಕೂಡಲೇ ಕಾರ್ಯ ರೂಪಕ್ಕೆ ತರುವಂತೆ ಸೂಚನೆ ನೀಡಿದ್ದರು.
ನ್ಯೂ ಇಂಗ್ಲಿಷ್ ಸ್ಕೂಲ್‌ನಿಂದ ಘಂಟಿಕೇರಿ ಪೊಲೀಸ್ ಠಾಣೆವರೆಗೆ ರಸ್ತೆ ಡಾಂಬರೀಕರಣಕ್ಕೆಂದು 68ಲಕ್ಷ ರೂ.ಗಳನ್ನು ಬಿಡುಗಡೆ ಮಾಡುವುದಾಗಿ ತಿಳಿಸಿ ಹೋಗಿದ್ದರು. ಆದರೆ ಭರವಸೆ ಭರವಸೆಯಾಗಿಯೇ ಉಳಿದಿದೆ ಹೊರತು ಯಾವುದೇ ಕೆಲಸಗಳು ಆರಂಭಗೊಂಡಿಲ್ಲ.
ಶಾಸಕರ ಸೂಚನೆಗೆ ಕಿಮ್ಮತ್ತು ನೀಡದ ಅಧಿಕಾರಿಗಳು ಆ ಪ್ರದೇಶದತ್ತ ತಲೆ ಕೂಡಾ ಹಾಕಿಲ್ಲ. ಸ್ಥಳೀಯರು ದೂರವಾಣಿ ಕರೆ ಮಾಡಿದಾಗ ಸುಳ್ಳು ಭರವಸೆ ನೀಡುವ ಮೂಲಕ ಕಾಲಹರಣ ಮಾಡುತ್ತಿದ್ದಾರೆ. ಇನ್ನು ಪಾಲಿಕೆ ಸದಸ್ಯ ಶಿವು ಮೆಣಸಿನಕಾಯಿ ಕಾಮಗಾರಿ ಆರಂಭಗೊಳ್ಳಲಿದೆ ಎಂದು ಹೇಳುತ್ತಲೇ ಇದ್ದಾರೆ.
ಹೊರತು ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ. ಶಾಸಕರು ಸ್ಪಂದಿಸುತ್ತಿಲ್ಲ, ಪಾಲಿಕೆ ಸದಸ್ಯರೂ ನೀಡಿದ ಭರವಸೆ ಈಡೇರಿಸುತ್ತಿಲ್ಲ. ಪಾಲಿಕೆ ಅಧಿಕಾರಿಗಳು ಮಾತು ಕೇಳುತ್ತಿಲ್ಲ. ಗುತ್ತಿಗೆದಾರರು ಸರಿಯಾಗಿ ಕೆಲಸ ಮಾಡುತ್ತಿಲ್ಲ. ವಾರ್ಡ್‌ನ ಹಲವೆಡೆ ಅರ್ಧಂಬರ್ಧ ಕೆಲಸ ಮಾಡಿ ಕೈ ಬಿಡಲಾಗಿದೆ ಎಂದು ನಾಗರಿಕರು ಅಸಮಾಧಾನ ವ್ಯಕ್ತಪಡಿಸುತ್ತಾರೆ.
ಪಾಲಿಕೆಯಿಂದ ಇತ್ತೀಚೆಗೆ ಗುಂಡಿ ಮುಚ್ಚುವ ತೇಪೆ ಕಾರ್ಯ ಆರಂಭಿಸಲಾಯಿತು. ಆದರೆ ಅದನ್ನು ಕೂಡಾ ಸಂಪೂರ್ಣವಾಗಿ ಮಾಡದೇ ಪಿ.ಬಿ.ರಸ್ತೆಯಿಂದ ಗುರುಸಿದ್ದೇಶ್ವರ ಕಲ್ಯಾಣ ಮಂಟಪದವರೆಗೆ ಮಾಡಿ ಅರ್ಧಕ್ಕೆ ನಿಲ್ಲಿಸಲಾಯಿತು. ಇನ್ನಾದರೂ ಈ ಭಾಗದ ರಸ್ತೆಗಳ ಅಭಿವೃದ್ಧಿಗೆ ಮುಂದಾಗಬೇಕಿದೆ.
* ಬಸವರಾಜ ಹೂಗಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Actor Darshan: 6 ತಿಂಗಳ ಬಳಿಕ ದರ್ಶನ್ ಭೇಟಿ: ಪವಿತ್ರಾ ಭಾವುಕ
Nimma Vasthugalige Neeve Javaabdaararu review: ಜವಾಬ್ದಾರಿಯಿಂದ ಸಿನಿಮಾ ನೋಡಿ
Bangladesh: ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಹೇಳಿದ ತಮೀಮ್ ಇಕ್ಬಾಲ್
Mangaluru: ಹಿಂದಿ ರಾಷ್ಟ್ರ ಭಾಷೆ ಅಲ್ಲ… ಆರ್.ಅಶ್ವಿನ್ ಹೇಳಿಕೆಗೆ ಅಣ್ಣಾಮಲೈ ಹೇಳಿದ್ದೇನು?
Mudhol: ರೈತರ ಜಮೀನಿನಲ್ಲಿ ಮೊಸಳೆ ಪ್ರತ್ಯಕ್ಷ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.