Dharwad ರಾಷ್ಟ್ರಧ್ವಜ ತಯಾರಿಕಾ ಕೇಂದ್ರಕ್ಕೆ ಮಹಾತ್ಮಾಗಾಂಧಿ ಪ್ರಶಸ್ತಿ
Team Udayavani, Sep 26, 2023, 8:03 PM IST
ಧಾರವಾಡ :ರಾಷ್ಟ್ರಧ್ವಜಕ್ಕೆ ಬೇಕಾಗುವ ಬಟ್ಟೆ ಉತ್ಪಾದನೆಯಲ್ಲಿ ತೊಡಗಿಸಿಕೊಂಡಿರುವ ದೇಶದ ಮೊದಲ ಖಾದಿ ಗ್ರಾಮೋದ್ಯೋಗ ಸಂಸ್ಥೆ ಎಂಬ ಹಿರಿಮೆ ಹೊಂದಿರುವ ಜಿಲ್ಲೆಯ ಗರಗ ಕ್ಷೇತ್ರೀಯ ಸೇವಾ ಸಂಘವು 2023 ರ ಮಹಾತ್ಮ ಗಾಂಧಿ ಸೇವಾ ಪ್ರಶಸ್ತಿಗೆ ಭಾಜನವಾಗಿದೆ.
ಕರ್ನಾಟಕ ಉಚ್ಚ ನ್ಯಾಯಾಲಯದ ವಿಶ್ರಾಂತ ನ್ಯಾಯಮೂರ್ತಿ ಬಿ.ವೀರಪ್ಪ ಅವರ ಅಧ್ಯಕ್ಷತೆಯಲ್ಲಿ ರಚಿಸಲಾಗಿದ್ದ ಆಯ್ಕೆ ಸಮಿತಿಯ ತೀರ್ಮಾನವನ್ನು ಅಂಗೀಕರಿಸಿ ರಾಜ್ಯ ಸರ್ಕಾರವು ಈ ನಿಟ್ಟಿನಲ್ಲಿ ಆದೇಶ ಹೊರಡಿಸಿದೆ.
ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರ ಜನ್ಮದಿನ ಅಕ್ಟೋಬರ್ 2 ರಂದು ಸಂಜೆ 4:30 ಗಂಟೆಗೆ ಬೆಂಗಳೂರಿನ ಭಗವಾನ್ ಮಹಾವೀರ(ಇನ್‌ಫೆಂಟ್ರಿ) ರಸ್ತೆಯ ವಾರ್ತಾ ಸೌಧದ ಸುಲೋಚನ ಸಭಾಂಗಣದಲ್ಲಿ ನಡೆಯಲಿರುವ ವಿಶೇಷ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯಅವರು ಗರಗ ಕ್ಷೇತ್ರೀಯ ಸೇವಾ ಸಂಘಕ್ಕೆ ಐದು ಲಕ್ಷ ರೂಪಾಯಿ ನಗದು ಒಳಗೊಂಡ ರಾಜ್ಯ ಸರ್ಕಾರದ ಈ ಪ್ರತಿಷ್ಠಿತ ಪ್ರಶಸ್ತಿಯನ್ನು ಪ್ರದಾನ ಮಾಡಲಿದ್ದಾರೆ.
ಈ ಸಂದರ್ಭದಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಪಾಲ್ಗೊಳ್ಳಲಿದ್ದು, ಶಾಸಕ ರಿಜ್ವಾನ್ ಅರ್ಷದ್ ಅಧ್ಯಕ್ಷತೆ ವಹಿಸುವರು. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಕಾರ್ಯದರ್ಶಿಯವರೂ ಆಗಿರುವ ಮುಖ್ಯಮಂತ್ರಿಯವರ ಕಾರ್ಯದರ್ಶಿ ಎನ್.ಜಯರಾಮ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಆಯುಕ್ತ ಹೇಮಂತ್ ಎಂ.ನಿಂಬಾಳ್ಕರ್ ಸೇರಿದಂತೆ ಹಲವು ಗಣ್ಯರು ಈ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ.
ಗರಗದ ಕ್ಷೇತ್ರೀಯ ಸೇವಾ ಸಂಘದ ಬಗ್ಗೆ ಒಂದಿಷ್ಟು : 1956 ರಲ್ಲಿ ಧಾರವಾಡ ತಾಲೂಕು ಸೇವಾ ಸಂಘ ಆರಂಭವಾಗಿ ನಿರಂತರವಾಗಿ ಖಾದಿ ಉತ್ಪನ್ನ ಮತ್ತು ಖಾದಿ ಮಾರಾಟವನ್ನು ಮಾಡುತ್ತಾ ಬರಲಾಗಿದೆ. 1989 90 ರಲ್ಲಿ ಖಾದಿ ಮತ್ತು ಗ್ರಾಮೋದ್ಯೋಗ ಆಯೋಗದವರ ಆದೇಶದಂತೆ ಮಾತೃ ಸಂಘವನ್ನು ನಾಲ್ಕು ಸಣ್ಣ ಸಂಸ್ಥೆಗಳಾಗಿ ವಿಕೇಂದ್ರೀಕರಿಸಲಾಯಿತು. ಅದರಂತೆ ಮಾತೃಸಂಸ್ಥೆ ಧಾರವಾಡ ತಾಲೂಕು ಸೇವಾ ಸಂಘ, ಗರಗ ಕ್ಷೇತ್ರಿಯ ಸೇವಾ ಸಂಘ, ಹೆಬ್ಬಳ್ಳಿ ಕ್ಷೇತ್ರೀಯ ಸೇವಾ ಸಂಘ ಮತ್ತು ಅಮ್ಮಿನಬಾವಿ ಕ್ಷೇತ್ರೀಯ ಸೇವಾ ಸಂಘವೆಂದು ನಾಮಕರಣಗೊಳಿಸಲಾಯಿತು.
ರಾಷ್ಟ್ರಧ್ವಜವನ್ನು ಧಾರವಾಡ ಜಿಲ್ಲೆಯ ಗರಗ, ಹೆಬ್ಬಳ್ಳಿ, ಬೆಂಗೇರಿ ಗ್ರಾಮಗಳಲ್ಲಿ ತಯಾರಿಸಲಾಗುತ್ತದೆ. ರಾಷ್ಟ್ರಧ್ವಜಕ್ಕೆ ಬೇಕಾಗುವ ಖಾದಿ ಬಟ್ಟೆಯನ್ನು ತಯಾರಿಸುವ ಭಾರತದ ಪ್ರಪ್ರಥಮ ಖಾದಿ ಗ್ರಾಮೋದ್ಯೋಗ ಘಟಕ ಇರುವ ಗ್ರಾಮ ಗರಗ. ಉತ್ತರ ಕರ್ನಾಟಕದಾದ್ಯಂತ ಒಟ್ಟು 52 ಇಂತಹ ಘಟಕಗಳು ರಾಷ್ಟ್ರಧ್ವಜ ನಿರ್ಮಾಣದಲ್ಲಿ ತೊಡಗಿವೆ.
ಗರಗ ಕ್ಷೇತ್ರೀಯ ಸೇವಾ ಸಂಘವು ಆರಂಭದಲ್ಲಿ ಗರಗದಲ್ಲಿ ವಿಶೇಷವಾಗಿ ಖಾದಿ ಮತ್ತು ಕೋಟಿಂಗ್ ಹನಿಕೂಂಬ್ ಟವೆಲ್‌ಗಳನ್ನು ಮಾಡುತ್ತಾ ವ್ಯಾಪ್ತಿಯನ್ನು ತಡಕೋಡ, ಖಾನಾಪುರ, ತೇಗೂರ, ಕೋಟೂರ, ಗುಳದಕೊಪ್ಪ, ಮಾದನಬಾವಿ, ಮುಗಳಿ ಮತ್ತು ಮಮ್ಮಿಗಟ್ಟಿ ಊರುಗಳಿಗೆ ವಿಸ್ತರಿಸಿದೆ. ಆ ಬಳಿಕ ಖಾದಿ ಆಯೋಗದ ಸಲಹೆಯಂತೆ ಗರಗ ಕ್ಷೇತ್ರೀಯ ಸಂಘ ರಾಷ್ಟ್ರಧ್ವಜಕ್ಕೆ ಬೇಕಾಗುವ ಖಾದಿ ಬಟ್ಟೆ ತಯಾರಿಸುವ ಕಾರ್ಯ ನಡೆಸುತ್ತಾ ಬಂದಿದ್ದು, 1975 ರಿಂದ ರಾಷ್ಟ್ರಧ್ವಜದ ಬಟ್ಟೆ ನೇಯ್ಗೆಯ ಕೆಲಸವನ್ನು ಮಾಡುತ್ತಾ ಬಂದಿದೆ.
ಸಂವಿಧಾನದ ಮಾರ್ಗಸೂಚಿ ಅನ್ವಯ ಭಾರತೀಯ ಮಾನಕ ಬ್ಯೂರೋದ ಮಾನದಂಡ ಪ್ರಕಾರ ಈ ಸಂಸ್ಥೆಯು ನೇಯ್ಗೆಯಲ್ಲಿ ಐಎಸ್‌ಐ ಮಾರ್ಕಿನ ಬಟ್ಟೆಯನ್ನು ತಯಾರಿಸಿ 2003 ನೇ ಸಾಲಿನವರೆಗೆ ಮುಂಬಯಿ ಖಾದಿ ಗ್ರಾಮೋದ್ಯೋಗ ಸಂಘ ಬೊರಿವಿಲಿ ಅವರಿಗೆ ಪೂರೈಸುತ್ತಾ ಬಂದಿದೆ. ಆದರೆ 2003 04 ರಿಂದ ಮುಂಬಯಿ ಖಾದಿ ಗ್ರಾಮೋದ್ಯೋಗ ಸಂಘ ಬೊರಿವಿಲಿ ಅವರು ರಾಷ್ಟ್ರಧ್ವಜ ತಯಾರಿಸುವುದನ್ನು ನಿಲ್ಲಿಸಿದ್ದರಿಂದ, ಗರಗ
ಕ್ಷೇತ್ರೀಯ ಸೇವಾ ಸಂಘದ ವತಿಯಿಂದಲೇ ಪೂರ್ಣ ಪ್ರಮಾಣದಲ್ಲಿ ರಾಷ್ಟ್ರಧ್ವಜ ನಿರ್ಮಾಣ ಕಾರ್ಯವನ್ನು ಆರಂಭಿಸಲಾಯಿತು. ಸಂಸ್ಥೆಯ ಖಾದಿ ಕೇಂದ್ರದ ವ್ಯವಸ್ಥಾಪಕ ಶಂಕರ ಎಮ್.ಕರಡಿಗುಡ್ಡ ಅವರ ಪ್ರಯತ್ನದ ಫಲವಾಗಿ ಸಂಸ್ಥೆಯು ಸದೃಢವಾಗಿ ಬೆಳೆಯಲು ಸಾಧ್ಯವಾಗಿದೆ.
ಪ್ರಸ್ತುತ 10 ಹಳ್ಳಿಗಳಲ್ಲಿ ಈ ಘಟಕದ ನೂಲುವ ಕೇಂದ್ರಗಳಿದ್ದು, ನೇಯುವ ಕೇಂದ್ರಗಳಿರುವುದು ಗರಗ ಮತ್ತು ತಡಕೋಡದಲ್ಲಿ ಮಾತ್ರ. ಗರಗದಲ್ಲಿ 70 ಮಗ್ಗದ ಜತೆ 75 ಚರಕಗಳಿದ್ದರೆ ತಡಕೋಡದಲ್ಲಿ 30 ಮಗ್ಗಗಳ ಜೊತೆ 60 ಚರಕಗಳಿವೆ. ಹಲವು ಸವಾಲುಗಳ ನಡುವೆಯೂ ದೇಶದ ಎಲ್ಲಾ ರಾಜ್ಯಗಳಿಗೆ ಐಎಸ್‌ಐ ಗುರುತಿನ ಧ್ವಜಗಳನ್ನು ಸಂಸ್ಥೆಯ ಮೂಲಕ ಪೂರೈಕೆ ಮಾಡಲಾಗುತ್ತಿದ್ದು, ಸಂಸ್ಥೆಯಲ್ಲಿ ಸಧ್ಯಕ್ಕೆ 250 ನೂಲುವ ಮಾತೆಯರು, 50 ಜನ ನೇಕಾರರು ಅಲ್ಲದೆ 15 ಜನ ಖಾಯಂ ಕಾರ್ಯಕರ್ತರು ಕೆಲಸ ನಿರ್ವಹಿಸುತ್ತಿದ್ದಾರೆ.
ಧಾರವಾಡದಿಂದ 17 ಕಿ.ಮಿ.ದೂರದ ಗರಗ ಗ್ರಾಮಮದಲ್ಲಿರುವ ಗರಗ ಕ್ಷೇತ್ರೀಯ ಸೇವಾ ಸಂಘ ಹಲವು ದಶಕಗಳಿಂದ ಖಾದಿ ಉತ್ಪನ್ನ ಮತ್ತು ಖಾದಿ ಮಾರಾಟ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದು, ಇತ್ತೀಚೆಗೆ ಸಂಪೂರ್ಣ ರಾಷ್ಟçಧ್ವಜ ತಯಾರಿಸುವ ಪರವಾನಿಗೆಯನ್ನು ಕೂಡ ಇದೀಗ ಪಡೆದುಕೊಂಡಿದೆ. ಇದುವರೆಗೆ ಖಾದಿ ಗ್ರಾಮೋದ್ಯೋಗ ಆಯೋಗದ ಪ್ರಮಾಣಿತ ಗರಗ ಕೇಂದ್ರದಲ್ಲಿ ತಿರಂಗಾಕ್ಕೆ ಬಟ್ಟೆ ತಯಾರು ಮಾಡಿ ಬಣ್ಣಕ್ಕಾಗಿ ಮುಂಬೈಯ ಖಾದಿ ಡೈಯರ್ ಆಂಡ್ ಪ್ರಿಂಟರ್‌ಗೆ ಕಳುಹಿಸಿ, ಅಲ್ಲಿಂದ ವರ್ಣಮಯಗೊಂಡು ಸಿದ್ಧವಾಗುತ್ತಿದ್ದ ರಾಷ್ಟ್ರಧ್ವಜಗಳನ್ನು ಇಲ್ಲಿ ಮಾರಾಟ ಮಾಡಲಾಗುತ್ತಿತ್ತು. 2023 ರಂದು ಜೂನ್ 3 ರಂದು ಬ್ಯೂರೋ ಆಫ್ ಇಂಡಿಯನ್ ಸ್ಟಾಂಡರ್ಡಸ್ (ಬಿಐಎಸ್) 2:3 ಅಡಿ ತ್ರಿವರ್ಣ ಧ್ವಜ ತಯಾರಿಕೆಗೆ ಅನುಮತಿ ನೀಡಿದೆ. ಇದರಿಂದಾಗಿ ಗರಗ ಕೇಂದ್ರದಲ್ಲಿಯೇ ನೂಲುವುದು, ನೇಯುವುದು, ಬಟ್ಟೆ ತಯಾರಿಕೆ ಜತೆಗೆ ಬಣ್ಣಗಳ ಮುದ್ರಣ ಮಾಡುವ ಕಾರ್ಯದೊಂದಿಗೆ ಸಂಪೂರ್ಣ ತಿರಂಗಾ ಧ್ವಜ ಇಲ್ಲಿಯೇ ರೂಪುಗೊಳ್ಳುವ ಕಾರ್ಯವೂ ಈಗ ಸಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಹುಬ್ಬಳ್ಳಿ ಸಿಲಿಂಡರ್ ಸ್ಫೋಟ ಪ್ರಕರಣ: ಚಿಕಿತ್ಸೆ ಫಲಿಸದೆ ಇಬ್ಬರು ಮಾಲಾಧಾರಿಗಳು ಮೃ*ತ್ಯು
CID Inquiry: ಪರಿಷತ್‌ನಲ್ಲಿ ನಡೆದ ಘಟನೆ ಎಂದು ಉಲ್ಲೇಖಿಸಿದ್ದು ತಪ್ಪು: ಬಸವರಾಜ ಹೊರಟ್ಟಿ
ಜೋಶಿ ಅವರಿಗೆ ನನ್ನ ಸಾಮರ್ಥ್ಯ ಗೊತ್ತಿಲ್ಲ… ಅಸಮರ್ಥ ಹೇಳಿಕೆಗೆ ತಿರುಗೇಟು ನೀಡಿದ ಪರಮೇಶ್ವರ್
Alnavar: ಟಿಟಿ- ಕ್ಯಾಂಟರ್ ನಡುವೆ ಭೀಕರ ಅಪಘಾತ; ಸ್ಥಳದಲ್ಲಿಯೇ ಮೂವರ ಸಾವು
Hubli: ಕಾಂಗ್ರೆಸ್‌ನಲ್ಲಿ ಈಗ ಇರುವವರೆಲ್ಲ ನಕಲಿ ಗಾಂಧಿಗಳು..: ಪ್ರಹ್ಲಾದ ಜೋಶಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.